ಭೀಮಾ ಪ್ರವಾಹಕ್ಕೆ ಸೊನ್ನ ಬ್ಯಾರೇಜಿನ ಅಸಮರ್ಪಕ ನೀರು ನಿರ್ವಹಣೆಯೂ ಕಾರಣ: ಇಂಡಿ ಶಾಸಕ ಆರೋಪ

ಕಲಬುರ್ಗಿಯ ಅಫ್ಜಲಪುರದಲ್ಲಿರುವ ಸೊನ್ನ ಬ್ಯಾರೇಜ್​ನ ಹಿನ್ನೀರಿನಿಂದಾಗಿ ವಿಜಯಪುರದಲ್ಲಿ ಪ್ರವಾಹವಾಗಿದೆ. ಒಂದೆರಡು ದಿನಗಳ ಮುಂಚೆಯೇ ಎಲ್ಲಾ ಕ್ರಸ್ಟ್ ಗೇಟ್ ತೆಗೆದಿದ್ದರೆ ಇಷ್ಟು ಸಮಸ್ಯೆ ಆಗುತ್ತಿರಲಿಲ್ಲ ಎಂದು ಇಂಡಿ ಶಾಸಕ ಯಶವಂತರಾಯಗೌಡ ವಿ. ಪಾಟೀಲ್ ಆರೋಪಿಸಿದ್ದಾರೆ.

ಇಂಡಿ ಶಾಸಕ ಯಶವಂತರಾಯ ಗೌಡ ವಿ. ಪಾಟೀಲ

ಇಂಡಿ ಶಾಸಕ ಯಶವಂತರಾಯ ಗೌಡ ವಿ. ಪಾಟೀಲ

  • Share this:
ವಿಜಯಪುರ: ಸೊನ್ನ ಬ್ಯಾರೇಜಿ ನೀರು ನಿರ್ವಹಣೆ ವೈಫಲ್ಯದಿಂದಾಗಿ ವಿಜಯಪುರ ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹ ಉಂಟಾಗಲು ಕಾರಣ ಎಂದು ಇಂಡಿ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಆರೋಪಿಸಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಿರಗಿಯಲ್ಲಿ ನ್ಯೂಸ್ 18 ಕನ್ಮಡದ ಜೊತೆ ಅವರು ಮಾತನಾಡಿದರು.

ಕಲಬುರಗಿ ಜಿಲ್ಲೆಯ ಅಫಝಲಪುರ ತಾಲೂಕಿನ ಸೊನ್ನ ಬ್ಯಾರೇಜಿನ ಹಿನ್ನೀರಿನಿಂದಾಗಿ ವಿಜಯಪುರ ಜಿಲ್ಲೆಯ ಚಡಚಣ, ಇಂಡಿ, ಸಿಂದಗಿ ತಾಲೂಕುಗಳಲ್ಲಿ ಪ್ರವಾಹ ಉಂಟಾಗಿದೆ.  ಒಂದೆರಡು ದಿನಗಳ ಮುಂಚೆ ಸೊನ್ನ ಬ್ಯಾರೇಜಿನ ಎಲ್ಲ 23 ಕ್ರಸ್ಟ್ ಗೇಟ್​ಗಳನ್ನು ತೆಗೆಯಬೇಕಿತ್ತು. ಆದರೆ, ಸೂಕ್ತ ಸಮಯದಲ್ಲಿ ಕ್ರಸ್ಟ್ ಗೇಟುಗಳನ್ನು ತೆರೆಯದ ಕಾರಣ ಸೊನ್ನ ಬ್ಯಾರೇಜಿನ ಹಿನ್ನೀರು ಇಂಡಿ, ಸಿಂದಗಿ ತಾಲೂಕಿನಲ್ಲಿ ಭೀಮಾ ಪ್ರವಾಹ ಹೆಚ್ಚಾಗಲು ಕಾರಣ. ಈ ಬ್ಯಾರೇಜ್ ನಿರ್ಮಾಣವಾದಾಗಿನಿಂದ ಅದರ ಹಿನ್ನೀರು ವಿಜಯಪುರ ಜಿಲ್ಲೆಯಲ್ಲಿ ಸಮಸ್ಯೆ ಉಲ್ಬಣವಾಗಲು ಕಾರಣವಾಗಿದೆ.  ಈ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದೇನೆ ಎಂದು ತಿಳಿಸಿದರು.

ಈಗಾಗಲೇ ಭೀಮಾ ಪ್ರವಾಹದ ಕುರಿತು ಮುಖ್ತಮಂತ್ರಿಗಳ ಜೊತೆ ಮಾತನಾಡಿದ್ದೇನೆ.  ಅಲ್ಲದೇ, ಪತ್ರವನ್ನೂ ಕೊಟ್ಟು ಕಳುಹಿಸಿದ್ದೇನೆ. ಈ ಭಾಗದಲ್ಲಿ ಪ್ರವಾಹ ಸಮಸ್ಯೆಗೆ ಕಡಿವಾಣ ಹಾಕಲು ಅಲ್ಪಾವಧಿ ಮತ್ತು ದೀರ್ಘಾವಧಿ ಯೋಜನೆಗಳನ್ಮು ರೂಪಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಭೀಮಾ ನದಿ ತೀರದಲ್ಲಿ ಪ್ರವಾಹ; ಜನರ ರಕ್ಷಣೆಗೆ ಯಾದಗಿರಿಗೆ ಬಂದಿಳಿದ ಸೇನಾ ತಂಡ

ಈಗ ಇಲ್ಲಿ ತಾತ್ಕಾಲಿಕವಾಗಿ ಬೋಟ್ ವ್ಯವಸ್ಥೆಯಾಗಬೇಕು.  ಕುಡಿಯುವ ನೀರು, ವಿದ್ಯುತ್ ಪೂರೈಕೆಯಂಥ ತಕ್ಷಣದ ಕೆಲಸಗಳನ್ನು ಕೈಗೊಳ್ಳಬೇಕಿದೆ.  ಸೊನ್ನ ಬ್ಯಾರೇಜ್ ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಬರುತ್ತದೆ.  ಈ ನಿಗಮದ ಮೂಲ‌ಕ ಭೀಮಾ ತೀರದಲ್ಲಿ ಬರುವ ಚಡಚಣ, ಇಂಡಿ ಮತ್ತು ಸಿಂದಗಿ ತಾಲೂಕುಗಳ ಎಲ್ಲ ಗ್ರಾಮಗಳನ್ನು ಶಾಶ್ವತವಾಗಿ ಸ್ಥಳಾಂತರಿಸಲು ದೀರ್ಘಾವಧಿ ಯೋಜನೆಗಳನ್ಮು ರೂಪಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸುತ್ತೇನೆ. ಕೊರೊನಾ ಸಂದರ್ಭದಲ್ಲಿ ಸರಕಾರದ ಆರ್ಥಿಕ ಪರಿಸ್ಥಿತಿ ಬಗ್ಗೆ ನನಗೆ ಅರಿವಿದೆ.  ಈ ವರ್ಷ ಸಾಧ್ಯವಾಗದಿದ್ದರೂ ಮುಂದಿನ ವರ್ಷವಾದರೂ ಪ್ರಕೃತಿ ವಿಕೋಪ ನಿರ್ವಹಣೆ ಯೋಜನೆಯಡಿ ಶಾಶ್ವತವಾಗಿ ಸ್ಥಳಾಂತರಿಸಬೇಕು.  ಈ ಹಿಂದೆ 1993ರಲ್ಲಿ ಲಾತೂರು ಭೂಕಂಪ ಉಂಟಾದ ಸಂದರ್ಭದಲ್ಲಿ ಈ ಭಾಗದಲ್ಲಿ ಹಾನಿಗೀಡಾದ ಗ್ರಾಮಗಳನ್ನು ಇದೇ ಯೋಜನೆಯಡಿ ಸ್ಥಳಾಂತರ‌ ಮಾಡಲಾಗಿದೆ.  ಅಂದು ಸರಕಾರದ ಪೇಜಾವರ ಶ್ರೀಗಳು ಮತ್ತು ಇತರ ಮಠಗಳೀ ಕೈಜೋಡಿಸಿ ಇಂಥ ಗ್ರಾಮಗಳನ್ನು ದತ್ತು ಪಡೆದು ಸ್ಥಳಾಂತರಕ್ಕೆ ನೆರವಾಗಿದ್ದವು.  ಈಗಲೂ ಕೂಡ ಆರ್ಥಿಕವಾಗಿ ಸಶಕ್ತವಾಗಿರುವ ಇನ್ಫೋಸಿಸ್ ಮತ್ತು ಇತರ ಸಂಸ್ಥೆಗಳು ಈ ಭಾಗದ ಜನರಿಗೆ ಸ್ಪಂದಿಸಿ ಭೀಮಾ ತೀರದ ಪ್ರವಾಹ ಸಂತ್ರಸ್ತ ಗ್ರಾಮಗಳ ಶಾಶ್ವತ ಸ್ಥಳಾಂತರಕ್ಕೆ ಕೈ ಜೋಡಿಸಬೇಕು ಎಂದು ಭೀಮಾ ತೀರದ ಜನರ ಪರವಾಗಿ ಮನವಿ ಮಾಡುವುದಾಗಿ ಇಂಡಿ ಶಾಸಕರು ತಿಳಿಸಿದರು.

ಇದನ್ನೂ ಓದಿ: ಜಾತಿ ಜನಗಣತಿ ಪ್ರಕಟಿಸುತ್ತೇವೆ ಎಂದ ಈಶ್ವರಪ್ಪ; ನಮೋ ನಮೋ ಎಂದ ಸಿದ್ದರಾಮಯ್ಯ

ಈ ಭಾಗದಲ್ಲಿ ಬೆಳೆಯೂ ಸಾಕಷ್ಟು ಹಾನಿಯಾಗಿದೆ.  ಭೀಮಾ ನದಿ ಪ್ರವಾಹದಿಂದಷ್ಟೇ ಅಲ್ಲ, ಅತೀವೃಷ್ಠಿಯಿಂದಲೂ ವ್ಯಾಪಕವಾಗಿ ಬೆಳೆ ಹಾನಿಯಾಗಿದೆ.  ಸರಕಾರ ಆಯಾ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಬೆಳೆಹಾನಿ ವರದಿ ಸಂಗ್ರಹಿಸಿದೆ.  ಆದರೆ, ಆ ವರದಿ ಸಂಪೂರ್ಣವಾಗಿಲ್ಲ.  ಭಾರಿ ಪ್ರಮಾಣದಲ್ಲಿ ಬೆಳೆಹಾನಿಯಾಗಿದೆ.  ಈ ಹಿನ್ನೆಲೆಯಲ್ಲಿ ಪ್ರವಾಹ ಕಡಿಮೆಯಾದ ಮೇಲೆ ಸರಕಾರ ತಾಲೂಕು ಮತ್ತು ಜಿಲ್ಲಾಡಳಿತದ ಮೂಲಕ ಸಂಪೂರ್ಣ ಸಮಿಕ್ಷೆ ವರದಿಯನ್ನು ತರಿಸಿಕೊಳ್ಳಬೇಕು. ನಿಜವಾದ ವರದಿ ಪಡೆದು ರೈತರ ನೆರವಿಗೆ ಸರಕಾರ ಧಾವಿಸಲಿದೆ ಎಂಬ ವಿಶ್ವಾಸ ತಮಗಿದೆ ಎಂದು ವಿಜಯಪುರ ಜಿಲ್ಲೆಯ ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ವಿ. ಪಾಟೀಲ ನ್ಯೂಸ್ 18 ಕನ್ನಡಕ್ಕೆ ತಿಳಿಸಿದರು.

ವರದಿ: ಮಹೇಶ ವಿ. ಶಟಗಾರ
Published by:Vijayasarthy SN
First published: