ನೆಲಮಂಗಲ: ಹಣ ದ್ವಿಗುಣ ಮಾಡಿಕೊಡುತ್ತೇವೆ ಎಂದು ಜನರನ್ನು ನಂಬಿಸಿ ವಂಚನೆಗೆ ಸಿದ್ದವಾಗಿದ್ದ ಮೂರು ಜನ ಐನಾತಿಗಳ ಗುಂಪು ನೆಲಮಂಗಲ ಗ್ರಾಮಾಂತರ ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮಲ್ಲರಬಾಣವಾಡಿ ಗೇಟ್ ಬಳಿ ಪೊಲೀಸರು ಇವರನ್ನ ಬಂದಿಸಿದ್ದು ಬಂದಿತರನ್ನ ಬಳ್ಳಾರಿ ಮೂಲದ ಖಾನ್ ಹುಸೇನ್, ರಾಜಶೇಖರ್ ಹಾಗೂ ರಾಯಚೂರು ಮೂಲದ ಗೌಸ್ ಸಾಬ್ ಎಂದು ಗುರುತಿಸಲಾಗಿದ್ದು, ಬಂಧಿತರಿಂದ 12 ಸಾವಿರ ನಗದು, ರಾಸಾಯನಿಕ ದ್ರಾವಣ, ಕಪ್ಪು ಬಣ್ಣದ ಶಾಹಿ ಸೇರಿದಂತೆ ಪೇಪರ್ ಬಂಡಲ್ ವಶಕ್ಕೆ ಪಡೆದಿದ್ದಾರೆ.
ವಕೀಲರು ತೋಡಿದ ಖೆಡ್ಡಾ: ಮನಿ ಡಬ್ಲಿಂಗ್ ಮಾಡುತ್ತಿದ್ದ ಈ ಮೂವರ ಜಾಲ ಪತ್ತೆ ಹಚ್ಚಿದ ನೆಲಮಂಗಲದ ವಕೀಲ ಮಂಜುನಾಥ್ ಇವರನ್ನು ಹೇಗಾದರು ಮಾಡಿ ಖಾಕಿ ಬಲೆಗೆ ಸಿಲುಕಿಸಬೇಕು ಎಂದು ತಮ್ಮದೇ ಆದ ಒಂದು ತಂಡವನ್ನ ರಚಿಸಿ ಮನಿ ಡಬ್ಲಿಂಗ್ ಅವಶ್ಯಕತೆ ಇರುವವರ ಸೋಗಿನಲ್ಲಿ ದಂದೆ ಕೋರರನ್ನ ಸಂಪರ್ಕಿಸಿದರು. ಹೊರ ಜಿಲ್ಲೆಯಲ್ಲಿದ್ದ ದಂಧೆಕೋರರನ್ನ ಫೋನ್ ಮೂಲಕ ಸಂಪರ್ಕಿಸಿ ಬೆಂಗಳೂರಿಗೆ ಕರೆಸಿಕೊಂಡರು. ಖದೀಮರು ಬೆಂಗಳೂರು ಉತ್ತರ ತಾಲೂಕಿನ ಮಾಕಳಿ ಗ್ರಾಮದಲ್ಲಿನ ಲಾಡ್ಜ್‌ವೊಂದರಲ್ಲಿ ನೆಲೆಸಿದರು. ನಮ್ಮ ಬಳಿ ಹಣ ಇದೆ ಡಬ್ಲಿಂಗ್ ಮಾಡಿ ಕೊಡಿ ಎಂದು ನೆಲಮಂಗಲದ ಮಲ್ಲರಬಾಣವಾಡಿ ಬಳಿ ಇವರನ್ನು ಕರೆಸಿಕೊಳ್ಳಲಾಯಿತು. ಎರಡು ಸಾವಿರ ರೂಪಾಯಿ ಮುಖಬೆಲೆಯ ಒಂದು ನೋಟನ್ನು ದಂಧೆಕೋರರಿಗೆ ನೀಡಲಾಯಿತು. ಅದಕ್ಕೆ ರಾಸಾಯನಿಕ ಬೆರೆಸಿ, ಸ್ಥಳದಲ್ಲಿದ್ದ ವಕೀಲ ವ್ಯಕ್ತಿಯ ಗಮನವನ್ನು ಬೇರೆಡೆ ಸೆಳೆದು ಇವರು ಕೊಟ್ಟ ಹಣಕ್ಕೆ ಪ್ರತಿಯಾಗಿ ಅವರು 2000 ಮುಖ ಬೆಲೆಯ ಮೂರು ನೋಟುಗಳು ಅಂದರೆ 6000 ರೂಪಾಯಿ ಮೌಲ್ಯದ ಅಸಲಿ ನೋಟುಗಳನ್ನ ಇವರ ಕೈಗಿಟ್ಟು, ಇದನ್ನ ನೀವು ಬ್ಯಾಂಕ್‌ನಲ್ಲಿ ಬೇಕಾದರು ಚಲಾಯಿಸಬಹುದು ಎಂದಿದ್ದಾರೆ. ಈ ವೇಳೆ ವಕೀಲರು ನಿಯೋಜಿಸಿದ್ದ ವ್ಯಕ್ತಿಯೋರ್ವ ನಮ್ಮ ಬಳಿ ಸಾಕಷ್ಟು ಹಣ ಇದೆ ಅದನ್ನ ತರುತ್ತೇವೆ ಇಲ್ಲೇ ಇರಿ ಎಂದು ದಂಧೆಕೋರರನ್ನು ಖಾಕಿಗೆ ಹಿಡಿದುಕೊಟ್ಟಿದ್ದಾರೆ.
ಹತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿ: ಖಚಿತ ಮಾಹಿತಿ ಮೇರೆಗೆ ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿದ ಆರೋಪಿಗಳು ಈ ಹಿಂದೆ ಸಿರಗುಪ್ಪ, ಇಳಕಲ್, ಕೌಲ್ ಬಜಾರ್, ತುಮಕೂರು ನಗರ - ಗ್ರಾಮಾಂತರ ಠಾಣೆಗಳು ಸೇರಿದಂತೆ ಐದಕ್ಕೂ ಹೆಚ್ಚು ಠಾಣೆಗಳ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಬಂಧಿತರಿಂದ 12 ಸಾವಿರ ನಗದು, ರಾಸಾಯನಿಕ ದ್ರಾವಣ, ಕಪ್ಪು ಬಣ್ಣದ ಶಾಹಿ ಸೇರಿದಂತೆ ಪೇಪರ್ ಬಂಡಲ್ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: Corona 3rd Wave: ರಾಜ್ಯಕ್ಕೆ 3ನೇ ಕೊರೋನಾ ಅಲೆ ಭೀತಿ; ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ತಪಾಸಣೆಗೆ ಸೂಚಿಸಿದ ಗೃಹ ಸಚಿವ
ಹೇಗೆ ನಡೆಯುತ್ತೆ ಡಬ್ಲಿಂಗ್ ವಂಚನೆ: ಹೆಚ್ಚಿನ ಹಣದ ಅವಶ್ಯಕತೆ ಇರುವವರು, ಸಾಲದ ಸುಳಿಯಲ್ಲಿ ಸಿಲುಕಿರುವವರು, ಧನದಾಹಿಗಳನ್ನ ಟಾರ್ಗೆಟ್ ಮಾಡುವ ಈ ಗ್ಯಾಂಗ್ ಪರಿಚಯಸ್ಥರಿಂದಲೇ ವಂಚನೆಯ ಜಾಲ ಸೃಷ್ಟಿಸುತ್ತಾರೆ. ಮಾತುಕತೆ ವೇಳೆ ಕಪೋಲ ಕಲ್ಪಿತವಾದ ನೈಜತೆಗೆ ಕಣ್ಣುಕಟ್ಟುವಂತೆ ಕತೆಗಳನ್ನ ಹೆಣೆಯುತ್ತಾರೆ. ಮನಿ ಡಬ್ಲಿಂಗ್ ಮಾಡುವವರ ಬಳಿ ಯಾವುದಾದರು ಮುಖ ಬೆಲೆಯ ಒಂದು ನೋಟನ್ನು ಪಡೆದುಕೊಳ್ಳುತ್ತಾರೆ. ಇವರಿಂದ ಪಡೆದ ನೋಟಿಗೆ ಮೊದಲಿಗೆ ವೈದ್ಯಕೀಯ ಉಪಕರಣದ ಟಿಂಚರ್ ಲೇಪಿಸಿ ನಂತರ ಪೇಪರ್ ಅಂಟಿಸುವ ಗಂ ಲೇಪಿಸುತ್ತಾರೆ. ಇದರ ಮೇಲೆ ಕಪ್ಪು ಬಣ್ಣದ ಇಂಕ್ ಬಳಿದು ನೋಟನ್ನು ಚಾಪೆ ಮಾದರಿ ಸುತ್ತುತ್ತಾರೆ, ಇದನ್ನ ಕೆಲ ಕಾಲ ಬೆಂಕಿಯಲ್ಲಿ ಕಾಯಿಸಬೇಕು ಎಂದು ಒಂದು ಸಣ್ಣ ಬೆಂಕಿಯ ಜ್ವಾಲೆ ಬಳಿ ಸುತ್ತಿದ ನೋಟನ್ನು ಕಾಯಿಸುತ್ತಿರುತ್ತಾರೆ. ಕೆಲ ನಿಮಿಷಗಳ ಬಳಿಕ ಆ ನೋಟಿನ ಮೇಲೆ ನಿಂಬೆ ರಸ ಸುರಿದಾಗ ಬಣ್ಣವೆಲ್ಲಾ ಮಾಸಿಹೋಗುತ್ತದೆ. ವ್ಯಕ್ತಿ ಯಾವ ಮುಖ ಬೆಲೆಯ ನೋಟು ನೀಡಿರುತ್ತಾರೋ ಅದೇ ಮುಖ ಬೆಲೆಯ ಮೂರು ನೋಟುಗಳನ್ನ ವಾಪಸ್ ಅವರ ಕೈಗೆ ಇಡುತ್ತಾರೆ.
ಮೂರು ನೋಟು ಮೊದಲೇ ತಯಾರಿ: ಕೃತ್ಯ ಎಸಗುವ ಮೊದಲೇ ದಂಧೆಕೋರರು ಕೆಲ ನೋಟುಗಳನ್ನ ಸಿದ್ದಪಡಿಸಿಕೊಂಡು ಒಂದು ಸುರುಳಿಯ ಬಣ್ಣವನ್ನು ತೆಗೆದರೆ ಮೂರು ನೋಟುಗಳು ಬರುವಂತೆ ಸಿದ್ದಪಡಿಸಿರುತ್ತಾರೆ. ಗ್ರಾಹಕರು ಕೊಟ್ಟ ಒಂದು ನೋಟನ್ನು ಬೆಂಕಿಯಲ್ಲಿ ಕಾಯಿಸುವ ಸೋಗಿನಲ್ಲಿ ಅವರ ಬಳಿ ಇಲ್ಲಸಲ್ಲದ ಕಥೆ ಹೇಳುತ್ತಾ ಅವರ ಗಮನ ಬೇರೆಡೆ ಸೆಳೆದು, ತಾವು ಮೊದಲೇ ಸಿದ್ದಪಡಿಸಿದ ನೋಟುಗಳ ಸುರುಳಿಯನ್ನ ಕೈಗೆತ್ತಿಕೊಳ್ಳುತ್ತಾರೆ. ಅದನ್ನ ಒಂದು ತಟ್ಟೆಯಲ್ಲಿ ಇಟ್ಟು ನಿಂಬೆಹಣ್ಣಿನ ರಸ ಸುರಿಯುತ್ತಾರೆ. ಈ ವೇಳೆಗೆ ಅವರ ಈ ಸುರುಳಿಯಲ್ಲಿ ಮೂರು ನೋಟುಗಳು ಕಾಣಸಿಗುತ್ತವೆ. ಈ ರೀತಿ ಕಣ್ಣ ಮುಂದೆಯೇ ಒಂದು ನೋಟು ಮೂರು ಆಗಿದ್ದನ್ನು ಕಾಣುವ ಗ್ರಾಹಕರು ಸಂಪೂರ್ಣ ನಂಬಿಬಿಡುತ್ತಾರೆ. ಸಹಜವಾಗಿ ಹೆಚ್ಚಿನ ಹಣದಾಸೆಗೆ ಒಳಗಾಗಿ ಬಲಿಯಾಗುತ್ತಾರೆ.
ಇದನ್ನೂ ಓದಿ: ಹುಬ್ಬಳ್ಳಿ ಆರ್ಎಸ್ಎಸ್ ಕಚೇರಿಯಲ್ಲಿ ಸಭಾಪತಿ ಹೊರಟ್ಟಿ ಪ್ರತ್ಯಕ್ಷ!; ಏನಿದು ರಾಜಕೀಯ ಲೆಕ್ಕಚಾರ
ಹೆಚ್ಚಿನ ಹಣ ತರುವಂತೆ ಒತ್ತಾಯ: ತಾವೇ ಸಿದ್ದ ಪಡಿಸಿದ ಸೂತ್ರದಂತೆ ಗ್ರಾಹಕರನ್ನ ಹಳ್ಳಕ್ಕೆ ತಳ್ಳುವ ದಂಧೆಕೋರರು, ಇಷ್ಟು ಕಡಿಮೆ ಹಣಕ್ಕೆ ಏನು ಆಗುತ್ತೆ, ನೀವೇ ಕಣ್ಣಾರೆ ನೋಡಿದಿರಲ್ಲ. ನಮ್ಮಲ್ಲಿ ಮೋಸ ವಂಚನೆ ಏನಿಲ್ಲ. ನಿಮ್ಮ ಹಣ ಡಬಲ್ ಮಾಡುವ ವಿದ್ಯೆ ನಮ್ಮಲ್ಲಿ ಇದೆ. ಅದನ್ನ ನಿಮ್ಮಂತಹ ಕಷ್ಟದಲ್ಲಿಸಿಲುಕಿರುವವರ ಉಪಯೋಗಕ್ಕೆ ಬಳಸುತ್ತೇವೆ ಎಂದು ನಯವಾಗಿ ನಂಬಿಸುತ್ತಾರೆ. ಮೀಟರ್ ಬಡ್ಡಿಗಾದರೂ ಸಾಲ ತೆಗೆದುಕೊಂಡು ಬನ್ನಿ. ಇಲ್ಲಿ ಬರುವ ಹಣದಲ್ಲಿ ಬಡ್ಡಿ ಸಮೇತ ಅಸಲು ತೀರಿಸಿ ಉಳಿಕೆ ಹಣದಲ್ಲಿ ಎಂಜಾಯ್ ಮಾಡಿ ಎಂದು ನಯವಾಗಿ ವಂಚಿಸುತ್ತಾರೆ. ಇವರ ಮಾಯಾಜಾಲದ ಅರಿವಿಲ್ಲದ ಅಮಾಯಕರು ಮನಿ ಡಬ್ಲಿಂಗ್ ಆಸೆಗೆ ಒಳಗಾಗಿ ಸಾಲ ಸೋಲ ಮಾಡಿ ಇವರು ಹೇಳಿದ ಜಾಗಕ್ಕೆ ಹಣ ತಂದು ಕೊಡುತ್ತಾರೆ. ಈ ವೇಳೆ ಯಾವುದೋ ಒಂದು ಮಾರ್ಗದಲ್ಲಿ ಹಣ ಕೊಟ್ಟವರಿಗೆ ಏಮಾರಿಸುವ ದಂಧೆಕೋರರು ಹಣ ದೋಚಿ ಎಸ್ಕೇಪ್ ಆಗುತ್ತಾರೆ.
ವರದಿ: ಅಭಿಷೇಕ್ ಚಿಕ್ಕಮಾರನಹಳ್ಳಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ