ಯಾದಗಿರಿ : ಕೋವಿಡ್ನಿಂದ ಮೃತಪಡುತ್ತಿರುವವರ ಅಂತ್ಯಸಂಸ್ಕಾರಕ್ಕೆ ಅವರ ಕುಟುಂಬಸ್ಥರೇ ಈಗ ಮುಂದಾಗುತ್ತಿಲ್ಲ. ಕೊವೀಡ್ ಭಯದಿಂದ ಅಂತ್ಯಕ್ರಿಯೆ ಮಾಡಲು ಕುಟುಂಬಸ್ಥರು ಹಿಂದೇಟು ಹಾಕುತ್ತಿದ್ದಾರೆ. ಆದರೆ ಜಿಲ್ಲೆಯ ಶಹಾಪುರದ ಮುಸ್ಲಿಂ ಯುವಕರ ತಂಡ ಕಳೆದ ಒಂದು ವರ್ಷದಿಂದ ಜೀವದ ಹಂಗು ತೊರೆದು ಕೋವಿಡ್ನಿಂದ ಮೃತಪಟ್ಟವರ ಅಂತ್ಯಕ್ರಿಯೆ ಮಾಡುತ್ತಿದ್ದಾರೆ. ಕಳೆದ ವರ್ಷದ ಕೊರೊನಾ ಮೊದಲನೇ ಅಲೆ ಸಂದರ್ಭದಲ್ಲೂ ಕೋವಿಡ್ ನಿಂದ ಮೃತಪಟ್ಟವರ ಅಂತ್ಯಕ್ರಿಯೆ ಮಾಡಿದರು. ಅದರಂತೆ ಈಗ ಅಂತ್ಯಕ್ರಿಯೆ ಕಾರ್ಯ ಮಾಡುತ್ತಿದ್ದಾರೆ.
ಮೃತದೇಹಗಳನ್ನು ಧರ್ಮಕ್ಕನುಗುಣವಾಗಿ ನಿಯಮ ಬದ್ದವಾಗಿ ಮಾಡಬೇಕೆಂದು ನಿರ್ಧಾರ ಮಾಡಿಕೊಂಡು ಅಂತ್ಯಕ್ರಿಯೆ ಮಾಡುತ್ತಾ ಬರುತ್ತಿದ್ದಾರೆ.ಯುವಕರ ತಂಡವು ಪಾಪುಲರ್ ಫ್ರಂಟ್ ಆಫ್ ಇಂಡಿಯಾದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ವರ್ಷ ಖುದ್ದು ಜಿಲ್ಲಾಧಿಕಾರಿಗೆ ಸಂಘಟನೆ ಮುಖಂಡರು ಮನವಿ ಸಲ್ಲಿಸಿ ಅಂದಿನಿಂದ ಅಂತ್ಯಕ್ರಿಯೆ ಮಾಡಿಕೊಂಡು ಬರುತ್ತಿದ್ದಾರೆ. ಡಬ್ಲುಎಚ್ ಓ ಪ್ರೋಟೋಕಾಲ್ ನಿಯಮದಂತೆ ಅಂತ್ಯಕ್ರಿಯೆ ಮಾಡುವ ಬಗ್ಗೆ ಹಾಗೂ ಕೋವಿಡ್ ಮುಂಜಾಗ್ರತೆ ವಹಿಸುವ ಬಗ್ಗೆ ಸಂಘಟನೆಯ ಯುವಕರ ತಂಡಕ್ಕೆ ಆರೋಗ್ಯ ಇಲಾಖೆಯಿಂದ ಕೂಡ ಸೂಕ್ತ ತರಬೇತಿ ನೀಡಲಾಗಿದೆ.
ತರಬೇತಿ ಪಡೆದ ನಂತರ ಕೋವಿಡ್ ಎಲ್ಲಾ ಜಾಗೃತಿ ವಹಿಸಿ ಪಿಪಿಇ ಕೀಟ್ ಧರಿಸಿ ಅಂತ್ಯಕ್ರಿಯೆ ಮಾಡುತ್ತಿದ್ದಾರೆ.ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಪಾಪುಲರ್ ಫ್ರಂಟ್ ಆಫ್ ಇಂಡಿಯಾದ ಮುಖಂಡ ಖಾಲೀದ್ ಮಾತನಾಡಿ, ಕಳೆದ ವರ್ಷ ರಾಜ್ಯದ ಕೆಲ ಕಡೆ ಕೋವಿಡ್ ನಿಂದ ಮೃತಪಟ್ಟವರನ್ನು ಎಳೆದೊಯ್ದು ಅಂತ್ಯಕ್ರಿಯೆ ಮಾಡಿ ಅಮಾನವೀಯವಾಗಿ ನಡೆದುಕೊಳ್ಳಲಾಗಿತ್ತು. ಇದನ್ನು ಅರಿತು ನಾವು ಸಂಘಟನೆ ಮೂಲಕ ಯುವಕರ ತಂಡ ರಚನೆ ಮಾಡಿಕೊಂಡು ಕಳೆದ ವರ್ಷದಿಂದ ಮೃತ ವ್ಯಕ್ತಿಯ ಶವಸಂಸ್ಕಾರ ಮಾಡಲಾಗುತ್ತಿದೆ. ಕೋವಿಡ್ ಮುಂಜಾಗ್ರತೆ ವಹಿಸಿ ಅವರವರ ಧರ್ಮಕ್ಕನುಗುಣವಾಗಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ.ಉಚೀತ ಸೇವೆ ಮಾಡಲಾಗುತ್ತಿದೆ ಎಂದರು. ಕೋವಿಡ್ ಪೀಡಿತರು ಮೃತಪಟ್ಟಾಗ ಅಂತ್ಯಕ್ರಿಯೆ ಮಾಡಲು ಯಾರು ಕುಟುಂಬಸ್ಥರು ಮುಂದೆ ಬಾರದಿದ್ದಾಗ,ಸಂಬಂಧಪಟ್ಟ ಆಸ್ಪತ್ರೆ ವೈದ್ಯರು ಮೃತ ವ್ಯಕ್ತಿಯ ಅಂತ್ಯಕ್ರಿಯೆ ಮಾಡುವ ಬಗ್ಗೆ ಮುಸ್ಲಿಂ ಯುವಕರಿಗೆ ಮಾಹಿತಿ ನೀಡುತ್ತಾರೆ.
ಇದನ್ನೂ ಓದಿ: ಭಾರತದಲ್ಲಿ 3ನೇ ಲಸಿಕೆ: ರಷ್ಯಾದ ಸ್ಪುಟ್ನಿಕ್ ವ್ಯಾಕ್ಸಿನ್ ವಿತರಣೆಗೆ ಅನುಮತಿ, ಬೆಲೆ ಕೂಡ ನಿಗದಿ
ಯಾವ ಊರಲ್ಲಿ ಎಷ್ಟು ಗಂಟೆಗೆ ಎಂಬ ಎಲ್ಲಾ ಮಾಹಿತಿ ನೀಡುತ್ತಾರೆ.ಆಸ್ಪತ್ರೆ ವತಿಯಿಂದ ಪಿಪಿಇ ಕೀಟ್ ನೀಡಲಾಗುತ್ತದೆ . ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆ ಮಾಡುತ್ತಾ ಬರುತ್ತಿದ್ದಾರೆ. ಅಂತ್ಯಕ್ರಿಯೆ ಮಾಡಲು ಯಾವುದೇ ಹಣ ಪಡೆಯದೇ ಉಚಿತವಾಗಿ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ 28 ಜನರ ಅಂತ್ಯಕ್ರಿಯೆ ಮಾಡಲಾಗಿದ್ದು, ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ 30 ಜನರ ಅಂತ್ಯಕ್ರಿಯೆ ಮಾಡಲಾಗಿದೆ. ಸಂಘಟನೆಯ ಪದಾಧಿಕಾರಿಗಳು ಈಗ ಜೀವದ ಹಂಗು ತೊರೆದು ಅಂತ್ಯಕ್ರಿಯೆ ಕಾರ್ಯದಲ್ಲಿ ತೊಡಗಿದ್ದಾರೆ. ಮುಸ್ಲಿಂ ಯುವಕರು, ಹಿಂದು ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಿ ಜಾತಿ ಎಲ್ಲೆ ಮೀರಿ ಅಂತ್ಯಕ್ರಿಯೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕೊನೆಗಳಿಗೆಯಲ್ಲಾದ್ರು ಅಂತ್ಯಕ್ರಿಯೆ ಸರಿಯಾಗಿ ಮಾಡಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಉದ್ದೇಶದಿಂದ ಜಾತಿ ಮೀರಿ ಸಮಾಜಮುಖಿ ಕಾರ್ಯ ಮಾಡುತ್ತಿದ್ದು ಶ್ಲಾಘನೀಯ ಕಾರ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ