ಕೊರೋನಾ ಕರಾಳತೆ: ಆಂಬ್ಯುಲೆನ್ಸ್ ಸಿಗದೆ ತಾಯಿಯ ಶವವನ್ನು ಆಟೋದಲ್ಲೇ ಕೊಂಡೊಯ್ದ ಪುತ್ರ!

ಜೀವ ಹಿಂಡುವ ಸೋಂಕು, ಸಕಾಲಕ್ಕೆ ಸಿಗದ ಬೆಡ್-ಆಂಬ್ಯುಲೆನ್ಸ್, ಲಾಕ್​​ಡೌನ್​​ ಎಲ್ಲದರ ಮಧ್ಯೆ ಮುಗ್ಧ ಜೀವಗಳು ಹೇಗೆಲ್ಲಾ ನರಳುತ್ತಿವೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.

ಆಟೋದಲ್ಲಿ ತಾಯಿಯ ಶವ ಸಾಗಿಸುತ್ತಿರುವ ಪುತ್ರ

ಆಟೋದಲ್ಲಿ ತಾಯಿಯ ಶವ ಸಾಗಿಸುತ್ತಿರುವ ಪುತ್ರ

  • Share this:
ಬೆಂಗಳೂರು: ಹೆಮ್ಮಾರಿ ಸೋಂಕು ಮಾನವೀಯತೆಯನ್ನು ಮಣ್ಣಾಗಿಸುತ್ತಿದೆ. ನಿನ್ನೆಯಷ್ಟೇ ತಾಯಂದಿರ ದಿನದಂದು ಎಲ್ಲರೂ ತಮ್ಮದೇ ರೀತಿಯಲ್ಲಿ ಹೆತ್ತವಳಿಗೆ ನಮನ ಸಲ್ಲಿಸಿದ್ದರು. ಆದರೆ ಇಲ್ಲೊಬ್ಬ ನತದೃಷ್ಟ ಮಗ ಜೀವ ಕೊಟ್ಟವಳ ಜೀವ ಉಳಿಸಲು ಪರದಾಡಿದ್ದ. ಸೋಂಕಿಗೆ ತುತ್ತಾಗಿದ್ದ ತಾಯಿಯನ್ನು ಎದೆಗೆ ಆನಿಸಿಕೊಂಡು ಚಿಕಿತ್ಸೆಗಾಗಿ ಮಂಡ್ಯದಿಂದ ಬೆಂಗಳೂರಿಗೆ ಬಂದಿದ್ದ. ಬೆಡ್​​ಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದ. ದಯವಿಟ್ಟು ನಮ್ಮಮ್ಮನಿಗೆ ಟ್ರೀಟ್​ಮೆಂಟ್​ ಕೊಡಿ ಎಂದು ಅಂಗಲಾಚಿದ್ದ. ಕೊನೆಗೂ ಖಾಸಗಿ ಆಸ್ಪತ್ರೆಯಲ್ಲಿ ತಾಯಿಯನ್ನು ಸೇರಿಸಿದ್ದ. ಅಷ್ಟರಲ್ಲಾಗಲೇ ತಾಯಿಯ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ಚಿಕಿತ್ಸೆ ಫಲಿಸದೇ ತಾಯಿ ಕಣ್ಣುಮುಚ್ಚಿ ಬಿಟ್ಟಳು.

ಆಸ್ಪತ್ರೆಗೆ ದಾಖಲಿಸಿ ಎದೆ ಬಿಗಿಹಿಡಿದು ಹೆತ್ತವಳ ಉಳಿವಿಗಾಗಿ ಮುಕ್ಕೋಟಿ ದೇವರುಗಳಿಗೆ ಕೈಮುಗಿದು ನಿಂತಿದ್ದ ಮಗನ ಮೇಲೆ ವಿಧಿ ಕರುಣೆ ತೋರಲೇ ಇಲ್ಲ. ನಿಮ್ಮಮ್ಮ ಕೊರೋನಾದಿಂದ ಪ್ರಾಣ ಬಿಟ್ಟಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. 73 ವರ್ಷ ಶಾರದಮ್ಮನ ಸಾವಿನ ಸುದ್ದಿ ತಿಳಿದೊಡನೆ ಪುತ್ರ ಶಿವಕುಮಾರ್​​​ ತಲ್ಲಣಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಕೊರೋನಾ ಸಾವು ಸಾಮಾನ್ಯವಾಗಿದ್ದು, ಯಾರೊಬ್ಬರೂ ಶಿವಕುಮಾರನ್ನು ಸಂತೈಸುವ ಸ್ಥಿತಿಯಲ್ಲಿರಲಿಲ್ಲ. ಶಿವಕುಮಾರ್​​ ನೋವು ನುಂಗಿಕೊಂಡೇ ಮುಂದಿನ ಕಾರ್ಯಕ್ಕೆ ಮುಂದಾಗಿದ್ದಾರೆ. ಹುಟ್ಟೂರು ಮಂಡ್ಯದ ಮಳವಳ್ಳಿಗೆ ತಾಯಿಯ ಶವವನ್ನು ಕೊಂಡೊಯ್ಯಲು ಪ್ರಯತ್ನಿಸಿದ್ದಾರೆ.

ಆಂಬ್ಯುಲೆನ್ಸ್​ಗಾಗಿ ಇನ್ನಿಲ್ಲದಂತೆ ಯತ್ನಿಸಿದ್ದಾರೆ. ಕೊರೋನಾದಿಂದ ಸಾವನ್ನಪ್ಪಿದ್ದರೂ ಆಸ್ಪತ್ರೆಯವರು ಶಾರದಮ್ಮನ ಮೃತದೇಹಕ್ಕೆ ಪಿಪಿಇ ಕಿಟ್​ ಸಹ ಹಾಕದೆ ಶವವನ್ನು ಹಸ್ತಾಂತರಿಸಿದ್ದಾರೆ. ಆಂಬ್ಯುಲೆನ್ಸ್​ಗಾಗಿ ಕಾಯುತ್ತಲೇ ಇದ್ದರೆ ಮೃತದೇಹ ಕೊಳೆಯಲು ಆರಂಭಿಸುವ ಭಯದಲ್ಲಿ ಶಿವಕುಮಾರ್​ ಆಟೋವೊಂದನ್ನು ಹಿಡಿದಿದ್ದಾರೆ. ಮಂಡ್ಯದವರೆಗೂ ಶವವನ್ನು ಸಾಗಿಸಬೇಕಿದೆ ಎಂದು ಅಂಗಲಾಚಿದ್ದಾರೆ. ಶಿವಕುಮಾರ್​ ಅಸಹಾಯಕ ಪರಿಸ್ಥಿತಿ ಕಂಡು ಆಟೋ ಚಾಲಕರೊಬ್ಬರು ಒಪ್ಪಿಕೊಂಡಿದ್ದಾರೆ.

ತಾಯಿಯ ಶವವನ್ನು ಮಲಗಿಸಲು ಸಾಧ್ಯವಾಗದೇ ಆಟೋದಲ್ಲಿ ಶವವನ್ನು ಕೂರಿಸಿದ್ದಾರೆ. ಆಟೋದಲ್ಲಿ ಕುಲುಕಿ ಬೀಳದಂತೆ ಅಮ್ಮನ ತಲೆಯನ್ನು ಶಿವಕುಮಾರ್​ ಎದೆಗೆ ಆನಿಸಿಕೊಂಡೇ ಪ್ರಯಾಣ ಬೆಳೆಸಿದ್ದಾರೆ. ಇಂದು ಬೆಳಗಿನಿಂದ ಲಾಕ್​ಡೌನ್​ ಜಾರಿಯಾಗಿದ್ದು ಬೆಂಗಳೂರಿನ ಹಲವು ಕಡೆ ಪೊಲೀಸರು ಆಟೋವನ್ನು ತಡೆದಿದ್ದಾರೆ. ಕೊರೋನಾದಿಂದ ಮೃತಪಟ್ಟವರನ್ನು ಕೋವಿಡ್​ ನಿಯಮಗಳಂತೆ ಸಾಗಿಸುತ್ತಿಲ್ಲವೆಂದು ಹಿಡಿಯಬಹುದು ಎಂದು ಶಿವಕುಮಾರ್​, ಆಟೋ ಚಾಲಕ ಅಳಕಿನಲ್ಲೇ ಪ್ರಯಾಣಿಸಿದ್ದಾರೆ. ಅನಾರೋಗ್ಯ ಪೀಡಿತ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾರೆಂದು ಭಾವಿಸಿದ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.

ಆದರೆ ಮೈಸೂರು ರಸ್ತೆಯ ನಾಯಂಡಳ್ಳಿ ಜಂಕ್ಷನ್​ನಲ್ಲಿ ಆಟೋವನ್ನು ತಡೆದ ಪೊಲೀಸರು ಎಲ್ಲಿಗೆ ಹೊರಟ್ಟಿದ್ದೀರಾ, ಯಾವ ಆಸ್ಪತ್ರೆ ಅಂತೆಲ್ಲಾ ವಿಚಾರಿಸಿದ್ದಾರೆ. ಆಗ ತಾಯಿಯ ಸಾವು, ತನ್ನ ಸಹಾಯಕ ಪರಿಸ್ಥಿತಿಯನ್ನು ಪೊಲೀಸರ ಮುಂದೆ ಹೇಳಿಕೊಂಡು ಶಿವಕುಮಾರ್​​ ಕಣ್ಣೀರಿಟ್ಟಿದ್ದಾರೆ. ಆಟೋ ಚಾಲಕ ಸಹ ಯಾರಾದರೂ ಸಹಾಯ ಮಾಡಲೇ ಬೇಕಲ್ವಾ ಸರ್​​ ಎಂದು ಪೊಲೀಸರ ಎದುರು ಮನವಿ ಮಾಡಿದ್ದಾರೆ. ಶಿವಕುಮಾರ್​ ಪರಿಸ್ಥಿತಿ ಕಂಡ ಪೊಲೀಸರು ಮಂಡ್ಯಕ್ಕೆ ತೆರಳಲು ಆಂಬ್ಯುಲೆನ್ಸ್​ ವ್ಯವಸ್ಥೆ ಮಾಡಲು ಮುಂದಾಗಿದ್ದರು. ಜೀವ ಹಿಂಡುವ ಸೋಂಕು, ಸಕಾಲಕ್ಕೆ ಸಿಗದ ಬೆಡ್​​-ಆಂಬ್ಯುಲೆನ್ಸ್​, ಲಾಕ್​​ಡೌನ್​ ಎಲ್ಲದರ ಮಧ್ಯೆ ಮುಗ್ಧ ಜೀವಗಳು ಹೇಗೆಲ್ಲಾ ನರಳುತ್ತಿವೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.
Published by:Kavya V
First published: