ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ; ಮಗುವಿಗೆ ಜನ್ಮ ಕೊಡುವವರೆಗೂ ಬೆಳಕಿಗೆ ಬರದ ಪ್ರಕರಣ

ಅಪ್ರಾಪ್ತೆಯೊಬ್ಬಳು ಮಗುವಿಗೆ ಜನ್ಮ ನೀಡಿದ ಬಳಿಕ ಆಕೆ ನಿರಂತರ ಅತ್ಯಾಚಾರಕ್ಕೊಳಗಾಗಿ ಗರ್ಭವತಿಯಾಗಿದ್ದ ವಿಚಾರ ಬೆಳಕಿಗೆ ಬಂದಿದೆ. ಚಾಮರಾಜನಗರದ ಹೊಂಗಲವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಾಮರಾಜನಗರ(ಡಿಸೆಂಬರ್ 17): ಅಪ್ರಾಪ ವಯಸ್ಸಿನ ಬಾಲಕಿಯೊಬ್ಬಳು ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿರುವ  ಘಟನೆ ಚಾಮರಾಜನಗರ ತಾಲೋಕು ಹೊಂಗಲವಾಡಿ ಗ್ರಾಮದಲ್ಲಿ ನಡೆದಿದೆ. ಈಕೆಗೆ ಮನೆಯಲ್ಲೇ ಹೆರಿಗೆಯಾಗಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಈಕೆಯನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಹೊಂಗಲವಾಡಿ ಗ್ರಾಮದ ಈ ಬಾಲಕಿಗೆ ಕೇವಲ 17 ವರ್ಷ. ಈಕೆಯ ತಾಯಿ ಬುದ್ದಿಮಾಂದ್ಯೆ. ಬಾಲಕಿ ಕೂಲಿ ಕೆಲಸಕ್ಕೆಂದು ಸಿದ್ದಯ್ಯನಪುರದ ವ್ಯಕ್ತಿಗೆ ಸೇರಿದ ಜಮೀನಿಗೆ ಹೋಗುತ್ತಿದ್ದಾಗ ಅದೇ ಜಮೀನಿಗೆ ಬರುತ್ತಿದ್ದ ಉತ್ತುವಳ್ಳಿ ಗ್ರಾಮದ  ಸಿದ್ದರಾಜು ಎಂಬಾತನ ಪರಿಚಯವಾಗಿದೆ. ಬಾಲಕಿಯನ್ನು ಪುಸಲಾಯಿಸಿದ ಸಿದ್ದರಾಜು ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಇದರ ಪರಿಣಾಮ ಆಕೆ ಗರ್ಭಿಣಿಯಾಗಿದ್ದಾಳೆ.

ಬಾಲಕಿಯ ತಂದೆ ಕೆಲಸಕ್ಕೆಂದು ಪರ ಊರಿಗೆ ಹೋಗಿದ್ದು ವಾಗಲಾದರೊಮ್ಮೆ ಮನೆಗೆ ಬರುತ್ತಿದ್ದರು ಎನ್ನಲಾಗಿದೆ. ಇನ್ನು ತಾಯಿ ಬುದ್ದಿಮಾಂಧ್ಯೆ. ಹಾಗಾಗಿ ಮಗಳು ಗರ್ಭಿಣಿಯಾಗಿರುವ ವಿಷಯ ತಂದೆತಾಯಿಗೆ ಗೊತ್ತಾಗಿರಲಿಲ್ಲ. ತಾನು ಗರ್ಭಿಣಿಯಾಗಿರುವ ವಿಷಯವನ್ನು ಬಾಲಕಿ ಸಹ ಮುಚ್ಚಿಟಿದ್ದಾಳೆ. ಆದರೆ ನಿನ್ನೆ ಸಂಜೆ ಈಕೆಗೆ ಹೊಟ್ಟೆನೋವು ಕಾಣಿಸಿಕೊಂಡು ಒದ್ದಾಡಿದ್ದಾಳೆ. ನಂತರ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಪೋಷಕರು ವಿಚಾರಿಸಿದಾಗ ತಾನು ಅತ್ಯಾಚಾರಕ್ಕೆ ಒಳಗಾಗಿರುವ ವಿಷಯ ತಿಳಿಸಿದ್ದಾಳೆ.

ಇದನ್ನೂ ಓದಿ: ಸಿಐಡಿ ಡಿವೈಎಸ್​ಪಿ ಆತ್ಮಹತ್ಯೆ ಪ್ರಕರಣ; ಪೊಲೀಸರಿಂದ ಲಕ್ಷ್ಮೀ ಗೆಳೆಯರ ವಿಚಾರಣೆ

ಬಳಿಕ ಪೋಷಕರು ಬಾಲಕಿ ಹಾಗು ಮಗುವನ್ನು ಚಾಮರಾಜನಗರ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ಬಗ್ಗೆ ಚಾಮರಾಜನಗರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕಿಯಿಂದ ಹೇಳಿಕೆ ಪಡೆದಿದ್ದಾರೆ. ಉತ್ತುವಳ್ಳಿ ಗ್ರಾಮದ ಸಿದ್ದರಾಜು ಎಂಬಾತ ತಾನು ಕೂಲಿ ಕೆಲಸಕ್ಕೆಂದು ಹೋಗುತ್ತಿದ್ದಾಗ ನನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳಾ ಠಾಣೆಯ ಪೊಲೀಸರ ಮುಂದೆ ಬಾಲಕಿ ಹೇಳಿಕೆ ನೀಡಿದ್ದಾಳೆ.

Chamarajanagara Women Police Station
ಚಾಮರಾಜನಗರ ಮಹಿಳಾ ಪೊಲೀಸ್ ಠಾಣೆ


ಈಕೆಯ ಹೇಳಿಕೆ ಆಧಾರದ ಮೇಲೆ ಮಹಿಳಾ ಠಾಣೆ ಪೊಲೀಸ್ ಇನ್ಸ್​ಪೆಕ್ಟರ್ ಪುಟ್ಟಸ್ವಾಮಿ ಅವರು, ಆರೋಪಿ ಸಿದ್ದರಾಜುವನ್ನು ವಿಚಾರಣೆಗೆ ಗುರಿಪಡಿಸಲು ಮುಂದಾಗಿದ್ದಾರೆ. ಆದರೆ ವಿಷಯ ತಿಳಿಯುತ್ತಿದ್ದಂತೆ ಸಿದ್ದರಾಜು ನಾಪತ್ತೆಯಾಗಿದ್ದಾನೆ. ಸಿದ್ದರಾಜು ಪತ್ತೆಗೆ ಕ್ರಮಕೈಗೊಳ್ಳಲಾಗಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಇನ್ಸ್​​ಪೆಕ್ಟರ್ ಪುಟ್ಟಸ್ವಾಮಿ ತಿಳಿಸಿದ್ದಾರೆ.

ತಿಳಿಯದ ವಯಸ್ಸಿನಲ್ಲಿ ಒತ್ತಾಯಕ್ಕೆ ಕಟ್ಟು ಬಿದ್ದು ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿರುವ ಬಾಲಕಿ ಈಗ ಅತಂತ್ರಳಾಗಿದ್ದಾಳೆ. ಈಕೆಗೆ ಯಾವ ರೀತಿ ನ್ಯಾಯ ದೊರೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.

ವರದಿ: ಎಸ್.ಎಂ.ನಂದೀಶ್
Published by:Vijayasarthy SN
First published: