ಚಾಮರಾಜ‌ಗರ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್ ಲಸಿಕೆ!

ಮಾರ್ಚ್ 1 ರಿಂದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಪ್ರಾರಂಭಿಸಲಾಯಿತು.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಚಾಮರಾಜನಗರ: ಕೋವಿಡ್-19 ರೋಗ ನಿರೋಧಕ ಶಕ್ತಿ ಒದಗಿಸುವ ಕೊರೊನಾ ಲಸಿಕೆ  ನೀಡುವ ಕಾರ್ಯದಲ್ಲಿ ಚಾಮರಾಜನಗರ ಜಿಲ್ಲೆ ಗಣನೀಯ ಪ್ರಗತಿಯತ್ತ ಸಾಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡುವ ಮುಖೇನ ಮೈಲಿಗಲ್ಲು ಸ್ಥಾಪಿಸಿದೆ.  ಜನವರಿ 16 ರಂದು ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್‍ ಗಳೆಂದೆ ಕರೆಯಲ್ಪಡುವ ವೈದ್ಯರು ಸೇರಿದಂತೆ ಆರೋಗ್ಯ ಸೇವೆಯಲ್ಲಿ ತೊಡಗಿಕೊಂ ಡಿರುವ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನ ಆರಂಭವಾಯಿತು. ಬಳಿಕ ಕಂದಾಯ, ಪೊಲೀಸ್, ನಗರಾಭಿವೃದ್ಧಿ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿ ಸಿಬ್ಬಂದಿಯನ್ನೊಳಗೊಂಡ ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ಹಾಕುವ ಕಾರ್ಯ ಶುರುವಾಯಿತು.

ಮಾರ್ಚ್ 1 ರಿಂದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಪ್ರಾರಂಭಿಸಲಾಯಿತು. ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವ ಮಹತ್ತರ ಅಭಿಯಾನ ಆರಂಭಗೊಂಡಿತು.

ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರು 2,97,000 ಮಂದಿ ಇದ್ದು, ಈ ಎಲ್ಲರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಈ ಪೈಕಿ 45 ರಿಂದ 59 ರ ವಯೋಮಾನದವರು 1,96,530 ಜನರಿದ್ದಾರೆ. 60 ವರ್ಷ ಮೇಲ್ಪಟ್ಟವರು 1,00,470 ಜನರಿದ್ದಾರೆ. ಇದುವರೆಗೆ ಅಂದರೆ, ಏಪ್ರಿಲ್ 10ರ ಶುಕ್ರವಾರದವರೆಗೆ ಜಿಲ್ಲೆಯಲ್ಲಿ ಒಟ್ಟು 1,01,586 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ.

ಲಸಿಕೆ ನೀಡಲು ಜಿಲ್ಲೆಯಾದ್ಯಂತ  ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿರುವ 60 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಂತೆಮರಹಳ್ಳಿ, ಬೇಗೂರು ಹಾಗೂ ಕಬ್ಬಳಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರ, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ತಾಲ್ಲೂಕು ಆಸ್ಪತ್ರೆ, ಕೊಳ್ಳೇಗಾಲ, ಚಾಮರಾಜನಗರ ಪಟ್ಟಣದಲ್ಲಿರುವ ನಗರ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದೆ.

ಜಿಲ್ಲೆಯಲ್ಲಿರುವ 14 ಆರೋಗ್ಯ ಉಪ ಕೇಂದ್ರಗಳಲ್ಲಿಯೂ ಕೋವಿಡ್ ಲಸಿಕೆ ನೀಡುವ ಕಾರ್ಯ ಪ್ರಾರಂಭಗೊಂಡಿದೆ. ಆಯುಷ್ ಇಲಾಖೆಯ ವೈದ್ಯರು, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಆರೋಗ್ಯ ಇಲಾಖೆ ಕಾರ್ಯಕರ್ತೆಯರು ಪೂರಕ ಸಹಕಾರದೊಂದಿಗೆ ಈ ಲಸಿಕಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಏಪ್ರಿಲ್ 9 ರಿಂದ ಹೋಬಳಿ ಕೇಂದ್ರಗಳನ್ನು ಕೇಂದ್ರವಾಗಿರಿಸಿಕೊಂಡು ಕೋವಿಡ್ ಲಸಿಕಾ ಕಾರ್ನರ್ ಗಳನ್ನು ತೆರೆಯಲಾಗಿದ್ದು, ಇಲ್ಲಿಯೂ ಸಹ ಕೋವಿಡ್ ಲಸಿಕೆ ನೀಡಲಾಗುತ್ತಿದೆ.

ಇದನ್ನೂ ಓದಿ: Arvind Kejriwal: ಕೊರೋನಾ ಉಲ್ಬಣಗೊಳ್ಳುತ್ತಿದೆ, ಲಸಿಕೆ ಮೇಲಿನ ನಿರ್ಬಂಧ ತೆಗೆಯಿರಿ; ಅರವಿಂದ ಕೇಜ್ರಿವಾಲ್ ಮನವಿ

ಈ ಎಲ್ಲಾ ಲಸಿಕಾ ಕೇಂದ್ರಗಳ ಸ್ಥಾಪನೆಯಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯ ಭರದಿಂದ ಸಾಗಿದೆ. ಒಟ್ಟಾರೆ ಇದುವರೆಗೆ 10,601 ಆರೋಗ್ಯ ಕಾರ್ಯಕರ್ತರು, 4,301 ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆದುಕೊಂಡಿದ್ದಾರೆ.    45 ರಿಂದ 59 ರ ವಯೋಮಾನದವರು 27,707 ಹಾಗೂ 60 ವರ್ಷ ಮೇಲ್ಪಟ್ಟರು 58,977 ಸೇರಿದಂತೆ ಇದುವರೆಗೆ ಒಟ್ಟು 1,01,586 ಜನರು ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ.

ಕೊರೊನಾ ವಿರುದ್ದದ ಹೋರಾಟದಲ್ಲಿ ಲಸಿಕಾ ಪಾತ್ರವು ಅತ್ಯಂತ ಮಹತ್ವದ್ದಾಗಿದೆ. ಕೋವಿಡ್ ನಿಯಂತ್ರಣಕ್ಕೆ ಪ್ರಮುಖವಾಗಿರುವ ಲಸಿಕೆಯನ್ನು 45 ವರ್ಷ ಮೇಲ್ಪಟ್ಟ ಎಲ್ಲರೂ ಸ್ವಯಂಪ್ರೇರಿತರಾಗಿ ಪಡೆಯಲು ಮುಂದೆ ಬರಬೇಕು. ಕೊರೊನಾ ವ್ಯಾಪಿಸದಂತೆ ತಡೆಯಲು ಆರಂಭದಿಂದಲೂ ಜಿಲ್ಲಾ ಜನತೆ ಪ್ರಬುದ್ಧತೆಯಿಂದ ವರ್ತಿಸುತ್ತಿದ್ದು, ಸಹಕಾರ ನೀಡುತ್ತಿದ್ದಾರೆ. ಇದೇ ಬಗೆಯ ಬೆಂಬಲವನ್ನು ಕೋವಿಡ್ ಲಸಿಕಾ ಅಭಿಯಾನಕ್ಕೂ ನೀಡುವ ಮೂಲಕ ಕೋವಿಡ್ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಮನವಿ ಮಾಡಿದ್ದಾರೆ.

(ಎಸ್. ಎಂ. ನಂದೀಶ್ ಚಾಮರಾಜನಗರ)
Published by:MAshok Kumar
First published: