ಮಂಡ್ಯ: ಮಂಡ್ಯ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿದ್ದ ಪಾಂಡವಪುರದ ಪಿಎಸ್ಎಸ್ಕೆ ಸಕ್ಕರೆ ಕಾರ್ಖಾನೆ ಕಳೆದ 4 ವರ್ಷದ ಹಿಂದೆ ನಷ್ಟಕ್ಕೆ ಸಿಲುಕಿ ಲಾಕೌಟ್ ಆಗಿತ್ತು. ಇದೀಗ ಬಿಜೆಪಿ ಸರ್ಕಾರ ಶತಾಯಗತಾಯ ಈ ಕಾರ್ಖಾನೆ ಪುನಶ್ಚೇತನ ಮಾಡಲು ನಿರ್ಧರಿಸಿ, ಕಡೆಗೆ ಕಾರ್ಖಾನೆಯನ್ನು ಬಿಜೆಪಿ ಶಾಸಕ, ಸಕ್ಕರೆ ಉದ್ಯಮಿ ಮುರುಗೇಶ್ ನಿರಾಣಿ ಒಡೆತನದ ನಿರಾಣಿ ಶುಗರ್ಸ್ಗೆ 40 ವರ್ಷಗಳ ಕಾಲ ಗುತ್ತಿಗೆ ನೀಡಿದೆ.
ಆಗಸ್ಟ್ ಮೊದಲ ವಾರದಲ್ಲಿ ಕಾರ್ಖಾನೆ ಆರಂಭಿಸಲು ಸಿದ್ದತೆ ನಡೆದಿದ್ದು, ಇದೀಗ ಶ್ರೀರಂಗಪಟ್ಟಣದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಈ ಕಾರ್ಖಾನೆ ಆರಂಭವಾದರೆ ಈ ಭಾಗದಲ್ಲಿ ಕೊರೋನಾ ಹೆಚ್ಚಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅಂತಹ ಸಂಭವಿಸಿದರೆ ಅದಕ್ಕೆ ಮುರುಗೇಶ್ ನಿರಾಣಿ ಅವರೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರದಲ್ಲಿದ್ದ ಪಾಂಡವಪುರದ ಸಕ್ಕರೆ ಕಾರ್ಖಾನೆಯನ್ನು ಸಕ್ಕರೆ ಉದ್ಯಮಿ ಮುರುಗೇಶ್ ನಿರಾಣಿ ತನ್ನ ಒಡೆತನದ ನಿರಾಣಿ ಶುಗರ್ಸ್ ಮೂಲಕ 40 ವರ್ಷಗಳ ಗುತ್ತಿಗೆಗೆ ಪಡೆದಿದ್ದಾರೆ. ಆಗಸ್ಟ್ ಮೊದಲ ವಾರದಲ್ಲಿ ಕಾರ್ಖಾನೆ ಆರಂಭಿಸಲು ಭರದ ಸಿದ್ದತೆ ನಡೆಸುತ್ತಿದ್ದಾರೆ. ಆದರೆ ಈ ನಡುವೆ ಶ್ರೀರಂಗಪಟ್ಟಣದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಕಾರ್ಖಾನೆ ಆರಂಭ ವಿಚಾರದಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಕಾರ್ಖಾನೆ ಆರಂಭಿಸಲು ನಿರಾಣಿಯವರು ಮಹಾರಾಷ್ಟ್ರದಿಂದ 200ಕ್ಕೂ ಹೆಚ್ಚು ನೌಕರರನ್ನು ಕರೆ ತಂದಿದ್ದಾರೆ. ಅವರ ಕೈಲಿ ಕ್ವಾರೆಂಟೈನ್ ಸೀಲ್ ಇದ್ದು, ಅವರು ಶ್ರೀರಂಗಪಟ್ಟಣ ಮತ್ತು ಪಾಂಡವಪುರ ಭಾಗದಲ್ಲಿ ಓಡಾಡ್ತಿದ್ದಾರೆ. ಈ ಭಾಗದಲ್ಲಿ ಕೊರೋನಾ ಹೆಚ್ಚಾದರೆ ಅದಕ್ಕೆ ನಿರಾಣಿಯವರೆ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಈ ಕಾರ್ಖಾನೆ ನಿರಾಣಿ ಷುಗರ್ಸ್ ನವರು ಟೆಂಡರ್ ಪಡೆಯವಾಗ ಸ್ಥಳೀಯರಿಗೆ ಉದ್ಯೋಗ ಮತ್ತು ಕಾರ್ಖಾನೆಯ ಹಿಂದಿನ ನೌಕರರನ್ನು ಪರಿಗಣಿಸುವ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಇದೀಗ ಆ ಒಪ್ಪಂದ ಉಲ್ಲಂಘಿಸಿರುವ ಆರೋಪ ಕೇಳಿ ಬಂದಿದೆ. ಈ ಕಾರ್ಖಾನೆಯ ಹಳೆಯ ನೌಕರರಲ್ಲಿ ಕೆಲವರಿಗೆ ಉದ್ಯೋಗ ನೀಡಿದರೆ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ. ಸ್ಥಳೀಯ ನಿರುದ್ಯೋಗಿ ಯುವಕರು ಪ್ರತಿದಿನ ಅರ್ಜಿ ಹಿಡಿದು ಕಾರ್ಖಾನೆ ಗೇಟ್ ಕಾಯುತ್ತಿದ್ದರೆ, ಪ್ರಭಾವಿಗಳು ಶಿಫಾರಸ್ಸು ಪತ್ರದೊಂದಿಗೆ ಲಾಭಿ ಮಾಡಿ ಕೆಲಸ ಗಿಟ್ಟಿಸುವ ಕೆಲಸ ಮಾಡ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಸಂಘಟನೆಗಳು ಕಾರ್ಖಾನೆ ಆಡಳಿತ ಮಂಡಳಿ ವಿರುದ್ದ ಮತ್ತು ನಿರಾಣಿ ವಿರುದ್ದ ಕಿಡಿಕಾರಿದ್ದು, ಸ್ಥಳೀಯ ನಿರುದ್ಯೋಗಿ ಯುವಕರನ್ನು ಕೆಲಸಕ್ಕೆ ಪರಿಗಣಿಸಲು ಒತ್ತಾಯಿಸಿದ್ದಾರೆ.
ಇದನ್ನು ಓದಿ: ಕೊರೋನಾ ವೈರಸ್ ಗೆದ್ದ ರೈತನಿಗೆ ಗ್ರಾಮದಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ಭರ್ಜರಿ ಸ್ವಾಗತ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ