ರಾಮನಗರ(ಜುಲೈ 01): ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಮನಗರ ಜಿಲ್ಲೆಯ SSLC ಪರೀಕ್ಷಾ ಕೇಂದ್ರಗಳಿಗೆ ಭೇಟಿ ಕೊಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಅವರು SSLC ಪರೀಕ್ಷೆ ವಿಚಾರದಲ್ಲಿ ಊಹಾಪೋಹಗಳು ಸೃಷ್ಟಿಯಾಗಿವೆ. ಮೌಲ್ಯಮಾಪನದ ವಿಚಾರದಲ್ಲಿ ಹಬ್ಬಿರುವ ಊಹಾಪೋಹ ಸುಳ್ಳು. ವಿದ್ಯಾರ್ಥಿಗಳ ಪ್ರತಿಭೆಗೆ ಯಾವುದೇ ತಿರಸ್ಕಾರ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪರೀಕ್ಷೆ ನಡೆಸುವ ಬಗ್ಗೆ ವಿರೋಧ ಪಕ್ಷದ ನಾಯಕರ ವಿರೋಧ ಇರಲಿಲ್ಲ. ನಾನು ಎಲ್ಲರ ಬಳಿ ಮಾತನಾಡಿದ್ದೆ. ಎಲ್ಲರೂ ಪರೀಕ್ಷೆಯ ಪರವಾಗಿದ್ದಾರೆ. ಆನ್ ಲೈನ್ ಶಿಕ್ಷಣದ ಬಗ್ಗೆ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ನಾವು ತಾತ್ಕಾಲಿಕವಾಗಿ ಮಾರ್ಗಸೂಚಿ ಸಿದ್ಧಪಡಿಸಿದ್ದೇವೆ. ತಜ್ಞರ ತಂಡವೂ ರಚನೆಯಾಗಿದೆ. ಶೀಘ್ರದಲ್ಲೇ ಸೂಕ್ತ ನಿರ್ಧಾರ ಪ್ರಕಟವಾಗುತ್ತೆ ಎಂದರು.
ಚನ್ನಪಟ್ಟಣದ ಬಾಲಕರ ಪ್ರೌಢಶಾಲೆಯ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವರು, ಕೋವಿಡ್ ಸೋಂಕಿತ ವಿದ್ಯಾರ್ಥಿಗಳಿಗೆ ಆಗಸ್ಟ್ನಲ್ಲಿ ಪರೀಕ್ಷೆ ನಡೆಯಲಿದೆ. ಅವರನ್ನ ಫ್ರೆಷರ್ಸ್ ಎಂದೇ ಪರಿಗಣಿಸಲಾಗುತ್ತದೆ ಎಂದೂ ಭರವಸೆ ನೀಡಿದರು.
ಇದನ್ನೂ ಓದಿ: ಕೊರೋನಾ ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ಊರ ಹೊರಗೆ ಎರಡು ಎಕರೆ ಜಮೀನು ಮೀಸಲು: ಶ್ರೀರಾಮುಲು
ಖಾಸಗಿ ಶಾಲೆಯ ಶಿಕ್ಷಕರಿಗೆ ಸಂಬಳದ ಕೊರತೆ ವಿಚಾರಕ್ಕೆ ಮಾತನಾಡಿದ ಅವರು, ಈ ಬಗ್ಗೆ ಹಲವು ವಿಚಾರಗಳು ಕೇಳಿಬಂದಿವೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯ ನಂತರ ಸೂಕ್ತ ನಿರ್ಧಾರ ಮಾಡಲಾಗುತ್ತೆ. ಆದರೆ ಯಾವ ಖಾಸಗಿ ಶಿಕ್ಷಣ ಸಂಸ್ಥೆಯೂ ಶಾಲಾ ಶುಲ್ಕವನ್ನ ಹೆಚ್ಚಿಸಬಾರದು. ಶಿಕ್ಷಕರನ್ನ ಕೆಲಸದಿಂದ ತೆಗೆಯಬಾರದು ಎಂದು ತಿಳಿಹೇಳಿದರು.
ಇನ್ನು, ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಸುರೇಶ್ ಕುಮಾರ್, ಲಾಕ್ ಡೌನ್ ಇರುವುದಿಲ್ಲ. ಅದರ ಬದಲು ಕೆಲ ಕಠಿಣ ಕ್ರಮಗಳನ್ನ ಕೈಗೊಳ್ಳಲಾಗುವುದು. ಆದರೆ ರಾಜ್ಯದ ಜನರಿಗೆ ಕೊರೋನಾ ವಿಚಾರದಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಮಾದರಿಯಾಗಿದ್ದಾರೆಂದು ಹೇಳಿದರು.
ವರದಿ: ಎ.ಟಿ. ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ