ಪುತ್ತೂರು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯ ಮೇಲೆ ದೇವಾಲಯದ ಆಭರಣಗಳನ್ನು ಅವ್ಯವಹಾರ ನಡೆಸಿರುವ ನೇರ ಆರೋಪ ಕೇಳಿಬಂದಿದೆ. ದೇವಾಲಯದ ಆಡಳಿತಾಧಿಕಾರಿ ಶ್ರೀಮತಿ ರೂಪಾ ಎಂ.ಜೆ ಹಾಗೂ ದೇಗುಲದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿದ್ದ ರವೀಂದ್ರ ಎಂ.ಎಚ್ ಅವರ ಮೇಲೆ ಸುಬ್ರಹ್ಮಣ್ಯದ ನಿವಾಸಿಯಾದ ಶ್ರೀನಾಥ್ ಟಿ.ಎಸ್. ಅವರು ಮಂಗಳೂರಿನ ಪಶ್ಚಿಮ ವಲಯ ಭ್ರಷ್ಟಾಚಾರ ನಿಗ್ರಹದಳದ ಪೋಲಿಸ್ ಅಧೀಕ್ಷಕರಿಗೆ ದೂರು ದಾಖಲಿಸಿದ್ದು, ತನಿಖೆ ನಡೆಸುವಂತೆ ಕೋರಿದ್ದಾರೆ.
ಕರ್ನಾಟಕ ರಾಜ್ಯ ಸರಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಡಳಿತದಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧಿಕೃತ ದಾಖಲಾತಿ ಪುಸ್ತಕದಲ್ಲಿ ದಾಖಲಾಗಿರುವ ಕೋಟ್ಯಂತರ ರೂಪಾಯಿ ಬೆಲೆಬಾಳುವ ವಜ್ರದ ಕಂಠಿಹಾರ, ಆಭರಣಗಳು, ಶ್ರೀ ಸತ್ಯನಾರಾಯಣ ದೇವರ ಫೋಟೋ, ಶ್ರೀ ಕುಕ್ಕೆ ಲಿಂಗ ದೇವಳದ ಬಳಿ ಇದ್ದ ಬೆಳ್ಳಿಯ ಒಡವೆಗಳು, ಪುರಾತನ ಕಾಲದ ವಿಗ್ರಹಗಳು ನಾಪತ್ತೆಯಾಗಿವೆ. ಈ ಬಗ್ಗೆ ದೇವಾಲಯದ ಮಾಜಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಮೋನಪ್ಪ ಮಾನಾಡು ಅವರು 2019ರ ಅಕ್ಟೋಬರ್ 22ರಂದೇ ದೇವಾಲಯದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿದ್ದ ರವೀಂದ್ರ ಎಂ.ಎಚ್ ಅವರಿಗೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಇವತ್ತಿಗೆ ಸರಿಯಾಗಿ ಒಂದು ವರ್ಷ ಆಯಿತು. ಆದರೂ ಈ ಬಗ್ಗೆ ಯಾವುದೇ ಮಾಹಿತಿಯನ್ನು ಆಡಳಿತ ಮಂಡಳಿ ಈವರೆಗೆ ನೀಡಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಪೊಲೀಸ್ ಅಧಿಕಾರಿಗಳ ಹೆಸರಲ್ಲಿ ನಕಲಿ ಅಕೌಂಟ್ ಸೃಷ್ಟಿಸಿ ವಂಚನೆ; ಸಿಐಡಿಯಿಂದ ನಾಲ್ವರ ಬಂಧನ
ಈ ವಿಚಾರವಾಗಿ ಇದೇ ಆಗಸ್ಟ್ 1ರಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿಯ ನಿರ್ದೇಶಕರಾಗಿರುವ ಶ್ರೀನಾಥ್ ಟಿ.ಎಸ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರೂ ಇಲ್ಲಿಯವರೆಗೂ ಆಡಳಿತಾಧಿಕಾರಿಯಾಗಲಿ, ಕಾರ್ಯ ನಿರ್ವಹಣಾಧಿಕಾರಿಯೇ ಆಗಲಿ ಯಾವುದೇ ಮಾಹಿತಿ ನೀಡಿಲ್ಲ ಎಂದು ದೂರಲಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅರ್ಜಿದಾರರು ಆಗ್ರಹಿಸಿದ್ದಾರೆ.
ದೂರು ಯಾರೇ ನೀಡಿರಲಿ, ಏನೇ ದೂರು ಇರಲಿ.. ಅಪವಾದ ಬಂದ ಮೇಲೆ ಅದನ್ನು ಸರಿಪಡಿಸಿಕೊಳ್ಳುವ ಅವಕಾಶವಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ನೀಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೆ ಧಾರ್ಮಿಕ ದೇಗುಲದ ಸೊತ್ತುಗಳು ನಾಪತ್ತೆ ಆಗಿದೆ ಎಂಬ ವಿಚಾರವೇ ಭಕ್ತಾದಿಗಳಿಗೆ ಗೊಂದಲ ಉಂಟು ಮಾಡಿದ್ದು, ಸತ್ಯವೇನು ಎನ್ನುವ ಗೊಂದಲದಲ್ಲಿದ್ದಾರೆ.
ಇದನ್ನೂ ಓದಿ: ತುಳು ಚಿತ್ರನಟ ಸುರೇಂದ್ರ ಬಂಟ್ವಾಳ್ ಹತ್ಯೆಗೆ ಹೊಸ ತಿರುವು; ಹಿರಿಯಡ್ಕ ಕೊಲೆ ಪ್ರತೀಕಾರ ಎಂದ ಆರೋಪಿ
ಈ ಹಿಂದೆ ಇದೇ ರೀತಿಯ ಘಟನೆ ಕೊಲ್ಲೂರು ಮುಖಾಂಬಿಕಾ ದೇವಸ್ಥಾನದಲ್ಲೂ ನಡೆದಿತ್ತು. ಈ ಸಂಬಂಧ ಅಂದು ತನಿಖೆ ನಡೆದಾಗ ದೇವಸ್ಥಾನದ ಅರ್ಚಕರೇ ಸೇರಿ ದೇವರ ಆಭರಣಗಳನ್ನು ಬ್ಯಾಂಕಿನಲ್ಲಿ ಅಡವಿಟ್ಟು ಹಣ ಪಡೆದಿದ್ದ ವಿಚಾರ ಬೆಳಕಿಗೆ ಬಂದಿತ್ತು. ಇದೇ ರೀತಿಯ ವ್ಯವಹಾರ ಸುಬ್ರಹ್ಮಣ್ಯದಲ್ಲೂ ಆಗಿದೆಯೋ ಎನ್ನುವ ಅನುಮಾನ ಇದೀಗ ಈ ದೂರಿನ ಹಿನ್ನೆಲೆಯಲ್ಲಿ ಮೂಡಲಾರಂಭಿಸಲಾಗಿದೆ.
ವರದಿ: ಅಜಿತ್ ಕುಮಾರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ