ಬೆಂಗಳೂರು: ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ನಲ್ಲಿ ಪ್ರಸ್ತಾಪ ಮಾಡಲಾದ ಸ್ಕ್ರಾಪಿಂಗ್ ಪಾಲಿಸಿ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ನಿಯಮದ ಪ್ರಕಾರ ಹಳೆಯ ವಾಹನಗಳನ್ನು ಗುಜರಿಗೆ ಹಾಕಬೇಕು. ಈ ಸ್ಕ್ರಾಪಿಂಗ್ ನಿಯಮ ಜಾರಿಗೆ ಬಂದರೆ ಮಹಾನಗರ ಬೆಂಗಳೂರಿನ ಸುಮಾರು 20 ಲಕ್ಷಕ್ಕೂ ಅಧಿಕ ವಾಹನಗಳು ಗುಜರಿ ಅಂಗಡಿ ಕದ ತಟ್ಟಲಿದೆ. ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಈ ಪಾಲಿಸಿಯನ್ನು ಕೇಂದ್ರ ಸರ್ಕಾರ ಜಾರಿ ಮಾಡ್ತಿದೆ.
ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಮಾಲಿನ್ಯಕಾರಕಗಳು ಹೆಚ್ಚುತ್ತಿರುವ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರ ಮಂಡಳಿ ಎಚ್ಚರಿಕೆ ನೀಡಿತ್ತು. ಹಸಿರು ನ್ಯಾಯಾಧೀಕರಣ ಕೂಡ ಇದರ ಸಲಹೆ ನೀಡಿತ್ತು. ಸ್ಕ್ರಾಪ್ ಪಾಲಿಸಿ ಅನ್ವಯ 15 - 20 ವರ್ಷ ಮೇಲ್ಪಟ್ಟ ಗಾಡಿಗಳನ್ನು ಸ್ಕ್ರಾಪ್ಗೆ ಹಾಕಬೇಕು. ಹೀಗಾದಲ್ಲಿ ಹೊಸ ವಾಹನಗಳಿಗೆ ಬೇಡಿಕೆ ಜಾಸ್ತಿಯಾಗಲಿದೆ, ಇದು ಆರ್ಥಿಕತೆ ಏರಿಸಲು ಸಹಕಾರಿಯಾಗಲಿದೆ. 20 ವರ್ಷ ಮೇಲ್ಪಟ್ಟ ವೈಯಕ್ತಿಕ ವಾಹನಗಳು ಮತ್ತು 15 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳನ್ನು ಗುಜುರಿಗೆ ಹಾಕಬೇಕಾಗುತ್ತದೆ.
ಹೀಗಿದ್ದರೂ ಏಕಾಏಕಿಯಾಗಿ ನಿಮ್ಮ ವಾಹನ ಸ್ಕ್ರಾಪ್ಗೆ ಹಾಕುವುದಿಲ್ಲ. 15-20 ವರ್ಷ ಮೀರಿದ ವಾಹನಗಳನ್ನು ಆರ್ಟಿಓ ಅಧಿಕಾರಿಗಳು ಮೊದಲು ಪರಿಶೀಲನೆ ಮಾಡಲಿದ್ದಾರೆ. ಆ ಬಳಿಕ ವಾಹನದ ಫಿಟ್ನೆಸ್ ಚೆಕ್ ಮಾಡಲಿದ್ದಾರೆ, ಫಿಟ್ ಇದ್ರೆ ಗ್ರೀನ್ ಟ್ಯಾಕ್ಸ್ ಕಟ್ಟಿ ಮತ್ತೆ ವಾಹನ ರಸ್ತೆಗೆ ಇಳಿಸಬಹುದು. ಆದ್ರೆ ಫಿಟ್ನೆಸ್ ಟೆಸ್ಟ್ನಲ್ಲಿ ವಾಹನ ಫೇಲ್ ಆದರೆ ವಾಹನ ಗುಜರಿಗೆ ಹಾಕಬೇಕು. ಇದರ ಜೊತೆಗೆ ಫಿಟ್ನೆಸ್ ಟೆಸ್ಟ್ನಲ್ಲಿ ಪಾಸ್ ಆಗಿ ವಾಹನದ ಡಾಕ್ಯುಮೆಂಟ್ಸ್ ಸರಿ ಇಲ್ಲದಿದ್ದರೆ ಗಾಡಿ ಸೀಜ್ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: Biological E - ಮಹಿಳೆಯರ ಪಾರಮ್ಯದ ಭಾರತೀಯ ಕಂಪನಿಯಿಂದ ಲಸಿಕೆ ಉತ್ಪಾದನೆ; ಕ್ವಾಡ್ ದೇಶಗಳಿಂದ ಧನಸಹಾಯ
ಆದರೆ ಇನ್ನೂ ಅಧಿಕೃತ ಗೈಡ್ ಲೈನ್ಸ್ ಬಂದಿಲ್ಲ, ಬರುವ ನಿರೀಕ್ಷೆ ಇದೆ ಎಂದು ಆರ್ಟಿಓ ಕಮಿಷನರ್ ಶಿವಕುಮಾರ್ ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಪ್ರಸ್ತಾಪ ಮಾಡಿದೆ. ಆದರೆ ನಮಗೆ ಯಾವುದೇ ರೀತಿಯ ಅಧಿಕೃತ ಮಾಹಿತಿ ಬಂದಿಲ್ಲ, ಬಂದ ಕೂಡಲೇ ನೀತಿ ಜಾರಿಗೆ ಬರಲಿದೆ ಎಂದರು.
ಇನ್ನು ಕೇಂದ್ರದ ಈ ನೀತಿ ಬಗ್ಗೆ ರಾಜ್ಯದ ಟ್ರಾವೆಲ್ ಓನರ್ಸ್ ಅಸೋಸಿಯೇಷನ್ ಅಸಮಾಧಾನ ವ್ಯಕ್ತಪಡಿಸಿದೆ. ನ್ಯೂಸ್ 18 ಕನ್ನಡ ವಾಹಿನಿ ಜೊತೆ ಈ ಬಗ್ಗೆ ಮಾತನಾಡಿದ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ, ಸ್ಕ್ರಾಪ್ ಪಾಲಿಸಿ ಮಾಡೋದಕ್ಕೂ ಮೊದಲು ದೇಶದಲ್ಲಿ ಸ್ಕ್ರಾಪಿಂಗ್ ಉದ್ಯಮವನ್ನು ಚೇತರಿಕೆ ಮಾಡುವ ಕೆಲಸ ಮಾಡಬೇಕು. ಹಳೆ ವಾಹನ ಗುಜರಿಗೆ ಹಾಕಿದ ಮೇಲೆ ಆ ವಾಹನದ ಮಾಲೀಕರಿಗೆ ಹೊಸ ವಾಹನ ಕೊಂಡುಕೊಳ್ಳಲು ಕೆಲ ರಿಯಾಯತಿ ನೀಡಬೇಕು ಎಂದು ಆಗ್ರಹಿಸಿದರು.
ಆದರೆ ಈ ಸ್ಕ್ರಾಪ್ ಪಾಲಿಸಿ ಇನ್ನೂ ಅಧಿಕೃತವಾಗಿ ಜಾರಿಯಾಗಿಲ್ಲ. 2022ರ ಹೊತ್ತಿಗೆ ಜಾರಿಯಾಗುವ ನಿರೀಕ್ಷೆ ಇದೆ. ಒಂದುವೇಳೆ ಯಥಾವತ್ತಾಗಿ ಜಾರಿಯಾದರೆ ಬೆಂಗಳೂರು ನಗರದಲ್ಲಿನ ಸುಮಾರು 20 ಲಕ್ಷಕ್ಕೂ ಅಧಿ ವೈಯಕ್ತಿಕ ವಾಹನ ಹಾಗೂ ವಾಣಿಜ್ಯ ವಾಹನಗಳು ಸ್ಕ್ರಾಪ್ಗೆ ಬೀಳಲಿವೆ.
ಇದನ್ನೂ ಓದಿ: 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರದ ನಿರಾಸಕ್ತಿ; ಈ ಬಾರಿಯೂ ಹಾವೇರಿಯ ಕೈತಪ್ಪುತ್ತಾ ಅಕ್ಷರ ಜಾತ್ರೆ?
ನಗರದಲ್ಲಿನ 15 ವರ್ಷ ಮೀರಿದ ವಾಹನಗಳು (2020 ಮಾರ್ಚ್ 31ರ ವರೆಗೆ):
ವೈಯಕ್ತಿಕ ವಾಹನಗಳು : 18,19,813
ಸಾರಿಗೆ ವಾಹನಗಳು : 92,866
ಲಘು ಸರಕು ವಾಹನಗಳು : 66,458
ಬಸ್ಗಳು : 43,788
ಟ್ಯಾಕ್ಸಿಗಳು : 41,069
LMV ವಾಹನಗಳು : 1,32,969
ಸಾರಿಗೆ & ವೈಯಕ್ತಿಕ ವಾಹನಗಳು : 21,96,963
ವರದಿ: ಆಶಿಕ್ ಮುಲ್ಕಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ