ಅತಿಹೆಚ್ಚು ಚಾರ್ಜ್​ಶೀಟ್ ಸಲ್ಲಿಕೆಯಾದ ಕೇಸ್; ಶೃಂಗೇರಿ ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ 42 ಮಂದಿ ಬಂಧನ

ಶೃಂಗೇರಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಕಾಮಾಂಧರ ಕೌರ್ಯ ಪ್ರಕರಣ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು ಪೊಲೀಸರು ಬರೋಬರಿ 30 ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಶೃಂಗೇರಿ ಪೊಲೀಸ್ ಠಾಣೆ

ಶೃಂಗೇರಿ ಪೊಲೀಸ್ ಠಾಣೆ

  • Share this:
ಚಿಕ್ಕಮಗಳೂರು: ಶೃಂಗೇರಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಕಾಮಾಂಧರ ಕ್ರೌರ್ಯ ಪ್ರಕರಣ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು ಪೊಲೀಸರು ಬರೋಬರಿ 30 ಚಾರ್ಜ್ ಶೀಟ್ ಸಲ್ಲಿಸಿದ್ದಾರೆ,  ಅಲ್ಲದೆ, 42 ಜನ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅದು ಜನವರಿ 30, 2021. ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಿಂದ ಚಿಕ್ಕಮಗಳೂರಿನ ಶೃಂಗೇರಿ ಠಾಣೆ, 16 ಅಪ್ರಾಪ್ತೆಯನ್ನ ಐದಾರು ತಿಂಗಳಿಂದ ಹತ್ತಾರು ಜನ ಬೇಕಾದಾಗೆಲ್ಲಾ ಹುರಿದು ಮುಕ್ಕಿದ್ದಾರೆಂದು ದೂರು ಬಂದಿತ್ತು. ಪ್ರಕರಣ ಬೆನ್ನತ್ತಿದ್ದ ಕಾಫಿನಾಡ ಖಾಕಿಗಳಿಗೆ ಅಪ್ರಾಪ್ತೆಯನ್ನ ಅತ್ಯಾಚಾರಗೈದವರ ಸಂಖ್ಯೆ ಕೇಳಿ ಶಾಕ್ ಆಗಿತ್ತು. ಅಪ್ರಾಪ್ತೆಯ ಚಿಕ್ಕಮ್ಮ ಎಂದು ಹೇಳಿಕೊಂಡಿದ್ದವಳೇ ಪ್ರಕರಣದ ಕೇಂದ್ರ ಬಿಂದುವಾಗಿದ್ಲು. ಯಾವಾಗ ಪೊಲೀಸರು ರೇಪಿಸ್ಟ್‍ಗಳ ಬೆನ್ನು ಬಿದ್ರೋ ಪ್ರಕರಣ ರಾಜಕೀಯದ ಹಾದಿಯನ್ನೂ ಹಿಡಿದಿತ್ತು. ಆದರೆ, ನಿಸ್ವಾರ್ಥ ತನಿಖೆಯ ಬೆನ್ನು ಬಿದ್ದ ಖಾಕಿಗಳು ಪೊಲಿಟಿಕಲ್ ಫೋನ್ ಕಾಲ್ಸ್‍ಗೆ ಕ್ಯಾರೆ ಅನ್ನದೆ 42 ಜನರನ್ನ ಬಂಧಿಸಿದ್ದಾರೆ. 30 ಚಾರ್ಜ್ ಶೀಟ್ ನ ಚಿಕ್ಕಮಗಳೂರಿನ ವಿಶೇಷ ಪೊಕ್ಸೋ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಎಫ್.ಐ.ಆರ್. ದಾಖಲಾದ 90 ದಿನದಲ್ಲಿ ಪೊಲೀಸರು ಚಾರ್ಜ್‍ಶೀಟ್ ಸಲ್ಲಿಸಿದ್ರೆ ಅವರ ಕೆಲಸ ಮುಗಿದಂತೆ. ಆದ್ರೆ, ಈ ಪ್ರಕರಣದಲ್ಲಿ ಮತ್ತಷ್ಟು ಚಾರ್ಜ್‍ಶೀಟ್ ಸಲ್ಲಿಕೆಯಾಗೋ ಸಾಧ್ಯತೆಯೂ ಇದೆ. ಕಾಫಿನಾಡ ಇತಿಹಾಸದಲ್ಲಿ ಒಂದೇ ಪ್ರಕರಣದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಚಾರ್ಜ್‍ಶೀಟ್ ಸಲ್ಲಿಸಿರೋ ಮೊದಲ ಕೇಸ್ ಕೂಡ ಇದೇ ಆಗಿದೆ.

ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಹೆಚ್ಚಾದಂತೆಲ್ಲಾ ಚಾರ್ಜ್‍ಶೀಟ್ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಐದು ತಿಂಗಳಲ್ಲಿ ಹಲವು ಬಾರಿ ಚಾರ್ಜ್‍ಶೀಟ್ ಸಲ್ಲಿಸಿರೋ ಕಾಫಿನಾಡ ಪೊಲೀಸರು ಈವರೆಗೆ 42 ಜನರನ್ನ ಬಂಧಿಸಿ, 30 ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಪ್ರಕರಣದ ತನಿಖೆ ಹಾದಿ ತಪ್ಪುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಶೃಂಗೇರಿಯಲಿ ಪ್ರತಿಭಟನೆ ಕೂಡ ನಡೆಸಲಾಗಿತ್ತು.  ಪ್ರಕರಣದಲ್ಲಿ ಬೇಕಾಬಿಟ್ಟಿ ವರ್ತಿಸಿದರು ಎಂಬ ಕಾರಣಕ್ಕೆ ಸಬ್‍ಇನ್ಸ್‍ಪೆಕ್ಟರ್ ವರ್ಗಾವಣೆ ಆಗಿದ್ರೆ, ಸರ್ಕಲ್ ಇನ್ಸ್‍ಪೆಕ್ಟರ್ ಅಮಾನತ್ತಾಗಿದ್ದರು. ಬಳಿಕ ತನಿಖೆಯ ನೊಗ ಹೊತ್ತಿದ್ದ ಎಎಸ್ಪಿ ಶೃತಿ ಈವರೆಗೆ 42 ಜನರನ್ನ ಬಂಧಿಸಿದ್ದಾರೆ.

ಇದನ್ನೂ ಓದಿ: ಉಗ್ರ ಹಫೀಜ್ ಮನೆ ಬಳಿ ಸ್ಫೋಟ ಪ್ರಕರಣ: ಭಾರತೀಯನ ಪಾತ್ರ ಇದೆ ಎಂದು ಪಾಕ್ ಆರೋಪ

ಒಟ್ಟಾರೆ, ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಶೃಂಗೇರಿ ಅಪ್ರಾಪ್ತೆಯ ಅತ್ಯಾಚಾರ ಪ್ರಕರಣವಂತು ಐದು ತಿಂಗಳು ಕಳೆದರೂ ಅಂತ್ಯ ಕಂಡಿಲ್ಲ. ತನಿಖಾಧಿಕಾರಿ ಎಎಸ್ಪಿ ಶೃತಿ ಅವರು ಶೃಂಗೇರಿಯಲ್ಲೇ ಬೀಡು ಬಿಟ್ಟಿದ್ದಾರೆ. ತನಿಖೆ ಇನ್ನೂ ಮುಗಿದಿಲ್ಲ. ಅಪ್ರಾಪ್ತೆಯನ್ನ ಅತ್ಯಾಚಾರಗೈದ ಎಲ್ಲಾ ಕೀಚಕರ ಶೋಧ ಕಾರ್ಯ ನಡೆಯುತ್ತಲೇ ಇದೆ. ಮತ್ತಷ್ಟು ಜನ ಅಂದರ್ ಆಗುವ ಸಾಧ್ಯತೆಯೂ ದಟ್ಟವಾಗಿದೆ. ಈ ಪ್ರಕರಣದಲ್ಲಿ ಇನ್ನೆಷ್ಟು ಜನ ಸಿಕ್ಕಿಬೀಳ್ತಾರೋ, ಯಾರ್ಯಾರಿದ್ದಾರೋ ಕಾದುನೋಡಬೇಕಿದೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ವೀರೇಶ್ ಹೆಚ್ ಜಿ
Published by:Vijayasarthy SN
First published: