Mudhol hound: ರಾಣಾನ ಸ್ಥಾನ ತುಂಬಲು ಬಂಡೀಪುರಕ್ಕೆ ಬಂತು ಮುಧೋಳ ತಳಿಯ ಶ್ವಾನ!

ರಾಣಾನ ಸ್ಥಾನ ತುಂಬಲು  ಮುಧೋಳ ತಳಿಯ ಶ್ವಾನಕ್ಕೆ ಬೆಂಗಳೂರಿನ ಆಡುಗೋಡಿಯಲ್ಲಿರುವ  ಪೊಲೀಸ್ ತರಬೇತಿ ಕೇಂದ್ರದಲ್ಲಿ ತರಬೇತಿ ಕೊಡಿಸಲಾಗಿದೆ ಎಂದು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗು ಹುಲಿ ಯೋಜನೆ  ನಿರ್ದೇಶಕ ನಟೇಶ್ ತಿಳಿಸಿದ್ದಾರೆ. 

ಬಂಡೀಪುರ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಲಿರುವ ಮುಧೋಳ ತಳಿಯ ನಾಯಿ.

ಬಂಡೀಪುರ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಲಿರುವ ಮುಧೋಳ ತಳಿಯ ನಾಯಿ.

  • Share this:
ಚಾಮರಾಜನಗರ (ಅಕ್ಟೋಬರ್ 21) ಹಲವಾರು ಅರಣ್ಯ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಬಂಡೀಪುರದ ಶ್ವಾನ ರಾಣಾ (Bandipura Forest Dog Rana) ನಿವೃತ್ತಿಯ ಅಂಚಿನಲ್ಲಿದೆ. ರಾಣಾನ ಸ್ಥಾನ ತುಂಬಲು ತರಬೇತಿ ಪಡೆದ ಮುಧೋಳ ತಳಿಯ ಶ್ವಾನ (Mudhol Hound Dog) ಬಂದಿದೆ. ರಾಣಾ ತನ್ನ ಅಪಾರ ಬುದ್ದಿವಂತಿಕೆ ಹಾಗು ಚಾಕಚಕ್ಯತೆಯಿಂದ ಬಂಡೀಪುರವಷ್ಟೇ ಅಲ್ಲದೆ ನಾಗರಹೊಳೆ ಹಾಗು ತಮಿಳುನಾಡಿನ ಮಧುಮಲೈ ಅರಣ್ಯದಲ್ಲಿ ನಡೆದಿದ್ದ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ ನಾಗರಹೊಳೆಯಲ್ಲಿ ಹುಲಿ ಹಂತಕರನ್ನು ಸೆರೆ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಪ್ರಮುಖ ಪಾತ್ರ ವಹಿಸಿತ್ತು. ಹೀಗೆ ಅರಣ್ಯ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಣಾ  ನಿವೃತ್ತಿ ಅಂಚಿನಲ್ಲಿನದೆ.

ರಾಣಾನ ಸ್ಥಾನ ತುಂಬಲು ಮುಧೋಳ ತಳಿಯ ನಾಯಿಗಳಿಂದ ಮಾತ್ರ ಸಾಧ್ಯ ಎಂಬುದನ್ನು ಅರಿತು ಅರಣ್ಯ ಇಲಾಖೆ ಮುಧೋಳ ತಳಿಯ ಶ್ವಾನಕ್ಕೆ  ತರಬೇತಿ ಕೊಡಿಸಿದ್ದು ಅರಣ್ಯ ಅಪರಾಧ ಪ್ರಕರಣಗಳ ಪತ್ತೆಗೆ ಬಳಸಿಕೊಳ್ಳಲು ನಿರ್ಧರಿಸಿದೆ. ಅರಣ್ಯ ಸಿಬ್ಬಂದಿ ನೀಡುವ ಸೂಚನೆ ಪಾಲಿಸುವುದು, ವಾಸನೆ ಗ್ರಹಿಸಿ ಅದರ ಮೂಲಕ ಕಾಣೆಯಾದ ವಸ್ತುವನ್ನು ಪತ್ತೆ ಹಚ್ಚುವುದು, ವಾಸನೆ ಮೂಲಕ ಕಾಡುಗಳ್ಳರ ಹಾಗು ಕಾಡುಪ್ರಾಣಿಗಳ ಇರುವಿಕೆಯ ಜಾಡು ಹಿಡಿಯುವುದು ಸೇರಿದಂತೆ ಅರಣ್ಯ ಅಪರಾಧಗಳನ್ನು ಪತ್ತೆ ಹಚ್ಚುವ ಬಗ್ಗೆ ಈ ಮುದೋಳ ಶ್ವಾನಕ್ಕೆ ತರಬೇತಿ  ನೀಡಲಾಗಿದೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್ ನಲ್ಲಿ ಮುಧೋಳ ತಳಿಯ ನಾಯಿಗಳ ಮಹತ್ವದ ಬಗ್ಗೆ ಪ್ರಸ್ತಾಪಿಸಿದ್ದರು. ಸ್ವಾವಲಂಬಿ ಭಾರತದ ನಿರ್ಮಾಣದಲ್ಲಿ ದೇಶೀಯ ತಳಿಯ ನಾಯಿಗಳ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದ್ದರು. ಬಾಂಬ್ ಪತ್ತೆ, ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಪೊಲೀಸ್ ಹಾಗು ರಕ್ಷಣಾ ಪಡೆಗಳಿಗೆ ಮುಧೋಳ ತಳಿಯ ಶ್ವಾನಗಳು ನೆರವು ನೀಡುತ್ತಿವೆ. ಈ ತಳಿಯ ಶ್ವಾನಗಳಿಗೆ ತರಬೇತಿ ನೀಡಿ ಸಿಐಎಸ್ಎಫ್, ಸೇನೆ , ಎನ್.ಎಸ್.ಜಿ ಪಡೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಮೋದಿ ಹೇಳಿದ್ದರು. ಮುಧೋಳ ಶ್ವಾನ ತಳಿಯ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ ಎಂದಿದ್ದ ಅವರು ದೇಶೀಯ ತಳಿಯ ಶ್ವಾನಗಳನ್ನೆ ಮನೆಗಳಲ್ಲು ಸಾಕುವಂತೆ ಅವರು ಕರೆ ನೀಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ಕರೆ ಬೆನ್ನಲ್ಲೇ ಅರಣ್ಯ ಅಪರಾಧಗಳ ಪತ್ತೆಗೆ ಮುಧೋಳ ಶ್ವಾನಗಳ ಬಳಕೆಗೆ  ಬಂಡೀಪುರ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ರಾಣಾನ ಸೇವೆ ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೂ ಬಳಸಿಕೊಳ್ಳಲಾಗುವುದು. 7 ವರ್ಷ ಸೇವೆ ಸಲ್ಲಿಸಿರುವ ರಾಣಾ ಸದ್ಯಕ್ಕೆ  ಸಮರ್ಥವಾಗಿದ್ದರೂ  ಸದ್ಯದಲ್ಲೇ ಅದು ಸಹ ನಿವೃತ್ತಿಯಾಗಲಿದೆ. ಹಾಗಾಗಿ ರಾಣಾನ ಸ್ಥಾನ ತುಂಬಲು  ಮುಧೋಳ ತಳಿಯ ಶ್ವಾನಕ್ಕೆ ಬೆಂಗಳೂರಿನ ಆಡುಗೋಡಿಯಲ್ಲಿರುವ  ಪೊಲೀಸ್ ತರಬೇತಿ ಕೇಂದ್ರದಲ್ಲಿ ತರಬೇತಿ ಕೊಡಿಸಲಾಗಿದೆ ಎಂದು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗು ಹುಲಿ ಯೋಜನೆ  ನಿರ್ದೇಶಕ ನಟೇಶ್ ತಿಳಿಸಿದ್ದಾರೆ.

ಅರಣ್ಯ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಮನುಷ್ಯರಿಗಿಂತಲು ಶ್ವಾನಗಳು ಒಂದು ಹೆಜ್ಜೆ ಮುಂದೆ ಇವೆ ಎಂಬುದು ಈಗಾಗಲೇ ಹಲವಾರು ಪ್ರಕರಣಗಳಲ್ಲಿ  ರಾಣಾ ಸಾಬೀತುಪಡಿಸಿದೆ. ಮುಂದಿನ ದಿನಗಳಲ್ಲಿ ಅರಣ್ಯ ಸಂರಕ್ಷಣೆಗೆ ಶ್ವಾನ ದಳ ಮುಖ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನು ಓದಿ: gambling: ವಿಧಾನಸೌಧದಿಂದ ತಳಹಂತದವರೆಗೂ ಬೆಟ್ಟಿಂಗ್, ಮಟ್ಕಾ ಕಬಂಧಬಾಹುಗಳು ಚಾಚಿವೆ: HDK ನೇರ ಆರೋಪ

ಸೇನೆಯಲ್ಲೂ ಮುಧೋಳ ನಾಯಿಗಳ ಬಳಕೆ

ಭಾರತೀಯ ವಾಯುಸೇನೆ ಸೇರಿದಂತೆ ಎಲ್ಲ ವಿಭಾಗದ ಸೇನೆಗಳಲ್ಲೂ ಬಾಗಲಕೋಟೆ ಜಿಲ್ಲೆಯ ಮುಧೋಳ ತಳಿಯ ನಾಯಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ನಾಯಿ ಸಾಕಾಣಿಕೆ ಮಾಡಿಕೊಂಡು ಜಿಲ್ಲೆಯಲ್ಲಿ ಸುಮಾರು 20 ಕ್ಕೂ ಹೆಚ್ಚು ಕುಟುಂಬಗಳು ಜೀವನ ನಿರ್ವಹಿಸುತ್ತಿವೆ. ಇದೀಗ ಅರಣ್ಯ ಇಲಾಖೆ ರಕ್ಷಣೆಗೂ ಈ ತಳಿಯ ನಾಯಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ವರದಿ: ಎಸ್.ಎಂ.ನಂದೀಶ್ 
Published by:HR Ramesh
First published: