ಕೋಲಾರ; ಜಿಲ್ಲೆಯ ಮುಳಬಾಗಿಲು ತಾಲೂಕಿನ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಸಮಿತಿ ಕಾರ್ಯದರ್ಶಿಗಳು ಆಗಿರುವ ನ್ಯಾ. ಹಾಜಿ ಹುಸೇನ್ ಸಾಬ್ ಯಾದವಾಡ ಅವರು, ಕೋರ್ಟ್ ಆವರಣದಲ್ಲಿದ್ದ ಅಂಧರೊಬ್ಬರ ಕಷ್ಟವನ್ನು ಖುದ್ದಾಗಿ ಆಲಿಸಿ ಮಾನವೀಯತೆ ಮೆರೆದಿದ್ದಾರೆ. ನ್ಯಾಯಾಧೀಶರ ನಡೆ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನ್ಯಾಯಾಧೀಶರು ಕೋರ್ಟ್ ಹಾಲ್ ನಲ್ಲಿ ಬೇರೆ ದೂರುಗಳನ್ನು ಪರಿಶೀಲಿಸುವಾಗ, ಮುಳಬಾಗಿಲಿನ ತಾತಿಪಾಳ್ಯ ನಗರದ ನಿವಾಸಿಯಾಗಿರುವ ಹುಟ್ಟು ಅಂಧನಾಗಿರುವ ದೇವರಾಜಾಚಾರಿ ಎಂಬ ವ್ಯಕ್ತಿ, ತನ್ನ ಸೈಟ್ ನಲ್ಲಿ ಬೇರೆಯವರು ಅತಿಕ್ರಮ ಪ್ರವೇಶ ಮಾಡಿ, ಕಟ್ಟಡ ನಿರ್ಮಾಣ ಕಾರ್ಯ ಸಹ ಪ್ರಾರಂಭಿಸಿದ್ದಾರೆ. ಹೀಗಾಗಿ ಉಚಿತ ಕಾನೂನು ಸೇವೆಯಲ್ಲಿ ಮುಳಬಾಗಿಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಕೂಡಲೇ ಅಂತಹವರ ವಿರುದ್ಧ ಕಾನೂನು ಕ್ರಮವಹಿಸಬೇಕು ಹಾಗೂ ಇಂದೇ ನನ್ನ ಅರ್ಜಿಯ ಹಿಂಬರಹವನ್ನು ನೀಡಿ ಎಂದು ಕೋರ್ಟ್ ಸಿಬ್ಬಂದಿ ಜೊತೆಗೆ, ದೇವರಾಜಾಚಾರಿ ಕೋರ್ಟ್ ಹಾಲ್ ನ ಹೊರಗೆ ಅಂಗಲಾಚಿಸಿದ್ದಾರೆ.
ಇದನ್ನು ಗಮನಿಸಿದ ನ್ಯಾ. ಹಾಜಿ ಹುಸೇನ್ ಸಾಬ್ ಯಾದವಾಡ ಅವರು, ತಕ್ಷಣ ಸಿಬ್ಬಂದಿಗಳನ್ನು ಕರೆಸಿ ವಿಚಾರಿಸಿದಾಗ ಹೈಕೋರ್ಟ್ ಎಸ್.ಒ.ಪಿ.ಯಲ್ಲಿ ಹೊರಡಿಸಿರುವ ಮಾರ್ಗದರ್ಶನದ ಪ್ರಕಾರ, ಯಾವುದೇ ಲಿಖಿತ ಮನವಿಯನ್ನು ಹಾಗೂ ನ್ಯಾಯಾಲಯದಲ್ಲಿ ಇಡಲಾದ ಪತ್ರಗಳನ್ನು ಕ್ವಾರಂಟೈನ್ ಬಾಕ್ಸ್ ನಲ್ಲಿ ಇಟ್ಟ 24 ಗಂಟೆ ನಂತರ ಅದನ್ನು ಸಂಬಂಧಿಸಿದ ಸಿಬ್ಬಂದಿಗೆ ಕಳುಹಿಸಿ ಅದರ ಬಗ್ಗೆ ಪರಿಶೀಲನೆ ಮತ್ತು ವಿಚಾರಣೆ ಮಾಡಬೇಕಾಗಿದೆ. ಆದರೆ ಕೂಡಲೇ ಹಿಂಬರಹ ನೀಡಿ ಎಂದು ಕೇಳುತ್ತಿದ್ದಾರೆ ಎಂದು ನ್ಯಾಯಾಧೀಶರಿಗೆ ಸಿಬ್ಬಂದಿ ತಿಳಿಸಿದ್ದಾರೆ.
ವಿಚಾರ ತಿಳಿದ ಕೂಡಲೇ ನ್ಯಾಯಾಲಯದ ಮುಖ್ಯದ್ವಾರಕ್ಕೆ ಬಂದ ನ್ಯಾಯಾಧೀಶರು ನೊಂದ ದೇವರಾಜಾಚಾರಿ ಇದ್ದ ಸ್ಥಳದಲ್ಲೇ ಬಂದು ಕುಳಿತುಕೊಂಡು, ಸಮಸ್ಯೆಯನ್ನು ಆಲಿಸಿದ್ದಾರೆ. ಈ ವೇಳೆ ಸಮಾಧಾನ ಪಡಿಸಿದ ನ್ಯಾಯಾಧೀಶರು, ಕಾನೂನು ಸೇವೆಯ ಅಗತ್ಯವಿರುವವರಿಗೆ ಸಹಾಯ ಮಾಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿ ನಿಮ್ಮ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ನ್ಯಾಯಾಧೀಶರ ಮಾತಿನಿಂದ ಸಂತಸ ವ್ಯಕ್ತಗೊಂಡ ದೇವರಾಜಾಚಾರಿ, ನ್ಯಾಯಾಧೀಶರಿಗೆ ಧನ್ಯವಾದಗಳನ್ನು ತಿಳಿಸಿ ಕೋರ್ಟ್ ನಿಂದ ಹೊರ ನಡೆದರು.
ಇದನ್ನು ಓದಿ: ರೈತರು ಆತ್ಮಹತ್ಯೆ ದಾರಿ ತುಳಿಯದಂತೆ ಆರಂಭದಲ್ಲೇ ಸರಕಾರ ಎಚ್ಚೆತ್ತು ವಿಶೇಷ ಪ್ಯಾಕೇಜ್ ಘೋಷಿಸಲಿ; ಎಚ್ಡಿಕೆ ಆಗ್ರಹ
ಒಟ್ಟಿನಲ್ಲಿ ನ್ಯಾಯಾಲಯದಲ್ಲಿ ವಾದ- ಪ್ರತಿವಾದಗಳನ್ನು ಆಲಿಸುವ ನ್ಯಾಯಾಧೀಶರು, ಅಂಧರೊಬ್ಬರ ಸಮಸ್ಯೆಯನ್ನು ಅವರಿದ್ದ ಜಾಗಕ್ಕೆ ಹೋಗಿ ಆಲಿಸಿದ ವಿಧಾನವನ್ನು ನೋಡಿದ ವಕೀಲರು ಮತ್ತು ಸಾರ್ವಜನಿಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಜೊತೆಗೆ, ನ್ಯಾಯಾಧೀಶರ ನಡೆಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ