ಸರ್ವಜನಾಂಗವನ್ನೂ ಜೊತೆಯಲ್ಲಿ ಒಯ್ಯುವ ಯಡಿಯೂರಪ್ಪಗೆ ತೊಂದರೆ ಆಗಬಾರದು: ಮುರುಘಾ ಶರಣರು

ಜುಲೈ 26ರ ನಂತರ ಯಡಿಯೂರಪ್ಪ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ವಿವಿಧ ವರ್ಗಗಳ ಮಠಾಧೀಶರು ನಿನ್ನೆ ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಿಎಸ್​ವೈ ಪರ ಮಾತನಾಡಿದ್ದಾರೆ.

ಮುರುಘಾ ಮಠದ ಶ್ರೀ ಡಾ. ಶಿವಮೂರ್ತಿ ಮುರುಘಾ ಸ್ವಾಮೀಜಿ

ಮುರುಘಾ ಮಠದ ಶ್ರೀ ಡಾ. ಶಿವಮೂರ್ತಿ ಮುರುಘಾ ಸ್ವಾಮೀಜಿ

  • Share this:
ಚಿತ್ರದುರ್ಗ: ರಾಜ್ಯ ಬಿಜೆಪಿ ಸರ್ಕಾರಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ದೊಡ್ಡ ಶಕ್ತಿ. ಅವರು ಶಕ್ತಿಯನ್ನೂ ತೋರಿಸಬಲ್ಲರು, ಕೆಲವರಿಗೆ ಸವಾಲೂ ಆಗಬಲ್ಲರು. ಅವರೊಬ್ಬ ಮಾಸ್ ಲೀಡರ್. ಸರ್ವ ಜನಾಂಗವನ್ನೂ ಜೊತೆಯಲ್ಲಿ ಒಯ್ಯುವ ಅವರ ಸಿಎಂ ಸ್ಥಾನಕ್ಕೆ ತೊಂದರೆ ಆಗಬಾರದು ಎಂದು ಚಿತ್ರದುರ್ಗದಲ್ಲಿ ಸಿಎಂ ಯಡಯೂರಪ್ಪ ಪರ ಡಾ. ಶಿವಮೂರ್ತಿ ಮುರುಘಾ ಶರಣರು ಮಾತನಾಡಿದ್ದಾರೆ. 

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಜೋರಾಗಿಯೇ ನಡೆದಿದ್ದು, ಬಿಜೆಪಿ ಪಕ್ಷದಲ್ಲಿ ಆಂತರಿಕ ಬೇಗುದಿ ಶುರುವಾಗಿದೆ. ಇದರ ನಡುವೆಯೇ ಚಿತ್ರದುರ್ಗ ಜಿಲ್ಲೆಯಲ್ಲಿ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ದಲಿತ, ಹಿಂದುಳಿದ ಮಠಾದೀಶರು ಸುದ್ದಿಗೋಷ್ಠಿ ನಡೆಸಿ ಸಿಎಂ ಬದಲಾವಣೆ ಮಾಡದಂತೆ ಆಗ್ರಹ ಮಾಡಿದರು. ಈ ವೇಳೆ ಮಾತನಾಡಿರುವ ಮುರುಘಾ ಶ್ರೀಗಳು, ಮುಖ್ಯಮಂತ್ರಿ ಯಡಯೂರಪ್ಪ ಬದಲಾವಣೆ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. “ಸಿಎಂ ಯಡಯೂರಪ್ಪ ದೊಡ್ಡ ಶಕ್ತಿ. ಅವರು ಶಕ್ತಿಯನ್ನೂ ತೋರಿಸಬಲ್ಲರು, ಕೆಲವರಿಗೆ ಸವಾlU ಆಗಬಲ್ಲರು. ಅಂತಹ ಮುತ್ಸದ್ದಿ, ಮೇಧಾವಿತನ ಯಡಯೂರಪ್ಪ ಅವರಲ್ಲಿದೆ. ಅವರು ಜಾತಿ, ಧರ್ಮದಿಂದ ಲಿಂಗಾಯತರಾಗಿರಬಹುದು, ಆದರೆ ಅವರೊಬ್ಬ ಮಾಸ್ ಲೀಡರ್. ಎಲ್ಲಾ ಜಾತಿ, ಸಮುದಾಯ, ಧರ್ಮಗಳನ್ನ ಪ್ರೀತಿಯಿಂದ ನೋಡಿಕೊಂಡು ಬಂದಿದ್ದಾರೆ. ಅದಕ್ಕೆ ಈ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿರುವ ಎಲ್ಲಾ ಸಮುದಾಯಗಳ ಮಠಾಧೀಶರೇ ಸಾಕ್ಷಿ” ಎಂದು ಮುರುಘಾ ಮಠದ ಶ್ರೀಗಳು ಹೇಳಿದರು.

ಇನ್ನು, ಸರ್ವ ಜನಾಂಗವನ್ನೂ‌ ಜೊತೆಯಲ್ಲಿ ಒಯ್ಯುವ ಯಡಯೂರಪ್ಪಗೆ ತೊಂದರೆ ಆಗಬಾರದು. ಅವರು ಏಕಾಂಗಿಯಾಗಿ ತಳ ಮಟ್ಟದಿದ್ದ ಬಂದು 3-4 ಸಾರಿ‌ ಸಿಎಂ ಆಗಿದ್ದಾರೆ. ಎರಡು ವರ್ಷಗಳ ಕಾಲ ಸಂಕಷ್ಟದ ಸಂದರ್ಭದಲ್ಲಿಯೂ ಕೋವಿಡ್ ನಿರ್ವಹಿಸಿರುವ ಅವರನ್ನ ಮುಂದುವರಿಸಬೇಕು. ಅದು ನಾಡಿನ ಎಲ್ಲಾ ಮಠಾದೀಶರ, ಬೇರೆ ರಾಜಕೀಯ ಪಕ್ಷಗಳ ಮುಖಂಡರ ಆಶಯವೂ ಆಗಿದೆ ಎಂದರು.

ಈ ಸರ್ಕಾರದಲ್ಲಿ ಆತಂಕರಹಿತ ಆಡಳಿತ ಯಾವಾಗ ಸಾಧ್ಯವಿದೆ? ಸರ್ಕಾರದಲ್ಲಿ ಆಂತರಿಕ ಬೇಗುದಿ, ಕಚ್ಚಾಟ ಇರಬಾರದು. ಯಡಿಯೂರಪ್ಪ ನಾಡುಕಂಡ ಶ್ರೇಷ್ಠ ರಾಜಕಾರಣಿ. ಏಕವ್ಯಕ್ತಿ ಮೂಲಕ ಹೋರಾಟ ಆರಂಭಿಸಿ ಸರ್ಕಾರ ರಚಿಸಿದವರು. ಕೋವಿಡ್ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿದ್ದಕ್ಕೆ ಅವರನ್ನ ಕೇಂದ್ರ ಸರ್ಕಾರವೇ ಶ್ಲಾಘಿಸಿದೆ. ಸಂದಿಗ್ಧ ಸ್ಥಿತಿಯಲ್ಲಿ ಸರ್ಕಾರವನ್ನು ಮತ್ತು ರಾಜ್ಯವನ್ನು ಮುನ್ನಡೆಸಿದ್ದು ತುಂಬಾ ರಿಸ್ಕಿ ‌ಜಾಬ್ ಎಂದು ಸಿಎಂ ಬಿಎಸ್​ವೈ ಅವರನ್ನ ಶಿವಮೂರ್ತಿ ಮುರುಘಾ ಶರಣರು ಸಮರ್ಥಿಸಿಕೊಂಡರು.

ಇದನ್ನೂ ಓದಿ: ಜೋಡೆತ್ತುಗಳಂತೆ ಕೆಲಸ ಮಾಡಿ: ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್​ಗೆ ರಾಹುಲ್ ಗಾಂಧಿ ಸಲಹೆ

ಇದೇ ವೇಳೆ ಮಾತನಾಡಿರುವ ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶೋಷಿತ ಸಮುದಾಯಗಳ ಆದಿಯಾಗಿ ಎಲ್ಲಾ ಮಠಗಳನ್ನ ಅಭಿವೃದ್ಧಿ ಮಾಡಿದ ಕೀರ್ತಿ ಯಡಿಯೂರಪ್ಪಗೆ ಸಲ್ಲುತ್ತದೆ. ಯಡಿಯೂರಪ್ಪ ಅಧಿಕಾರಕ್ಕೆ ಬಂದ ವೇಳೆ ಅಧಿಕಾರ ನಡೆಸಲು ಬಿಡುತ್ತಿಲ್ಲ ಎಂಬುದು ಸಾರ್ವಜನಿಕ ಮಾತು. ಕಾಕತಾಳಿಯ ಎಂಬಂತೆ ಪ್ರಾಕೃತಿಕ ಸಮಸ್ಯೆಗಳು ಯಡಿಯೂರಪ್ಪ ಅವಧಿಯಲ್ಲಿ ಬರುತ್ತವೆ. ಕೊವೀಡ್ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಸುಗಮವಾಗಿ, ಕ್ರಿಯಾಶೀಲವಾಗಿ ಆಡಳಿತ ನಿಭಾಯಿಸುತ್ತಿದ್ದಾರೆ. ಸಂಪೂರ್ಣ ಕಾಲಾವಧಿಯವರೆಗೆ ಆಡಳಿತ ನಡೆಸಲು ಅವರಿಗೆ ಮುಕ್ತ ಅವಕಾಶ  ಸಿಕ್ಕರೆ ರಾಜ್ಯದ ಜನತೆಗೆ ಅಭಿವೃದ್ಧಿ ಮಾಡುತ್ತಾರೆ ಎಂದು ಆಸಿಸಿದರು.

ಆಂತರಿಕ ಬೇಗುದಿ ಬೇಗ ಇತ್ಯಾರ್ಥವಾಗಿ ಕೇಂದ್ರದ ನಾಯಕರು ಯಡಿಯೂರಪ್ಪ ಅವರಿಗೆ ಶಕ್ತಿ ನೀಡಬೇಕು. ಎಲ್ಲಾ ಮಠಾಧೀಶರು ಅವರ ಬೆನ್ನಿಗೆ ಇದ್ದಾರೆ. ಇದು ಅವರಿಗೆ ಶಕ್ತಿ ತುಂಬಿದೆ. ಮುರುಘಾ ಶರಣರ ಮುಂದಿನ ತೀರ್ಮಾನಕ್ಕೆ ಹಿಂದುಳಿತ ಮತ್ತು ಶೋಷಿತರ ಮಠಾದೀಶರು ಬದ್ದವಾಗಿರುತ್ತೇವೆ ಎಂದು ಹೇಳಿದ ಮಾದಾರ ಸ್ವಾಮಿಗಳು, ಯಡಿಯೂರಪ್ಪನವರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದರೆ ಅದು ಅವರಿಗೆ ಬಿಟ್ಟ ವಿಚಾರ. ಆದರೆ, ಬಲವಂತವಾಗಿ ಅವರನ್ನ ಸಿಎಂ ಸ್ಥಾನದಿಂದ ಇಳಿಸಿದರೆ ಎಲ್ಲಾ ಮಠಾಧೀಶರು ಅವರ ಬೆನ್ನಿಗೆ ನಿಲ್ಲುತ್ತಾರೆ ಎಂದರು.

ವರದಿ: ವಿನಾಯಕ ತೊಡರನಾಳ್
Published by:Vijayasarthy SN
First published: