• Home
  • »
  • News
  • »
  • district
  • »
  • ಉತ್ತರಕನ್ನಡ ಜಿಲ್ಲೆ ಸೇರಿ 100ಕ್ಕೂ ಹೆಚ್ಚು ಡಯಾಲಿಸಿಸ್ ಘಟಕ ಮುಚ್ಚುವ ಆತಂಕ

ಉತ್ತರಕನ್ನಡ ಜಿಲ್ಲೆ ಸೇರಿ 100ಕ್ಕೂ ಹೆಚ್ಚು ಡಯಾಲಿಸಿಸ್ ಘಟಕ ಮುಚ್ಚುವ ಆತಂಕ

ಡಯಾಲಿಸಿಸ್ ಘಟಕ

ಡಯಾಲಿಸಿಸ್ ಘಟಕ

ಏಕಾಏಕಿ ಡಯಾಲಿಸಿಸ್ ಕೇಂದ್ರಗಳನ್ನು ಮುಚ್ಚುವುದು ಸರ್ಕಾರದ ಒಳ್ಳೆಯ ಕ್ರಮವಲ್ಲ ಜನರ ಪ್ರಾಣದ ಜೊತೆ ಸರ್ಕಾರ ಚೆಲ್ಲಾಡವಾಡುತ್ತಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯೂ ಆಗಿದೆ. ಸರ್ಕಾರ ಆದಷ್ಟು ಬೇಗ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಂಡು, ಕಿಡ್ನಿ ವೈಫಲ್ಯದ ರೋಗಿಗಳ ಸಂಜೀವಿನಿಯಾಗಿರುವ ಡಯಾಲಿಸಿಸ್ ಘಟಕಗಳನ್ನು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕಿದೆ.

ಮುಂದೆ ಓದಿ ...
  • Share this:

ಕಾರವಾರ: ಬಿಆರ್‌ಎಸ್ ಹೆಲ್ತ್ ಆ್ಯಂಡ್ ರಿಸರ್ಚ್ ಇನ್ಸ್​ಟಿಟ್ಯೂಟ್ ನಡೆಸುತ್ತಿರುವ ಉತ್ತರ ಕನ್ನಡ ಜಿಲ್ಲೆಯನ್ನೂ ಸೇರಿದಂತೆ ರಾಜ್ಯದ 27 ಜಿಲ್ಲೆಗಳ 122 ಆಸ್ಪತ್ರೆಗಳ ಡಯಾಲಿಸಿಸ್ ಘಟಕಗಳು ಶೀಘ್ರವೇ ಮುಚ್ಚುವ ಆತಂಕ ಎದುರಾಗಿದ್ದು, ಇದು ಡಯಾಲಿಸಿಸ್ ರೋಗಿಗಳಿಗೆ ಜೀವ ಭಯ ಹೆಚ್ಚಾಗುವಂತೆ ಮಾಡಿದೆ.


ಅನಿವಾಸಿ ಉದ್ಯಮಿ ಬಿ.ಆರ್.ಶೆಟ್ಟಿ ಒಡೆತನದ ಬಿಆರ್‌ಎಸ್ ಹೆಲ್ತ್ ಆ್ಯಂಡ್ ರಿಸರ್ಚ್ ಇನ್ಸ್​ಟಿಟ್ಯೂಟ್ ಪ್ರೈವೇಟ್  ಲಿಮಿಟೆಡ್  ಸಂಸ್ಥೆಯು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿ ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕವನ್ನು ಕಳೆದ ಅನೇಕ ವರ್ಷಗಳಿಂದ ನಿರ್ವಹಣೆ ಮಾಡುತ್ತಿದೆ. ಇದು ಬಡ ಡಯಾಲಿಸಿಸ್ ರೋಗಿಗಳಿಗೆ ವರದಾನವಾಗಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಅತಿ ದುಬಾರಿಯಾಗಿದ್ದು, ಬಿಆರ್‌ಎಸ್‌ನ ಸಹಕಾರದಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲೇ ಸಿಗುತ್ತಿದ್ದ ಈ ಸೌಲಭ್ಯವು ಕಿಡ್ನಿ ವೈಫಲ್ಯದಿಂದ ಸಾವು- ಬದುಕಿನ ನಡುವೆ ಸಂಕಷ್ಟ ಅನುಭವಿಸುತ್ತಿರುವವರಿಗೆ ಸಂಜೀವಿನಿಯಾಗಿತ್ತು. ಆದರೆ ಇದೀಗ ರಾಜ್ಯದ ಬಹುತೇಕ ಸರ್ಕಾರಿ ಡಯಾಲಿಸಿಸ್ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ.


ಉತ್ತರ ಕನ್ನಡ ಜಿಲ್ಲೆಯಲ್ಲಿ ಎಷ್ಟು?


ಉತ್ತರ ಕನ್ನಡ ಜಿಲ್ಲೆಯ 12 ತಾಲೂಕು ಆಸ್ಪತ್ರೆಗಳಲ್ಲೂ ಡಯಾಲಿಸಿಸ್ ಘಟಕಗಳಿದ್ದು, ಇವುಗಳನ್ನು ಬಿಆರ್‌ಎಸ್ ಸಂಸ್ಥೆಯೇ ನಿರ್ವಹಣೆ ಮಾಡುತ್ತಿವೆ. ಆದರೆ ಜೊಯಿಡಾದಲ್ಲಿ ಮಾತ್ರ ರೋಗಿಗಳೇ ಬರದೇ ಘಟಕವನ್ನು ಮುಚ್ಚಲಾಗಿದ್ದು, ಇನ್ನುಳಿದ ಘಟಕಗಳಲ್ಲಿ ರೋಗಿಗಳಿದ್ದರೂ ಘಟಕ ಕಾರ್ಯನಿರ್ವಹಿಸದ ಪರಿಸ್ಥಿತಿ ಉದ್ಭವವಾಗಿದೆ. ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ವೇತನ ಪಾವತಿಯಾಗುತ್ತಿಲ್ಲ. ಆದರೂ ಸಿಬ್ಬಂದಿ ಇಂದೋ ನಾಳೆಯೋ ವೇತನ ಬರುವುದೆಂದು ಕರ್ತವ್ಯ ಮುಂದುವರಿಸಿದರೆ, ಡಯಾಲಿಸಿಸ್‌ಗೆ ಬೇಕಾದ ಅಗತ್ಯ ಪರಿಕರಗಳ ಕೊರತೆ ಎದುರಾಗಿದೆ. ಡಯಾಲೈಸರ್ ಅನ್ನು ಸ್ವಚ್ಛಗೊಳಿಸಲು ಬೇಕಾದ ಹೈಡ್ರೋಜನ್ ಪ್ಯಾರಾಕ್ಸೈ ಔಷಧಿ, ಕಿಟ್‌ಗಳನ್ನು ಘಟಕಗಳಿಗೆ ಪೂರೈಕೆ ಮಾಡುವುದನ್ನು ಬಿಆರ್‌ಎಸ್ ಕೆಲವು ತಿಂಗಳಿನಿಂದ ಸ್ಥಗಿತಗೊಳಿಸಿಬಿಟ್ಟಿದೆ.


ಜಿಲ್ಲೆಯಲ್ಲಿ 400ಕ್ಕೂ ಹೆಚ್ಚು ರೋಗಿಗಳು ಪ್ರತಿದಿನ ಡಯಾಲಿಸಿಸ್ ಮಾಡಿಸಿಕೊಳ್ಳುವವರಿದ್ದಾರೆ. ಆದರೀಗ ಇವರ ಪಾಡು ದೇವರೇ ಬಲ್ಲ ಎನ್ನುವ ಸ್ಥಿತಿ ಉದ್ಭವಿಸಿದೆ. ಪ್ರಸ್ತುತ ಜಿಲ್ಲೆಯ ಕೆಲ ಡಯಾಲಿಸಿಸ್ ಘಟಕಗಳು ಒಂದೆರಡು ದಿನ ಕಾರ್ಯನಿರ್ವಹಿಸಬಲ್ಲ ಪರಿಕರಗಳು, ಸಾಮರ್ಥ್ಯವನ್ನಷ್ಟೇ ಹೊಂದಿದ್ದು, ಕಿಡ್ನಿ ವೈಫಲ್ಯಗೊಂಡವರ ಮುಂದಿನ ಪರಿಸ್ಥಿತಿ ಏನು ಎಂಬುವುದೇ ಇಲ್ಲಿ ಊಹಿಸಿಕೊಳ್ಳಲು ಕಷ್ಟಕರವಾಗಿದೆ.


ಇದನ್ನು ಓದಿ: ಕೊರೋನಾ ಸೋಂಕಿತ ಸಿಬ್ಬಂದಿಯಿಂದಲೇ ಆಸ್ಪತ್ರೆಯಲ್ಲಿ ಕರ್ತವ್ಯ ಮಾಡಿಸಿದ ವೈದ್ಯ!


ಬಿ.ಆರ್.ಶೆಟ್ಟಿ ಸ್ಥಾಪಿಸಿದ್ದ ಎಂಎನ್‌ಸಿ ಹೆಲ್ತ್ ಷೇರುಗಳ ದರದಲ್ಲಿ 2019ರ ಡಿಸೆಂಬರ್‌ನಿಂದ ಕುಸಿತವಾಗಿ ಅಧ್ಯಕ್ಷ ಸ್ಥಾನಕ್ಕೆ ಶೆಟ್ಟಿ ರಾಜೀನಾಮೆ ನೀಡಿದ್ದರು. ಅವರ ಮತ್ತೊಂದು ಕಂಪನಿ ಫಿನಬ್ಲಿರ್ ಷೇರುಗಳ ಮೌಲ್ಯ ಕೂಡ ಕುಸಿತಕ್ಕೀಡಾಗಿದೆ. ಯುಎಇಯ ಕೇಂದ್ರೀಯ ಬ್ಯಾಂಕ್ (ಸಿಬಿಯುಎಇ) ಶೆಟ್ಟಿ ಮತ್ತು ಕುಟುಂಬದವರ ಜೊತೆಗೆ ಇವರ ಪಾಲುಳ್ಳ ಕಂಪನಿಗಳ ಎಲ್ಲ ಬ್ಯಾಂಕ್ ಖಾತೆಗಳನ್ನು ತಡೆ ಹಿಡಿದು, ಕೆಲವು ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿದೆ. ಇದು ಭಾರತದಲ್ಲಿರುವ ಶೆಟ್ಟಿ ಪಾಲಿಗೆ ತೀವ್ರ ಹೊಡೆತ ನೀಡಿತು. ಹೀಗಾಗಿ ಅವರ ಒಡೆತನದ ಭಾರತದಲ್ಲಿರುವ ಕಂಪನಿಗಳು ನಷ್ಟದಲ್ಲಿದ್ದು, ಪ್ರಸ್ತುತ ಸರ್ಕಾರ ಬಾಕಿ ಉಳಿಸಿಕೊಂಡಿರುವುದನ್ನು ಶೀಘ್ರ ಪಾವತಿ ಮಾಡದಿದ್ದಲ್ಲಿ ರಾಜ್ಯದ ಎಲ್ಲಾ ಡಯಾಲಿಸಿಸ್‌ಗಳ ನಿರ್ವಹಣಾ ಜವಾಬ್ದಾರಿಯನ್ನು ಬಿಆರ್‌ಎಸ್ ಸರ್ಕಾರಕ್ಕೊಪ್ಪಿಸುವುದು ಬಹುತೇಕ ಖಚಿತ ಎನ್ನಲಾಗಿದೆ.


ಏನಂತಾರೆ ಜನ?


ಏಕಾಏಕಿ ಡಯಾಲಿಸಿಸ್ ಕೇಂದ್ರಗಳನ್ನು ಮುಚ್ಚುವುದು ಸರ್ಕಾರದ ಒಳ್ಳೆಯ ಕ್ರಮವಲ್ಲ ಜನರ ಪ್ರಾಣದ ಜೊತೆ ಸರ್ಕಾರ ಚೆಲ್ಲಾಡವಾಡುತ್ತಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯೂ ಆಗಿದೆ. ಸರ್ಕಾರ ಆದಷ್ಟು ಬೇಗ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಂಡು, ಕಿಡ್ನಿ ವೈಫಲ್ಯದ ರೋಗಿಗಳ ಸಂಜೀವಿನಿಯಾಗಿರುವ ಡಯಾಲಿಸಿಸ್ ಘಟಕಗಳನ್ನು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕಿದೆ.

Published by:HR Ramesh
First published: