ಮೈಸೂರು(ಸೆಪ್ಟೆಂಬರ್. 09): ಕೇಂದ್ರ ಸರ್ಕಾರದ ಅನುದಾನ ದುರ್ಬಳಕೆ ಬಗ್ಗೆ ಅಸಮಾಧಾನಗೊಂಡಿರುವ ಸಂಸದ ಪ್ರತಾಪ್ ಸಿಂಹ ಮೈಸೂರು ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ. ನಗರದ ವೃತ್ತಗಳು ಅಥವ ಸ್ಮಶಾನದ ಅಭಿವೃದ್ದಿಗಳಿಗೆ ಕೇಂದ್ರದ ಅನುದಾನವನ್ನ ಪೋಲು ಮಾಡಬೇಡಿ. ಹೊಂದಾಣಿಕೆ ರಾಜಕಾರಣದ ಮೂಲಕ ಕೇಂದ್ರದಿಂದ ಬಂದ ಅನುದಾನದ ಸಿಂಹಪಾಲು ಸ್ಥಳಿಯ ಕಾಮಗಾರಿಗೆ ಬಳಕೆ ಆಗುತ್ತಿದೆ. ಅದನ್ನ ನಿಲ್ಲಿಸಿ ನಿಯಮಾವಳಿಯಂತೆ ಅನುದಾನ ಬಳಕೆಯಾಗಲಿ ಎಂದು ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಅನುದಾನ ಬಳಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಸಂಸದ ಪ್ರತಾಪ್ ಸಿಂಹ ಅನುದಾನಗಳ ಹಣವನ್ನು ನಿರ್ದಿಷ್ಟ ಕಾಮಗಾರಿಗಳಿಗೆ ಮಾತ್ರವೇ ಬಳಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು. ಪತ್ರದಲ್ಲಿ 14 ನೇ ಹಣಕಾಸು ಯೋಜನೆ ಉಳಿಕೆ 9.30 ಕೋಟಿ ಹಣ ಹಾಗೂ 15 ನೇ ಹಣಕಾಸು ಯೋಜನೆಯಲ್ಲಿ ಬಿಡುಗಡೆಯಾಗಿರುವ 69.39 ಕೋಟಿ ಹಣವನ್ನು ಅತ್ಯವಶ್ಯಕ ಕಾಮಗಾರಿಗಳಿಗೆ ಬಳಸಿಕೊಳ್ಳಬೇಕು. ಅನುದಾನವನ್ನು ವಿದ್ಯಾರಣ್ಯಪುರಂ, ರಾಯನಕೆರೆ ಹಾಗೂ ಕೆಸರೆ ಘನ ತ್ಯಾಜ್ಯ ಘಟಕಕ್ಕೆ ಬಳಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಿಡಿಕಾರಿರುವ ಸಂಸದ ಪ್ರತಾಪ್ ಸಿಂಹ, ಈ ಹಿಂದಿನಿಂದ ಮೇಯರ್, ಉಪಮೇಯರ್ ವಾರ್ಕ್ಸ್ ಸಮಿತಿ ಸದಸ್ಯರು, ಮಾಜಿ ಮೇಯರ್ ಗಳು ಪಾರ್ಟಿ ಲೀಡರ್ಸ್ ಗಳು ನಿಯಮಾವಳಿಗಳನ್ನು ಉಲ್ಲಂಘಿಸಿ ಹೊಂದಾಣಿಕೆ ರಾಜಕಾರಣಗಳ ಮೂಲಕ ಸಿಂಹಪಾಲನ್ನು ಪಡೆದುಕೊಳ್ಳುವಂತಹ ಅನಧಿಕೃತ ವ್ಯವಸ್ಥೆಯನ್ನು ಪಾಲಿಸಿಕೊಂಡು ಬಂದಿದ್ದಾರೆ. ಇಂತಹ ಹೊಂದಾಣಿಕೆ ವ್ಯವಸ್ಥೆಯನ್ನು ಅಂತ್ಯಗೊಳಿಸಬೇಕು ಎಂದಿದ್ದಾರೆ.
ಶೇ. 50 ರಷ್ಟು ಅನುದಾನ 34.70 ಕೋಟಿ ರೂ ಹಾಗೂ 14ನೇ ಹಣಕಾಸು ಯೋಜನೆಯ ಉಳಿಕೆಯಾಗಿರುವ 9.30 ಕೋಟಿ ರೂ ಹಣವನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನಿಯಮಾವಳಿ ಪ್ರಕಾರ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಹಾಗೂ ಪಾಲಿಕೆ ಸದಸ್ಯರ ಅಭಿಪ್ರಾಯವನ್ನ ಪಡೆದು ಅನುದಾನ ವಿನಿಯೋಗ ಮಾಡುವುದು, ಕೇಂದ್ರ ಸರ್ಕಾರದ ಈ ಅನುದಾನವನ್ನು ಯಾವುದೇ ಕಾರಣಕ್ಕೂ ವೃತ್ತಗಳು ಸ್ಮಶಾನ ಅಭಿವೃದ್ಧಿ ಕಾಮಗಾರಿಗೆ ಪೋಲು ಮಾಡಬಾರದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಈ ಹಿಂದೆ ಮೈಸೂರು ಪಾಲಿಕೆ ಸದಸ್ಯರುಗಳಿಗೆ ಸವಾಲ್ ಹಾಕಿದ್ದ ಸಂಸದ ಪ್ರತಾಪ್‌ಸಿಂಹ ನಿಯಮಾವಳಿ ಹೆಸರಿಲ್ಲಿ ವಾಣಿಜ್ಯ ಕಟ್ಟಡ ಕಟ್ಟಿದವರಿಗೆ ಕಿರುಕುಳ ನೀಡಬೇಡಿ, ತಾಕತ್ತಿದ್ದರೆ ನಿಮ್ಮ ಮನೆಗಳ ಪಾಲಿಕೆ ಪ್ಲಾನಿಂಗ್ ತಂದು ಜನರ ಮುಂದೆ ಇಡಿ ಎಂದು ಹೇಳಿದ್ದರು. ಇದೀಗ ಕೇಂದ್ರ ಅನುದಾನ ಬಳಕೆ ವಿಚಾರದಲ್ಲು ಸಿಡಿದೆದ್ದಿರುವ ಸಂಸದರು ನಿಯಮಾವಳಿ ಪ್ರಕಾರವೇ ಅನುದಾನ ಬಳಕೆಯಾಗಲಿ ಎಂದು ಆಗ್ರಹಿಸಿದ್ದಾರೆ.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ