ಶ್ರದ್ಧೆಯಿಂದ ಗಣೇಶ ವಿಗ್ರಹ ತಯಾರಿಸುವ ಈ ಮುಸ್ಲಿಮ್ ಮಹಿಳೆಯ ಕಾಯಕನಿಷ್ಠೆಗೆ ಹುಬ್ಬಳ್ಳಿಗರ ಮೆಚ್ಚುಗೆ

ಸುಮನ್ ಅವರು ರಂಜಾನ್ ತಿಂಗಳ ಉಪವಾಸದ ವೇಳೆ ರೋಜಾ ಮಾಡುತ್ತಲೇ ಗಣೇಶನ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ಇಸ್ಲಾಮ್ ಧರ್ಮದ ಆಚರಣೆ, ಪ್ರಾರ್ಥನೆಯನ್ನ ಯಾವತ್ತೂ ತಪ್ಪಿಸದ ಸುಮನ್, ಅಷ್ಟೇ ಕಾಯಕಶ್ರದ್ಧೆ ತೋರುತ್ತಾರೆ.

news18-kannada
Updated:May 27, 2020, 3:38 PM IST
ಶ್ರದ್ಧೆಯಿಂದ ಗಣೇಶ ವಿಗ್ರಹ ತಯಾರಿಸುವ ಈ ಮುಸ್ಲಿಮ್ ಮಹಿಳೆಯ ಕಾಯಕನಿಷ್ಠೆಗೆ ಹುಬ್ಬಳ್ಳಿಗರ ಮೆಚ್ಚುಗೆ
ಹುಬ್ಬಳ್ಳಿಯಲ್ಲಿ ಗಣೇಶ ವಿಗ್ರಹ ತಯಾರಿಸುತ್ತಿರುವ ಸುಮನ್ ಹಾವೇರಿ
  • Share this:
ಹುಬ್ಬಳ್ಳಿ(ಮೇ 27): ಗೌರಿಗಣೇಶ ಹಬ್ಬಕ್ಕೆ ಇನ್ನೂ ಮೂರು ತಿಂಗಳು ಬಾಕಿ ಇದೆ. ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಈಗಾಗಲೇ ಗಣೇಶ ಮೂರ್ತಿಗಳ ತಯಾರಿಕೆ ಕೆಲಸ ಭರದಿಂದ ಸಾಗಿದೆ. ನಗರದ ಗೋಪನಕೊಪ್ಪದಲ್ಲಿ ನಡೆಯುವ ಸುಪ್ರಸಿದ್ಧ ಗಣೇಶೋತ್ಸವಕ್ಕೆಂದು ತರಹೇವಾರಿ‌ ಗಣೇಶ ಮೂರ್ತಿಗಳು ಸಿದ್ಧವಾಗುತ್ತಿವೆ. ಅದೇ ಕಾಯದಲ್ಲಿರುವ ಮುಸ್ಲಿಮ್ ಮಹಿಳೆಯೊಬ್ಬರು ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ವಿಘ್ನ ನಾಶಕ‌ ಗಣಪನ ಆಕರ್ಷಕ ಮೂರ್ತಿಗಳನ್ನು ತಯಾರಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಮುಸ್ಲೀಮ್ ಧರ್ಮೀಯರಾದ ಸುಮನ್ ಹಾವೇರಿಯವರು ಹಿಂದು ದೇವರ ಮೂರ್ತಿ ತಯಾರಿಸುವಲ್ಲಿ ನೈಪುಣ್ಯತೆ ಗಳಿಸಿಕೊಂಡಿದ್ದಾರೆ. ಸುಮನ್ ಅವರ ಕೈಕುಸುರಿ ಕೆಲಸಕ್ಕೆ ಜನಮೆಚ್ಚುಗೆ ವ್ಯಕ್ತವಾಗಿದೆ. 

ಗೋಪನಕೊಪ್ಪದಲ್ಲಿ ಅರುಣ‌ ಯಾದವ್ ಎಂಬುವವರು ಕಳೆದ ಹದಿನೈದು ವರ್ಷಗಳಿಂದ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಸರಕಾರ ಪಿಓಪಿ ಗಣೇಶ ಮೂರ್ತಿಗಳನ್ನು ಬ್ಯಾನ್ ಮಾಡಿದ ನಂತರ ಗುಜರಾತ್‌ನ ಪೋರಬಂದರ್‌ನಿಂದ ಮಣ್ಣು‌ ತರಿಸಿ ವಿಶೇಷ ಮೂರ್ತಿಗಳನ್ನು ಸಿದ್ಧಪಡಿಸುತ್ತಿದ್ದಾರೆ. ಹೆಚ್ಚಿಗೆ ತೂಕವಾಗದಂತೆ ಹಾಗೂ ಬಿರುಕು ಬಿಡದಂತೆ ಕಾಗದವನ್ನು ಬಳಸಿ ಸುಂದರವಾದ ಗಣೇಶ ವಿಗ್ರಹಗಳನ್ನು ತಯಾರಿಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಜೈಲಲ್ಲಿ ಈ ಅಂಡರ್​ವರ್ಲ್ಡ್ ಡಾನ್​ಗೆ ಜೀವಭಯ; ಪೊಲೀಸರೂ ಹೈರಾಣ

ಎರಡು ವರ್ಷಗಳ‌ ಹಿಂದೆ ಅರುಣ ಅವರ ಬಳಿ ಸುಮನ್ ಹಾವೇರಿ ಕೆಲಸ ಕೇಳಿಕೊಂಡು ಬಂದಿದ್ದರು. ಗಣೇಶ ಮೂರ್ತಿ ತಯಾರಿಸುವುದನ್ನು ಕಲಿತುಕೊಳ್ಳುವ ಆಸಕ್ತಿ ತೋರಿಸಿದ್ದರು. ಬಡ ಕುಟುಂಬದ ಸುಮನ್‌ಗೆ ಅರುಣ್ ಯಾದವ್ ಅವರು ಕೆಲಸ ಕೊಟ್ಟಿದ್ದಾರೆ. ಗಣೇಶ ಮೂರ್ತಿಗಳ ತಯಾರಿಕೆ ಕಲಿಸಿಕೊಟ್ಟಿದ್ದಾರೆ. ಮೂರ್ತಿಗಳಿಗೆ ಅಲಂಕಾರ ಮಾಡುವುದು ಮತ್ತು ಫೈನಲ್ ಟಚ್ ಕೊಡುವ ಕೆಲಸವನ್ನು ಸುಮನ್ ಅದ್ಭುತವಾಗಿ ನಿಭಾಯಿಸುತ್ತಿದ್ದಾರೆ.

ಅರುಣ್ ಯಾದವ್ ಬಳಿ ಎಂಟು ಜನರು ಕೆಲಸ ಮಾಡುತ್ತಾರೆ. ವಿವಿಧ ಜಾತಿ ಧರ್ಮದ ಜನರು ಸೇರಿಕೊಂಡು ಗಣೇಶನ ವಿಗ್ರಹ ಸಿದ್ಧಪಡಿಸುತ್ತಾರೆ. ಒಂದು ಅಡಿಯಿಂದ ಎಂಟು ಅಡಿಯವರೆಗೆ ಗಣೇಶ ಮೂರ್ತಿಗಳು ಇಲ್ಲಿ ತಯಾರಾಗುತ್ತವೆ. ಗಣೇಶ ಹಬ್ಬದ ಎಂಟು ತಿಂಗಳ ಮೊದಲೇ ಮೂರ್ತಿ ತಯಾರಿಕೆಗೆ ಸಿದ್ಧತೆಗಳು ಪ್ರಾರಂಭವಾಗುತ್ತವೆ. ಮೂಷಿಕ ವಾಹನ, ಮೋದಕ ಹಸ್ತನ ಸಿದ್ಧತೆ ಈ ಬಾರಿಯೂ ಭರ್ಜರಿಯಾಗಿ ನಡೆಯುತ್ತಿದೆ.

ಸುಮನ್ ಹಾವೇರಿ ಕುಟುಂಬ ಕೂಡ ಗಣೇಶ ಮೂರ್ತಿಯ ತಯಾರಿಕೆಗೆ ಬೆಂಬಲ ನೀಡಿದೆ. ಸುಮನ್ ಪತಿ ಕ್ಯಾಬ್ ಚಾಲಕನಾಗಿದ್ದು ಪತ್ನಿಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಗಣೇಶ ಮೂರ್ತಿ ತಯಾರಿಕೆ ನನಗೆ ತುಂಬಾ ಖುಷಿ ಕೊಡುತ್ತೆ. ಪ್ರತಿದಿನ ಏನಾದರೂ ಹೊಸತನ್ನು ಕಲಿಯುತ್ತೇನೆ. ಹಬ್ಬ ಬರುವವರೆಗೆ ಗಣೇಶ ಮೂರ್ತಿಗಳೆಲ್ಲಾ ಸಿದ್ಧಪಡಿಸಿ ಇಟ್ಟುಕೊಳ್ಳಲು ಗಮನ ಹರಿಸುತ್ತೇವೆ ಎನ್ನುತ್ತಾರೆ ಸುಮನ್ ಹಾವೇರಿ.

ಇದನ್ನೂ ಓದಿ: Corona Effect - ಪ್ರೀ ಸ್ಕೂಲ್ಸ್ ಮಾರಾಟಕ್ಕಿವೆ... ಶಾಲೆಗಳನ್ನು ನಡೆಸಲಾಗದೇ ಮಾರುತ್ತಿದ್ದಾರೆ ಮಾಲೀಕರು !ಸುಮನ್ ಅವರು ರಂಜಾನ್ ತಿಂಗಳ ಉಪವಾಸದ ವೇಳೆ ರೋಜಾ ಮಾಡುತ್ತಲೇ ಗಣೇಶನ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ಇಸ್ಲಾಮ್ ಧರ್ಮದ ಆಚರಣೆ, ಪ್ರಾರ್ಥನೆಯನ್ನ ಯಾವತ್ತೂ ತಪ್ಪಿಸದ ಸುಮನ್, ಅಷ್ಟೇ ಕಾಯಕಶ್ರದ್ಧೆ ತೋರುತ್ತಾರೆ.

ಕೊರೋನಾ ಮಹಾಮಾರಿಯ ಹೊಡೆತಕ್ಕೆ ಜಗತ್ತು ಕಂಗಾಲಾಗಿದೆ‌. ಈ ಬಾರಿ ಗಣೇಶ ಹಬ್ಬ ಬರುವ ಹೊತ್ತಿಗೆ ಕೊರೊನಾ ಸಂಕಷ್ಟ ಬಗೆಹರಿಯಲಿ. ಗಣೇಶ ಎಲ್ಲಾ ವಿಘ್ನಗಳನ್ನು ನಿವಾರಿಸಲಿ. ಮೂರ್ತಿಗಳಿಗೆ ಉತ್ತಮ ಬೇಡಿಕೆ ಬರಲಿ ಎನ್ನುವುದು ಸುಮನ್, ಅರುಣ್ ಸೇರಿದಂತೆ ಎಲ್ಲಾ ಮೂರ್ತಿ ತಯಾರಕರ ಆಶಯ.

ವರದಿ: ಪರಶುರಾಮ ತಹಶೀಲ್ದಾರ್

First published: May 27, 2020, 3:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading