ಹಾವೇರಿ (ಮಾರ್ಚ್ 06): ಮಾಜಿ ಸಚಿವ ಬೆಳಗಾವಿಯ ಸಾಹುಕಾರ್ ಖ್ಯಾತಿಯ ರಮೇಶ್ ಜಾರಕಿಹೊಳಿ ಅವರ ಅಶ್ಲೀವ ವಿಡಿಯೋ ಇತ್ತೀಚೆಗೆ ಸಾಕಷ್ಟು ಸದ್ದು ಮಾಡಿತ್ತು. ಪರಿಣಾಮ ರಮೇಶ್ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಬಿಜೆಪಿ ಪಕ್ಷಕ್ಕೆ ತಪ್ಪಿಸಲಾಗದಷ್ಟು ಮುಜುಗರ ಉಂಟಾದದ್ದು ಸುಳ್ಳಲ್ಲ. ಇದರ ಬೆನ್ನಿಗೆ ಮತ್ತಷ್ಟು ಸಚಿವರ ಸಿಡಿ ಹೊರ ಬರಲಿದೆ ಎಂಬ ಗುಲ್ಲು ಎದ್ದಿತ್ತು. ಅಲ್ಲದೆ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಈ ಹಿಂದೆ ಸಿಎಂ ಯಡಿಯೂರಪ್ಪ ಅವರ ಸಿಡಿ ಸಹ ಇದೆ ಎಂದು ಬಾಂಬ್ ಸಿಡಿಸಿದ್ದರು. ಈ ಎಲ್ಲಾ ಊಹಾಪೋಹಗಳ ನಡುವೆ ಇದೀಗ ಎಚ್ಚೆತ್ತುಕೊಂಡಿರುವ ಆಡಳಿತರೂಢ ಬಿಜೆಪಿ ಪಕ್ಷದ ಸುಮಾರು 6 ಸಚಿವರು ತಮ್ಮ ವಿರುದ್ಧ ಯಾರೂ ಸಿಡಿ ವಿಡಿಯೋ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಿದ್ದಾರೆ. ಈ ವಿಚಾರ ಸಾರ್ವಜನಿಕ ವಲಯದಲ್ಲಿ ಇದೀಗ ಸಾಕಷ್ಟು ಚರ್ಚೆಗೂ ಕಾರಣವಾಗಿದೆ.
ಈ ವಿಚಾರವಾಗಿ ಹಾವೇರಿಯಲ್ಲಿ ಮಾತನಾಡಿರುವ ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ, "ರಮೇಶ್ ಜಾರಕಿಹೊಳಿ ಪ್ರಕರಣ ಆದ ಮೇಲೆ ಬಹಳಷ್ಟು ಊಹಾಪೋಹಗಳು, ಸಂಶಯಾಸ್ಪದ ಷಡ್ಯಂತ್ರಗಳು, ಪೂರ್ವಭಾವಿ ಹನಿಟ್ರ್ಯಾಪ್ ಸೇರಿದಂತೆ ಬಹಳಷ್ಟು ವಿಚಾರಗಳು ಚರ್ಚಗೆ ಬಂದಿವೆ. ಹೀಗಾಗಿ ಕೆಲವು ಸಚಿವರು, ಶಾಸಕರುಗಳ ತೇಜೋವಧೆ ಆಗೋ ಸಾಧ್ಯತೆಗಳು ಹೆಚ್ಚಿವೆ. ತೇಜೋವಧೆ, ವಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುವಂಥದ್ದು ಮತ್ತು ರಾಜಕೀಯವಾಗಿ ಅಸ್ಥಿರತೆಯನ್ನ ರಾಜ್ಯದಲ್ಲಿ ಮಾಡಬೇಕು ಅನ್ನೋ ಹಿನ್ನೆಲೆ ಕಂಡು ಕೆಲವರು ನ್ಯಾಯಾಂಗದ ರಕ್ಷಣೆ ಕೋರಿದ್ದಾರೆ.
ಅಲ್ಲದೆ, ರಮೇಶ್ ಜಾರಕಿಹೊಳಿ ಮೇಲೆ ದೂರು ಬಂದಿದೆ. ಅದರ ಆಧಾರದ ಮೇಲೆ ತನಿಖೆ ನಡಿತಿದೆ. ದೂರು ಕೊಟ್ಟವರು ಮಾಹಿತಿ ಕೊಡಬೇಕಾಗಿತ್ತು, ಆ ಮಹಿಳೆ ಬಂದು ಹೇಳಿಕೆ ಕೊಡಬೇಕಾಗಿತ್ತು, ಇದುವರೆಗೆ ಕೊಟ್ಟಿಲ್ಲ. ಇಂಥಾ ಕೇಸ್ನಲ್ಲಿ ಮುಂದೆ ಬಂದು ದೂರು ಕೊಡದಿರೋದು, ಹೇಳಿಕೆ ಕೊಡದಿರೋದು ಆಗದಿರೋ ಸಂದರ್ಭದಲ್ಲಿ ಷಡ್ಯಂತ್ರ ಸೇರಿದಂತೆ ಎಲ್ಲ ಸಂಶಯಗಳಿಗೆ ಕಾರಣವಾಗಿದೆ. ಹೀಗಾಗಿ ಕೆಲವರು ಕಾನೂನಿನ ರಕ್ಷಣೆ ತೆಗೆದುಕೊಳ್ತಿದ್ದಾರೆ. ಪೊಲೀಸರು ಸಹ ಎಲ್ಲ ಆಯಾಮಗಳಲ್ಲಿ ತನಿಖೆ ಮಾಡ್ತೀವಿ ಎಂದು ಹೇಳಿದ್ದಾರೆ.
ಇನ್ನು ಇದೇ ವೇಳೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಯವರ, 5 ಕೋಟಿ ಡೀಲ್ ಆಗಿದೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, "ಈ ವಿಷಯದಲ್ಲಿ ಹಲವಾರು ಜನರು ಹಲವಾರು ಹೇಳಿಕೆ ಕೊಟ್ಟಿದ್ದಾರೆ. ಕೆಲವರು ಹತ್ತೊಂಬತ್ತು ಜನ ಇದ್ದಾರೆ ಅಂತಿದ್ದಾರೆ. ಕೆಲವರು ಡೀಲ್ ಆಗಿದೆ ಅಂತಿದ್ದಾರೆ. ಎಲ್ಲ ವಿಚಾರಗಳನ್ನ ಗಮನಿಸಿದ್ದೇವೆ. ಎಲ್ಲೆಲ್ಲಿ ತನಿಖೆ ಮಾಡಬೇಕೋ ಅಲ್ಲಿ ಎಲ್ಲ ತನಿಖೆ ಮಾಡ್ತೀವಿ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆರೋಗ್ಯ ತಾಂತ್ರಿಕ ಸಲಹಾ ಸಮಿತಿಯ ಒಪ್ಪಿಗೆಯ ಬಳಿಕವೇ ಒಂದನೇ ತರಗತಿ ಆರಂಭ; ಸುರೇಶ್ ಕುಮಾರ್
ಇನ್ನು ದಿನೇಶ ಕಲ್ಲಹಳ್ಳಿ ಬಿಜೆಪಿ ಜೊತೆ ಗುರ್ತಿಸಿಕೊಂಡಿರೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ "ಎಲ್ಲಾರು ಯಾವ್ಯಾವ ಪಕ್ಷದಲ್ಲಿ ಇದ್ದಾರೆ ಯಾರಿಗೆ ಗೊತ್ತು. ಏನು ದೂರು ಕೊಟ್ಟಿದ್ದಾರೆ ಅದರ ಬಗ್ಗೆ ಎರಡು ಬಾರಿ ಕರೆದಿದ್ದೇವೆ. ಎರಡು ಬಾರಿ ಕರೆದಾಗಲೂ ಅವರು ಏನು ಹೇಳಿಕೆ ಕೊಟ್ಟಿದ್ದಾರೆ ಅನ್ನೋದು ಮಾಧ್ಯಮಗಳ ಮುಂದೆಯೆ ಇದೆ. ಅದರ ಆಧಾರದ ಮೇಲೆ ತನಿಖೆ ಮಾಡ್ತೇವೆ. ಅವರು ಯಾರ ಜೊತೆ ಗುರ್ತಿಸಿಕೊಂಡಿದ್ದಾರೆ ಅದು ನಮಗೆ ಸಂಬಂಧವಿಲ್ಲ" ಎಂದು ತಿಳಿಸಿದ್ದಾರೆ.
ಇನ್ನು ತಮ್ಮ ವಿರುದ್ಧ ಮಾಧ್ಯಮಗಳು ವರದಿ ಮಾಡಬಾರದು ಎಂದು ವಿನಂತಿಸಿ ಬಹುತೇಕ ಪ್ರಮುಖ ಮಾಧ್ಯಮಗಳನ್ನ ಪ್ರತಿವಾದಿಗಳನ್ನಾಗಿಸಿ, ರಾಜ್ಯದ ಆರು ಸಚಿವರು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ನಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಕಾರ್ಮಿಕ ಇಲಾಖೆ ಸಚಿವ ಶಿವರಾಮ್ ಹೆಬ್ಬಾರ್, ಕೃಷಿ ಸಚಿವ ಬಿ.ಸಿ. ಪಾಟೀಲ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಕೆ.ಸುಧಾಕರ್, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ತೋಟಗಾರಿಕೆ ಹಾಗೂ ಕ್ರೀಡಾ ಇಲಾಖೆ ಸಚಿವ ಕೆ.ಸಿ. ನಾರಾಯಣಗೌಡ ಮತ್ತು ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಬಸವರಾಜ್ ಸಿಟಿ ಸಿವಿಲ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಹಲವು ಸಚಿವರು ಹಾಗೂ ಶಾಸಕರು ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು. ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಂಡು ಹಲವು ಶಾಸಕರು ಸಚಿವರನ್ನ ಚಿಂತೆಗೀಡು ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ