ಗದಗ: ಒಮ್ಮಿಂದೊಮ್ಮೆಗೆ ಒಂದು ಹುಚ್ಚು ನಾಯಿಯ ದಾಳಿಗೆ ನಲವತ್ತು ಜನರು ಗಾಯಗೊಂಡ ಘಟನೆ ನರಗುಂದ ಪಟ್ಟಣದಲ್ಲಿ ನಿನ್ನೆ ಸಂಭವಿಸಿದೆ. ಈ ವಿಚಿತ್ರ ದುರ್ಘಟನೆ ಸಂಭವಿಸುವ ಮುನ್ನ ಪಟ್ಟಣದ ಜನರು ವಿವಿಧೆಡೆ ಎಂದಿನಂತೆ ಬೆಳಗ್ಗೆ ತಮ್ಮ ಕೆಲಸಗಳಿಗೆ ಹೋಗುತ್ತಿದ್ದರೆ, ಕೆಲವರು ಬಹಿರ್ದೆಸೆಗೆ ಹೋಗುತ್ತಿದ್ದರು. ಇನ್ನೂ ಕೆಲವರು ತಮ್ಮ ತಮ್ಮ ಜಮೀನಿಗಳಿಗೆ ಕೆಲಸ ಮಾಡಲು ಹೋಗುತ್ತಿದ್ರು. ಮತ್ತೆ ಕೆಲವರು ದೇವರ ದರ್ಶನಕ್ಕೆ ತೆರಳುತ್ತಿದ್ದರು. ಆ ವೇಳೆ ದಿಢೀರನೇ ಹುಚ್ಚು ನಾಯಿಯೊಂದು ಜನರ ಮೇಲೆ ದಾಳಿ ಮಾಡಲು ಆರಂಭಿಸಿತ್ತು. ಜನರೆಲ್ಲ ಚೆಲ್ಲಾಪಿಲ್ಲಿಯಾಗಿ ದಿಕ್ಕಾಪಾಲಾಗಿ ಓಡಲು ಶುರು ಮಾಡಿದರು. ಕೆಲವರು ಅಲ್ಲೇ ಹೊರಳಾಡಿ ಗೋಳಾಡ ತೊಡಗಿದರು. ಈ ಹುಚ್ಚು ನಾಯಿಯ ದಾಳಿಗೆ ಸುಮಾರು 40 ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಪಟ್ಟಣದ ವಿವಿಧ ಬೀದಿಯಲ್ಲಿನ ಜನರನ್ನ ಹುಚ್ಚು ನಾಯಿ ಅಟ್ಟಾಡಿಸಿಕೊಂಡು ದಾಳಿ ಮಾಡಿಬಿದೆ. ಸೋಮಾಪುರ, ಜಮ್ಲಾಪುರ, ರಾಚಯ್ಯನಗರ, ಮಾರುತಿನಗರ, ದಂಡಾಪುರ ಏರಿಯಾದಲ್ಲಿನ ಹಲವು ಜನರಿಗೆ ಕಚ್ಚಿ ಗಾಯಗೊಳಿಸಿದೆ. ಸುಖಾ ಸುಮ್ಮನೆ ತಮ್ಮಷ್ಟಕ್ಕೆ ತಾವು ಹೊರಟಿದ್ದ ಜನರಿಗೆ ಧಿಡೀರ್ ಕಚ್ಚಿ ಗಾಯಗೊಳಿಸಿದೆ. ವಿಚಿತ್ರ ಅಂದರೆ ಅವರೆಲ್ಲ ಬಹುತೇಕರು ವಯೋವೃದ್ಧರಾಗಿದ್ದಾರೆ.
ಇದನ್ನೂ ಓದಿ: ಜಾರಕಿಹೊಳಿ ಸಿಡಿ ಷಡ್ಯಂತ್ರದ ಹಿಂದಿರುವ 2+3+4 ಯಾರು? ವ್ಯಂಗ್ಯದ ಬಾಣ ಬಿಟ್ಟ ಕುಮಾರಸ್ವಾಮಿ
ಆಸ್ಪತ್ರೆಯ ಬೆಡ್ನಲ್ಲಿ ಗಾಯಾಳುಗಳ ನರಳಾಟ...!
ಇವರೆಲ್ಲ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಹೋಗುತ್ತಿದ್ದರು. ಕೆಲವರು ಹೊಲಕ್ಕೆ ಹೋಗುತ್ತಿದ್ದರು. ಕೆಲವರು ಬಹಿರ್ದೆಸೆಗೆ ತೆರಳುತ್ತಿದ್ದರು.ಇನ್ನೂ ಕೆಲವರು ನೀರು ತರಲಿಕ್ಕೆ ಹೋಗುತ್ತಿದ್ದರು. ಆದ್ರೆ ಹುಚ್ಚು ನಾಯಿ ದಾಳಿಗೆ ಬೆಚ್ಚಿಬಿದ್ದ ಜನರು ಈಗ ಮನೆಯಿಂದ ಹೊರಗೆ ಬರೋದಕ್ಕೆ ಹಿಂಜರಿಯುತ್ತಿದ್ದಾರೆ. ಇನ್ನು ಈ ಹುಚ್ಚು ನಾಯಿ ಯಾರದ್ದೋ ಒಬ್ಬರದು ಸಾಕು ನಾಯಿ ಅಂತ ಹೇಳಲಾಗ್ತಿದೆ.
ಹುಚ್ಚು ನಾಯಿಯನ್ನ ಸ್ಥಳೀಯರೇ ಕಲ್ಲು ದೊಣ್ಣೆಯಿಂದ ಹೊಡೆದು ಸಾಯಿಸಿದ್ದಾರೆ. ಸದ್ಯ ಎಲ್ಲ ಗಾಯಾಳುಗಳು ನರಗುಂದ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟ್ಟಣದಲ್ಲಿ ಇತ್ತೀಚಿಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಹಲವು ಬಾರಿ ನರಗುಂದ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರೂ ದಿವ್ಯ ನಿರ್ಲಕ್ಷ್ಯವಹಿಸಿದ್ದಾರೆ ಅಂತ ಜನರು ಆರೋಪ ಮಾಡ್ತಿದ್ದಾರೆ. ಇನ್ನು ತಾಲೂಕು ಆಸ್ಪತ್ರೆ ತುಂಬ ಬಹುತೇಕರು ಹುಚ್ಚು ನಾಯಿ ಕಡಿತಕ್ಕೊಳಗಾದವರೇ ತುಂಬಿದ್ದಾರೆ. ಇಷ್ಟೆಲ್ಲಾ ಸಮಸ್ಯೆಯಾದರೂ ಪುರಸಭೆ ಅಧಿಕಾರಿಗಳು ಇತ್ತ ಹೊರಳಿ ನೋಡಿಲ್ಲ. ನಮ್ಮ ಕೂಗಿಗೆ ಅವರು ಕಿವಿಗೊಡುತ್ತಿಲ್ಲ ಅಂತಿದ್ದಾರೆ ಇಲ್ಲಿನ ಜನರು.
ವರದಿ: ಸಂತೋಷ ಕೊಣ್ಣೂರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ