ಕೊರೋನಾ ರೋಗಿಗಳ ಚಿಕಿತ್ಸೆಗೆ ಸಲಕರಣೆ ಖರೀದಿ ಕುರಿತು ಸಿಎಂ ಶ್ವೇತ ಪತ್ರ ಹೊರಡಿಸಲಿ : ಹೆಚ್. ಕೆ. ಪಾಟೀಲ್ ಆಗ್ರಹ

ರಾಜ್ಯ ಸರಕಾರದ ವೈಫಲ್ಯ ಮತ್ತು ಭ್ರಷ್ಟಾಚಾರಗಳನ್ನು ಕಾಂಗ್ರೆಸ್ ಪ್ರಸ್ತಾಪಿಸಿ ಜನರ ಮೂಲಕ ಸರಕಾರಕ್ಕೆ ನೋಟೀಸ್ ನೀಡಿದೆ. ಇದಕ್ಕೆ ಅವರು ಮೊದಲು ಉತ್ತರ ನೀಡಲಿ. ನಾವು ನಂತರ ಈ ನೋಟೀಸ್​ ಉತ್ತರ ನೀಡುತ್ತೇವೆ

ಹೆಚ್ ಕೆ ಪಾಟೀಲ್​

ಹೆಚ್ ಕೆ ಪಾಟೀಲ್​

  • Share this:
ವಿಜಯಪುರ(ಜು. 31): ಕೊರೋನಾ ರೋಗಿಗಳ ಚಿಕಿತ್ಸೆಗೆ ಸಲಕರಣೆ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. ಈ ಸಲಕರಣೆ ಖರೀದಿ ಕುರಿತು ಸಿಎಂ ಶ್ವೇತ ಪತ್ರ ಹೊರಡಿಸಲಿ ಎಂದು ಮಾಜಿ ಸಚಿವ ಹೆಚ್. ಕೆ. ಪಾಟೀಲ್ ಆಗ್ರಹಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೊರೋನಾ ಸೋಂಕಿತ 10 ಸಾವಿರ ಜನ ನಾಪತ್ತೆಯಾಗಿದ್ದಾರೆ. 24 ಗಂಟೆಗಳಲ್ಲಿ ಇದರ ಕುರಿತು ಉತ್ತರ ನೀಡಲಿ. ಅಲ್ಲದೇ, ಇದೆಲ್ಲದರ ನೈತಿಕ ಹೊಣೆ ಹೊತ್ತು ಸಿಎಂ ಬಿ. ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಅವರು ಆಗ್ರಹಿಸಿದರು.

ರಾಜ್ಯ ಸರಕಾರದ ವಿರುದ್ಧ ಮಾಡಿರುವ ಆರೋಪಗಳ ಹಿನ್ನೆಲೆಯಲ್ಲಿ ಪ್ರತಿಪಕ್ಷದ  ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಬಿಜೆಪಿ ನೀಡಿರುವ ನೋಟೀಸ್​ ಕುರಿತು ಮಾಜಿ ಸಚಿವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯ ಸರಕಾರದ ವೈಫಲ್ಯ ಮತ್ತು ಭ್ರಷ್ಟಾಚಾರಗಳನ್ನು ಕಾಂಗ್ರೆಸ್ ಪ್ರಸ್ತಾಪಿಸಿ ಜನರ ಮೂಲಕ ಸರಕಾರಕ್ಕೆ ನೋಟೀಸ್ ನೀಡಿದೆ. ಇದಕ್ಕೆ ಅವರು ಮೊದಲು ಉತ್ತರ ನೀಡಲಿ. ನಾವು ನಂತರ ಈ ನೋಟೀಸ್​ ಉತ್ತರ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ನಾವೂ ಕಾನೂನಾತ್ಮಕವಾಗಿಯೂ ಇದನ್ನು ಎದುರಿಸುತ್ತೇವೆ. ಬಿಜೆಪಿ ಸರಕಾರ ಮೊದಲು ನಾವು ಮಾಡಿರುವ ಆರೋಪಗಳ ಬಗ್ಗೆ ಹೈಕೋರ್ಟ್​ನಲ್ಲಿ ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ನಡೆಸಲಿ. ಇದಕ್ಕಾಗಿ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚಿಸಲಿ ಎಂದರು.

ಕೊರೋನಾ ಉಲ್ಬಣಿಸಿರುವ ಈ ಸಂದರ್ಭದಲ್ಲಿ ರೋಗಿಗಳ ನಿರ್ಲಕ್ಷ್ಯದ ಕುರಿತು ನಾನು ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದೇನೆ. ಇಂಥ ಪರಿಸ್ಥಿತಿಯಲ್ಲಿ ಮೌನ ಪ್ರೇಕ್ಷಕರಾಗದೆ ಕ್ರಮ ಕೈಗೊಳ್ಳಲು ಪತ್ರ ಬರೆದಿದ್ದೇನೆ. ಆಗಸ್ಟ್ 3 ಅಥವಾ 4 ರಂದು ಆಯೋಗದವರು ನನ್ನನ್ನು ಕರೆದಿದ್ದಾರೆ ಹೋಗುತ್ತೇನೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕೊರೋನಾ ಸಮುದಾಯಕ್ಕೆ ಹರಡಿದೆ. ಆದರೆ, ಸರಕಾರ ಮಾತ್ರ ಬೇರೆ ಬೇರೆ ಕಾರಣ ನೀಡಿ ಇದನ್ನು ಅಲ್ಲಗಳೆಯುತ್ತಿದೆ. ನಗರಕ್ಕ ಮಟ್ಟಕ್ಕೆ ಸೀಮಿತವಾಗಿದ್ದ ಕೊರೋನಾ ಈಗ ಗ್ರಾಮೀಣ ಮಟ್ಟಕ್ಕೂ ಹರಡಿದೆ. ಇದನ್ನು ಅಲ್ಲಗಳೆಯುವ ಬದಲು ಜನರಿಗೆ ಸೂಕ್ತ ಚಿಕಿತ್ಸೆ ನೀಡುವಂತಾಗಬೇಕು ಎಂದು ಅವರು ಆಗ್ರಹಿಸಿದರು.

ಇದನ್ನೂ ಓದಿ :  ಹೆಚ್​ಡಿಕೆ ಯಾರನ್ನೂ ಕದ್ದು ಭೇಟಿಯಾಗಿಲ್ಲ, ಯೋಗೇಶ್ವರ್ ಆರೋಪಕ್ಕೆ ಸಾಕ್ಷಿ ಇದೆಯಾ?; ಜೆಡಿಎಸ್ ರಾಷ್ಟ್ರಾಧ್ಯಕ್ಷರ ಪ್ರಶ್ನೆ

ಕೊರೋನಾ ಚಿಕಿತ್ಸೆಗೆ ನಾನಾ ಸಲಕರಣೆಗಳನ್ನು ಖರೀದಿಸಲಾಗಿದ್ದು, ಇದರಲ್ಲಿ 4,167 ಕೋಟಿ ರೂಪಾಯಿ ಅವ್ಯವಹಾರ ಆಗಿದೆ. ಹಣ ಸೋರಿಕೆಯಾಗಿದೆ. ಈ ಕುರಿತು ಅಧಿಕಾರಿಗಳೇ ಹೇಳುತ್ತಿದ್ದಾರೆ. ಈ ಕುರಿತು ಬಿಜೆಪಿ ಮಾಜಿ ಶಾಸಕ ಡಾ.ಸಾರ್ಭಭೌಮ ಬಗಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಆದರೂ ಸರಕಾರ ಲೆಕ್ಕ ನೀಡುತ್ತಿಲ್ಲ ಎಂದು ಹೆಚ್. ಕೆ. ಪಾಟೀಲ ಆರೋಪಿಸಿದರು.

ರಾಜ್ಯ ಸರಕಾರದ ಭ್ರಷ್ಟಾಚಾರದ ಕುರಿತು ಪುಸ್ತಕವನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಈವರೆಗೆ ಆರೋಪಕ್ಕೆ ನೀಡಲಾಗಿರುವ ದಾಖಲೆಗಳನ್ನು ಹಾಕಲಾಗಿದೆ.  ಈಗಲಾದರೂ ಲೆಕ್ಕ ಕೊಡಿ ಎಂದು ಹೆಚ್. ಕೆ. ಪಾಟೀಲ ಆಗ್ರಹಿಸಿದರು.
Published by:G Hareeshkumar
First published: