ಲಿಂಗೈಕ್ಯರಾದ ನಂತರ ಕರುವಾಗಿ ಹುಟ್ಟಿಬಂದರಾ ಮೂಕಪ್ಪ ಸ್ವಾಮಿಗಳು?; ಸಾಬೀತಿಗೆ ನಡೆಸಿದ ಪರೀಕ್ಷೆಗಳೇನು ಗೊತ್ತಾ?

ಲಿಂಗೈಕ್ಯ ಸ್ವಾಮೀಜಿಯ ಪ್ರತಿರೂಪವಾಗಿ ಜನಿಸಿ ಬಂದಿರೋ‌ ಕರುವಿಗೆ ದಿನಕ್ಕೆ ಮೂರು ಬಾರಿ ಪೂಜೆ ಮಾಡಲಾಗುತ್ತಿದೆ. ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ‌ ಜನರು ಮೂಕಪ್ಪ ಸ್ವಾಮೀಜಿ ಜನಿಸಿದ್ದಾರೆ ಎಂಬುದನ್ನು ತಿಳಿದು ಆಗಾಗ ಬಂದು ಕರುವನ್ನ ನೋಡ್ಕೊಂಡು ಕರುವಿನ ರೂಪದಲ್ಲಿರೋ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡು ಹೋಗುತ್ತಿದ್ದಾರೆ.

ಮೂಕಪ್ಪ ಸ್ವಾಮಿ ರೂಪದಲ್ಲಿ ಜನಿಸಿದೆ ಎಂದು ನಂಬಲಾದ ಕರು.

ಮೂಕಪ್ಪ ಸ್ವಾಮಿ ರೂಪದಲ್ಲಿ ಜನಿಸಿದೆ ಎಂದು ನಂಬಲಾದ ಕರು.

 • Share this:
  ಹಾವೇರಿ: ತಾಲೂಕಿನ ಕಬ್ಬೂರು ಗ್ರಾಮದ ನಾಗರಾಜ ಮತ್ತೀಹಳ್ಳಿ ಎಂಬುವರ  ಮನೆಯಲ್ಲಿ ಮಾರ್ಚ್ 14ರಂದು ಆಕಳು ಗಂಡು ಕರುವೊಂದಕ್ಕೆ ಜನ್ಮ ನೀಡಿದೆ. ಹೀಗೆ ಜನಿಸಿದ ಗಂಡು ಕರು ನಾಲ್ಕು ದಿನಗಳ ಕಾಲ ತಾಯಿಯ ಹಾಲು ಸೇವಿಸಲಿಲ್ವಂತೆ. ಪಶು ವೈದ್ಯರಿಗೆ ತೋರಿಸಿ ಏನೆಲ್ಲ ಮಾಡಿದರೂ ಮಾತ್ರ ತಾಯಿಯ ಹಾಲು ಸೇವಿಸಲಿಲ್ವಂತೆ. ಆಗ ಕರುವಿನ ಮನೆಯವರು ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗುಡ್ಡದಮಲ್ಲಾಪುರದ ಮೂಕಪ್ಪ ಸ್ವಾಮೀಜಿಗಳ ಮಠದ ಧರ್ಮದರ್ಶಿಗಳ ಗಮನಕ್ಕೆ ತಂದಿದ್ದಾರೆ.

  ಆಗ ಕಳೆದ‌ ಒಂದು ವರ್ಷದ ಹಿಂದೆ ಲಿಂಗೈಕ್ಯರಾಗಿರೋ ಮಠದ ಮೂಕಪ್ಪ ಸ್ವಾಮೀಜಿಗಳೆ ರೈತ ನಾಗರಾಜ ಮನೆಯಲ್ಲಿ ಕರುವಾಗಿ ಜನ್ಮ ತಳೆದು ಬಂದಿದ್ದಾರೆ ಅಂತಾ ಭಾವಿಸಿಕೊಂಡಿದ್ದಾರೆ. ನಂತರ ರೈತ ನಾಗರಾಜ ಮನೆಗೆ ತೆರಳಿ ಮಠದ ಸಂಪ್ರದಾಯದಂತೆ ಮೂರು ರೀತಿಯ ಪರೀಕ್ಷೆಗಳನ್ನು ನಡೆಸಿದರು. ಆಗ ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ನಂಬಿಕೆಯಂತೆಯೆ ಕರು ಲಿಂಗೈಕ್ಯ ಸ್ವಾಮೀಜಿಗಳ ಅವತಾರದಲ್ಲಿ ಮರು ಜನ್ಮ‌ ತಳೆದು ಬಂದಿದೆ ಅಂತಾ ಖಚಿತ ಮಾಡಿಕೊಂಡ್ರು. ಹೀಗಾಗಿ ಕರುವಿಗೆ ಒಂಬತ್ತು ತಿಂಗಳ ನಂತರ ಪಟ್ಟಾಧಿಕಾರ ಮಾಡೋದಾಗಿ ಮಠದ ಧರ್ಮದರ್ಶಿ ಹುಚ್ಚಯ್ಯ ಸ್ವಾಮಿಗಳು ಹೇಳಿದ್ದಾರೆ.

  ವೃಷಭರೂಪಿ ಆಗಿರೋ ಮಠದ ಮೂಕಪ್ಪ ಸ್ವಾಮೀಜಿ ಲಿಂಗೈಕ್ಯರಾದ ನಂತರ ರೈತರೊಬ್ಬರ ಮನೆಯಲ್ಲಿ ಮರುಜನ್ಮ‌ ಪಡೆಯುತ್ತಾರೆ ಎಂಬ ನಂಬಿಕೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಕರು ಜನಿಸಿದ ನಂತರದಲ್ಲಿ ತಾಯಿಯ ಹಾಲು ಕುಡಿಯೋದಿಲ್ಲ. ಆಗ ಮಠದ ಧರ್ಮದರ್ಶಿಗಳು ಕರುವಿಗೆ ಮೂರು ರೀತಿಯ ಪರೀಕ್ಷೆಗಳನ್ನ ಒಡ್ಡುತ್ತಾರಂತೆ. ಆಗ ಕರು ಮೂರು ರೀತಿಯ ಪರೀಕ್ಷೆಗಳಲ್ಲಿ ಯಶಸ್ವಿಯಾದ್ರೆ ಕರುವಿನ ರೂಪದಲ್ಲಿ ಮೂಕಪ್ಪ‌ ಸ್ವಾಮೀಜಿ ಜನಿಸಿ ಬಂದಿದ್ದಾರೆ ಅಂತಾ ನಂಬಿ ಒಂಬತ್ತು ತಿಂಗಳ ಬಳಿಕ ಕರುವಿಗೆ ಪಟ್ಟಾಧಿಕಾರ ಮಾಡಲಾಗುತ್ತೆ.

  ಇದನ್ನು ಓದಿ: ನಂಜನಗೂಡು ರಥೋತ್ಸವದಲ್ಲಿ ವಿಘ್ನ: ಮುರಿದುಬಿದ್ದು ಪುಡಿಪುಡಿಯಾದ ಪಾರ್ವತಿದೇವಿ ರಥದ ಚಕ್ರ

  ಅದರಂತೆ ರೈತ ನಾಗರಾಜರ ಮನೆಯಲ್ಲಿ ಜನಿಸಿದ ಕರು ಹಾಲು ಸೇವಿಸದ ವಿಚಾರ ತಿಳಿದು ಮಠದ ಧರ್ಮದರ್ಶಿಗಳು ರೈತನ ಮನೆಗೆ ಬಂದು ಪರೀಕ್ಷಿಸಿದರು. ಮಠದ ಧರ್ಮದರ್ಶಿ ಬಂದು ಕೂತರೆ ಸಾಕ್ಷಾತ್ ಲಿಂಗೈಕ್ಯ ಶ್ರೀಗಳ ರೂಪದಲ್ಲಿ ಜನಿಸಿರೋ‌ ಕರು ಅವರನ್ನು ಗುರುತಿಸಬೇಕು. ನಂತರದಲ್ಲಿ ಧರ್ಮದರ್ಶಿ ಮಠದಿಂದ ತಂದಿರುವ ಪ್ರಸಾದದ ಚೀಲವನ್ನ ಗುರುತಿಸಬೇಕು. ಕೊನೆಯದಾಗಿ ಮಠದಿಂದ ತಂದಿದ್ದ ಪ್ರಸಾದ ತಿನ್ನಿಸಿ ತಾಯಿಯ ಹಾಲು ಕುಡಿಸುತ್ತಾರೆ. ಆಗ ಕರು ತಾಯಿಯ ಹಾಲು ಕುಡಿಯುತ್ತದೆ. ಮಠದ ಧರ್ಮದರ್ಶಿ ಈ ಮೂರು ರೀತಿಯ ಪರೀಕ್ಷೆ ನಡೆಸಿದ ಮೇಲೆ ಮಠದ ಲಿಂಗೈಕ್ಯ ಸ್ವಾಮೀಜಿ ಜನಿಸಿ ಬಂದಿದ್ದಾರೆ ಎಂದು ನಂಬಲಾಗುತ್ತದೆ. ಈ ರೀತಿಯ ನಂಬಿಕೆಯ ಮೇಲೆ ಮಠದ ಪೀಠಾಧಿಪತಿಗಳನ್ನ ನೇಮಿಸಲಾಗುತ್ತದೆ. ಮಠದಲ್ಲಿ ವೃಷಭರೂಪಿ ಆಗಿರೋ ಹಿರಿಯ ಮತ್ತು ಕಿರಿಯ ಎಂದು ಇಬ್ಬರು ಸ್ವಾಮೀಜಿಗಳು ಇರ್ತಾರೆ. ಒಬ್ಬರು ಲಿಂಗೈಕ್ಯರಾದ ನಂತರ ಮಠದಲ್ಲಿ ಒಂದು ವರ್ಷದಿಂದ ಒಬ್ಬರೆ ಸ್ವಾಮೀಜಿ ಇದ್ರು. ಕಳೆದ ಎಂಟು ದಿನಗಳ ಹಿಂದೆ ರೈತನ ಮನೆಯಲ್ಲಿ ಲಿಂಗೈಕ್ಯ ಸ್ವಾಮೀಜಿ ಜನಿಸಿ ಬಂದಿದ್ದಾರೆ ಅನ್ನೋದು ರೈತ ನಾಗರಾಜನ ಕುಟುಂಬದಲ್ಲಿ ಸಂತಸ ಮೂಡಿಸಿದೆ ಅಂತಾರೆ ಕರು ಜನಿಸಿದ ಮನೆ ಸದಸ್ಯ ಅರುಣ ಮತ್ತೀಹಳ್ಳಿ.

  ಲಿಂಗೈಕ್ಯ ಸ್ವಾಮೀಜಿಯ ಪ್ರತಿರೂಪವಾಗಿ ಜನಿಸಿ ಬಂದಿರೋ‌ ಕರುವಿಗೆ ದಿನಕ್ಕೆ ಮೂರು ಬಾರಿ ಪೂಜೆ ಮಾಡಲಾಗುತ್ತಿದೆ. ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ‌ ಜನರು ಮೂಕಪ್ಪ ಸ್ವಾಮೀಜಿ ಜನಿಸಿದ್ದಾರೆ ಎಂಬುದನ್ನು ತಿಳಿದು ಆಗಾಗ ಬಂದು ಕರುವನ್ನ ನೋಡ್ಕೊಂಡು ಕರುವಿನ ರೂಪದಲ್ಲಿರೋ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡು ಹೋಗುತ್ತಿದ್ದಾರೆ. ಒಟ್ಟಿನಲ್ಲಿ ಲಿಂಗೈಕ್ಯರಾಗಿರೋ ಸ್ವಾಮೀಜಿ ಈಗ ಜನ್ಮ ತಳೆದು ಬಂದಿದ್ದಾರೆ ಅನ್ನೋದು ಮಠದ ಭಕ್ತರಲ್ಲಿ ಎಲ್ಲಿಲ್ಲದ ಸಂತಸ ಮೂಡಿಸಿದೆ.

  ವರದಿ: ಮಂಜುನಾಥ್ ತಳವಾರ
  Published by:HR Ramesh
  First published: