ಟಿಪ್ಪು ವಿಚಾರ; ಹೆಚ್‌. ವಿಶ್ವನಾಥ್‌ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

ವಿಶ್ವನಾಥ್ ಅವರ ಹೇಳಿಕೆ ಇದೀಗಾ ದೊಡ್ಡ ಮಟ್ಟದ ಚರ್ಚೆಯಾಗುತ್ತಿದ್ದು, ಬಿಜೆಪಿಯಲ್ಲೇ ಈ ಹೇಳಿಕೆ ಒಪ್ಪಿಕೊಳ್ಳಲು ಸಾಧ್ಯವಾಗದೆ ವಿಶ್ವನಾಥ್ ಇಕ್ಕಟ್ಟಿಗೆ ಸಿಲುಕಿದ್ದಾರೆ. ಮುಂದೆ ಈ ಹೇಳಿಕೆಯೇ ಹಳ್ಳಿಹಕ್ಕಿಯ ಸಚಿವ ಸ್ಥಾನದ ಕನಸನ್ನು ಭಗ್ನಗೊಳಿಸಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

Youtube Video
  • Share this:
ಮೈಸೂರು: ಮಳೆ‌ ಹನಿ ನಿಂತ್ರು ಮರದ ಹನಿ ನಿಲ್ಲೋದಿಲ್ಲ ಎಂಬಂತಾಗಿದೆ‌ ಎಂಎಲ್‌ಸಿ ವಿಶ್ವನಾಥ್ ಹೇಳಿಕೆ. "ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರ, ಅವನು ಈ ಮಣ್ಣಿನ ಮಗ"  ಎಂದು ಹೇಳಿಕೆ ಕೊಟ್ಟು ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿರೋ ವಿಶ್ವನಾಥ್‌ ವಿರುದ್ಧ ಇದೀಗ ಸಂಸದ ಪ್ರತಾಪ ಸಿಂಹ ಸಹ ಗುಡುಗಿದ್ದು, "ಸಾಹಿತ್ಯದ ಜೊತೆ ಮೈಸೂರಿನ ಇತಿಹಾಸವನ್ನೂ ತಿಳ್ಕೊಂಡು ಮಾತಾಡಿ, ನಿಮ್ಮ ಋಣದಲ್ಲಿ ನಮ್ಮ ಪಕ್ಷ ಇಲ್ಲ ಎಂದು" ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.

ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ. ಟಿಪ್ಪು ಕೊಡವರನ್ನ ಕೊಂದು ಮೈಸೂರು ಸಂಸ್ಥಾನವನ್ನ ನಿರ್ನಾಮ ಮಾಡಲು ಮುಂದಾದವ. ಬಿಜೆಪಿ ನಾಯಕರು ಇದನ್ನು ಹೇಳುತ್ತಲೇ ಬರುತ್ತಿದ್ದು, ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಟಿಪ್ಪು ಜಯಂತಿಗೂ ಬ್ರೇಕ್ ಹಾಕಿದ್ದರು.

ಇದೀಗಾ ಬಿಜೆಪಿಯಿಂದ ಎಂಎಲ್‌ಸಿಯಾಗಿ ಆಯ್ಕೆಯಾದ ಹೆಚ್. ವಿಶ್ವನಾಥ್ ಇದಕ್ಕೆ ವಿರುದ್ಧವಾದ ಹೇಳಿಕೆ ನೀಡುವ ಮೂಲಕ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನವನ್ನೇ ಎಬ್ಬಿಸಿದ್ದಾರೆ.  ಹೌದು, "ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರ, ಆತನನ್ನು ನಾವು ಮರೆಯಲು ಆಗೋದಿಲ್ಲ. ತನ್ನ ಮಕ್ಕಳನ್ನೇ ಅಡವಿಟ್ಟು ಹೋರಾಟ ನಡೆಸಿದವ ಟಿಪ್ಪು. ಆತ ಈ ನೆಲದ ಮಣ್ಣಿನ ಮಗ" ಎಂದು ಹೆಚ್‌. ವಿಶ್ವನಾಥ್‌ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಒಂದೆಡೆ ವಿಶ್ವನಾಥ್ ಇಂತಹ ಹೇಳಿಕೆ ನೀಡುತ್ತಿದ್ದಂತೆ ಈ ಕುರಿತು ಪ್ರತಿಕ್ರಿಯಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್, "ಇದು ಅವರ ವ್ಯಯಕ್ತಿಕ ಹೇಳಿಕೆ. ಆದರೂ, ಈ ಹೇಳಿಕೆ ಸಂಬಂಧ ನಾನು ಅವರಿಂದ ವಿವರಣೆ ಕೇಳುತ್ತೇನೆ" ಎಂದು ತಿಳಿಸಿದ್ದರು. ಆದರೆ, ಇದೇ ವಿಚಾರವಾಗಿ ಇಂದು ಮೈಸೂರಿನಲ್ಲಿ ಗುಡುಗಿರುವ ಪ್ರತಾಪ ಸಿಂಹ, "ಹೌದು, ವಿಶ್ವನಾಥ್ ಅವರು ಸಾಹಿತ್ಯ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಕಾಲಿಟ್ಟಿದ್ದಾರೆ. ಹಾಗಾಗಿ ಅವರು ಮೊದಲು ಮೈಸೂರಿನ ಇತಿಹಾಸವನ್ನು ಸರಿಯಾಗಿ ತಿಳಿದುಕೊಂಡು ಮಾತನಾಡಬೇಕು.

ಮೈಸೂರಿನ ಯದುವಂಶದವರನ್ನು ನಿರ್ನಾಮ ಮಾಡಲು ಹೊರಟವರು ಯಾರು.? ಕನ್ನಡ ಭಾಷೆಯ ಮೇಲೆ ಪ್ರಹಾರ ಮಾಡಿ ರೆವಿನ್ಯೂ ಡಿಪಾರ್ಟ್ಮೆಂಟ್ ನಲ್ಲಿ ಖಾತೆ, ಬಗರ್ ಹುಕುಂ ಪದಗಳನ್ನ ತಂದಿದ್ದು ಯಾರು.? ಮೈಸೂರು ಸಾಮ್ರಾಜ್ಯವನ್ನ ಸುಭಿಕ್ಷಗೊಳಿಸಿದವರು, ಕನ್ನಬಾಡಿ ಕಟ್ಟೆ ಕಟ್ಟಿ ಜನರ ಹಿತ ಕಾಯ್ದವರು ಮೈಸೂರು ಅರಸರು. ಅಂತಹ ಮೈಸೂರು ರಾಜರನ್ನು ನಿರ್ನಾಮ ಮಾಡಲು ಹೊರಟವರು ಯಾರು..?

ಕನಿಷ್ಠ ಜ್ಞಾ‌ನ ಇರುವವರು ಯಾರು ಟಿಪ್ಪು ವೀರ ಶೂರ ಅಂತ ಹೇಳಲು ಸಾಧ್ಯವಿಲ್ಲ. ಟಿಪ್ಪು ಸತ್ತಾಗ ಸ್ವಾತಂತ್ರ್ಯ ಹೋರಾಟವೇ ಶುರುವಾಗಿರಲಿಲ್ಲ. ವಿಶ್ವನಾಥ್ ಅವ್ರು ಇತ್ತೀಚೆಗೆ ಬಿಜೆಪಿ ಸೇರಿದ್ದು, ಅವರ ಪೂರ್ವಾಶ್ರಮ ಪ್ರಭಾವ ಇನ್ನೂ ಇದ್ದಂತಿದೆ. ಮೊದಲು ಅವರು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಜ್ಞಾನ ಹೊಂದಿದ್ದೇನೆ ಎನ್ನುವವರು, ಕನಿಷ್ಠ ಜ್ಞಾನ ಇಟ್ಟುಕೊಂಡು ಮಾತಾನಾಡಬೇಕು ಎಂದು" ವಾಗ್ದಾಳಿ ನಡೆಸಿದ್ದಾರೆ.
ಇತ್ತ ತಾವು ನೀಡಿದ ಒಂದೇ ಒಂದು ಹೇಳಿಕೆಯಿಂದಾಗಿ ಸ್ವಪಕ್ಷೀಯ ನಾಯಕರಿಂದಲೇ ತೀವ್ರ ಟೀಕೆಗೆ ಗುರಿಯಾಗಿರುವ ವಿಶ್ವನಾಥ್ ಇಂದೂ ಸಹ ಮೌನಕ್ಕೆ ಶರಣಾಗಿದ್ದರು. ಮೈಸೂರಿನ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು "ಇವತ್ತು ಏಕಾದಶಿ ವ್ರತ, ನಾಳೆ ಮಾತನಾಡೋಣ" ಎಂದು ನಾಮಫಲಕ ತೋರಿಸಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಇದನ್ನೂ ಓದಿ : Karnataka Health Bulletin: ಇಂದು ಒಂದೇ ದಿನದಲ್ಲಿ 8,324 ಹೊಸ ಕೊರೋನಾ ಪ್ರಕರಣಗಳು ಪತ್ತೆ, 115 ಜನ ಸಾವು!

ಮೈಸೂರಿನ ಸುತ್ತೂರು ಶಾಖಾ ಮಠದ ಆವರಣದಲ್ಲಿ ಈ ಘಟನೆ ಎಲ್ಲರಲ್ಲು ಅಚ್ಚರಿ ತಂದಿತ್ತು. ಸಂಸದ ಪ್ರತಾಪ ಸಿಂಹ ಅವರ ಟೀಕೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಏಕಾದಶಿಯ ಕಾರಣ ನೀಡಿ, ನಿರ್ಗಮಿಸಿದ ಹಳ್ಳಿಹಕ್ಕಿ ನಡೆ ತೀವ್ರ ಕುತೂಹಲ ಮೂಡಿಸಿತ್ತು.

ಒಟ್ಟಾರೆ, ವಿಶ್ವನಾಥ್ ಅವರ ಹೇಳಿಕೆ ಇದೀಗಾ ದೊಡ್ಡ ಮಟ್ಟದ ಚರ್ಚೆಯಾಗುತ್ತಿದ್ದು, ಬಿಜೆಪಿಯಲ್ಲೇ ಈ ಹೇಳಿಕೆ ಒಪ್ಪಿಕೊಳ್ಳಲು ಸಾಧ್ಯವಾಗದೆ ವಿಶ್ವನಾಥ್ ಇಕ್ಕಟ್ಟಿಗೆ ಸಿಲುಕಿದ್ದಾರೆ. ಮುಂದೆ ಈ ಹೇಳಿಕೆಯೇ ಹಳ್ಳಿಹಕ್ಕಿಯ ಸಚಿವ ಸ್ಥಾನದ ಕನಸನ್ನು ಭಗ್ನಗೊಳಿಸಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.
Published by:MAshok Kumar
First published: