ಮೈಸೂರು: ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಗದ್ದುಗೆ ಬಿಟ್ಟುಕೊಟ್ಟಿದ್ದಕ್ಕಾಗಿ ಕಾಂಗ್ರೆಸ್‌ನಲ್ಲಿ ಹೊತ್ತಿಕೊಂಡಿರುವ ಅಸಮಾಧಾನದ ಬೆಂಕಿಗೆ ತುಪ್ಪ ಸುರಿಯುವ ಘಟನೆಯೊಂದು ಇಂದು ನಗರ ಕಾಂಗ್ರೆಸ್ ಘಟಕದಲ್ಲಿ ನಡೆದಿದೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದ ಮೇಲೆ ಸಿದ್ದರಾಮಯ್ಯನವರ ವಿರುದ್ದ ಘೋಷಣೆ ಕೂಗಿದ್ದಕ್ಕೆ ಶಾಸಕ ತನ್ವೀರ್ ಸೇಠ್ ಆಪ್ತನಿಗೆ ನಗರ ಕಾಂಗ್ರೆಸ್ ಅಧ್ಯಕ್ಷ ನೋಟಿಸ್ ಜಾರಿ ಮಾಡಿದ್ದಾರೆ. ತನ್ವೀರ್ ಆಪ್ತ ಸೇರಿದಂತೆ ಎನ್.ಆರ್. ಕ್ಷೇತ್ರದ 8 ಮಂದಿಗೆ ನೋಟಿಸ್ ಜಾರಿಯಾಗಿದ್ದು, ನಿಮ್ಮ ಮೇಲೆ ಯಾಕೇ ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ 7 ದಿನದ ಒಳಗೆ ಉತ್ತರ ನೀಡಿ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ. ಚುನಾವಣೆ ಮುಗಿದು ಒಂದು ತಿಂಗಳಾದ್ರು ಕಾಂಗ್ರೆಸ್‌ನಲ್ಲಿ ಮಾತ್ರ ಒಳಜಗಳ ನಿಂತಂತೆ ಕಾಣದೆ ಇರೋದು, ತನ್ವೀರ್ ಸಿದ್ದು ನಡುವಿನ ಕಿತ್ತಾಟಕ್ಕೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.
ಹೌದು ಮೈಸೂರು ಪಾಲಿಕೆ ಮೇಯರ್ ಚುನಾವಣೆ ಮೈತ್ರಿ ವಿಚಾರವಾಗಿ ತನ್ವೀರ್ ಪರಮಾಪ್ತನ ಮೇಲೆ ಕ್ರಮಕ್ಕೆ ಮುಂದಾಗಿರುವ ಮೈಸೂರು ನಗರ ಕಾಂಗ್ರೆಸ್ ಘಟಕ, ಅಧಿಕೃತವಾಗಿ ತನ್ವೀರ್ ಆಪ್ತ ಅಬ್ದುಲ್ ಖಾದರ್ ಶಾಹಿದ್‌ಗೆ ಕಾಂಗ್ರೆಸ್‌ನಿಂದ ನೋಟೀಸ್ ಜಾರಿ ಮಾಡಿದೆ. ತನ್ವೀರ್ ಬೆಂಬಲಿಗನಿಗೆ ನೋಟಿಸ್ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾದ್ರಾ ಅನ್ನೋ ಚರ್ಚೆ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ, ನೋಟಿಸ್ ವಿಚಾರ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಅಬ್ದುಲ್ ಖಾದರ್ ಶಾಹಿದ್ ಎನ್.ಆರ್. ಕ್ಷೇತ್ರದ ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾರೆ.
ಇವರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿರುವ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ. ಪಾಲಿಕೆ ಚುನಾವಣೆ ನಂತರ ಜ.26ರಂದ ಶಾಸಕ ತನ್ವೀರ್ ಮನೆ ಮುಂದೆ ಪ್ರತಿಭಟನೆ ನಡೆದಿತ್ತು, ಆ ಪ್ರತಿಭಟನೆಯಲ್ಲಿ ನೀವು ಕೆಲ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸೇರಿ ಸಿದ್ದರಾಮಯ್ಯ ವಿರುದ್ದ ಘೋಷಣೆ ಕೂಗಿರುತ್ತೀರಿ? ಇದು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬಿತ್ತರವಾಗಿರುತ್ತದೆ. ನಿಮ್ಮ ಪ್ರತಿಭಟನೆಯಿಂದ ಪಕ್ಷದ ಘನತೆ ಹಾಗೂ ನಾಯಕರ ಘನತೆಗೆ ಕುಂದು ಉಂಟಾಗಿರುತ್ತದೆ, ಇದು ಪಕ್ಷ ವಿರೋಧಿ ಚಟುವಟಿಕೆಯಾಗಿರುತ್ತದೆ.
ಈ ಕಾರಣದಿಂದ ಕೆಪಿಸಿಸಿ ಸೂಚನೆ ಮೇರೆಗೆ ನಿಮ್ಮ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ಉತ್ತರ ನೀಡಿ, ಈ ನೋಟಿಸ್ ತಲುಪಿದ 7 ದಿನದ ಒಳಗೆ ಉತ್ತರ ನೀಡಿ ಎಂದು ನೋಟಿಸ್ ನೀಡಲಾಗಿದೆ. ಅಬ್ದುಲ್ ಖಾದರ್ ಸೇರಿ 8 ಮಂದಿಗೆ ನೋಟಿಸ್ ಜಾರಿಯಾಗಿದ್ದು, ಪ್ರತ್ಯೇಕವಾಗಿ ಅಬ್ದುಲ್ ಖಾದರ್ ಶಾಹಿದ್ ಹೆಸರಿಗೆ ನೋಟಿಸ್ ನೀಡಿರುವ ನಗರ ಕಾಂಗ್ರೆಸ್ ಅಧ್ಯಕ್ಷ, 8 ಮಂದಿಗು ಪ್ರತ್ಯೇಕ ನೋಟಿಸ್ ನೀಡಲಾಗಿದೆ.
ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ತನ್ವೀರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅಬ್ದುಲ್ ಖಾದರ್ ಶಾಹಿದ್, ಅಂದಿನ ಪ್ರತಿಭಟನೆಯಲ್ಲಿ ನಾನು ಜನರನ್ನ ಸಮಾಧಾನ ಮಾಡುತ್ತಿದ್ದೆ, ಆದರೂ ನನಗೆ ನೋಟಿಸ್ ನೀಡಿದ್ದಾರೆ. ಇದು ಕಾರ್ಯಕರ್ತರಲ್ಲಿ ಬೇಸರ ತರುವಂತಹ ಘಟನೆಯಾಗಿದೆ. ಇದರಿಂದ ಸಂಘಟನೆಗೆ ಭಾರಿ ಹೊಡೆತ ಬಿಳಲಿದೆ. ಹಳೆ ಮೈಸೂರು ಭಾಗದಲ್ಲಿ ಮಸ್ಲಿಂ ಸಮುದಾಯದ ಕಾಂಗ್ರೆಸ್ ಶಾಸಕ ಇರೋದೆ ತನ್ವೀರ್ ಒಬ್ಬರು, ಅಂತವರ ಬೆಂಬಲಿಗರ ವಿರುದ್ದ ಇಂತಹ ನಡೆ ಪಕ್ಷಕ್ಕೆ ಹಾನಿಯಾಗಲಿದೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ