ಮೈಸೂರು ಪಾಲಿಕೆ ಮೇಯರ್ ಚುನಾವಣೆ ಮೈತ್ರಿ ವಿಚಾರವಾಗಿ, ಕಾಂಗ್ರೆಸ್ ಪಕ್ಷದಿಂದ ಬಂದಿದ್ದ ನೋಟಿಸ್‌ಗೆ ಉತ್ತರ ನೀಡಿದ ತನ್ವೀರ್ ಆಪ್ತ ಅಬ್ದುಲ್ ಖಾದರ್ ಶಾಹಿದ್, ಇಂದು ಮೈಸೂರು ಕಾಂಗ್ರೆಸ್ ಕಚೇರಿಗೆ ಆಗಮಿಸಿ ಲಿಖಿತ ಉತ್ತರ ನೀಡಿದ್ದಾರೆ. ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಅಬ್ದುಲ್ ಖಾದರ್ ಶಾಹಿದ್ ಭಾರಿ ಸಂಖ್ಯೆಯ ಕಾರ್ಯಕರ್ತರೊಂದಿಗೆ ಆಗಮಿಸಿ, ರೈಲ್ವೆ ನಿಲ್ದಾಣದ ಬಳಿ ಇರುವ ಇಂದಿರಾ ಕಾಂಗ್ರೆಸ್ ಭವನದ ಮುಂದೆ ಮೆರವಣಿಗೆ ರೂಪದಲ್ಲಿ ತಲುಪಿದರು. ಅಬ್ದುಲ್ ಆಗಮನದ ವೇಳೆ ಕಚೇರಿಯಲ್ಲಿಲ್ಲದ ಕಾಂಗ್ರೆಸ್ ನಗರಾಧ್ಯಕ್ಷರು ಕಾರ್ಯಕ್ರಮ ನಿಮಿತ್ತ ಹೊರಗೆ ಹೋಗಿದ್ದರು. ಕಚೇರಿ ಒಳಗೆ ಜನರೊಂದಿಗೆ ಬಂದು ನೋಟಿಸ್ ಉತ್ತರಿಸಲು ಬಂದಿದ್ದೇನೆ ಎಂದ ಅಬ್ದುಲ್ ಖಾದರ್ ಅಧ್ಯಕ್ಷರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.
ಸಿಬ್ಬಂದಿ ನೀವೆ ಕರೆ ಮಾಡಿ ಮಾತನಾಡಿ ಎಂದಾಗ, ಸ್ಥಳದಲ್ಲೆ ನಿಂತು ನಗರಾಧ್ಯಕ್ಷರಿಗೆ ಕರೆ ಮಾಡಿದ ಅಬ್ದುಲ್ ಖಾದರ್, ಅಧ್ಯಕ್ಷರ ಜೊತೆ ದೂರವಾಣಿಯೆಲ್ಲಿ ಮಾತನಾಡಿದರು. ಕಚೇರಿಗೆ ಸಿಬ್ಬಂದಿಗೆ ಪತ್ರ ನೀಡಲು ನಗರಾಧ್ಯಕ್ಷರು ಸೂಚಿಸಿದಾಗ, ಕೊನೆಗೆ ಕಚೇರಿಗೆ ಸಿಬ್ಬಂದಿಗೆ ಉತ್ತರದ ಪತ್ರ ನೀಡಿ ವಾಪಸ್ಸಾದ ಅಬ್ದುಲ್ ಖಾದರ್ ಉತ್ತರವಾಗಿ ಏನು ಪತ್ರ ಬರೆದಿದ್ದೇನೆ ಎಂಬುದನ್ನ ಬಹಿರಂಗಪಡಿಸಲಿಲ್ಲ.
ಇದಾದ ಬಳಿಕ ಹೇಳಿಕೆ ನೀಡಿದ ತನ್ವೀರ್ ಆಪ್ತ ಅಬ್ದುಲ್ ಖಾದರ್ ಶಾಹಿದ್, ನನಗೆ ದುರುದ್ದೇಶದಿಂದ ಕಾಂಗ್ರೆಸ್ ಪಕ್ಷದಿಂದ ನೋಟಿಸ್ ನೀಡಲಾಗಿದೆ ನಾನು ಸಿದ್ದರಾಮಯ್ಯನವರ ವಿರುದ್ದ ಘೋಷಣೆ ಕೂಗಿಲ್ಲ, ಅವತ್ತು ಘೋಷಣೆ ಕೂಗುತ್ತಿದ್ದವರನ್ನ ನಾನು ತಡೆದಿದ್ದೇನೆ ಅದಕ್ಕೆ ಸಿಕ್ಕ ಪ್ರತಿಫಲ ಇದು ಅಂತ ಬೇಸರ ವ್ಯಕ್ತಪಡಿಸಿದರು. ಇಲ್ಲಿ ಒಬ್ಬ ನಾಯಕನನ್ನು ತುಳಿಯುವ ಕೆಲಸ ನಡೆಯುತ್ತಿದೆ ವ್ಯವಸ್ಥಿತವಾಗಿ ತನ್ವೀರ್ ಸೇಠ್‌ರನ್ನ ಮೂಲೆ ಗುಂಪು ಮಾಡುವ ಉದ್ದೇಶದಿಂದ ನಮ್ಮನ್ನ ಟಾರ್ಗೆಟ್ ಮಾಡಲಾಗಿದೆ. ರಾಜ್ಯದ ನಾಯಕರು ಸಹ ಇದರಲ್ಲಿ ಭಾಗಿಯಾಗಿದ್ದಾರೆ, ಯಾರು ಇದನ್ನ ಮಾಡ್ತಿದ್ದಾರೆ ಅಂತ ಕೆಪಿಸಿಸಿ ಅದ್ಯಕ್ಷರು ತನಿಖೆ ಮಾಡಿಸಲಿ ಎಂದು ಆಗ್ರಹಿಸಿದರು.
ಇಲ್ಲಿ ತನ್ವೀರ್ ಸೇಠ್ ಹಾಗೂ ಅವರ ಬೆಂಬಲಿಗರಿಗೆ ಮಾತ್ರ ಯಾಕೇ ನೋಟಿಸ್ ಜಾರಿ ಆಗಿದೆ, ಪಾಲಿಕೆಯಲ್ಲಿ ಕುಳಿತು ತನ್ವೀರ್ ವಿರುದ್ಧ ಮಾತನಾಡಿದವರಿಗು ನೋಟಿಸ್ ಜಾರಿಯಾಗಬೇಕು ಅಲ್ಲವೇ?. ಧೃವನಾರಾಯಣ್ ಸುದ್ದಿಗೋಷ್ಠಿ ಮಾಡಬೇಡಿ ಎಂದರೂ ಮಾಡಿದ್ದಾರೆ ಅವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪಕ್ಷ ನಮಗೆ ತಿಳಿಸಬೇಕು. ತನ್ವೀರ್ ಅವರಿಗೆ ಕಾಂಗ್ರೆಸ್‌ನಲ್ಲೆ ವಿರೋಧಿಗಳಿದ್ದಾರೆ, ಇದಕ್ಕೆ ನಮ್ಮ ಬಳಿ ಸಾಕ್ಷಿಗಳಿವೆ. ಚುನಾವಣೆ ಸಂದರ್ಭದಲ್ಲಿ ಅವರ ಸೋಲಿಗೆ ಕಾಂಗ್ರೆಸ್‌ನವರೇ ಪ್ರಯತ್ನಿಸಿದ್ದಾರೆ ನೋಡೋಣ ನನ್ನ ಉತ್ತರ ಬಳಿಕ ಏನು ಕ್ರಮ ತಗೋತಾರೆ ಅಂತ ಪಕ್ಷದ ವಿರುದ್ದವೇ ಅಸಮಾಧಾನ ಹೊರಹಾಕಿದರು.
ತನ್ವೀರ್ ಆಪ್ತ ಅಬ್ದುಲ್ ಸೇರಿ ಇನ್ನು 7 ಮಂದಿಗೆ ನೋಟಿಸ್ ಜಾರಿಯಾಗಿದ್ದು, ಇದೀಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾತ್ರ ಲಿಖಿತ ಉತ್ತರ ನೀಡಿದ್ದಾರೆ. ಇವರ ಉತ್ತರದ ನಂತರ ಕಾಂಗ್ರೆಸ್ ಪಕ್ಷ ಇವರ ಮೇಲೆ ಯಾಕ ಕ್ರಮಕೈಗೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ಮೈಸೂರು ಪಾಲಿಕೆಯಲ್ಲಿ ಮೇಯರ್ ಸ್ಥಾನ ಬಿಟ್ಟುಕೊಟ್ಟಿದ್ದಕ್ಕಾಗಿ ಆಕ್ರೋಶಗೊಂಡಿದ್ದ ಸಿದ್ದರಾಮಯ್ಯ, ತನ್ವೀರ್ ಹಾಗೂ ಬೆಂಬಲಿಗರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಹೈಕಮಾಂಡ್‌ಗೆ ಆಗ್ರಹಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ