• Home
 • »
 • News
 • »
 • district
 • »
 • ಭೀಮಾತೀರ ಜನರ ಕುಂದು-ಕೊರತೆ ಆಲಿಸಿ, ನೊಂದವರಿಗೆ ನೆರವಾದ ಸಚಿವೆ ಶಶಿಕಲಾ ಜೊಲ್ಲೆ

ಭೀಮಾತೀರ ಜನರ ಕುಂದು-ಕೊರತೆ ಆಲಿಸಿ, ನೊಂದವರಿಗೆ ನೆರವಾದ ಸಚಿವೆ ಶಶಿಕಲಾ ಜೊಲ್ಲೆ

ಫಲಾನುಭವಿಗೆ ಪರಿಹಾರ ಪತ್ರ ವಿತರಿಸಿದ ಸಚಿವೆ ಶಶಿಕಲಾ ಜೊಲ್ಲೆ.

ಫಲಾನುಭವಿಗೆ ಪರಿಹಾರ ಪತ್ರ ವಿತರಿಸಿದ ಸಚಿವೆ ಶಶಿಕಲಾ ಜೊಲ್ಲೆ.

ಹಲವು ವರ್ಷಗಳಿಂದ ತ್ರಿಚಕ್ರ ವಾಹನ ಪಡೆಯಲು ಹೆಣಗುತ್ತಿದ್ದ ಖೈನೂರ ಗ್ರಾಮದ ವಿಕಲಚೇತನ ಸುನೀಲ ಅಗಸರ ಅಳಲನ್ನು ಕೇಳಿ ಸಚಿವೆ ಜೊಲ್ಲೆ ಭಾವುಕರಾದರು. ತನಗೆ ಎರಡೂ ಕಾಲುಗಳು ಇಲ್ಲದರಿಂದ ತ್ರಿಚಕ್ರ ವಾಹನಕ್ಕಾಗಿ, ಕಳೆದ ಕೆಲ ವರ್ಷಗಳಿಂದ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ತಾವಾದರೂ ತ್ರಿಚಕ್ರ ವಾಹನ ದೊರಕಿಸಿ, ಪುಣ್ಯಕಟ್ಟಿಕೊಳ್ಳಿ ಎಂದು ಸನೀಲ ಅಗಸರ ದೀನನಾಗಿ ವಿನಂತಿಸಿಕೊಂಡಾಗ, ಕ್ಷಣ ಹೊತ್ತು ಭಾವುಕರಾದ ಸಚಿವೆ ಜೊಲ್ಲೆ, ಕೂಡಲೇ ತ್ರಿಚಕ್ರ ವಾಹನ ವಿತರಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗೆ ಸೂಚಿಸಿದರು.

ಮುಂದೆ ಓದಿ ...
 • Share this:

  ವಿಜಯಪುರ: ಭೀಮಾ ಪ್ರವಾಹ ಹಾಗೂ ಕೊರೋನಾ ತೀವ್ರ ಸಂಕಷ್ಟದ ಬಳಿಕ ಜಿಲ್ಲೆಯ ಭೀಮಾತೀರದ ಸಿಂದಗಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು, ಸಾರ್ವಜನಿಕರಿಂದ ಕುಂದು ಕೊರತೆಗಳನ್ನು ಆಲಿಸಿ, 60 ಕ್ಕೂ ಹೆಚ್ಚು ಅಹವಾಲುಗಳನ್ನು ಸ್ಥಳದಲ್ಲಿಯೇ ಪರಿಹರಿಸಿ, ನೊಂದವರಿಗೆ ನೆರವಾದರು. ಪಟ್ಟಣದ ಸಾತವೀರೇಶ್ವರ ಸಭಾ ಭವನದಲ್ಲಿ ಹಮ್ಮಿಕೊಂಡ ಸಿಂದಗಿ ತಾಲೂಕಿನ ಸಾರ್ವಜನಿಕರ ಕುಂದು, ಕೊರತೆ ಸಭೆಯಲ್ಲಿ 120 ಕ್ಕೂ ಹೆಚ್ಚು ಜನರು ತಮ್ಮ ಅಹವಾಲನ್ನು ಸಲ್ಲಿಸಿದ್ದರು.


  ವಿಕಲಚೇತನರ ಮಾಸಾಶನ, ವೃದ್ದಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಹಲವು ಸಮಸ್ಯೆಗಳ ಅಹವಾಲನ್ನು ಸಮಾಧಾನ ಚಿತ್ತವಾಗಿ ಸಾರ್ವಜನಿಕರಿಂದ ಆಲಿಸಿದ ಸಚಿವೆ ಜೊಲ್ಲೆ ಅವರು, ಸಾರ್ವಜನಿಕರ ಕೆಲಸ ಕೂಡಲೇ ಮಾಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಇದರೊಂದಿಗೆ ಆಲಮೇಲ ತಾಲೂಕಿನಲ್ಲಿ ಸರ್ಕಾರಿ ಕಚೇರಿಗಳು ಪ್ರಾರಂಭಿಸುವುದು, ತೋಟಗಾರಿಕೆ ವಿಶ್ವ ವಿದ್ಯಾಲಯ ಸ್ಥಾಪನೆ, ಭೀಮಾ ಪ್ರವಾಹದಿಂದ ಜಲಾವೃತಗೊಂಡಿದ್ದ ತಾರಾಪುರ ಗ್ರಾಮ ಸ್ಥಳಾಂತರ ಮಾಡಿ, ಸಂತ್ರಸ್ತರಿಗೆ 9 ನಂಬರ್ ಪುಸ್ತಕದಡಿಯ ಜೆಎಂಸಿ ಪ್ರಕಾರ ಹಕ್ಕು ಪತ್ರ ವಿತರಣೆ, ಸಿಂದಗಿ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಅರೆಬರೆಯಾಗಿ ಉಳಿದಿರುವ ಚರಂಡಿ, ಗಟಾರನ್ನು ನಿರ್ಮಿಸಿ, ನೈರ್ಮಲ್ಯ ಕಾಪಾಡುವುದು, ರೈತರ ಹೊಲಗಳಿಗೆ ಹೋಗಲು ದಾರಿ ಸಮಸ್ಯೆಯ ತೊಡಕನ್ನು ನಿವಾರಿಸುವುದು, ಜಿಲ್ಲೆಯನ್ನು ಸಮಗ್ರ ನೀರಾವರಿಗೆ ಒಳಪಡಿಸಿ, ಕೃಷ್ಣ ಕೊಳ್ಳವನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಬೇಕು ಎನ್ನುವುದು ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಅಹವಾಲನ್ನು ಜನರು ಸಲ್ಲಿಸಿದರು. ಇದರಲ್ಲಿ 60 ಕ್ಕೂ ಹೆಚ್ಚು ಪ್ರಕರಣಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಿದರೆ, ಇನ್ನು ತಾಂತ್ರಿಕ ಕಾರಣಗಳಿಂದಾಗಿ ಇನ್ನುಳಿದ ಅಹವಾಲನ್ನು ಕೂಡಲೇ ಪರಿಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.


  ಈ ಸಂದರ್ಭ ಸಚಿವೆ ಶಶಿಕಲಾ ಜೊಲ್ಲೆ ಅವರು ಮಾತನಾಡಿ, ಭೀಮಾ ನದಿ ಉಕ್ಕಿ ಹರಿದ ಪರಿಣಾಮ ಸಿಂದಗಿ-ಇಂಡಿ ತಾಲೂಕಿನ ಅನೇಕ ಗ್ರಾಮಗಳು ನೆರೆ ಹಾವಳಿಗೆ ತುತ್ತಾಗಿ ನದಿ ಪಾತ್ರದಲ್ಲಿಯ ಹಳ್ಳಿಗಳ ಜನ ತೀವ್ರ ಸಂಕಷ್ಟಕ್ಕೀಡಾಗಿದ್ದರು. ಆಗ ನೆರೆಯಿಂದ ನಲುಗಿದ್ದ ಗ್ರಾಮಗಳಿಗೆ ನಾನೇ ಖುದ್ದು ಅಧಿಕಾರಿಗಳ ಜೊತೆ ಭೇಟಿಕೊಟ್ಟು ಪರಿಶೀಲನೆ ನಡೆಸಿ, ಹಾನಿಯ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದೆ. ಈ ಸಂಬಂಧ ಸರ್ಕಾರ ಹಂತಹಂತವಾಗಿ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕ್ರಮ ಕೈಗೊಂಡಿರುವೆ ಎಂದರು.


  ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಜಿಪಂ ಸಿಇಒ ಗೋವಿಂದ್ ರೆಡ್ಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ ಅರಿಸಿದ್ದಿ, ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ, ರಾಜ್ಯ ಲಿಂಬೆ ಬೆಳೆಗಾರರ ನಿಗಮದ ರಾಜ್ಯಾಧ್ಯಕ್ಷ ಅಶೋಕ ಅಲ್ಲಾಪುರ, ಡಿವೈಎಸ್ಪಿ ಶ್ರೀಧರ ದೊಡ್ಡಿ ಇದ್ದರು.


  ಇದನ್ನು ಓದಿ: ಕುಂದುಕೊರತೆ ನೀಗಿಸಿಕೊಂಡ ಜನ; ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಜೈ ಅಂದ ಸಿಂದಗಿ ನಾರಿಯರು!


  ಪ್ರತಿಭಟನಾಕರರಿಗೆ ಸಚಿವರ ಸ್ಪಂದನೆ


  ತಳವಾರ, ಪರಿವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ವಿತರಿಸುವಂತೆ ಆಗ್ರಹಿಸಿ ಇಲ್ಲಿನ ಸಭಾ ಭವನದ ಹೊರಗಡೆ ತಲೆ ಮೇಲೆ ಕಲ್ಲು ಹೊತ್ತಿಕೊಂಡು, ಪ್ರತಿಭಟನೆಗೆ ಮುಂದಾಗಿದ್ದ ಪ್ರತಿಭಟನಾಕರರ ಹತ್ತಿರ ತೆರಳಿದ ಸಚಿವೆ ಶಶಿಕಲಾ ಜೊಲ್ಲೆ, ಅವರ ಅಹವಾಲನ್ನು ಆಲಿಸಿ, ಪ್ರತಿಭಟನಾಕಾರರ ಬೇಡಿಕೆ ಈಡೇರಿಕೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ಭರವಸೆ ನೀಡಿದ ಹಿನ್ನೆಲೆ, ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದರು.


  ಭಾವುಕರಾದ ಸಚಿವೆ ಜೊಲ್ಲೆ


  ಹಲವು ವರ್ಷಗಳಿಂದ ತ್ರಿಚಕ್ರ ವಾಹನ ಪಡೆಯಲು ಹೆಣಗುತ್ತಿದ್ದ ಖೈನೂರ ಗ್ರಾಮದ ವಿಕಲಚೇತನ ಸುನೀಲ ಅಗಸರ ಅಳಲನ್ನು ಕೇಳಿ ಸಚಿವೆ ಜೊಲ್ಲೆ ಭಾವುಕರಾದರು.
  ತನಗೆ ಎರಡೂ ಕಾಲುಗಳು ಇಲ್ಲದರಿಂದ ತ್ರಿಚಕ್ರ ವಾಹನಕ್ಕಾಗಿ, ಕಳೆದ ಕೆಲ ವರ್ಷಗಳಿಂದ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ತಾವಾದರೂ ತ್ರಿಚಕ್ರ ವಾಹನ ದೊರಕಿಸಿ, ಪುಣ್ಯಕಟ್ಟಿಕೊಳ್ಳಿ ಎಂದು ಸನೀಲ ಅಗಸರ ದೀನನಾಗಿ ವಿನಂತಿಸಿಕೊಂಡಾಗ, ಕ್ಷಣ ಹೊತ್ತು ಭಾವುಕರಾದ ಸಚಿವೆ ಜೊಲ್ಲೆ, ಕೂಡಲೇ ತ್ರಿಚಕ್ರ ವಾಹನ ವಿತರಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗೆ ಸೂಚಿಸಿದರು.

  Published by:HR Ramesh
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು