ಕೊಡಗು: ಕೊಡಗು ಜಿಲ್ಲೆಯಲ್ಲಿ ರಣಭೀಕರ ಮಳೆ ಸುರಿಯುತ್ತಿರುವುದರಿಂದ ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿದಿದೆ. ಕುಸಿದ ಮಣ್ಣಿನ ಅಡಿಯಲ್ಲಿ ಕಣ್ಮರೆಯಾಗಿರುವ ಅರ್ಚಕರ ಕುಟುಂಬದ ರಕ್ಷಣಾ ಕಾರ್ಯಾಚರಣೆಗೆ ಮಳೆ ತೀವ್ರ ಅಡಚಣೆ ಉಂಟು ಮಾಡಿದೆ. ರಕ್ಷಣಾ ಕಾರ್ಯಾಚರಣೆ ಸ್ಥಳಕ್ಕೆ ಉಸ್ತುವಾರಿ ಸಚಿವ ವಿ ಸೋಮಣ್ಣ ಹರಸಾಹಸ ಪಟ್ಟು ಭೇಟಿ ನೀಡಿದ್ದರು.
ಮಡಿಕೇರಿಯಿಂದ ಬಾಗಮಂಡಲಕ್ಕೆ ಹೊರಟ ಸಚಿವ ಸೋಮಣ್ಣಗೆ ಕೊಟ್ಟೂರು ಬಳಿಯೇ ಕಾವೇರಿ ಪ್ರವಾಹ ಬ್ರೇಕ್ ಹಾಕಿತು. ಕೊಟ್ಟೂರಿನ ಸೇತುವೆ ಮೇಲೆ ಸುಮಾರು ಮೂರು ಅಡಿ ಎತ್ತರಕ್ಕೆ ಹರಿಯುತ್ತಿರುವ ಕಾವೇರಿ ಪ್ರವಾಹದ ನೀರಿನಲ್ಲಿ ಜೀಪ್ ಏರಿದ ಸಚಿವ ವಿ ಸೋಮಣ್ಣ ಬಾಗಮಂಡಲ ಕಡೆಗೆ ಹೊರಟರು. ಇವರೊಂದಿಗೆ ಸಂಸದ ಪ್ರತಾಪ್ ಸಿಂಹ ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ಅವರು ಸಹ ಪ್ರವಾಹದ ನೀರಿನಲ್ಲೇ ಜೀಪ್ ಮೂಲಕ ಬಾಗಮಂಡಲ ತಲುಪಿದರು. ಆದರೆ ಅಲ್ಲಿಯೂ ಬರೋಬ್ಬರಿ ಎಂಟು ಅಡಿ ಎತ್ತರಕ್ಕೆ ಹರಿಯುತ್ತಿರುವ ಪ್ರವಾಹದ ನೀರು ಮತ್ತೆ ಸೋಮಣ್ಣ ಮತ್ತು ತಂಡವನ್ನು ಹಿಡಿದು ನಿಲ್ಲಿಸಿತು. ಆದರೆ ಅದ್ಯಾವುದನ್ನು ಲೆಕ್ಕಿಸದ ಸಚಿವ ಸೋಮಣ್ಣ ಲೈಫ್ ಜಾಕೆಟ್ ಧರಿಸಿ ಪ್ರವಾಹದಲ್ಲೇ ಬೋಟ್ ಮೂಲಕ ಬಾಗಮಂಡಲ ತಲುಪಿದರು.
ಅಲ್ಲಿ ಮಾತನಾಡಿದ ಸಚಿವ ವಿ ಸೋಮಣ್ಣ, ಭೂ ಕುಸಿತ ಆಗಿರುವ ಸ್ಥಳಕ್ಕೆ ತಲುಪುವುದು ಸಾಹಸದ ಕೆಲಸವಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಸಬೇಕಾದರೆ ಜೆಸಿಬಿ ಅತ್ಯಗತ್ಯ. ಆದರೆ ಎಲ್ಲೆಡೆ ಪ್ರವಾಹ ಉಕ್ಕಿ ಹರಿಯುತ್ತಿರುವುದರಿಂದ ಜೆಸಿಬಿ ಬರಲು ಸಾಧ್ಯವಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಎನ್ಡಿಆರ್ಎಫ್ ತಂಡ ಎರಡು ಎಸ್ಡಿಆರ್ಎಫ್ ತಂಡಗಳಿವೆ. ಆದರೆ ಜೆಸಿಬಿ ಅಗತ್ಯವಾಗಿದೆ. ಜೊತೆಗೆ ಭಾರೀ ಗಾಳಿ ಮಳೆ ಮುಂದುವರೆದಿರುವುದರಿಂದ ರಕ್ಷಣಾ ಕಾರ್ಯಚರಣೆ ಸದ್ಯಕ್ಕೆ ಕಷ್ಟ ಎಂದರು.
ಇದನ್ನು ಓದಿ: ಬಸವಸಾಗರ ಜಲಾಶಯದಿಂದ 1.80 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ; ಜಲ ರೌದ್ರ ನರ್ತನದ ಚಿತ್ರಗಳು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ