ದುಷ್ಕರ್ಮಿಗಳ ಅಟ್ಟಹಾಸಕ್ಕೆ ಈರುಳ್ಳಿ, ಮೆಣಸಿನಕಾಯಿ ನಾಶ : ರೈತ ಕುಟುಂಬ ಕಂಗಾಲು

ಕಟಾವು ಮಾಡಿ ಕೂಡಿ ಹಾಕಿದ ಈರುಳ್ಳಿ ಮೇಲೆ ಟ್ರ್ಯಾಕ್ಟರ್ ಹರಸಿದ್ದರಿಂದ ಈರುಳ್ಳಿ ಹಾಳಾಗಿದೆ. ಮೆಣಸಿನಕಾಯಿ ಗಿಡಗಳು ನೆಲಕ್ಕುರುಳಿ ಮೆಣಸಿನಕಾಯಿ ಹಾಳಾಗಿವೆ.

ದುಷ್ಕರ್ಮಿಗಳು ಹಾಳು ಮಾಡಿರುವ ಈರುಳ್ಳಿ ಹಾಗೂ ಮೆಣಸಿನಕಾಯಿ

ದುಷ್ಕರ್ಮಿಗಳು ಹಾಳು ಮಾಡಿರುವ ಈರುಳ್ಳಿ ಹಾಗೂ ಮೆಣಸಿನಕಾಯಿ

  • Share this:
ಗದಗ(ನವೆಂಬರ್​. 05): ಅದ್ಯಾಕೋ ಗೋತ್ತಿಲ್ಲ ಉತ್ತರ ಕರ್ನಾಟಕ ರೈತರ ಹಣೆ ಬರಹವೇ ಸರಿಯಿಲ್ಲ. ಪ್ರವಾಹ, ನಿರಂತರ ಮಳೆ ಹೊಡೆತಕ್ಕೆ ರೈತ ಸಮುದಾಯದ ಬದುಕು ಮೂರಾಬಟ್ಟೆಯಾಗಿದೆ. ಆದರೆ, ಅಳಿದುಳಿದ ಬೆಳೆ ಉಳಿಸಿಕೊಳ್ಳಲು ರೈತರು ಹರಸಹಾಸ ಪಡುತ್ತಿದ್ದಾರೆ. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಹಾಲಕೇರಿ ಗ್ರಾಮದಲ್ಲಿ ಹಿಂದೆಂದೂ ನಡೆಯದ ಅಟ್ಟಹಾಸವನ್ನು ದುಷ್ಕರ್ಮಿಗಳು ಮೆರೆದಿದ್ದಾರೆ. ಯಾಕಂದ್ರೆ ನಿರಂತರ ಮಳೆಗೆ ಜಮೀನುಗಳಲ್ಲಿ ನೀರು ನಿಂತು ಎಲ್ಲ ಬೆಳೆಗಳು ಕೊಳೆತು ಹೋಗಿವೆ. ಆದರೆ, ಕೆಲ ಇಳಿಜಾರು ಜಮೀನುಗಳಲ್ಲಿ ಭರ್ಜರಿ ಬೆಳೆ ಬಂದಿತ್ತು. ಹಾಲಕೇರಿ ಗ್ರಾಮದ ಬಸವರಾಜ್ ಅಂಗಡಿ ಎಂಬ ರೈತ ಸಾಕಷ್ಟು ಸಾಲಸೋಲ ಮಾಡಿ ಗೊಬ್ಬರ ಹಾಕಿ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆದಿದ್ದಾನೆ. ಮೆಣಸಿನಕಾಯಿ ಹಾಗೂ ಈರುಳ್ಳಿ ಭರ್ಜರಿ ಫಸಲು ಬಂದಿದೆ.ಈಗಾಗಲೇ ಈರುಳ್ಳಿ ಕಟಾವು ಮಾಡಿ ಜಮೀನಿನಲ್ಲೇ ಹಾಕಿದ್ದಾರೆ. ಮೆಣಸಿನಕಾಯಿ ಗಿಡಗಳಲ್ಲೂ ಭರ್ಜರಿ ಮೆಣಸಿನಕಾಯಿ ಬಿಟ್ಟಿವೆ. ಆದರೆ, ಬೆಳಗಾಗುವುದರಲ್ಲಿ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆ ದುಷ್ಕರ್ಮಿಗಳು ಸರ್ವನಾಶ ಮಾಡಿದ್ದಾರೆ.

ಇಡೀ ಕುಟುಂಬ ಜಮೀನಿಗೆ ಆಗಮಿಸಿ ಈರುಳ್ಳಿ ಕಟಾವು ಮಾಡಿ ಹೋಗಿದ್ದಾರೆ. ಆದರೆ, ಬೆಳಗ್ಗೆ ಜಮೀನಿಗೆ ಬಂದು ನೋಡಿದ್ರೆ ಇಡೀ ಜಮೀನಿನಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಈರುಳ್ಳಿ, ಮೆಣಸಿನಕಾಯಿ ಗಿಡಗಳು ನೋಡಿ ಕಂಗಾಲಾಗಿದ್ದಾರೆ. ಕಟಾವು ಮಾಡಿ ಕೂಡಿ ಹಾಕಿದ ಈರುಳ್ಳಿ ಮೇಲೆ ಟ್ರ್ಯಾಕ್ಟರ್ ಹರಸಿದ್ದರಿಂದ ಈರುಳ್ಳಿ ಹಾಳಾಗಿದೆ. ಮೆಣಸಿನಕಾಯಿ ಗಿಡಗಳು ನೆಲಕ್ಕುರುಳಿ ಮೆಣಸಿನಕಾಯಿ ಹಾಳಾಗಿವೆ.

ಗ್ರಾಮದಲ್ಲಿ ಯಾರ ಮೇಲೂ ವೈರತ್ವ ಇಲ್ಲ. ಎಲ್ಲರ ಜೊತೆ ಚೆನ್ನಾಗಿ ಒಡನಾಡ ಇದೆ. ಆದರೆ, ಯಾರೂ ಈ ದುಷ್ಕಕೃತ್ಯ ಮಾಡಿದ್ದಾರೆ ಅಂತ ಗೋತ್ತಿಲ್ಲ ಅಂತ ರೈತ ಗೋಳಾಡುತ್ತಿದ್ದಾರೆ. ನಮ್ಮ ಮೇಲೆ ದ್ವೇಷ ಇದ್ರೆ ನೇರವಾಗಿ ಬಂದು ಜಗಳ ಮಾಡಲಿ. ಆದರೆ, ಭೂಮಿತಾಯಿ ಮೇಲೆ ಏಕೆ ಸಿಟ್ಟು ಅಂತ ಕಿಡಿಕಾರಿದ್ದಾರೆ.

ಇದನ್ನೂ ಓದಿ : ಪಾಠ ಮಾಡಬೇಕಾದ ಶಿಕ್ಷಕನಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪತ್ರದ ನಕಲು : ತಪ್ಪು ಮಾಡಿ ಟೀಕೆಗೆ ಗುರಿಯಾದ ಶಿಕ್ಷಕ

ಐದು ಎಕರೆ ಪ್ರದೇಶದಲ್ಲಿ ಬೆಳೆದ ಈರುಳ್ಳಿ, ಮೆಣಸಿನಕಾಯಿ ಬೆಲೆಯಿಂದ ಲಕ್ಷಾಂತರ ಲಾಭದ ನಿರೀಕ್ಷೆಯಲ್ಲಿ ಇದ್ದ ರೈತ‌ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ರಾತ್ರಿ ಜಮೀನಿನಲ್ಲಿ ಬೆಳೆ ಹಾನಿ ಮಾಡುವಾಗ ಪಕ್ಕದ ಜಮೀನಿನಲ್ಲಿ ‌ಟ್ರ್ಯಾಕ್ಟರ್ ಬೆಳಕು ಕಾಣಿಸಿದೆ. ಯಾರೋ ಬಂದರು ಅಂತ ಅರ್ಧಕ್ಕೆ ಬಿಟ್ಟು ಓಡಿ‌ ಹೋಗಿದ್ದಾರೆ. ಅನುಮಾನ ಬಂದು ಟ್ರ್ಯಾಕ್ಟರ್ ಸಮೇತ ಬೆನ್ನಟ್ಟಿದ್ದಾರೆ. ಆದರೆ, ದುಷ್ಕರ್ಮಿಗಳು ಮಾತ್ರ ಪರಾರಿ ಯಾಗಿದ್ದಾರೆ.

ಜಮೀನು ಸ್ಥಿತಿ ನೋಡಿ ಇಡೀ ಗ್ರಾಮವೇ ಮಮ್ಮಲ‌ ಮರಗುತ್ತಿದೆ. ರೈತರ ಬಾಳಿನ ಜೊತೆ ಚೆಲ್ಲಾಟವಾಡುವ ಇಂಥ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರೈತರು ಒತ್ತಾಯಿಸಿದ್ದಾರೆ. ಈ ಕುರಿತು ರೈತ ನರೇಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಕೂಡ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
Published by:G Hareeshkumar
First published: