ಐದು ನಿಮಿಷದ ಸಿಡಿ ಬಿಡುಗಡೆ ಇರುತ್ತೆ, ‘ಆ ಸಿಡಿ’ ಅಲ್ಲ ಎಂದ ಸಚಿವ ಮುರುಗೇಶ್ ನಿರಾಣಿ

ಅಮಿತ್ ಶಾ ಅವರು ಕೇದಾರನಾಥ ಸಕ್ಕರೆ ಕಾರ್ಖಾನೆಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ನಡೆಸಲಿದ್ದು, ಈ ವೇಳೆ 5 ನಿಮಿಷದ ಸಿಡಿ ಬಿಡುಗಡೆ ಆಗಲಿದೆ ಎಂದು ಹೇಳಿದ ಮುರುಗೇಶ್ ನಿರಾಣಿ, ‘ಆ ಸಿಡಿ’ ಅಲ್ಲ ಎಂದು ತಮಾಷೆ ಮಾಡಿದರು.

ಮುರುಗೇಶ್ ನಿರಾಣಿ.

ಮುರುಗೇಶ್ ನಿರಾಣಿ.

  • Share this:
ಬಾಗಲಕೋಟೆ: ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಬಳಿ ಇರುವ ನೂತನ ಸಚಿವ ಮುರುಗೇಶ್ ನಿರಾಣಿ ಒಡೆತನದ ಕೇದಾರನಾಥ ಸಕ್ಕರೆ ಕಾರ್ಖಾನೆ ಉದ್ಘಾಟನೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಇಂದು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ಮಾಧ್ಯಮಗಳಿಗೆ ಹೇಳುವಾಗ ನೂತನ ಸಚಿವ ಮುರುಗೇಶ್ ನಿರಾಣಿ ಸಿಡಿ ವಿಚಾರವೊಂದನ್ನು ಪ್ರಸ್ತಾಪಿಸಿ ಕುತೂಹಲ ಮೂಡಿಸಿದರು. ಆದರೆ, ಐದು ನಿಮಿಷದ ಸಿಡಿ ಬಿಡುಗಡೆ ಇರುತ್ತೆ, ‘ಆ ಸಿಡಿ’ ಅಲ್ಲ ಎಂದು ಸಚಿವ ಮುರುಗೇಶ್ ನಿರಾಣಿ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಎಂಆರ್ ಎನ್ ನಿರಾಣಿ ಉದ್ದಿಮೆ ಸಮೂಹ ಸಂಸ್ಥೆಗಳ ಸಮಗ್ರ ಸಾಧನಾ ಮಾಹಿತಿಯಿರುವ ವಿಡಿಯೋ ಸಿಡಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ ಬಳಿಕ ಅವರು ನಸುನಕ್ಕು, ಆ ಸಿಡಿ ಅಲ್ಲ ಎಂದು ಮಾತು ಮುಂದುವರಿಸಿದರು. ಕೇದಾರನಾಥ್ ಸಕ್ಕರೆ ಕಾರ್ಖಾನೆಯಲ್ಲಿ ನಡೆಯುವ ವಿವಿಧ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ ಅವರು, ಯತ್ನಾಳ್ ಅವರ ಸಿಡಿ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಪಕ್ಷ ಯಾವುದೇ ಖಾತೆ ಕೊಟ್ಟಿರೂ ರಾಜ್ಯ, ದೇಶಕ್ಕೆ ಹೆಸರು ತರುವ ಹಾಗೆ ನಿರ್ವಹಿಸುವೆ. ಎಲ್ಲಾ ಆಕಾಂಕ್ಷಿಗಳಿಗೆ ಖಾತೆ ಕೊಟ್ಟು ಯಾವುದು ಉಳಿಯುತ್ತೆ ಆ ಖಾತೆ ಕೊಟ್ಟರೆ ಸಂತೋಷವೆಂದರು. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಖಾತೆ ನಿರೀಕ್ಷೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ಹುಡುಗಿಗೆ ಮದುವೆಯಾಗಿದೆ  ಎಂದು ಖಾತೆಯನ್ನು ಹುಡುಗಿಗೆ ಹೋಲಿಸಿ ನಗೆ ಚಟಾಕಿ ಹಾರಿಸಿದರು. ಹಾಗಾದರೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್​ಗೆ ಡೈವೋರ್ಸ್ ಕೊಡಿಸ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ, ಸಚಿವ ಜಗದೀಶ್ ಶೆಟ್ಟರ್ ಹಿರಿಯರು, ಒಳ್ಳೆಯ ಕೆಲ್ಸ ಮಾಡುತ್ತಿದ್ದಾರೆ. ನಾನು ಹಿಂದೆ ಆ ಖಾತೆ ನಿಭಾಸಿದ್ದೇನೆ. ಅವರು ಸಲಹೆ ಕೇಳಿದ್ರೆ ಕೊಡುವೆ. ನನಗೆ ಯಾವುದು ಖಾತೆ ಸಿಗುತ್ತೋ, ಹಿಂದೆ ಆ ಖಾತೆ ನಿಭಾಯಿಸಿದವರಿಂದ ಸಲಹೆ ಪಡೆಯುವೆ ಎಂದು ಮುರುಗೇಶ್ ನಿರಾಳಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಇಂದು ಬಾಗಲಕೋಟೆಗೆ ಬಿಜೆಪಿ ಚಾಣಕ್ಯ ಅಮಿತ್ ಶಾ ಪ್ರವಾಸ; ಗೋ ಬ್ಯಾಕ್ ಅಭಿಯಾನ ಹಿಂಪಡೆದ ರೈತರು!

ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ವಿಚಾರದ ಹಿನ್ನೆಲೆಯಲ್ಲಿ, ಅಮಿತ್ ಶಾ ಭೇಟಿ ಮಾಡಿಸಲಿ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಸವಾಲು ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿದ ಮುರುಗೇಶ್ ನಿರಾಣಿ, ದೆಹಲಿಯಲ್ಲಿ ಸಮಯ ನಿಗದಿಪಡಿಸಿ ಚರ್ಚೆಗೆ ಅವಕಾಶ ಮಾಡಿಕೊಡುವೆ. ಸ್ವಾಮೀಜಿ ಸವಾಲು ಸ್ವೀಕಾರ ಮಾಡೋದಿಲ್ಲ, ತಿರಸ್ಕಾರನೂ ಮಾಡೋಲ್ಲ. ಹೋರಾಟಕ್ಕೆ ಯಾವುದೇ ತಡೆಯೊಡ್ಡಲ್ಲ. ಅದಕ್ಕೆ ಬೇರೆ ವೇದಿಕೆಯಿದೆ. ಅಮಿತ್ ಶಾ ಸಾಮಾನ್ಯ ವ್ಯಕ್ತಿಯಲ್ಲ. ಮೊದಲೇ ಅಪಾಯಿಂಟ್ಮೆಂಟ್ ತೆಗೆದುಕೊಂಡು ಅವರು ಎಲ್ಲಿ ಇರುತ್ತಾರೋ ಅಲ್ಲಿ ಭೇಟಿಗೆ ಅವಕಾಶಕ್ಕೆ ಪ್ರಯತ್ನಿಸುವೆ ಎಂದರು.

ಬಿಜೆಪಿ ಅನೈತಿಕ ಸರ್ಕಾರವೆಂದ ಸಿದ್ದರಾಮಯ್ಯ ಹೇಳಿಕೆಗೆ, ಅವರು ದೊಡ್ಡವರು, ಅವರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು. ಇನ್ನು, ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟವಾಗಿದ್ದರ ಬಗ್ಗೆ ಮಾತನಾಡಿದ ಅವರು, ಮನೆಯಲ್ಲಿ ಅಣ್ಣ ತಮ್ಮಂದಿರು ಶರ್ಟ್  ತೆಗೆದುಕೊಂಡಾಗ ಬಣ್ಣ ಬದಲಾದ್ರೆ ಅಸಮಾಧಾನ ಆಗುತ್ತೆ. ನಮ್ಮ ಹಿರಿಯರು ಅಸಮಾಧಾನಗೊಂಡವರನ್ನು ಸಮಾಧಾನ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೌದಪ್ಪಗಳಿಗೆ ಸಚಿವ ಸ್ಥಾನ ಸಿಕ್ಕಿದೆ ಎಂದು ಶಾಸಕರ ಸಿದ್ದು ಸವದಿ ಮಾಡಿರುವ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾರ್ಖಾನೆ ಬಗ್ಗೆ ಕೇಳಿ, ಸರ್ಕಾರದಲ್ಲಿ ಏನೇನು ಯೋಜನೆ, ಉದ್ಯೋಗ ತರುತ್ತಿದ್ದಿರಿ ಎಂದು ಕೇಳಿ. ಹೌದಪ್ಪ ಅಲ್ಲಪ್ಪ ತೆಗೆದುಕೊಂಡು ನಾನೇನು ಮಾಡಲಿ. ನನ್ನದು ಆ ಯೋಚನೆ ಏನು ಇಲ್ಲ ಎಂದರು.

ಇದನ್ನೂ ಓದಿ: ಒಂದೂವರೆ ವರ್ಷದಲ್ಲಿ ಯಡಿಯೂರಪ್ಪ ಉತ್ತಮ ಕೆಲಸ ಮಾಡಿದ್ದಾರೆ, ನಾವೆಲ್ಲರೂ ಅವರ ಕೈ ಬಲಪಡಿಸಬೇಕು; ಅಮಿತ್ ಶಾ

2010ರಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿದ್ದ ವೇಳೆ ದೇವನಹಳ್ಳಿ ಬಳಿ 26ಎಕರೆ ಭೂ ಕಬಳಿಕೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಮುಗಿದು ಹೋಗಿರುವ ಆ ಪ್ರಕರಣವನ್ನು ಜೀವಂತ ಇಡುವ ಕೆಲಸವಾಗುತ್ತಿದೆ. ಅಲಂ ಪಾಷಾ ಒಬ್ಬ ಫ್ರಾಡ್. ಹಿಂದೆ ಈ ಬಗ್ಗೆ ಹೇಳಿದ್ದೇನೆ. ಮುಂದಿನ ದಿನಗಳಲ್ಲಿ ಮಾಧ್ಯಮಗಳಿಗೆ ಅಲಂ ಪಾಷಾನ ಬಗ್ಗೆ ವಿವರ ಹೇಳುವೆ ಎಂದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಭಾನುವಾರ ಬೆಳಗ್ಗೆ 11ಕ್ಕೆ ಬೆಳಗಾವಿಯಿಂದ ಹೆಲಿಕಾಪ್ಟರ್ ಮೂಲಕ ಬಾಗಲಕೋಟೆಯ ಕೇದಾರನಾಥ ಸಕ್ಕರೆ ಕಾರ್ಖಾನೆ ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆ ಇದೆ. ಈ ವೇಳೆ, ಏಷ್ಯಾದಲ್ಲೇ ಅತಿ ಹೆಚ್ಚು ಎಥೆನಾಲ್ ಉತ್ಪಾದನೆ ಮಾಡುವ ಘಟಕಗಳಿಗೆ ಶಾ ಶಂಕು ಸ್ಥಾಪನೆ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕಾಗಿ 40 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದ್ದು 1 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ.

ವರದಿ: ರಾಚಪ್ಪ ಬನ್ನಿದಿನ್ನಿ
Published by:Vijayasarthy SN
First published: