ಚಿತ್ರದುರ್ಗ: ಲಾರಿಗಳಲ್ಲಿ ದಿನ ನಿತ್ಯ ಅಕ್ರಮ ಮಣ್ಣು ಸಾಗಾಟ ಮಾಡಿ ಹಾಳಾದ ರಸ್ತೆ ವೀಕ್ಷಣೆಗೆ ಬಂದಿದ್ದ ಚಿತ್ರದುರ್ಗ ಶಾಸಕ ಜಿಹೆಚ್ ತಿಪ್ಪಾರೆಡ್ಡಿ ಅವರಿಗೆ ಗುತ್ತಿಗೆದಾರನೊಬ್ಬ ಖಾಸಗಿ ಬೌನ್ಸರ್ಗಳನ್ನ ಬಿಟ್ಟು ಹೆದರಿಸೋಕೆ ಮುಂದಾಗಿದ್ದ. ಗುತ್ತಿಗೆದಾರನ ದರ್ಪ ಕಂಡ ಶಾಸಕ ಜಿಹೆಚ್ ತಿಪ್ಪಾರೆಡ್ಡಿ ಕೆಂಡಾಮಂಲವಾಗಿ ಗುತ್ತಿಗೆದಾರ ಹಾಗೂ ಬೌನ್ಸರ್ಸ್ ವಿರುದ್ದ ದೂರು ದಾಖಲಿಸಲು ಸೂಚಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಹಳ್ಳಿಗಳು ಅಭಿವೃದ್ದಿ ಹೊಂದಬೇಕು. ಅಲ್ಲಿನ ರಸ್ತೆಗಳು ಉತ್ತಮವಾಗಿ ಇರಬೇಕು ಅಂತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋಟ್ಯಾಂತರ ರೂಪಾಯಿ ಅನುಧಾನ ಕೊಡ್ತಿವೆ. ಆ ಅನುದಾನ ಬಳಸಿದ ಜನಪ್ರತಿನಿಧಿಗಳು, ಸಾರ್ವಜನಿಕರ ಹಿತ ಕಾಯಲು ಅಧಿಕಾರಿಗಳ ಉಸ್ತುವಾರಿ ಮೂಲಕ ರಸ್ತೆ ನಿರ್ಮಾಣ ಮಾಡಿರ್ತಾರೆ. ಹೀಗೆ ನಿರ್ಮಾಣ ಮಾಡಿದ ರಸ್ತೆ ಅಕ್ರಮ ಲಾರಿಗಳ ಓಡಾಟದಿಂದ ಕಿತ್ತು ಹೋದ್ರೆ ಜನ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ಮಾಡೋದು ಅವರ ಜವಬ್ದಾರಿ. ಚಿತ್ರದುರ್ಗ ತಾಲೂಕಿನ ಇಂಗಳದಾಳು ರಸ್ತೆಯಲ್ಲಿ ಹಲವು ದಿನಗಳಿಂದ ಮಣ್ಣು ತುಂಬಿದ ಲಾರಿಗಳು ಓಡಾಟ ನಡೆಸಿದ್ದವು. ಇದರಿಂದ ಹೊಸದಾಗಿ ನಿರ್ಮಾಣ ಆಗಿದ್ದ ಇಂಗಳದಾಳು ರಸ್ತೆ ಸಂಪೂರತಣ ಹಾಳಾಗಿ ಹೋಗಿತ್ತು. ಇದು ಸಾರ್ವಜನಿಕರ ಓಡಾಟಕ್ಕೆ ಕಿರಿಕಿರಿ ಉಂಟಾಗಿತ್ತು. ಇದರಿಂದ ಬೇಸತ್ತ ಇಂಗಳದಾಳು, ಲಂಬಾಣಿಹಟ್ಟಿ ಗ್ರಾಮಸ್ಥರು ಶಾಸಕ ಜಿಹೆಚ್ ತಿಪ್ಪಾರೆಡ್ಡಿ ಅವರಿಗೆ ರಸ್ತೆ ಹಾಳಾಗಿರುವ ಕುರಿತು ದೂರು ನೀಡಿದ್ದರು. ಹಾಗಾಗಿ ಸ್ಥಳ ಪರಿಶೀಲನೆ ಮಾಡೋಕೆ ತೆರಳಿದ ಚಿತ್ರದುರ್ಗ ಶಾಸಕ ಜಿಹೆಚ್ ತಿಪ್ಪಾರೆಡ್ಡಿ, ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಸಿದ್ದರು.
ಇದನ್ನೂ ಓದಿ: ಅಮ್ಮನನ್ನು ರೇಗಿಸಬೇಡಿ ಎಂದಿದ್ದಕ್ಕೆ ನಿರುಪದ್ರವಿ ಯುವಕನ ಎದೆಗೆ ಚಾಕು ಇರಿದು ಅಮಾನುಷ ಕೊಲೆ
ಈ ವೇಳೆ ಐವರು ಬೌನ್ಸರ್ಗಳನ್ನು ಕರೆದುಕೊಂಡು ಬಂದ ಗುತ್ತಿಗೆದಾರ ಚಂದ್ರಶೇಖರ್ ಎಂಬಾತ ಉತ್ತರ ಕರ್ನಾಟಕ ಭಾಗದ ಪ್ರಭಾವಿ ರಾಜಕಾರಣಿಗಳ ಮಕ್ಕಳು ಹಾಗೂ ಅರಣ್ಯ ಇಲಾಖೆ ಸಚಿವ ಆನಂದ್ ಸಿಂಗ್ ಅವರಿಂದಲೂ ಒತ್ತಡ ಹಾಕುವ ಪ್ರಯತ್ನ ಮಾಡಿದ್ದಾನೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಗಣಿ ಮತ್ತು ಭೂ ವಿಜ್ಞಾನ, ಕಂದಾಯ ಹಾಗು ಅರಣ್ಯ ಇಲಾಖೆ ಅನುಮತಿಯನ್ನೇ ಪಡೆಯದೆ ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದ ಗುತ್ತಿಗೆದಾರ, ಶಾಸಕರಿಗೆ ಪ್ರಭಾವಿ ರಾಜಕಾರಣಿಗಳು, ಸಚಿವರಿಂದ ಒತ್ತಡ ಹಾಕಿದ್ದು ಮಾತ್ರವಲ್ಲದೇ ರಸ್ತೆ ಹಾಳಾಗುತ್ತಿರುವ ಬಗ್ಗೆ ಪ್ರಶ್ನೆ ಮಾಡಿದ ಶಾಸಕರ ಎದುರು ಬೌನ್ಸರ್ ಬಿಟ್ಟು ಬೆದರಿಕೆ ಹಾಕಲು ಯತ್ನಿಸಿದ್ದ. ಆದರೆ ಒತ್ತಡಕ್ಕೆ ಮಣಿಯದ ಶಾಸಕ ತಿಪ್ಪಾರೆಡ್ಡಿ, ಐದಾರು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ರಸ್ತೆ ಹಾಳಾಗಿದೆ. ಅನುಮತಿ ಪಡೆಯದೇ ಮಣ್ಣು ಸಾಗಾಟ ನಡೆಯುತ್ತಿದೆ. ಇದನ್ನೆಲ್ಲಾ ನೋಡಿಕೊಂಡು ಸುಮ್ಮನಿರಬೇಕೆ ಎಂದು ಶಾಸಕರು ಕೆಂಡಾಮಂಡಲರಾದರು. ಈ ವೇಳೆ ಬೌನ್ಸರ್ಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ತಿಪ್ಪಾರೆಡ್ಡಿ, PNC ಕಂಪನಿಯ ಉಪಗುತ್ತಿಗೆದಾರ ಚಂದ್ರಶೇಖರ್ ಹಾಗೂ ಜೊತೆಯಲ್ಲಿ ಬೆದರಿಕೆ ಹಾಕಲು ಕರೆತಂದಿದ್ದ ಐವರು ಬೌನ್ಸರ್ಗಳ ವಿರುದ್ದ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ.
ವರದಿ: ವಿನಾಯಕ ತೊಡರನಾಳ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ