ಮಸ್ಕಿ: ಒಂದೇ ದಿನದಲ್ಲಿ ಭಾರೀ ಪ್ರಮಾಣದ ಕುರುಡು ಕಾಂಚಾಣದ ಕುಣಿತ

ಮೊದಲು ಪ್ರಧಾನಿ ನರೇಂದ್ರ ಮೋದಿಯವರ ಉಜಾಲ ಯೋಜನೆ, ಯಡ್ಯೂರಪ್ಪ ಸರಕಾರದಲ್ಲಿ ಅಕ್ಕಿ ನೀಡುವ ಕುರಿತು ಮಾಹಿತಿ ನೀಡಿದ್ದಾರೆ.  ಮಸ್ಕಿ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತಾಪಗೌಡರನ್ನು ಗೆಲ್ಲಿಸಲೇಬೇಕು ಎಂದು ಹೇಳಿದ್ದಾರೆ. ಸಭೆಯ ನಂತರ ಪ್ರತಿ ಮಹಿಳೆಗೆ 200 ರೂಪಾಯಿಯಂತೆ ಹಣ ಹಂಚಿಕೆ ಮಾಡಿದ್ದಾರೆ. ಪ್ರತಿ ಮಹಿಳೆಗೂ 200 ರೂಪಾಯಿ ಮುಖಬೆಲೆಯ ನೋಟು ನೀಡಿ ಪ್ರತಾಪಗೌಡರಿಗೆ ಮತ ಹಾಕಲು ಹೇಳಿದ್ದಾರೆ.

ಮತದಾರರಿಗೆ ತಲಾ 200ರೂ ಹಂಚಿಕೆ ಆರೋಪ

ಮತದಾರರಿಗೆ ತಲಾ 200ರೂ ಹಂಚಿಕೆ ಆರೋಪ

  • Share this:
ರಾಯಚೂರು(ಏಪ್ರಿಲ್ 09): ಪ್ರತಾಪಗೌಡರ ರಾಜಿನಾಮೆಯಿಂದ ತೆರವಾದ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಏಪ್ರಿಲ್ ೧೭ ರಂದು ನಡೆಯಲಿದೆ. ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಕ್ಷೇತ್ರದಲ್ಲಿ ಕುರುಡು ಕಾಂಚಾಣ ಕುಣಿದಾಡಿದೆ. ಬಹಿರಂಗವಾಗಿಯೇ ಪ್ರತಾಪಗೌಡರ ಪರವಾಗಿ ಹಣ ಹಂಚಿಕೆ ಮಾಡಿದ್ದು ಕ್ರಮ ಕೈಗೊಂಡು ನ್ಯಾಯಸಮ್ಮತ ಚುನಾವಣೆ ನಡೆಸಬೇಕೆಂದು ಕಾಂಗ್ರೆಸ್ ಮುಖಂಡರು ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

ಗುರುವಾರ ಮುಂಜಾನೆಯಿಂದ ಹಾಸನ, ಬೆಂಗಳೂರು, ಮಂಡ್ಯ, ಶಿವಮೊಗ್ಗ ಕಡೆಯಿಂದ ತಂಡಗಳಾಗಿ ಬಂದ ಬಿಜೆಪಿ ಕಾರ್ಯಕರ್ತರು ಗ್ರಾಮಗಳಿಗೆ ತೆರಳಿ ಅಲ್ಲಿಯ‌ ಮಹಿಳೆಯರನ್ನು ಒಂದೆಡೆ‌ ಸೇರಿಸಿ ಮೊದಲು ಮತಕ್ಕಾಗಿ ಪ್ರಚಾರ ಮಾಡಿದ್ದಾರೆ. ಮೊದಲು ಪ್ರಧಾನಿ ನರೇಂದ್ರ ಮೋದಿಯವರ ಉಜಾಲ ಯೋಜನೆ, ಯಡ್ಯೂರಪ್ಪ ಸರಕಾರದಲ್ಲಿ ಅಕ್ಕಿ ನೀಡುವ ಕುರಿತು ಮಾಹಿತಿ ನೀಡಿದ್ದಾರೆ.  ಮಸ್ಕಿ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತಾಪಗೌಡರನ್ನು ಗೆಲ್ಲಿಸಲೇಬೇಕು ಎಂದು ಹೇಳಿದ್ದಾರೆ. ಸಭೆಯ ನಂತರ ಪ್ರತಿ ಮಹಿಳೆಗೆ 200 ರೂಪಾಯಿಯಂತೆ ಹಣ ಹಂಚಿಕೆ ಮಾಡಿದ್ದಾರೆ. ಪ್ರತಿ ಮಹಿಳೆಗೂ 200 ರೂಪಾಯಿ ಮುಖಬೆಲೆಯ ನೋಟು ನೀಡಿ ಪ್ರತಾಪಗೌಡರಿಗೆ ಮತ ಹಾಕಲು ಹೇಳಿದ್ದಾರೆ.

ಪಾಮನಕಲ್ಲೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹರ್ವಾಪುರ, ಗೌಡನಬಾವಿ, ಬುಗ್ಗಲದೊಡ್ಡಿ, ಮಾದಬಾಳ, ಬಳಗಾನೂರು, ತುರ್ವಿಹಾಳದಲ್ಲಿ ಹಣ ಹಂಚಿಕೆ ಮಾಡಿದ್ದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಿಗೆ ಹರಿ ಬಿಟ್ಟಿದ್ದಾರೆ. ಈ ಮಧ್ಯೆ ಗೌಡನಬಾವಿ, ತುರ್ವಿಹಾಳ, ಬಳಗಾನೂರಿನಲ್ಲಿ ಹಣ ಹಂಚಿಕೆ ಮಾಡಲು ಬಂದವರನ್ನು ತಡೆದು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ತುರ್ವಿಹಾಳದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು ಹಣ ಹಂಚಲು ಬಂದ ಒಬ್ಬ ಯುವತಿ ಸೇರಿ ಇಬ್ಬರ ಮೇಲೆ ಹಲ್ಲೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗು ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದಿದ್ದು ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ತುರ್ವಿಹಾಳ ದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇದೆ. ಬಹುತೇಕ ಕಡೆ ಹಣ ಹಂಚಲು ಬಂದವರು ಯಾರೂ ಸ್ಥಳೀಯರಲ್ಲ. ಎಲ್ಲರೂ ಹೊರಗಿನವರೇ ಆಗಿದ್ದು ಮಸ್ಕಿ ಕ್ಷೇತ್ರಕ್ಕೆ ಅಪರಿಚಿತರಿಂದ ಹಣ ಹಂಚಿಕೆ ಮಾಡಲಾಗಿದೆ. ಕೆಲವು ಕಡೆ ಹಣ ಹಂಚಲು ಬಂದವರನ್ನು ಕೂಡಿ ಹಾಕಿದ  ಘಟನೆಯೂ ನಡೆದಿದೆ. ಹಣ ಹಂಚುವ ವಿಡಿಯೋಗಳು ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಕಾಂಗ್ರೆಸ್ ಮುಖಂಡರು ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಕ್ಷೇತ್ರದಾದ್ಯಂತ ಬಹಿರಂಗವಾಗಿ ಹಣ ಹಂಚುತ್ತಿದ್ದಾರೆ, ಚುನಾವಣಾ ನೀತಿ ಸಂಹಿತೆ ಪಾಲನೆಯಾಗುತ್ತಿಲ್ಲ, ನ್ಯಾಯಯುತ ಚುನಾವಣೆ ಕಷ್ಟವಾಗುತ್ತದೆ ಎಂದು ತಕ್ಷಣ ಅಕ್ರಮವಾಗಿ ಹಣ ಹಂಚುವವರ ವಿರುದ್ದ ಪ್ರಕರಣ ದಾಖಲಿಸಲು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಎಂ ಎಲ್ ಎ ಶರಣಪ್ಪ ಮಟ್ಟೂರು, ಬ್ಲಾಕ್ ಕಾಂಗೈ ಅಧ್ಯಕ್ಷ ಮಲ್ಲಿಕಾರ್ಜುನ ಯದ್ದಲದಿನ್ನಿ ಸೇರಿ ಹಲವರು ದೂರು ನೀಡಿದ್ದಾರೆ.ಈ ಮಧ್ಯೆ ಹರ್ವಾಪುರದಲ್ಲಿ ಹಣ ಹಂಚಿಕೆ ವಿಡಿಯೋ ಆಧಾರದಲ್ಲಿ ಪರಿಶೀಲನೆ ನಡೆಸಿದ ಚುನಾವಣಾಧಿಕಾರಿಗಳು ಹಣ ಹಂಚುವವರ ಪರಿಚಯವಿಲ್ಲದ ಕಾರಣ ಅನಾಮಧೇಯ ವ್ಯಕ್ತಿಗಳು ಹಣ ಹಂಚಿದ್ದಾರೆ ಎಂಬ ದೂರು ದಾಖಲಿಸಿಕೊಂಡಿದ್ದಾರೆ. ಚುನಾವಣೆಗೆ ಹತ್ತು ದಿನದ ಮೊದಲೇ ಕುರುಡು ಕಾಂಚಾಣ ಕುಣಿಯುತ್ತಿದ್ದು, ಚುನಾವಣಾಧಿಕಾರಿ ಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ.
Published by:Soumya KN
First published: