'ಮೂಳೆ ಇಲ್ಲದ ನಾಲಗೆ...' - ಡಿಕೆ ಶಿವಕುಮಾರ್​ಗೆ ವಸತಿ ಸಚಿವ ವಿ ಸೋಮಣ್ಣ ಟೀಕೆ

ಬಿಜೆಪಿ ಸಂಸದ ಸುರೇಶ್ ಅಂಗಡಿ ಅವರ ಮೃತದೇಹವನ್ನು ಬೆಳಗಾವಿಗೆ ತರದೇ ಅವಮಾನ ಮಾಡಲಾಯಿತು ಎಂದು ಡಿಕೆ ಶಿವಕುಮಾರ್ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಸೋಮಣ್ಣ, ಡಿಕೆಶಿಯದ್ದು ಮೂಳೆ ಇಲ್ಲದ ನಾಲಗೆ ಎಂದು ಟೀಕಿಸಿದ್ದಾರೆ.

ವಿ ಸೋಮಣ್ಣ

ವಿ ಸೋಮಣ್ಣ

  • Share this:
ಕೊಡಗು: ಮೂಳೆ ಇಲ್ಲದ ನಾಲಿಗೆ ಅಂತ ಏನು ಬೇಕಾದರೂ ಮಾತನಾಡಬಹುದು. ಆದರೆ ಹಾಗೆ ಮಾತನಾಡುವುದು ಎಷ್ಟು ಸರಿ ಎಂದು ವಸತಿ ಸಚಿವ ವಿ ಸೋಮಣ್ಣ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದರು. ಮಡಿಕೇರಿಯಲ್ಲಿ ಮಾತನಾಡಿದ ಅವರು, ದಿವಂಗತ ಸುರೇಶ್ ಅಂಗಡಿ ಅವರ ಮೃತದೇಹವನ್ನು ಬಿಜೆಪಿಯವರಿಗೆ ಬೆಳಗಾವಿಗೆ ತರಲು ಆಗಲಿಲ್ಲ ಎಂದು ಡಿಕೆಶಿ ನಿನ್ನೆ ಬೆಳಗಾವಿಯಲ್ಲಿ ಮಾತನಾಡಿರುವುದಕ್ಕೆ ತಿರುಗೇಟು ನೀಡಿದರು.

ಸುರೇಶ್ ಅಂಗಡಿ ಅವರ ಬಗ್ಗೆ ನನಗೂ ಸಹ ವಿಶೇಷ ಗೌರವವಿತ್ತು. ಕೇಂದ್ರ ರಾಜ್ಯ ಸರ್ಕಾರಗಳಿಗೂ ಅವರ ಮೇಲೆ ಅಪಾರ ಗೌರವವಿತ್ತು. ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ರಾಷ್ಟ್ರ ಕಂಡ ಅಪರೂಪದ ವ್ಯಕ್ತಿತ್ವದವರು. ಅವರು ಮೃತಪಟ್ಟಾಗಲೇ ಅವರ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಲಿಲ್ಲ. ಸ್ಥಿತಿ ಹೀಗಿರುವಾಗ ಸುರೇಶ್ ಅಂಗಡಿ ಅವರ ಮೃತದೇಹವನ್ನು ಹೇಗೆ ತರಬೇಕಿತ್ತು. ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ಅದನ್ನು ರಾಜ್ಯ ಕೇಂದ್ರ ಸರ್ಕಾರಗಳು ಕಟ್ಟುನಿಟ್ಟಾಗಿ ಪಾಲಿಸಿವೆ. ಇದನ್ನು ಡಿಕೆಶಿ ಆಗಲಿ ಯಾರೇ ಆಗಲಿ ಅರ್ಥ ಮಾಡಿಕೊಳ್ಳಬೇಕು ಎಂದು ವಸತಿ ಸಚಿವರು ತಿಳಿಹೇಳಿದರು.

ಇನ್ನು ಸಚಿವ ಸಿ ಟಿ ರವಿ ಅವರು ಸಚಿವಸ್ಥಾನ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಎರಡನ್ನೂ ನಿಭಾಯಿಸುತ್ತಾರೆ ಎನ್ನೋ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ, ಸಿ ಟಿ ರವಿ ನನಗಿಂತ ಬುದ್ಧಿವಂತ ಮತ್ತು ಬಹಳ ಕಿಲಾಡಿ ಇದ್ದಾರೆ. ಎರಡು ಸ್ಥಾನ ಅಷ್ಟೇ ಅಲ್ಲ ನಾಲ್ಕು ಸ್ಥಾನಗಳನ್ನು ಕೊಟ್ಟರೂ ನಿಬಾಯಿಸುತ್ತಾರೆ. ಅವರು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತೇನೆ ಎಂದರು.

ಇದನ್ನೂ ಓದಿ: ಹಾಥ್ರಸ್ ಪ್ರಕರಣ: ರಾಮನಗರದಲ್ಲಿ ಸಮತಾ ಸೈನಿಕ ದಳ-ಬಿಎಸ್​ಪಿ ಪ್ರತಿಭಟನೆ; ಸಿಎಂ ಯೋಗಿ ರಾಜೀನಾಮೆಗೆ ಆಗ್ರಹ

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ವಿಷಯಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಹಿಂದಿಗಿಂತ ಈಗ ಹೆಚ್ಚು ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಹೀಗಾಗಿ ಹೆಚ್ಚು ಪಾಸಿಟಿವ್ ಕೇಸುಗಳು ಬರುತ್ತಿವೆ. ಆದರೆ ಕೋವಿಡ್​ನಿಂದ ಮೃತಪಡುತ್ತಿರುವವರ ಸಂಖ್ಯೆ, ಅಂದರೆ ಡೆತ್ ರೇಟ್ ತುಂಬಾ ಕಡಿಮೆ ಇದೆ. ಇನ್ನು ಒಂದರಿಂದ ಒಂದುವರೆ ತಿಂಗಳ ಒಳಗೆ ಕೋವಿಡ್ ವೈರಸ್ ಹರಡುವುದು ಕಡಿಮೆಯಾಗಿ ತಹಬದಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವರದಿ: ರವಿ ಎಸ್ ಹಳ್ಳಿ 
Published by:Vijayasarthy SN
First published: