Agri Clinics - ಬಾಗಲಕೋಟೆಯಲ್ಲಿ ಸಂಚಾರಿ ಸಸ್ಯ ಚಿಕಿತ್ಸಾಲಯ; ರೈತರಿಗೆ ಸಂಜೀವಿನಿಯಾಗಿದೆ ಕೃಷಿ ಇಲಾಖೆಯ ಹೊಸ ಯೋಜನೆ

ರೈತರ ಅನೂಕೂಲಕ್ಕಾಗಿ ಅವರ ಹೊಲದಲ್ಲಿಯೇ ಸಲಹೆ ಸೂಚನೆ ಮಾರ್ಗದರ್ಶನ ಹಾಗೂ ತಾಂತ್ರಿಕತೆ ಮಾರ್ಗದರ್ಶನ ಮಾಡುವ ಉದ್ದೇಶದಿಂದ ಕೃಷಿ ಇಲಾಖೆಯಿಂದ ವಿನೂತನವಾಗಿ ಸಂಚಾರಿ ಸಸ್ಯ ಚಿಕಿತ್ಸಾಲಯ (ಕೃಷಿ ಸಂಜೀವಿನಿ) ವಾಹನ ರೈತರ ಹೊಲಕ್ಕೆ ಹೋಗಿ ಮಾಹಿತಿ ನೀಡುತ್ತಿದೆ.

ಸಂಚಾರಿ ಸಸ್ಯ ಚಿಕಿತ್ಸಾಲಯ

ಸಂಚಾರಿ ಸಸ್ಯ ಚಿಕಿತ್ಸಾಲಯ

  • Share this:
ಬಾಗಲಕೋಟೆ: ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಕ್ಷೇತ್ರಮಟ್ಟದಲ್ಲಿ ರೈತರಿಗೆ ಮಾಹಿತಿ ಕೊಡುವ ಕೃಷಿ ಸಹಾಯಕರ ಹುದ್ದೆ ನೇಮಕಾತಿ ಆಗಿಲ್ಲ. ಅವರ ಸ್ಥಾನದಲ್ಲಿ ಹಲವು ವರ್ಷಗಳಿಂದ ಗ್ರಾಮ ಪಂಚಾಯಿತಿವಾರು ಓರ್ವ ರೈತ ಅನುವುಗಾರರು ಕೃಷಿ ಮಾಹಿತಿ, ಯೋಜನೆ ಕೃಷಿ ಪರಿಕರಗಳ ಬಗ್ಗೆ ರೈತರು ಮತ್ತು ಇಲಾಖೆ ಮಧ್ಯೆ ಸಂಪರ್ಕ ಸೇತುವೆ ಆಗಿದ್ದರು. ಆದರೆ ರೈತ ಅನುವುಗಾರರು ಸೇವೆ ಖಾಯಂ ಮಾಡುವಂತೆ ಹೋರಾಟಕ್ಕಿಳಿದ್ದಾರೆ. ಈ ಎಲ್ಲದರ ಮಧ್ಯೆ ಕೃಷಿ ಸಚಿವ ಬಿ ಸಿ ಪಾಟೀಲ್, ಸಂಚಾರಿ ಸಸ್ಯ ಚಿಕಿತ್ಸಾಲಯ ವಾಹನ ಬಿಡುಗಡೆಗೊಳಿಸಿದ್ದಾರೆ‌‌. ಜಿಲ್ಲೆಯಲ್ಲಿ ಒಂದು ವಾಹನ ಸಂಚರಿಸಿ, ರೈತರ ಹೊಲಕ್ಕೆ ತೆರಳಿ ಮಾಹಿತಿ ವಿನಿಮಯ ಮಾಡಿಕೊಳ್ಳುವ ಮೂಲಕ ರೈತರಿಗೆ ವರದಾನವಾಗುತ್ತಿದೆ.

ಸಂಚಾರಿ ಸಸ್ಯ ಚಿಕಿತ್ಸಾಲಯ ವಾಹನದ ಜೊತೆಗೆ ಡಿಪ್ಲೋಮಾ ಪದವಿ ಹೊಂದಿದ ಕೃಷಿ ತಜ್ಞರು ಮತ್ತು ವಿಶೇಷ ಸಮಸ್ಯೆಗಳಿದ್ದಲ್ಲಿ ಸಂಬಂಧಿಸಿದ ವಿಷಯ ತಜ್ಞರು ಮತ್ತು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ. ಈ ವಾಹನವು ಈಗಾಗಲೇ ರೈತರ ಜಮೀನುಗಳಿಗೆ ಭೇಟಿ ನೀಡಲು ಪ್ರಾರಂಭಿಸಿದ್ದು, ಪ್ರತಿ ದಿನ ಒಂದು ತಾಲ್ಲೂಕಿಗೆ ಈ ವಾಹನ ಸಂಚರಿಸಲಿದೆ.

ಸಂಚಾರಿ ವಾಹನವು ಬೆಳೆಗಳಲ್ಲಿ ಕಂಡು ಬರುವ ರೋಗ ಮತ್ತು ಕೀಟ ಕಳೆ ಬಾಧೆ ಮಣ್ಣಿನ ಪೋಷಕಾಂಶ ಕೊರತೆಯ ಸಮರ್ಪಕ ನಿರ್ವಹಣೆ ಮತ್ತು ಹತೋಟಿ ಕ್ರಮಗಳನ್ನು ಕೈಗೊಳ್ಳಲು ಇ-ಸ್ಯಾಪ್ ತಂತ್ರಾಂಶದ ಮೂಲಕ ರೈತರಿಗೆ ನೆರವಾಗಲಿದೆ. ಮಣ್ಣಿನ ರಸಸಾರ ಮತ್ತು ಸಾವಯವ ಇಂಗಾಲವನ್ನು ಈ ಮೂಲಕ ವಿಶ್ಲೇಷಿಸಬಹುದು. ಬರಿಗಣ್ಣಿಗೆ ಸ್ಪಷ್ಟವಾಗಿ ಕಾಣದ ಸೂಕ್ಷ್ಮ ಕೀಟಗಳನ್ನು ಗುರುತಿಸಲು ಸ್ಟೀರಿಯೋ ಜೂಮ್ ಸೂಕ್ಷ್ಮದರ್ಶಕ, ಭೂತಗನ್ನಡಿ, ಮಣ್ಣು ತೇವಾಂಶ ಸಂವೇದಕಗಳು, ನಕಲಿ ರಸಗೊಬ್ಬರ ಪತ್ತೆಗಾಗಿ ರಸಗೊಬ್ಬರ ಪರೀಕ್ಷಾ ಕಿಟ್, ಹಾರಾಡುವ ಕೀಟಗಳನ್ನು ಹಿಡಿಯಲು ಕೀಟ ಸಂಗ್ರಹಣಾ ಬಲೆ, ಪೆಟ್ಟಿಗೆ ಹಾಗೂ ರೈತರ ಜಮೀನಿನಲ್ಲಿ ವೈಜ್ಞಾನಿಕ ಸರ್ವೇಕ್ಷಣ ಕೈಗೊಳ್ಳಲು ಮೊದಲಾದ ಉಪಕರಣಗಳು ವಾಹನದಲ್ಲಿ ಲಭ್ಯವಿವೆ. ಕೃಷಿಗೆ ಸಂಬಂಧಿಸಿದ ಕಿರು ವಿಡಿಯೋಗಳನ್ನು ತೋರಿಸಲು ಪ್ರೊಜೆಕ್ಟರ್ ಸೌಲಭ್ಯವು ವಾಹನದಲ್ಲಿರಲ್ಲಿದೆ. ಈ ವಾಹನದ ಮುಖಾಂತರ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿಯನ್ನು ರೈತರಿಗೆ ತಲುಪಿಸಬಹುದಾಗಿದೆ.

ಇದನ್ನೂ ಓದಿ: Assembly Session - ವಿಧಾನಸಭೆಯಲ್ಲಿ ಶಾಲೆ ಸಮಸ್ಯೆ ಬಗ್ಗೆ ಧ್ವನಿ; ‘ಹೊಂದಾಣಿಕೆ’ ಬಗ್ಗೆ ಸ್ವಾರಸ್ಯಕರ ಚರ್ಚೆ

ಪ್ರಯೋಗಾಲಯದಿಂದ ರೈತರ ಹೊಲದವರೆಗೆ (ಲ್ಯಾಬ್ ಟು ಲ್ಯಾಂಡ್) ಎನ್ನವುದು ಈ ಯೋಜನೆಯ ಉದ್ದೇಶವಾಗಿದೆ. ಈ ವಾಹನವು ಜಿ.ಪಿ.ಎಸ್ ವ್ಯವಸ್ಥೆ ಹೊಂದಿರಲಿದೆ. ಈ ಮೂಲಕ ರೈತರು ತಮ್ಮ ಹೊಲದಲ್ಲಿ ಬಂದಿರುವ ರೋಗ ಹಾಗೂ ಕೀಟ ಬಾಧೆಯ ಸಮಸ್ಯೆ ಹಾಗೂ ಮಣ್ಣಿಗೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ 155313 ಟೋಲ್ ಫ್ರೀ ಸಹಾಯವಾಣಿಗೆ ಕರೆ ಮಾಡಿದಲ್ಲಿ ಅದನ್ನು ಆಧರಿಸಿ ಕೃಷಿ ಸಂಜೀವಿನಿ ವಾಹನವು ಆ ಭಾಗದಲ್ಲಿ ಸಂಚರಿಸಿ ಅವಶ್ಯವುಳ್ಳ ರೈತರ ಜಮೀನುಗಳಿಗೆ ತೆರಳಿ ಪರಿಶೀಲಿಸಿ ತಾಂತ್ರಿಕ ಮಾಹಿತಿ ಒದಗಿಸಲಾಗುವುದು ಎಂದು ಬಾಗಲಕೋಟೆ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದ್ದಾರೆ.

ಒಟ್ಟಿನಲ್ಲಿ ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದು, ರೈತರ ಹೊಲಗಳಿಗೆ ತೆರಳಿ ಕೃಷಿ ಮಾಹಿತಿ ತಿಳಿಸಲು ಆಗುತ್ತಿರಲಿಲ್ಲ. ಕೃಷಿ ಇಲಾಖೆ ವಿನೂತನ ಯೋಜನೆ ಮೂಲಕ ರೈತರ ಮನೆ ಬಾಗಿಲಿಗೆ ತಲುಪುವಂತಾಗಿದೆ.

ವರದಿ: ರಾಚಪ್ಪ ಬನ್ನಿದಿನ್ನಿ
Published by:Vijayasarthy SN
First published: