Mandya to Malaysia: ಬಡವರ ಅನ್ನಕ್ಕೂ ಕನ್ನ: ಅನ್ನಭಾಗ್ಯದ ಅಕ್ಕಿ ಕದ್ದು ಮಲೇಷ್ಯಾಗೆ ಎಕ್ಸ್​ಪೋರ್ಟ್ ಮಾಡುತ್ತಿದ್ದ ಖದೀಮರು

ಅನ್ನ‌ಭಾಗ್ಯ ಯೋಜನೆಯಿಂದ ಉಚಿತವಾಗಿ ನೀಡುತ್ತಿರುವ ಅಕ್ಕಿಯನ್ನ ಕಾಳಧನಿಕರು ಪಾಲೀಶ್ ಮಾಡಿ ಹೊರ ದೇಶಕ್ಕೆ ಎಕ್ಸ್ ಪೋರ್ಟ್ ಮಾಡುತ್ತಿರುವಂತ ದುರಂತ ಘಟನೆ ಬೆಳಕಿಗೆ ಬಂದಿದೆ

ಅನ್ನಭಾಗ್ಯದ ಅಕ್ಕಿ

ಅನ್ನಭಾಗ್ಯದ ಅಕ್ಕಿ

 • Share this:
  ಮಂಡ್ಯ: ಬಡವರು ಹಸಿವಿನಿಂದ ನರಳಬಾರದು ಎಂದು ಸರ್ಕಾರ ಉಚಿತವಾಗಿ ಹಾಗೂ ಕಡಿಮೆ ದರದಲ್ಲಿ ಪಡಿತರ ವಿತರಣೆ ಮಾಡ್ತಿದೆ. ಆದ್ರೆ ಆ ಅನ್ನ‌ಭಾಗ್ಯ ಯೋಜನೆಯಿಂದ ಉಚಿತವಾಗಿ ನೀಡುತ್ತಿರುವ ಅಕ್ಕಿಯನ್ನ ಕಾಳಧನಿಕರು ಪಾಲೀಶ್ ಮಾಡಿ ಹೊರ ದೇಶಕ್ಕೆ ಎಕ್ಸ್ ಪೋರ್ಟ್ ಮಾಡುತ್ತಿರುವಂತ ದುರಂತ ಘಟನೆ ಬೆಳಕಿಗೆ ಬಂದಿದೆ ಈ ಕುರಿತು ಒಂದು ವರದಿ ಇಲ್ಲಿದೆ‌. ಮಂಡ್ಯದಲ್ಲಿ ಅಕ್ಕಿಗೆ ಪಾಲಿಷ್ ಮಾಡಿ ರಫ್ತು ಮಾಡುವ ಜಾಲ ಪತ್ತೆಯಾಗಿದೆ. ಲೋಡ್ ಗಟ್ಟಲೆ ಪಾಲಿಶ್ ಮಾಡಿರುವ ಅಕ್ಕಿ, ಮತ್ತೊಂದು ಕಡೆ ಮಲೇಷಿಯಾ ಹೆಸರಿನಲ್ಲಿ ಪಾಲೀಶ್ ಮಾಡಿರೋ ಅಕ್ಕಿ ತುಂಬಲು ಇರುವ ಚೀಲಗಳು. ಆದ್ರೆ ಇದ್ಯಾವುದೋ ರೈತರು ಬೆಳದ ಅಕ್ಕಿಯಲ್ಲ ಅಥವಾ ಹೊಸ ತಳಿಯ ಅಕ್ಕಿಯು ಅಲ್ಲ. ಬದಲಾಗಿ ಬಡವರಿಗಾಗಿ ಅನ್ನಭಾಗ್ಯ ಯೋಜನೆ ಮೂಲಕ ಉಚಿತವಾಗಿ ವಿತರಿಸುತ್ತಿರುವ ಅಕ್ಕಿ. ಬಡವರ ಮನೆ ಸೇರಬೇಕಿದ್ದ ಅಕ್ಕಿ ಯಾವೋದೋ ರೈಸ್ ಮಿಲ್ ಸೇರಿದೆ ಅಂತಾ ಯೋಚಿಸ್ತಿದ್ದೀರಾ.

  ಖಂಡಿತ ನಿಜ, ಇಂದು ಮಂಡ್ಯ ಜಿಲ್ಲೆಯ ಗೊರವಾಲೆ ಗ್ರಾಮದ ಜೈ ಮಾರುತಿ ಅಕ್ಕಿ ಗಿರಣಿಗೆ ಇಂದು 25 ಟನ್ ಅನ್ನ ಭಾಗ್ಯ ಅಕ್ಕಿಯನ್ನ ಎರಡು ಕ್ಯಾಂಟರ್ ಮೂಲಕ ಸಾಗಿಸಲಾಗಿತ್ತು‌. ಖಚಿತ ಮಾಹಿತಿ ಮೇರೆಗೆ ಮಂಡ್ಯ ತಾಹಸಿಲ್ದಾರ್ ಚಂದ್ರಶೇಖರ್ ಶಂಗಾಳಿ ನೇತೃತ್ವದಲ್ಲಿ ದಾಳಿ ನಡೆಸಿದ್ದು ಅನ್ನ ಭಾಗ್ಯ ಅಕ್ಕಿಯನ್ನ ನೋಡಿ ಶಾಕ್ ಆಗಿದ್ದಾರೆ. ಇನ್ನು ದಾಳಿ ವೇಳೆ ಕ್ಯಾಂಟರ್ ಚಾಲಕರಿಬ್ಬರು ಕ್ಯಾಂಟರ್ ಬಿಟ್ಟು ಪರಾರಿಯಾಗಿದ್ದು, ಶಿವಳ್ಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

  ಇದನ್ನೂ ಓದಿ: Independence Day 2021: ಧ್ವಜಸ್ತಂಭ ನಿಲ್ಲಿಸುವಾಗ ಅವಘಡ, ವಿದ್ಯುತ್ ತಗುಲಿ ವಿದ್ಯಾರ್ಥಿ ಸಾವು, ಇಬ್ಬರ ಸ್ಥಿತಿ ಚಿಂತಾಜನಕ

  ಇನ್ನು ಆ ಎರಡು ಕ್ಯಾಂಟರ್ ನಲ್ಲಿದ್ದ ಅಕ್ಕಿಯನ್ನ ಪರಿಶೀಲಿಸಲಾಗಿದ್ದು, ಅನ್ನಭಾಗ್ಯದ ಅಕ್ಕಿ ಎಂಬುದು ಖಚಿತವಾಗಿದೆ. ರೈಸ್ ಮಿಲ್ ಮಾಲೀಕರನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದು, ಮಂಡ್ಯದ ದಲ್ಲಾಳಿಯೊಬ್ಬರಿಂದ ಅನ್ನಭಾಗ್ಯ ಅಕ್ಕಿ ಸರಬರಾಜು ಆಗ್ತಿತ್ತು ಎಂದು ತಿಳಿದು ಬಂದಿದೆ. ಅಲ್ಲದೆ ಈ ಅನ್ನಭಾಗ್ಯ ಅಕ್ಕಿಯನ್ನ ಪಾಲೀಶ್ ಮಾಡಿ ಮಲೇಷಿಯಾ ಎಂಬ ಬ್ರ್ಯಾಂಡ್ ಮೂಲಕ ಅಕ್ಕಿ ಮಾರಾಟ ಮಾಡಲಾಗುತ್ತಿದ್ದು, ರೈಸ್ ಮಿಲ್ ನಲ್ಲೆ ಮಲೇಷಿಯಾ ಬ್ರ್ಯಾಂಡ್ ಚೀಲಗಳು ಸಹ ಪತ್ತೆಯಾಗಿದೆ. ಈ ಅನ್ನಭಾಗ್ಯ ಅಕ್ಕಿ ಕೇವಲ ರಾಜ್ಯ, ಹೊರರಾಜ್ಯವಲ್ಲದೆ,  ಹೊರದೇಶಗಳಿಗು ಸರಬರಾಜು ಮಾಡಲಾಗುತ್ತಿರುವ ಮಾಹಿತಿ ಕೂಡ ಲಭ್ಯವಾಗಿದ್ದು, ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲ ಮಂಡ್ಯದಲ್ಲಿ ಆಗಾಗ ಇಂತಹ ಘಟನೆ ಬೆಳಕಿಗೆ ಬರುತ್ತಲೆ ಇದ್ದು, ಜಿಲ್ಲಾಡಳಿತ ಕೂಡ ಗಂಭೀರವಾಗಿ ಪರಿಗಣಿಸಿದೆ..

  ಒಟ್ಟಾರೆ ಬಡವರ ಹೊಟ್ಟೆ ತುಂಬಿಸಬೇಕಿದ್ದ ಅನ್ನಭಾಗ್ಯದ ಅಕ್ಕಿ, ದಂಧೇಕೋರರ ಚಾಲಕಿ ತನದಿಂದ ವಿದೇಶಕ್ಕೆ ರಫ್ತಾಗುತ್ತಿರುವುದು ವಿಪರ್ಯಾಸವಾಗಿದ್ದು, ರಾಜ್ಯಾದ್ಯಂತ ನಡೆಯುತ್ತಿರುವ ಕಾಳಧನಿಕರ ಮೋಸ ಜಾಲವನ್ನ ಪತ್ತೆ ಹಚ್ಚಿ, ಕಠಿಣ ಕ್ರಮಕೈಗೊಳ್ಳಬೇಕಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

  (ವರದಿ: ಸುನೀಲ್ ಗೌಡ, ಮಂಡ್ಯ)
  Published by:Soumya KN
  First published: