ಸರ್ಕಾರದಿಂದ ಜನರಿಗೆ ಸಿಗುವ ವೈಯಕ್ತಿಕ ಸೌಲಭ್ಯಗಳನ್ನು ತಲುಪಿಸಲು ಆದ್ಯತೆ ನೀಡಿ: ಸಂಸದ ಬಿ.ವೈ.ರಾಘವೇಂದ್ರ

ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ ವೈಯಕ್ತಿಕ ಸೌಲಭ್ಯಗಳನ್ನು ತಲುಪಿಸಲು ಆದ್ಯತೆ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು

ಸಂಸದ ಬಿ ವೈ ರಾಘವೇಂದ್ರ

ಸಂಸದ ಬಿ ವೈ ರಾಘವೇಂದ್ರ

  • Share this:
ಶಿವಮೊಗ್ಗ(ನವೆಂಬರ್​. 12): ಕೋವಿಡ್ ಹಿನ್ನೆಲೆಯಲ್ಲಿ ಜನರಿಗೆ ನೇರವಾಗಿ ಸೌಲಭ್ಯಗಳನ್ನು ಒದಗಿಸುವ ಸಾಮಾಜಿಕ ಭದ್ರತಾ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು. ಫಲಾನುಭವಿಗಳ ಆಯ್ಕೆ ಸೇರಿದಂತೆ ಯೋಜನೆಗಳ ಅನುಷ್ಠಾನ ಸಂದರ್ಭದಲ್ಲಿ ಸ್ಥಳೀಯವಾಗಿ ಜನ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಯಾವುದೇ ಯೋಜನೆ ಅನುಷ್ಠಾನದಲ್ಲಿ ಸಮಸ್ಯೆಗಳು ಉಂಟಾದರೆ ತಕ್ಷಣ ಗಮನಕ್ಕೆ ತಂದು ಅದನ್ನು ಸರಿಪಡಿಸಿಕೊಳ್ಳಬೇಕು ಎಂದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಸಂಸದ ಬಿ ವೈ ರಾಘವೇಂದ್ರ ಅವರು ದಿಶಾ ಸಮಿತಿ ಸಭೆ ನಡೆಸಿದರು. ಇದೇ ವೇಳೆ ಅವರು ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ ವೈಯಕ್ತಿಕ ಸೌಲಭ್ಯಗಳನ್ನು ತಲುಪಿಸಲು ಆದ್ಯತೆ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ದೀನ ದಯಾಳ್ ಉಪಾಧ್ಯಾಯ್ ಗ್ರಾಮ ಜ್ಯೋತಿ ಯೋಜನೆಯಡಿ ಗ್ರಾಮೀಣ ವಿದ್ಯುದ್ದೀಕರಣ, ಫೀಡರ್ ಬೇರ್ಪಡಿಸುವಿಕೆ ಮತ್ತು ಹೊಸ ಮೀಟರ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದರು.

ಮೀಟರ್ ಅಳವಡಿಸಲು ಹಣಕ್ಕೆ ಬೇಡಿಕೆ ಇಡುವಂತಹ ದೂರುಗಳು ಬರಬಾರದು. ಯೋಜನೆ ಅನುಷ್ಟಾನ ಪರಿಶೀಲಿಸಲು ಸಮಿತಿಯ ಸದಸ್ಯರು ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸಂಸದರು ಸೂಚಿಸಿದರು. ಮೆಸ್ಕಾಂ ಕುರಿತಾದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮೆಸ್ಕಾಂ ಎಂಡಿಯವರನ್ನು ಜಿಲ್ಲೆಗೆ ಕರೆಯಿಸಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿ ನಿರ್ಮಿಸಿರುವ ರಸ್ತೆಗಳ ನಿರ್ವಹಣೆಯನ್ನು 5 ವರ್ಷಗಳ ಕಾಲ ಗುತ್ತಿಗೆದಾರರು ನಿರ್ವಹಿಸಬೇಕಾಗಿದೆ. ಮರು ಡಾಂಬರೀಕರಣ ಸೇರಿದಂತೆ ನಿರ್ವಹಣೆಯನ್ನು ಸಮರ್ಪಕವಾಗಿ ನಡೆಸುವಂತೆ ಸೂಚಿಸಬೇಕು ಎಂದು ಹೇಳಿದರು.

ಇದನ್ನೂ ಓದಿ : ರಸ್ತೆ ಅಗಲಿಕರಣ ಹೆಸರಿನಲ್ಲಿ ಮರಗಳ ಮಾರಣಹೋಮ; 300 ಕ್ಕೂ ಹೆಚ್ಚು ಮರಗಳನ್ನ ಕಡಿದ ಗುತ್ತಿಗೆದಾರ

ಜಿಲ್ಲೆಯಲ್ಲಿ ಎನ್ಆರ್​ಇಜಿ ಅಡಿ ಪ್ರಸ್ತುತ ವರ್ಷ 45 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ 32 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಯೋಜನೆಯಡಿ ಈಗಾಗಲೇ ಅಡಿಕೆ, ಬಾಳೆ, ಕರಿಮೆಣಸು, ನುಗ್ಗೆ, ಹಣ್ಣಿನ ಬೆಳೆಗಳ ಕೃಷಿಯನ್ನು ಸೇರಿಸಲಾಗಿದೆ. ಭತ್ತ ನಾಟಿ ಮಾಡುವಿಕೆ ಸೇರಿದಂತೆ ಮಲೆನಾಡಿನ ಕೃಷಿ ಚಟುವಟಿಕೆಗಳನ್ನು ಈ ಯೋಜನೆಯಡಿ ಸೇರಿಸುವ ಬಗ್ಗೆ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ತಿಳಿಸಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಗರ ಭಾಗದಲ್ಲಿ 5085 ಮನೆಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, 4624 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಗ್ರಾಮೀಣ ಭಾಗದಲ್ಲಿ 1612 ಮನೆಗಳಿಗೆ ಅನುಮೋದನೆ ದೊರೆತಿದ್ದು, 658 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಗ್ರಾಮೀಣ ಭಾಗದಲ್ಲಿ ಮನೆಗಳ ನಿರ್ಮಾಣಕ್ಕಾಗಿ 2.48 ಕೋಟ ರೂ. ಬಿಡುಗಡೆಯಾಗಿದೆ. ಮನೆಗಳ ನಿರ್ಮಾಣ ಕಾರ್ಯ ಸಮರ್ಪಕವಾಗಿ ಅನುಷ್ಠಾನಗೊಳ್ಳುವಂತೆ ಖಾತ್ರಿ ಪಡಿಸಬೇಕು ಎಂದು ಹೇಳಿದರು.
Published by:G Hareeshkumar
First published: