HOME » NEWS » District » MORE THAN 10 VILLAGES STILL HAVE NO ROAD CONNECTIVITY IN CONNECTIVITY RHHSN DKK

ಉತ್ತರ ಕನ್ನಡ ಜಿಲ್ಲೆಯ ಕುಗ್ರಾಮಗಳ ಸ್ಥಿತಿ ‌ಕೇಳುವವರಾರು? 10ಕ್ಕೂ ಹೆಚ್ಚು ಗ್ರಾಮಗಳಿಗೆ ಈಗಲೂ ಇಲ್ಲ ರಸ್ತೆ ಸಂಪರ್ಕ!

ಇಂತಹ ದುಸ್ಥಿತಿ ಉತ್ತರ ಕನ್ನಡ ಜಿಲ್ಲೆಯ ಕುಗ್ರಾಮಗಳಲ್ಲಿ ಇವೆ. ಸುಮಾರು 50 ರಷ್ಟು ಗ್ರಾಮಗಳು ಇನ್ನೂ ಕೂಡಾ ರಸ್ತೆ ಸಂಪರ್ಕ ಇಲ್ಲದೆ ನರಳುತ್ತಿವೆ. ಇಲ್ಲಿನ ಜನರು ಅಲ್ಲಿ ಉಳಿಯಲು ಆಗದೆ ಇತ್ತ ಬರಲು ಆಗದೆ ಅಪ್ಪ ಹಾಕಿದ ಆಲದ ಮರ ಎಂದು ಬದುಕು ಸಾಗಿಸುತ್ತಿದ್ದಾರೆ. 

news18-kannada
Updated:March 4, 2021, 7:14 PM IST
ಉತ್ತರ ಕನ್ನಡ ಜಿಲ್ಲೆಯ ಕುಗ್ರಾಮಗಳ ಸ್ಥಿತಿ ‌ಕೇಳುವವರಾರು? 10ಕ್ಕೂ ಹೆಚ್ಚು ಗ್ರಾಮಗಳಿಗೆ ಈಗಲೂ ಇಲ್ಲ ರಸ್ತೆ ಸಂಪರ್ಕ!
ಅನಾರೋಗ್ಯಪೀಡಿತ ವ್ಯಕ್ತಿಯನ್ನು ಜೋಲಿ ಮೂಲಕ ಕಾಡಿನ ದಾರಿಯಲ್ಲಿ ಕರೆದೊಯ್ಯುತ್ತಿರುವುದು.
  • Share this:
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕೆಲ ತಾಲೂಕಿನ ಕುಗ್ರಾಮಗಳಿಗೆ ಇನ್ನೂ ಕೂಡ ಮೂಲಸೌಕರ್ಯ ಸಿಕ್ಕಿಲ್ಲ. ಸ್ವಾತಂತ್ರ್ಯ ಬಂದು 70 ವರ್ಷಗಳೇ ಕಳೆದರೂ ಕುಗ್ರಾಮದ ಜನರು ಇನ್ನೂ ಸರಕಾರದ ಮೂಲಸೌಕರ್ಯದಿಂದ ವಂಚಿತರಾಗಿದ್ದು, ಮುಖ್ಯವಾಹಿನಿಗೆ ಬರಲು ಹಪಹಪಿಸುತ್ತಿದ್ದಾರೆ. ಹೀಗೆ ಪಟ್ಟಿ ಮಾಡುತ್ತಾ ಹೋದ್ರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕುಗ್ರಾಮಗಳ ಸಾಲುಸಾಲು ಸಿಗುತ್ತವೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ಮೂಸೌಕರ್ಯದ ಕೊರತೆ ಇದೆ. ನಗ್ಗೆ ಕೊವೆ, ಮಚ್ಚಳ್ಳಿ, ಗುಡ್ಡಳ್ಳಿ ಹೀಗೆ ಹತ್ತು ಹಲವು ಗ್ರಾಮಗಳಿಗೆ ಇನ್ನು ಕೂಡ ಮೌಲಸೌಕರ್ಯ ಇಲ್ಲ. ರಸ್ತೆ ಸಂಪರ್ಕದ ಕೊರತೆಯಿಂದ ಇಲ್ಲಿನ ಜನರು ನಗರಕ್ಕೆ ಬರಬೇಕು ಅಂದ್ರೆ ಹತ್ತಾರು ಕಿ.ಮೀ. ಕಾಲು ನಡಿಗೆಯಿಂದಲೇ ಬರಬೇಕು. ಯಾರಿಗಾದರೂ ಆರೋಗ್ಯ ಹದಗೆಟ್ಟಿತು ಅಂದರೆ ಆ ವ್ಯಕ್ತಿಯನ್ನು ಕಂಬಳಿಯಲ್ಲಿ ಜೋಲಿ ಮಾಡಿ ಹೆಗಲ ಮೇಲೆ ಹೊತ್ತುಕೊಂಡು ಕಾಲುನಡಿಗೆಯಲ್ಲೇ ನಗರದ ಆಸ್ಪತ್ರೆ ತಲುಪಬೇಕಾದ ಪರಿಸ್ಥಿತಿ ಇದೆ.

ಕಾರವಾರ ತಾಲೂಕಿನಲ್ಲಿ ಕುಗ್ರಾಮಗಳ ಜನರ ಸಮಸ್ಯೆ ಹೇಳತೀರದ್ದಾಗಿದೆ. ಹಾಗೆ ಅಂಕೋಲಾ ಕಡೆ ಸಾಗಿದರೆ ವೈಲ ಬೇಣ ಎನ್ನುವ ಗ್ರಾಮಕ್ಕೆ ಇನ್ನು ಕೂಡ ರಸ್ತೆ ಸಂಪರ್ಕ ಇಲ್ಲ. ಇಲ್ಲಿನ ಜನ ಕಾಡುಮೇಡಿನಲ್ಲಿ ಕಡಿದಾದ ರಸ್ತೆಯಲ್ಲೇ ನಡೆದುಕೊಂಡು ತಮ್ಮ ಊರು ಸೇರಬೇಕು. ಹಾಗೆ ಇಲ್ಲಿನ ಜನರು ಅನಾರೋಗ್ಯಕ್ಕೆ ತುತ್ತಾದಲ್ಲಿ ಮತ್ತದೆ ಪರಿಸ್ಥಿತಿ. ಯಾವ ಕುಗ್ರಾಮಗಳಿಗೆ ಹೋದರೂ ಪರಿಸ್ಥಿತಿ ಭಿನ್ನವಾಗಿಲ್ಲ. ಹೀಗೆ ಉತ್ತರ ಕನ್ನಡ ಜಿಲ್ಲೆಯ ಜನರ ಸಮಸ್ಯೆ ಅನಾವರಣವಾಗುತ್ತದೆ. ಈ ಸಮಸ್ಯೆ ಜನಪ್ರತಿನಿಧಿಗಳ ಕಿವಿಗೆ ತಾಗುವ ಹಾಗೆ ಕೂಗಿ ಕೂಗಿ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಚುನಾವಣೆ ಬಂದಂತಹ ಸಂದರ್ಭದಲ್ಲಿ ಮಾತ್ರ ಕುಗ್ರಾಮದ ಕಡೆ ಜನರ ಮನವೊಲಿಸಿ ಸುಳ್ಳು ಭರವಸೆ ನೀಡಿ ಆಯ್ಕೆಯಾಗುವ ಜನಪ್ರತಿನಿಧಿಗಳು ಚುನಾವಣೆ ನಂತರ ನಾಪತ್ತೆ ಆಗುತ್ತಾರೆ.

ಇದನ್ನು ಓದಿ: Session | ಸದನದಲ್ಲಿ ಗದ್ದಲ; ಬಾವಿಗಿಳಿದು ಕಾಂಗ್ರೆಸ್ ಸದಸ್ಯರಿಂದ ಪ್ರತಿಭಟನೆ, ಸ್ಪೀಕರ್ ವಿರುದ್ಧ ಘೋಷಣೆ

ಹತ್ತಾರು ಕಿ.ಮೀ. ನಡೆಯೋದು ಭಾರಿ ಕಷ್ಟವಾಗಿರುವುದರಿಂದ ಉತ್ತರ ಕನ್ನಡ ಜಿಲ್ಲೆಯ ಕುಗ್ರಾಮದ ಜನರು ನಗರಕ್ಕೆ ಬರುವುದನ್ನೇ ಬಿಟ್ಟಿದ್ದಾರೆ. ಅದರಲ್ಲೂ ನಗರಕ್ಕೆ ಬಾರದಿರುವವರಲ್ಲಿ ಬಹುಪಾಲು ಮಹಿಳೆಯರಾಗಿದ್ದಾರೆ. ಗಂಡಸುರು ಸಂಸಾರದ ನೊಗ ಹೊತ್ತಿರುವುದರಿಂದ ನಗರಕ್ಕೆ ಕೂಲಿ ಕೆಲಸಕ್ಕೆಂದು ಬರುತ್ತಾರೆ. ಆದರೆ ಹೆಂಗಸರಿಗೆ ಯಾವುದೇ ಕೆಲಸವಿಲ್ಲದ್ದರಿಂದ ಅವರು ನಗರ ನೊಡೋದೆ ಬಿಟ್ಟು ಬಿಟ್ಟಿದ್ದಾರೆ. ಇನ್ನು ಕೆಲ ಗ್ರಾಮಗಳಲ್ಲಿ ಶಾಲೆಯೇ ಇರಲ್ಲ. ದೂರ ದೂರ ಶಾಲೆಗೆ ಹೋಗಲು ಇಲ್ಲಿನ ಮಕ್ಕಳು ಮನಸ್ಸು ಮಾಡೋದಿಲ್ಲ. ಜತೆಗೆ ದೂರದ ಊರಿಗೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಕೂಡ ಮನಸ್ಸು ಮಾಡಲ್ಲ. ಇನ್ನು ಶಿಕ್ಷಣದಲ್ಲಿ ಆಸಕ್ತಿ ಇದ್ದವರು ನಗರದಲ್ಲಿ ಇರುವ ತಮ್ಮ ತಮ್ಮ ಸಂಬಂಧಿಕರ ಮನೆಯಲ್ಲಿ ತಮ್ಮ ಮಕ್ಕಳನ್ನು ಇರಿಸಿ ಶಿಕ್ಷಣ ಕಲಿಸುತ್ತಾರೆ.

ಇಂತಹ ದುಸ್ಥಿತಿ ಉತ್ತರ ಕನ್ನಡ ಜಿಲ್ಲೆಯ ಕುಗ್ರಾಮಗಳಲ್ಲಿ ಇವೆ. ಸುಮಾರು 50 ರಷ್ಟು ಗ್ರಾಮಗಳು ಇನ್ನೂ ಕೂಡಾ ರಸ್ತೆ ಸಂಪರ್ಕ ಇಲ್ಲದೆ ನರಳುತ್ತಿವೆ. ಇಲ್ಲಿನ ಜನರು ಅಲ್ಲಿ ಉಳಿಯಲು ಆಗದೆ ಇತ್ತ ಬರಲು ಆಗದೆ ಅಪ್ಪ ಹಾಕಿದ ಆಲದ ಮರ ಎಂದು ಬದುಕು ಸಾಗಿಸುತ್ತಿದ್ದಾರೆ.
Published by: HR Ramesh
First published: March 4, 2021, 7:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories