ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ರೈತರೊಂದಿಗೆ ಶಾಸಕ ಶಿವಲಿಂಗೇಗೌಡ ಪ್ರತಿಭಟನೆ

ಈಗಾಗಲೇ ಕೇಂದ್ರ ಸರ್ಕಾರ 10,300 ಬೆಂಬಲ ಬೆಲೆ ನೀಡಿ ನಾಫೆಡ್ ಖರೀದಿ ಆರಂಭಿಸಿದೆ. ಆದರೆ ರಾಜ್ಯ ಸರ್ಕಾರ ಜೊತೆಗೆ 1200 ಬೆಂಬಲ ಬೆಲೆ ನೀಡಿದರೆ ಕೊಬ್ಬರಿ ಬೆಳೆಗಾರರು ಸಂಕಷ್ಟದಿಂದ ಪಾರಾಗಲು ಸಾಧ್ಯ. ರಾಜ್ಯ ಸರ್ಕಾರ ಈ ಬೇಡಿಕೆಗೆ ಈಡೇರಿಸದಿದ್ದರೆ ಸಿಎಂ ಮನೆ ಮುಂದೆ  ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

news18-kannada
Updated:July 29, 2020, 8:18 PM IST
ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ರೈತರೊಂದಿಗೆ ಶಾಸಕ ಶಿವಲಿಂಗೇಗೌಡ ಪ್ರತಿಭಟನೆ
ಕೊಬ್ಬರಿ ಬೆಳೆಗಾರರೊಂದಿಗೆ ಶಾಸಕ ಶಿವಲಿಂಗೇಗೌಡ ಪ್ರತಿಭಟನೆ ನಡೆಸಿದರು.
  • Share this:
ಹಾಸನ; ಕೊಬ್ಬರಿಯನ್ನು ನಾಫೆಡ್ ಮೂಲಕ ಖರೀದಿಸುವಂತೆ ಮತ್ತು ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರು ರೈತರೊಂದಿಗೆ ಇಂದು ಬೀದಿಗಿಳಿದು  ಪ್ರತಿಭಟನೆ ಮಾಡಿದರು. 2 ಕಿ.ಮೀ. ದೂರದವರೆಗೆ ರೈತರೊಂದಿಗೆ ಮೆರವಣಿಗೆ ಜಾಥಾ ನಡೆಸಿ ಹಾಸನ ಜಿಲ್ಲೆ ಅರಸೀಕೆರೆ ತಹಸೀಲ್ದಾರ್ ಕಚೇರಿ ಮುಂದೆ ಸುಮಾರು ಮೂರು ಗಂಟೆಗಳ ಕಾಲ ಪ್ರತಿಭಟನೆ ಸಭೆಯನ್ನೂ ಮಾಡಿದರು.

ಕೊರೋನಾದಿಂದ ಹೈರಾಣಾಗಿರುವ ಜನರ ನಡುವೆ ಕೊಬ್ಬರಿ ಬೆಳೆಗಾರರು ಇಂದು ಸಂಕಷ್ಟದ ಸುಳಿಯಲ್ಲಿ‌ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೊಬ್ಬರಿ ಬೆಳೆಗೆ ಕೂಡಲೇ ಪ್ರತಿ ಕ್ವಿಂಟಾಲ್ ಗೆ 1200 ನೀಡುವಂತೆ ಆಗ್ರಹಿಸಿ ಕೊಬ್ಬರಿ ಬೆಳೆಗಾರರು ರಸ್ತೆಗಿಳಿದು ಪ್ರತಿಭಟನೆ ಮಾಡಿದರು. ಇದಕ್ಕೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಸಾಥ್ ನೀಡಿದರು.

ಅರಸೀಕೆರೆ ಮುಖ್ಯ ರಸ್ತೆಯಲ್ಲಿ ರೈತರೊಂದಿಗೆ ಕಾಲ್ನಡಿಗೆಯಲ್ಲಿ ಪ್ರತಿಭಟನೆ ಜಾಥಾ ಹೊರಟ ಶಾಸಕ ಶಿವಲಿಂಗೇಗೌಡ ಹಾಗೂ ನೂರಾರು ರೈತರು ತಹಸೀಲ್ದಾರ್ ಕಚೇರಿ ತನಕ ನಡೆದು ಪ್ರತಿಭಟನೆ ಮಾಡಿದರು. ಹಾಗೆಯೇ ಈಗಾಗಲೇ ನಾಫೆಡ್ ಮುಖಾಂತರ ಕೊಬ್ಬರಿ ಬೆಳೆ ಕೊಳ್ಳುವ ಅವಧಿ ವಿಸ್ತರಣೆ ಮಾಡುವಂತೆ ಒತ್ತಾಯ ಮಾಡಿದರು. ಇಡೀ ಜಿಲ್ಲೆಯಲ್ಲಿ 60 ಸಾವಿರ ಕೊಬ್ಬರಿ ಬೆಳೆಗಾರರಿದ್ದಾರೆ. ಆದರೆ ನಾಫೆಡ್ ನಿಂದ ಕೇವಲ 815 ಮಂದಿ ರೈತರಿಂದ ಖರೀದಿ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಶಾಸಕ ಶಿವಲಿಂಗೇಗೌಡ ಕಿಡಿಕಾರಿದರು.

ಈಗಾಗಲೇ ಕೇವಲ 800 ರೈತರ ಕೊಬ್ಬರಿ ಖರೀದಿ ಮಾಡಲು ತೀರ್ಮಾನ ಮಾಡಿದೆ. ಆದರೆ ಅರಸೀಕೆರೆಯಲ್ಲೇ 60 ಸಾವಿರ ಕೊಬ್ಬರಿ ಬೆಳೆಗಾರರಿದ್ದಾರೆ. ಇವರ ಕಥೆ ಏನು ಎಂದು ಸರ್ಕಾರದ ವಿರುದ್ದ ಶಿವಲಿಂಗೇಗೌಡ ಪ್ರಶ್ನೆ ಮಾಡಿದರು.

ಇದನ್ನು ಓದಿ: ರಾಷ್ಟ್ರೀಯ ಶಿಕ್ಷಣ ನೀತಿ 2020; 5ನೇ ತರಗತಿವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ಸೇರಿ ಸುಧಾರಣೆಯ ಇತರೆ ಪ್ರಮುಖಾಂಶಗಳು

ಕೋವಿಡ್ ಕಾಲದಲ್ಲಿ ಟೀಕಿಸಿದರೆ ರಾಜಕಾರಣ ಮಾಡ್ತಾರೆ ಅಂತ ಇಷ್ಟು ದಿನ ತಡೆದುಕೊಂಡು ಕಾದಿದ್ದೇವೆ. ಆದರೆ ಈಗಿನ ರೈತರ ಸ್ಥಿತಿ ಹದಗೆಟ್ಟಿದೆ‌ . ಈಗಾಗಲೇ ಕೇಂದ್ರ ಸರ್ಕಾರ 10,300 ಬೆಂಬಲ ಬೆಲೆ ನೀಡಿ ನಾಫೆಡ್ ಖರೀದಿ ಆರಂಭಿಸಿದೆ. ಆದರೆ ರಾಜ್ಯ ಸರ್ಕಾರ ಜೊತೆಗೆ 1200 ಬೆಂಬಲ ಬೆಲೆ ನೀಡಿದರೆ ಕೊಬ್ಬರಿ ಬೆಳೆಗಾರರು ಸಂಕಷ್ಟದಿಂದ ಪಾರಾಗಲು ಸಾಧ್ಯ. ರಾಜ್ಯ ಸರ್ಕಾರ ಈ ಬೇಡಿಕೆಗೆ ಈಡೇರಿಸದಿದ್ದರೆ ಸಿಎಂ ಮನೆ ಮುಂದೆ  ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
Published by: HR Ramesh
First published: July 29, 2020, 8:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading