ಜಿ.ಪಂ, ತಾ.ಪಂ. ಚುನಾವಣೆ: ಟಿಕೆಟ್​ಗಾಗಿ ಸೂಟ್​ಕೇಸ್ ಹಿಡಿದು ದೊಡ್ಡ ನಾಯಕರ ಮನೆ ಸುತ್ತುತ್ತಿರುವ ಆಕಾಂಕ್ಷಿಗಳು

ಹಣ ಸಂಪಾದನೆ ಮಾಡಿದ ವ್ಯಕ್ತಿಗಳು ಜಿ.ಪಂ. ಅಥವಾ ತಾ.ಪಂ. ಚುನಾವಣೆಯಲ್ಲಿ ದೊಡ್ಡ ಪಕ್ಷಗಳ ಟಿಕೆಟ್ ಪಡೆಯಲು ಜಿದ್ದಿಗೆ ಬಿದ್ದು ಹಣದ ಕಂತೆಗಳನ್ನ ಹಿಡಿದು ಮುಖಂಡರ ಮನೆ ಎಡತಾಕುತ್ತಿದ್ದಾರೆನ್ನಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಾಸನ ಜಿಲ್ಲೆ (Hassan District) ಹಲವು ವೈಶಿಷ್ಟ್ಯಗಳಿಗೆ ಹೆಸರುವಾಸಿ. ರಾಜಕೀಯದಲ್ಲೂ ಹಾಸನ ಜಿಲ್ಲೆಗೆ ಇಡೀ ದೇಶದಲ್ಲಿಯೇ ಹೆಸರಿದೆ. ಈ ದೇಶಕ್ಕೆ ಏಕೈಕ ಕನ್ನಡಿಗ ಪ್ರಧಾನಮಂತ್ರಿಯನ್ನು ಕೊಟ್ಟಿರುವ ಜಿಲ್ಲೆ ಹಾಸನ. ಇಂತಹ ಜಿಲ್ಲೆಯಲ್ಲೀಗ ಸೂಟ್ ಕೇಸ್ ರಾಜಕಾರಣ (Suitcase Politics) ಶುರುವಾಗಿದೆ. ಶೀಘ್ರದಲ್ಲಿಯೇ ಜಿ.ಪಂ., ತಾ.ಪಂ.‌ ಚುನಾವಣೆ (District Panchayath, Taluk Panchayath Elections) ನಡೆಯಲಿದೆ. ಇದಕ್ಕಾಗಿ ಜೆಡಿಎಸ್ (JDS), ಕಾಂಗ್ರೆಸ್ (Congress), ಬಿಜೆಪಿ (BJP) ಪಕ್ಷದಲ್ಲಿ ಹಣವಂತರು ಟಿಕೆಟ್​ಗಾಗಿ ನಾಯಕರ ಮನೆ ಎಡತಾಕುತ್ತಿದ್ದಾರೆ.

ಹಾಸನ ಜಿಲ್ಲೆ ಜೆಡಿಎಸ್ ಭದ್ರಕೋಟೆ. ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಆರು ಮಂದಿ ಜೆಡಿಎಸ್ ಶಾಸಕರಿದ್ದಾರೆ. ಆದರೆ ಜಿಲ್ಲಾ ಕೇಂದ್ರ ಹಾಸನದಲ್ಲಿ ಬಿಜೆಪಿಯಿಂದ ಪ್ರೀತಂಗೌಡ ಶಾಸಕರಾಗಿದ್ದಾರೆ. ಕಳೆದ ಬಾರಿ ಜಿ.ಪಂ.ಯಲ್ಲಿ ಜೆಡಿಎಸ್​ಗೆ ಬಹುಮತವಿದ್ದರೂ ಮಾಜಿ ಸಚಿವ ಎ.ಮಂಜು ಮೀಸಲಾತಿ ಅಸ್ತ್ರ ಪ್ರಯೋಗಿಸಿ ಕಾಂಗ್ರೆಸ್ ಅಧಿಕಾರ ಹಿಡಿಯುವಂತೆ ಮಾಡಿದ್ದರು. ತದನಂತರದಲ್ಲಿ ಹಾಸನ, ಅರಸೀಕೆರೆ ನಗರಸಭೆಗಳಲ್ಲೂ ಜೆಡಿಎಸ್ ಬಹುಮತವಿದ್ದರೂ ಶಾಸಕ ಪ್ರೀತಂಗೌಡ ಹಾಗೂ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಎನ್.ಆರ್.ಸಂತೋಷ್ ಮೀಸಲಾತಿ ಮೂಲಕ ಬಿಜೆಪಿ ಅಧಿಕಾರ ಹಿಡಿಯುವಂತೆ ಮಾಡಿದ್ದರು.‌ ಇದೀಗ ಮುಂದಿನ ಜಿ.ಪಂ., ತಾ.ಪಂ ಮೇಲೆ ಮೂರು ಪಕ್ಷಗಳು ಕಣ್ಣಿಟ್ಟಿವೆ. ಜಿ.ಪಂ. ಗದ್ದುಗೆ ಏರಲೇಬೇಕೆಂದು ಜೆಡಿಎಸ್ ಪಕ್ಷದ ಹುರಿಯಾಳುಗಳನ್ನು ಚುನಾವಣೆಗೆ ರೆಡಿ ಮಾಡುತ್ತಿದೆ. ಇದೇ ರೀತಿ ಬಿಜೆಪಿ, ಕಾಂಗ್ರೆಸ್ ಕೂಡ ಅಧಿಕಾರ ಹಿಡಿಯಲು ಇನ್ನಿಲ್ಲದ ಕಸರತ್ತು ಮಾಡುತ್ತಿವೆ. ಆದರೆ ಮೂರು ಪಕ್ಷಗಳಲ್ಲೂ ಹಣವುಳ್ಳವರು ಟಿಕೆಟ್​ಗಾಗಿ ದುಂಬಾಲು ಬಿದ್ದಿದ್ದಾರೆ.

ಈಗಾಗಲೇ ಚುನಾವಣಾ ಆಯೋಗ ಹೊಸದಾಗಿ ಕ್ಷೇತ್ರ ಪುನರ್ ವಿಂಗಡಣೆ ಜೊತೆಗೆ ಕರಡು ಮೀಸಲಾಯಿತಿಯನ್ನೂ ನಿಗದಿ ಮಾಡಿದೆ.‌ ಈ ಬಾರಿ ಸ್ಪರ್ಧೆಗೆ ಪೈಪೋಟಿಯೂ ಹೆಚ್ಚಾಗಿದೆ. ಬಹುತೇಕ ಕಡೆಗಳಲ್ಲಿ ಕಳೆದ ಸಾಲಿನಲ್ಲಿ ಇದ್ದ ಕ್ಷೇತ್ರಗಳ ಜೊತೆಗೆ ಮೀಸಲಾತಿಯೂ ಬದಲಾಗಿದೆ. ಹೀಗಾಗಿ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ಅಭ್ಯರ್ಥಿಗಳಾಗುವ ಮಹದಾಸೆ ಇಟ್ಟುಕೊಂಡಿರುವ ಅನೇಕರು ಟಿಕೆಟ್ ಗಿಟ್ಟಿಸಿಕೊಳ್ಳಲು ಹಲವು ರೀತಿಯಲ್ಲಿ ಈಗಿನಿಂದಲೇ ಕಸರತ್ತು ನಡೆಸಲು ಮುಂದಾಗಿದ್ದಾರೆ. ಜಿಪಂ ಚುನಾವಣೆಯಲ್ಲಿ ಟಿಕೆಟ್ ಪಡೆದು ಸ್ಪರ್ಧಿಸಲೇಬೇಕು ಎಂಬ ಜಿದ್ದು, ಪ್ರತಿಷ್ಠೆಗೆ ಬಿದ್ದಿರುವ ಅನೇಕ ಪ್ರಭಾವಿಗಳು, ಸೂಟ್‌ಕೇಸ್ ಪಾಲಿಟಿಕ್ಸ್‌ಗೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಆಯಾ ಪಕ್ಷದ ನಾಯಕರಿಗೆ ಹಣದ ಆಮಿಷ ತೋರುವ ಹೊಸ ಮಾರ್ಗೋಪಾಯ ಕಂಡುಕೊಂಡಿದ್ದಾರೆ ಎಂದು ಜಿಲ್ಲೆಯೆಲ್ಲೆಡೆ ಪಕ್ಷದ ಕಾರ್ಯಕರ್ತರಲ್ಲೆ ಸುದ್ದಿ ಹರಿದಾಡುತ್ತಿದೆ. ಪಕ್ಷಕ್ಕೆ ಇಂತಿಷ್ಟು ಎಂದು ಫಂಡ್ ನೀಡುತ್ತೇವೆ, ಈ ಕ್ಷೇತ್ರದಲ್ಲಿ ನಮಗೆ ಇಲ್ಲವೇ ನಮ್ಮ ಕಡೆಯವರಿಗೆ ಟಿಕೆಟ್ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: NEP 2020- ರಾಷ್ಟ್ರೀಯ ಶಿಕ್ಷಣ ನೀತಿಯ ಮೊದಲ ಪ್ರಯೋಗ ಕರ್ನಾಟಕದಲ್ಲಿ; ಎನ್ಇಪಿಗೆ ವಿದ್ಯುಕ್ತ ಚಾಲನೆ

ಹೀಗೆ ಹಣದ ಆಸೆ ತೋರಿಸಿ ಟಿಕೆಟ್ ಪಡೆಯುವ ಯತ್ನ ಮಾಡುತ್ತಿರುವವರಲ್ಲಿ ಹೊರಗಿನಿಂದ ಬಂದವರೇ ಹೆಚ್ಚಿದ್ದಾರೆ ಎನ್ನಲಾಗಿದೆ. ಜಿಲ್ಲೆಯವರೇ ಆಗಿ ಬೇರೆ ಬೇರೆ ಕಡೆಗಳಲ್ಲಿ ಬ್ಯುಸಿನೆಸ್ ಇತ್ಯಾದಿ ಉದ್ಯಮಗಳಲ್ಲಿ ತೊಡಗಿಕೊಂಡಿದ್ದವರು ಸಾಕಷ್ಟು ಹಣ ಸಂಪಾದಿಸಿದ್ದಾರೆ. ಇಂಥವರಲ್ಲಿ ಕೆಲವರು ಜಿ.ಪಂ. ಮೂಲಕ ಚುನಾವಣಾ ಅಖಾಡಕ್ಕೆ ಧುಮುಕಲು ಅಣಿಯಾಗಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಹಣವಂತರಿಗೆ ಪಕ್ಷದ ಮುಖಂಡರು ಮಣೆಹಾಕಿದರೆ ಹಲವು ವರ್ಷಗಳಿಂದ ಪಕ್ಷಕ್ಕೆ ದುಡಿದ ನಿಷ್ಠಾವಂತರು ಕಡೆಗಣನೆಯಾಗಲಿದ್ದು, ಇದರ ಪರಿಣಾಮ ಚುನಾವಣೆ ಮೇಲೆ ಬೀರಲಿದೆ ಎಂಬುದು ಪಕ್ಷದ ಕಾರ್ಯಕರ್ತರ ಅಭಿಪ್ರಾಯವಾಗಿದೆ.

ವರದಿ: ಶಶಿಧರ್ ಬಿ.ಸಿ.
Published by:Vijayasarthy SN
First published: