ಸಭೆ ಸಮಾರಂಭ, ಚಿತ್ರಮಂದಿರ ಬಂದ್ ಮಾಡಲು ಶಾಸಕ ನಂಜೇಗೌಡ ಸಲಹೆ

ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಮತ್ತೊಮ್ಮೆ ದಿನೇ ದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆ, ಸಮಾರಂಭಗಳು, ಚಿತ್ರಮಂದಿರಗಳನ್ನ ಬಂದ್ ಮಾಡುವಂತೆ ಶಾಸಕ ಕೆ.ವೈ. ನಂಜೇಗೌಡ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಕೆವೈ ನಂಜೇಗೌಡ

ಕೆವೈ ನಂಜೇಗೌಡ

  • Share this:
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಕಟ್ಟಡವನ್ನ ಸ್ಥಳೀಯ  ಶಾಸಕ ನಂಜೇಗೌಡ ಲೋಕಾರ್ಪಣೆ ಮಾಡಿದರು. ಮಾಲೂರು ಪಟ್ಟಣ ಹೊರವಲಯದಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ಮಾರುಕಟ್ಟೆ ನಿರ್ಮಿಸಲಾಗಿದ್ದು, ಕಳೆದ 40 ವರ್ಷಗಳಿಂದ ಇದ್ದ ಹಲವು ತೊಡಕುಗಳನ್ನ ನಿವಾರಿಸಿ ಕೊನೆಗು ಲೋಕಾರ್ಪಣೆಯಾಗಿದೆ. ವೇದಿಕೆ ಕಾರ್ಯಕ್ರಮಕ್ಕೆ ಶಾಸಕ ನಂಜೇಗೌಢ ಚಾಲನೆ ನೀಡಿದ್ದು, ಮಾರುಕಟ್ಟೆ ಸಮಿತಿ ಅಧ್ಯಕ್ಷ್ಯ, ಸದಸ್ಯರು ಹಾಗು ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು,

ನೆರೆ ರಾಜ್ಯಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ನಮ್ಮ ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಪರಿಣಾಮ ನಿಧಾನವಾಗಿ ಏರುತ್ತಿದೆ. ಕೊರೋನಾ ಕಟ್ಟಿಹಾಕಲು ಈಗಾಗಲೇ ರಾಜ್ಯ ಸರ್ಕಾರ ಹಲವು ಮಾರ್ಗಸೂಚಿಗಳನ್ನ ಹೊರಡಿಸಿದ್ದು, ಲಾಕ್‍ಡೌನ್ ಚರ್ಚೆಗಳು ನಡೆಯುತ್ತಿದೆ. ಈ ಬಗ್ಗೆ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ, ಕೊರೋನಾ ಕಟ್ಟಿಹಾಕಲು ಲಾಕ್‍ಡೌನ್ ಒಂದೇ ಮಾರ್ಗವಲ್ಲ, ಮೊದಲು ರಾಜ್ಯದಲ್ಲಿ ಮದುವೆ, ಸಭೆ ಸಮಾರಂಭಗಳು, ಹಾಗು ಚಿತ್ರಮಂದಿರಗಳನ್ನ ಬಂದ್ ಮಾಡಬೇಕಿದೆ. ಸುಮ್ಮನೆ ಲಾಕ್‍ಡೌನ್ ಮಾಡಿದರೆ ಏನೂ ಪ್ರಯೋಜನವಿಲ್ಲ ಎಂದು ಹೇಳಿಕೆ ನೀಡಿದರು.

ಇದನ್ನೂ ಓದಿ: ಲಕ್ಷಲಕ್ಷ ಖರ್ಚು ಮಾಡಿ ಬೆಳೆದ ಟೊಮೆಟೋಗೆ ಸಿಕ್ಕ ಲಾಭ 10 ರೂ; ಶಾಕ್ ಆದ ರೈತ ಪ್ರಧಾನಿಗೆ ಆ ಹಣ ಕಳಿಸಲು ಮುಂದು

ಏನ್ ಮಾಲೂರು ತಾಲೂಕಿನಲ್ಲಿ ಕಾಂಗ್ರೆಸ್ ಇತ್ತಾ? ಬರೀ ಸಿಂಬಲ್ ಇತ್ತು ಅಷ್ಟೇ - ಕೈ ಶಾಸಕ ನಂಜೇಗೌಡ

ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಬದ್ದ ವೈರಿಗಳಂತೆ ಮಾತಿನ ಸಮರಕ್ಕಿಳಿಯುವ ಸಂಸದ ಮುನಿಸ್ವಾಮಿ ಹಾಗು ಶಾಸಕ ನಂಜೇಗೌಡ ಅವರಿಬ್ಬರು ಮಾಲೂರು ತಾಲೂಕಿನವರೇ ಅಗಿದ್ದಾರೆ. ವೇದಿಕೆ ಕಾರ್ಯಕ್ರಮದಲ್ಲಿ ಇದನ್ನೇ ಪ್ರಸ್ತಾಪಿಸಿದ ಶಾಸಕರು, ಕೋಲಾರ ಸಂಸದ ಮುನಿಸ್ವಾಮಿ ನಮ್ಮ ತಾಲೂಕಿನವರಾಗಿದ್ದು ನಮ್ಮೆಲ್ಲರ ಅದೃಷ್ಟ. ಸ್ವಾತಂತ್ರ್ಯ ಬಂದಮೇಲೆ ನಮ್ಮ ತಾಲೂಕಿನವರೇ ಸಂಸದರಾಗಿದ್ದು, ನಾನು ಮಾಲೂರು ತಾಲೂಕಿನವನೇ. ಕೇಂದ್ರದಲ್ಲೂ ಬಿಜೆಪಿ, ರಾಜ್ಯದಲ್ಲು ಬಿಜೆಪಿ, ಈಗ ಮಾಲೂರು ತಾಲೂಕಿನ ಅಭಿವೃದ್ದಿ ವಿಚಾರದಲ್ಲಿ ಸಂಸದರ ಹಿಂದೆ ನಿಂತು ಕೆಲಸ ಮಾಡುವೆ ಎಂದು ನಂಜೇಗೌಡ ಹೇಳಿದರು.

ನಾನು ಸ್ಥಳೀಯನಾಗಿದ್ದರಿಂದ ಜನ ನನ್ನನ್ನು ಆಯ್ಕೆ ಮಾಡಿದ್ದಾರೆ. ಮಾಲೂರಿನಲ್ಲಿ ಕಾಂಗ್ರೆಸ್ ಇರಲಿಲ್ಲ. ಕೇವಲ ಸಿಂಬಲ್ ಇತ್ತು ಅಷ್ಟೆ ಎಂದ ಕೆ ವೈ ನಂಜೇಗೌಡ, ಮಾಲೂರು ತಾಲೂಕಿನ ಇತಿಹಾಸದಲ್ಲಿ 220 ಕೋಟಿ ಅನುದಾನವನ್ನ ಒಂದು ವರ್ಷಕ್ಕೆ ತಂದು ಅಭಿವೃದ್ದಿ ಕಾರ್ಯಗಳನ್ನ ಮಾಡಿಡುತ್ತಿರುವೆ. ಇದು ಯಾರೂ ಮಾಡಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು.

ಇದನ್ನೂ ಓದಿ: ಹೊಳಲ್ಕೆರೆ ಶಾಸಕ ದಡ್ಡ, ಸಾವಿರ ಕೋಟಿ ಸುಳ್ಳುಗಾರ – ಮಾಜಿ ಸಚಿವ ಹೆಚ್ ಆಂಜನೇಯ ವಾಗ್ದಾಳಿ

ನಾನೊಬ್ಬ ಲೋಕಲ್ ಎಮ್‍ಎಲ್‍ಎ - ಜನ ನನ್ನನ್ನ ಎಮ್‍ಎಲ್‍ಎ ಎಂದುಕೊಂಡಿಲ್ಲ:

ಮಾಲೂರು ಎಪಿಎಂಸಿ ಮಾರುಕಟ್ಟೆಯ ನೂತನವಾದ ಸ್ಥಳ ಹಾಗು ಕಟ್ಟಡ ಲೋಕಾರ್ಪಣೆ ಮಾಡಿದ ಖುಷಿಯಲ್ಲಿದ್ದ ಶಾಸಕ ನಂಜೇಗೌಡ, ತಾವೊಬ್ಬ ಸಾಮಾನ್ಯ ಶಾಸಕರೆಂದು ಕಾರ್ಯಕ್ರಮದಲ್ಲಿ ತಿಳಿಸಿದರು, ಸ್ತಳೀಯವಾಗಿದ್ದುಕೊಂಡು ಜನರ ಹತ್ತಿರ ಒಡನಾಟ ಬೆಳೆಸಿಕೊಂಡಿರುವೆ, ರಾಜಕೀಯಕ್ಕೆ ಬರುವ ಮುನ್ನ ಎಲ್ಲರು ಅಣ್ಣಾ ಅಣ್ಣಾ ಎಂದು ಗೌರವ ನೀಡುತ್ತಿದ್ದರು, ಈಗ ಪ್ರತಿದಿನ ಎಲ್ಲರು ನನ್ನ ಕಾಣುವುದರಿಂದ ಯಾರು ನನ್ನನ್ನ ಶಾಸಕರು ಎಂದುಕೊಂಡಿಲ್ಲ, ಮಾಲೂರಿನ ನಿವಾಸಿಯೆಂದು ಪ್ರೀತಿಯಿಂದ ಕಾಣುತ್ತಿದ್ದಾರೆಂದು ತಿಳಿಸಿದರು.

ವರದಿ: ರಘುರಾಜ್
Published by:Vijayasarthy SN
First published: