HOME » NEWS » District » MISCREANTS MURDERS REAL ESTATE BUSINESSMAN IN HUBBALLI PTH HK

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಬೆಚ್ಚಿಬಿದ್ದ ವಾಣಿಜ್ಯ ನಗರದ ಜನತೆ

ಹುಬ್ಬಳ್ಳಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ದೌಡಾಯಿಸಿದ ಡಿಸಿಪಿ ರಾಮರಂಜನ್ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಯ ಪತ್ತೆಗೆ ಬಲೆಬೀಸಿದ್ದಾರೆ

news18-kannada
Updated:November 25, 2020, 7:49 PM IST
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಬೆಚ್ಚಿಬಿದ್ದ ವಾಣಿಜ್ಯ ನಗರದ ಜನತೆ
ಹತ್ಯೆಯಾದ ಉದ್ಯಮಿ ರಮೇಶ್ ಭಾಂಡಗೆ
  • Share this:
ಹುಬ್ಬಳ್ಳಿ(ನವೆಂಬರ್​. 25): ಹುಬ್ಬಳ್ಳಿಯಲ್ಲಿ ಹಾಡುಹಗಲೇ ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ ನಡೆದಿದೆ. ನಡು ರಸ್ತೆಯಲ್ಲಿಯೇ ಚಾಕುವಿನಿಂದ ಇರಿದಿರುವ ದುಷ್ಕರ್ಮಿ ಪರಾರಿಯಾಗಿದ್ದಾನೆ. ಹತ್ಯೆಯ ಹಿಂದೆ ಭೂವ್ಯಾಜ್ಯದ ಕರಿನೆರಳಿದ್ದು ವಾಣಿಜ್ಯ ನಗರದ ಜನರನ್ನು ಬೆಚ್ಚಿ ಬೀಳಿಸಿದೆ. ಈ ಘಟನೆ ನಡೆದಿರುವುದು ವಾಣಿಜ್ಯ ನಗರ ಹುಬ್ಬಳ್ಳಿಯ ದುರ್ಗದ ಬೈಲ್ ಬಳಿ. ಇಲ್ಲಿ ಚೂರಿ ಇರಿತಕ್ಕೆ ಒಳಗಾಗಿರುವ ವ್ಯಕ್ತಿಯ ಹೆಸರು ರಮೇಶ್ ಭಾಂಡಗೆ. ತೀವ್ರ ರಕ್ತ ಸ್ರಾವದಿಂದ ಬಳಲುತ್ತಿದ್ದ ರಮೇಶ್ ಭಾಂಡಗೆಯನ್ನು ಸ್ಥಳೀಯರು ಕಿಮ್ಸ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಾಗಲೇ ಉಸಿರು ನಿಂತು ಹೋಗಿತ್ತು. ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ರಮೇಶ್ ಭಾಂಡಗೆ ಹಲವು ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದ. ಕಮರೀಪೇಟೆ ನಿವಾಸಿ ರಮೇಶ್ ಭಾಂಡಗೆ ಅಪಾರ ಆಸ್ತಿಯ ಒಡೆಯ. ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡಿದ್ದ. ಹಳೇ ಹುಬ್ಬಳ್ಳಿ ಭಾಗದ ಭೂ ವ್ಯಾಜ್ಯದ ಕಾರಣ ಕೆಲವರ ವಿರೋಧವನ್ನು ಕಟ್ಟಿಕೊಂಡಿದ್ದ. ತಮಗೆ ಸೇರಿದ ಜಮೀನಿನಲ್ಲಿ ಕೆಲವು ಪ್ರಭಾವಿಗಳು ಕಟ್ಟಡ ಕಟ್ಟಿಕೊಂಡಿದ್ದಾರೆ ಎಂದು ಮಹಾನಗರ ಪಾಲಿಕೆಗೆ ದೂರು ಕೊಟ್ಟಿದ್ದ.

ಉದ್ಯಮ ಪರವಾನಿಗೆ ಪಡೆಯದೆ ಫ್ಯಾಕ್ಟರಿಗಳನ್ನು ನಡೆಸುವವರ ಬಗ್ಗೆ ತಕರಾರು ಸಲ್ಲಿಸಿದ್ದ. ಎಸಿಬಿಗೂ ಹಲವು ದಾಖಲೆ ಸಲ್ಲಿಸಿದ್ದ. ಕೆಲವರ ವಿರುದ್ಧ ಕಾನೂನು ಹೋರಾಟವನ್ನು ಮಾಡುತ್ತಿದ್ದ. ಹೀಗಾಗಿ ಭೂ ವ್ಯಾಜ್ಯದ ಕಾರಣಕ್ಕಾಗಿಯೇ ಕೊಲೆ ನಡೆದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ತಳವಾರ, ಪರಿವಾರ ಸಮುದಾಯ ಎಸ್.ಟಿಗೆ ಆಗ್ರಹ : ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವಿಕಲಚೇತನ

ಮಾರುಕಟ್ಟೆಗೆ ಬಂದಿದ್ದ ರಮೇಶ್ ಭಾಂಡಗೆ ಜೊತೆಗೆ ವಾಗ್ವಾದ ನಡೆಸಿರುವ ದುಷ್ಕರ್ಮಿ ಎದೆ ಮತ್ತು ಹೊಟ್ಟೆಗೆ ಇರಿದಿದ್ದಾನೆ. ಈ ವೇಳೆ ರಮೇಶ್ ಭಾಂಡಗೆ ಪ್ರತಿರೋಧ ಒಡ್ಡಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ದೂರ ಓಡಿ ಹೋಗಲು ಪ್ರಯತ್ನಿಸಿದ್ದಾರೆ. ಆದರೂ ಬೆನ್ನತ್ತಿದ್ದ ದುಷ್ಕರ್ಮಿ ನಾಲ್ಕೈದು ಬಾರಿ ಚಾಕುವಿನಿಂದ ಇರಿದಿದ್ದಾನೆ. ಹತ್ಯೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಕೊಲೆ ಮಾಡಿರುವ ದುಷ್ಕರ್ಮಿ ಸ್ಥಳದಿಂದ ಪರಾರಿಯಾಗಿದ್ದಾನೆ‌.

ಹುಬ್ಬಳ್ಳಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ದೌಡಾಯಿಸಿದ ಡಿಸಿಪಿ ರಾಮರಂಜನ್ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಯ ಪತ್ತೆಗೆ ಬಲೆಬೀಸಿದ್ದಾರೆ. ಹಾಡುಹಗಲೇ ನಡೆದಿರುವ ಭಯಾನಕ ಕೊಲೆ ಹುಬ್ಬಳ್ಳಿ ಜನರನ್ನು ಬೆಚ್ಚಿಬೀಳಿಸಿದೆ.
Published by: G Hareeshkumar
First published: November 25, 2020, 7:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories