ಮೈಸೂರು (ಫೆಬ್ರವರಿ 22); ರಾಮ ಮಂದಿರಕ್ಕೆ ದೇಣಿಗೆ ನೀಡುವ ವಿಚಾರ ದೇಶದ ಎಲ್ಲಾ ಭಾಗಕ್ಕಿಂತ ಕರ್ನಾಟಕದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ದೇಣಿಗೆ ಕುರಿತ ಹೇಳಿಕೆಗಳಿಗೆ ಬಿಜೆಪಿ ನಾಯಕರು ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ಸಚಿವರುಗಳು ಸಿಡಿಮಿಡಿಗೊಂಡಿದ್ದಾರೆ. ಇಂದು ಮೈಸೂರಿನಲ್ಲಿ ಸಿದ್ದರಾಮಯ್ಯರ ದೇಣಿಗೆ ಹೇಳಿಕೆ ಕುರಿತು ಪ್ರತಿಕ್ರೀಯಿಸಿದ ಸಹಕಾರ ಇಲಾಖೆ ಸಚಿವ ಎಸ್.ಟಿ.ಸೋಮಶೇಖರ್. ಸಿದ್ದರಾಮಯ್ಯ ಅವರು ಸಹ ರಾಮಮಂದಿರಕ್ಕೆ ದೇಣಿಗೆ ಕೊಟ್ಟಿರುತ್ತಾರೆ, ಆದ್ರೆ ಬಹಿರಂಗವಾಗಿ ಹೇಳಲು ಹಿಂದೇಟು ಹಾಕುತ್ತಿರಬಹುದು ಅಂತ ವ್ಯಂಗ್ಯವಾಗಿ ಲೇವಡಿ ಮಾಡಿದ್ದಾರೆ.
ಮೈಸೂರಿನ ಚಾಮಂಡಿಬೆಟ್ಟಕ್ಕೆ ಭೇಟಿ ನೀಡಿದ್ದ ಸಚಿವ ಎಸ್.ಟಿ. ಸೋಮಶೇಖರ್, ರಾಮಮಂದಿರ ವಿಚಾರವಾಗಿ ದೇಣಿಗೆ ಬಗ್ಗೆ ಪ್ರಶ್ನಿಸಿರುವ ಸಿದ್ದರಾಮಯ್ಯರಿಗೆ ವ್ಯಂಗ್ಯವಾಗಿ ಕಾಲೇಳೆದಿದ್ದಾರೆ. ರಾಮಮಂದಿರಕ್ಕೆ ಸಿದ್ದರಾಮಯ್ಯ ಸಹ ದೇಣಿಗೆ ಕೊಟ್ಟಿರುತ್ತಾರೆ, ಆದ್ರೆ ಅದನ್ನ ಬಹಿರಂಗವಾಗಿ ಹೇಳಲು ಹಿಂದೇಟು ಹಾಕಿರುತ್ತಾರೆ ಅಷ್ಟೆ. ಯಾಕಂದ್ರೆ ಸರ್ಕಾರ ಸುಗಮವಾಗಿ ಸಾಗುತ್ತಿದೆ ಅವರಿಗೆ ಬೇರೆ ವಿಚಾರ ಮಾತನಾಡಲು ಸಿಗುತ್ತಿಲ್ಲ, ವಿರೋಧ ಪಕ್ಷದಲ್ಲಿದ್ದುಕೊಂಡುಸರ್ಕಾರದ ಬಗ್ಗೆ ಮಾತನಾಡಲೇಬೇಕು ಅದಕ್ಕಾಗಿ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಇವರೋಬ್ಬರೆ ಅಲ್ಲ ವಿಪಕ್ಷದ ಯಾರೋಬ್ಬರಿಗು ಮಾತನಾಡಲೂ ಏನೂ ಉಳಿದಿಲ್ಲವಾದ್ದರಿಂದ ಇಂತಹ ಹೇಳಿಕೆ ಕೊಡುತ್ತಿದ್ದಾರೆ, ಇದೇಲ್ಲವು ಬಾಯಿ ಚಪಲಕ್ಕೆ ಹೇಳುತ್ತಿರುವ ಹೇಳಿಕೆಗಳು ಎಂದು ತಿರುಗೇಟು ನೀಡಿದರು.
ಶ್ರೀರಾಮ ಮಂದಿರ ನಿರ್ಮಾಣಕ್ಕೆ ಯಾರೂ ಸಹ ಬಲವಂತವಾಗಿ ದೇಣಿಗೆ ಸಂಗ್ರಹಿಸುತ್ತಿಲ್ಲ, ರಾಜ್ಯ ಹಾಗೂ ದೇಶದ್ಯಾಂತ ಸಂಗ್ರಹವಾಗುತ್ತಿರುವ ಹಣದ ಒಂದೊಂದು ಪೈಸೆ ಸಹ ರಾಮಮಂದಿರಕ್ಕೆ ಉಪಯೋಗವಾಗಲಿದೆ. ಎಲ್ಲದಕ್ಕೂಲೆಕ್ಕವನ್ನು ಇಡಲಾಗಿದೆ, ಯಾರು ಬೇಕಾದ್ರು ಲೆಕ್ಕ ಪಡೆದುಕೊಳ್ಳಬಹುದು. ದೇಣಿಗೆ ಸಂಗ್ರಹಿಸಿದ ಮನೆಯ ಸಂಖ್ಯೆ, ಸಹಿ ಪಡೆದು, ಪ್ಯಾನ್ ಸಂಖ್ಯೆಯನ್ನು ನಮೂದಿಸಲಾಗುತ್ತಿದೆ.
ಸಂಪೂರ್ಣ ವ್ಯವವಸ್ಥಿತವಾಗಿ ರಾಮಮಂದಿರಕ್ಕೆ ಹಣ ಸಂಗ್ರಹಿಸಲಾಗುತ್ತಿದೆ. ವಿರೋಧ ಪಕ್ಷದವರು ಹೇಳಿದಂತೆ ಶ್ರೀರಾಮಮಂದಿರಕ್ಕೆ ನೀಡಿದ ದೇಣಿಗೆಯ ಹಣ ದುರುಪಯೋಗವಾಗಿಲ್ಲ, ಖಂಡಿತವಾಗಿಯೂ ದೇಣಿಗೆಯ ಲೆಕ್ಕ ಸಿಗಲಿದೆ ಎಂದು ಸಚಿವ ಎಸ್. ಟಿ.ಸೋಮಶೇಖರ್ ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ಸ್ವತಂತ್ರ್ಯ ಸಂಸದ ಮೋಹನ್ ಡೆಲ್ಕರ್ ಮುಂಬೈ ಹೋಟೆಲ್ನಲ್ಲಿ ಶವವಾಗಿ ಪತ್ತೆ; ಆತ್ಮಹತ್ಯೆ ಶಂಕೆ
ರಾಮನೆಂದರೆ ದೇಶದ ಜನರಲ್ಲಿ ಅಪಾರ ಭಕ್ತಿ ಗೌರವ ಇದೆ. ನಾವು ಮನೆಮನೆಗೆ ಹೋಗಿ ಹಣ ಕೇಳಿದಾಗ, ಯಾರೋಬ್ಬರು ಹಣ ಇಲ್ಲ ಅಂತ ಹೇಳಿಲ್ಲ, ಬದಲಿಗೆ ನಾವು ಕೇಳಿದಕ್ಕಿಂತ ಹೆಚ್ಚಿನ ಹಣ ಕೊಡ್ತಿದ್ದಾರೆ. ಸಿದ್ದರಾಮಯ್ಯ ಅವರು ಕೊಡೊಲ್ಲ ಅಂದ್ರೆ ಅವರದ್ದು ಒಂಥರ ಸಪರೇಟ್ ಇದ್ದಂಗೆ. ಆದ್ರೆ ಯಾರು ಸಹ ಮಂದಿರಕ್ಕೆ ಹಣ ಕೊಡೋಲ್ಲ ಅಂತ ಇವತ್ತಿನವರೆಗೆ ಹೇಳಿಲ್ಲ. ಜಾತಿ, ಮತ ಎನ್ನದೆ ಎಲ್ಲರು ಹಣ ನೀಡುತ್ತಿದ್ದು ಮಂದಿರಕ್ಕೆ ಸಂಗ್ರಹಿಸಿದ ಹಣ ಮಂದಿರ ಕಟ್ಟುವುದಕ್ಕೆ ಬಳಕೆಯಾಗಲಿದೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ