HOME » NEWS » District » MINISTER SHASHIKALA JOLLE MOTHER WAS DIED AT AGE 84 RHHSN

ತಾಯಿ ಅಗಲಿಕೆ ನೋವು, ಅಮ್ಮನ ವಾತ್ಸಲ್ಯವನ್ನು ಬರಹದ ಮೂಲಕ ವ್ಯಕ್ತಪಡಿಸಿದ ಸಚಿವೆ ಶಶಿಕಲಾ ಜೊಲ್ಲೆ!

ಇವತ್ತು ಸಚಿವೆ ಶಶಿಕಲಾ ಜೊಲ್ಲೆಯವರು ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ, ತಮ್ಮ ಕುಟುಂಬವನ್ನ ಇಷ್ಟೊಂದು ಪ್ರೀತಿಯಿಂದ, ಅಕ್ಕರೆಯಿಂದ ನೋಡಿಕೊಳ್ಳಲು ಪತಿ ಅಣ್ಣಾ ಸಾಹೇಬರ ಸಹಕಾರವೂ ಬಹಳಷ್ಟಿದೆ. ನಾಡಿನ ಆಶಾಕಿರಣವಾಗಿರುವ ಈ ಕುಟುಂಬ ಇಂದು ಶೋಕ ಸಾಗರದಲ್ಲಿ ಮುಳುಗಿದೆ. ಆ ಎಲ್ಲ ದುಖ:ವನ್ನು ಭರಿಸುವ ಶಕ್ತಿ ಆ ಭಗವಂತ ಅವರಿಗೆ ದಯಪಾಲಿಸಲಿ.

news18-kannada
Updated:April 14, 2021, 7:48 PM IST
ತಾಯಿ ಅಗಲಿಕೆ ನೋವು, ಅಮ್ಮನ ವಾತ್ಸಲ್ಯವನ್ನು ಬರಹದ ಮೂಲಕ ವ್ಯಕ್ತಪಡಿಸಿದ ಸಚಿವೆ ಶಶಿಕಲಾ ಜೊಲ್ಲೆ!
ತಾಯಿ ಹಾಗೂ ಪತಿಯ ಜೊತೆಗಿರುವ ಸಚಿವೆ ಶಶಿಕಲಾ ಜೊಲ್ಲೆ.
  • Share this:
ಜೀವ- ಜೀವನ ರೂಪಿಸಿ ನನ್ನಮ್ಮ ತಿಳಿಸಿಕೊಟ್ಟ ಜೀವನ ಮೌಲ್ಯಗಳು ಅವರ ಮಾರ್ಗದರ್ಶನ, ಅವರ ನೆನಪು ಎಂದೆಂದಿಗೂ ನನ್ನ ಮನದಲ್ಲಿ ಚಿರಸ್ಥಾಯಿ.ನನ್ನ ಜೀವನದ ಸ್ಪೂರ್ತಿಯಾಗಿದ್ದ ನನ್ನಮ್ಮ ಇನ್ನು ನೆನಪು ಮಾತ್ರ. ಇದು ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆಯವರು ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಹೃದಯ ಸ್ಪರ್ಶಿ ಸಾಲುಗಳು. ಯುಗಾದಿ ಹಬ್ಬದ ದಿನವೇ ಸಚಿವೆ ಶಶಿಕಲಾ ಜೊಲ್ಲೆ ಅವರ ತಾಯಿ ನಿಧನವಾಗಿದ್ದಾರೆ. 84 ವರ್ಷದ ಸೇವಂತಾ ಹರದಾರೆ ವಯೋಸಹಜ ಕಾಯಿಲೆಗಳಿಂದ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.

ತಂದೆ- ತಾಯಿಯನ್ನು ದೇವರಂತೆ ಪೂಜಿಸುತ್ತಿದ್ದ ಸಚಿವೆ ಶಶಿಕಲಾ ಜೊಲ್ಲೆಯವರಿಗೆ ತಾಯಿ ಸೇವಂತಾ ಹರದಾರೆಯವರೆಂದರೆ ಎಲ್ಲಿಲ್ಲದ ಅಕ್ಕರೆ ಪ್ರೀತಿ. ಇಂದು ತಮಗೆ ದೊರೆತಿರುವ ಮಾನ -ಸನ್ಮಾನಗಳು ತಂದೆ -ತಾಯಿಯಿಂದಲೇ ಬಂದ ಬಳುವಳಿಗಳು ಎಂಬುದನ್ನು ಅವರು ಬಹುವಾಗಿ ನಂಬಿದ್ದರು. ಆ ಕಾರಣಕ್ಕಾಗಿ ಅವರು ತಂದೆ ತಾಯಿಗಳಲ್ಲಿಯೇ ದೇವರನ್ನು ಕಂಡಿದ್ದರು. ಅದರಂತೆ ಮಾತಾ -ಪಿತರನ್ನು ಪೂಜಿಸುತ್ತಿದ್ದರು. ಇವರದ್ದು ಮೂಲತ: ಗಡಿ ಗ್ರಾಮ. ಹಡಗಲ ಎನ್ನುವುದು ಇವರ ಸ್ವಂತ ಗ್ರಾಮ. ಮಧ್ಯಮ ವರ್ಗದ ಕುಟುಂಬ. ಸಚಿವೆ ಶಶಿಕಲಾ ಜೊಲ್ಲೆಯವರ ತಂದೆ ತಾಯಿಗೆ ಇಬ್ಬರು ಮಕ್ಕಳು. ಇಬ್ಬರೂ ಹೆಣ್ಣು ಮಕ್ಕಳೇ. ಅವರಲ್ಲಿ ಮೊದಲಿಗರು ಶಶಿಕಲಾ ಜೊಲ್ಲೆ. ಇವರ ತಂದೆ ಒಬ್ಬ ದ್ವಿತಿಯ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಅಥಣಿ, ಚಿಕ್ಕೋಡಿ, ನಿಪ್ಪಾಣಿ ಮುಂತಾದ ಊರುಗಳಲ್ಲಿ ಇವರು ಕಾರ್ಯ ನಿರ್ವಹಿಸಿದ್ದಾರೆ. ಶಶಿಕಲಾ ಅವರು ಹಿರಿಯ ಮಗಳಾಗಿದ್ದ ಕಾರಣ ತಂದೆ ಇವರನ್ನು ತುಂಬಾನೇ ಮುದ್ದಾಗಿ ಸಾಮಾಜಿಕ, ಕಳಕಳಿ, ದಾನ, ಧರ್ಮ, ಸಂಸ್ಕೃತಿ, ಎಲ್ಲವನ್ನೂ ಧಾರೆ ಎರೆದು ಓರ್ವ ಮಗನಂತೆ ಬೆಳೆಸುತ್ತಾರೆ. ಅಕ್ಕಸಾಲಿಗನ ಕೈಯಲ್ಲಿ ಸಿಕ್ಕ ಚಿನ್ನದ ಗಟ್ಟಿ ಫಳ ಫಳ ಹೊಳೆಯುವ ಆಭರಣವಾಗಿ ಹೇಗೆ ಹೊಳೆಯುತ್ತದೆಯೋ, ಹಾಗೆ ಸುಸಂಸ್ಕೃತಿ, ಧೈರ್ಯ ಎನ್ನುವುದು ತಂದೆ- ತಾಯಿಯರಿಂದಲೇ ಬಳುವಳಿಯಾಗಿ ಬರುತ್ತದೆ.

ಸಂಸದ ಅಣ್ಣಾ ಸಾಹೇಬ್ ಜೊಲ್ಲೆಯವರೊಂದಿಗೆ ಮದುವೆ

1980ರಲ್ಲಿ ಶಶಿಕಲಾ ಜೊಲ್ಲೆಯವರನ್ನು ಈಗಿನ ಸಂಸದರಾಗಿರುವ ಅಣ್ಣಾ ಸಾಹೇಬ್ ಜೊಲ್ಲೆಯವರಿಗೆ ಕೊಟ್ಟು ವಿವಾಹ ಮಾಡಲಾಗುತ್ತದೆ. ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡುತ್ತಿದ್ದ ಅಣ್ಣಾ ಸಾಹೇಬ್ ಜೊಲ್ಲೆಯವರ ಜೀವನದಲ್ಲಿ ಶಶಿಕಲಾ ಜೊಲ್ಲೆಯವರ ಪ್ರವೇಶವಾದ ಮೇಲೆ ಅವರ ಬದುಕಿನ ಗತಿಯೇ ಬದಲಾಗುತ್ತದೆ. ಓರ್ವ ಯಶಸ್ವೀ ಪುರುಷನ ಬೆನ್ನ ಹಿಂದೆ ಒಬ್ಬ ಮಹಿಳೆ ಇದ್ದೇ ಇರುತ್ತಾಳೆ ಎನ್ನುವುದಕ್ಕೆ ಅಣ್ಣಾ ಸಾಹೇಬ್ ಅವರ ಜೀವನವೇ ನಿದರ್ಶನವಾಗುತ್ತದೆ. ಶೈಕ್ಷಣಿಕ ಕ್ಷೇತ್ರದ ಜೊತೆ ಜೊತೆಯಲ್ಲಿ ಸಾಮಾಜಿಕ ರಾಜಕೀಯ ಕ್ಷೇತ್ರದಲ್ಲಿ ಪತಿಯ ಬೆಳವಣಿಗೆಗೆ ಹೆಗಲಿಗೆ ಹೆಗಲು ಕೊಟ್ಟು  ಶಶಿಕಲಾ ಜೊಲ್ಲೆ ಶ್ರಮಿಸುತ್ತಾರೆ. ಅದರ ಪ್ರತಿಫಲವಾಗಿ ಬೆಳಗಾವಿ ಭಾಗದಲ್ಲಿ ಅಣ್ಣಾ ಸಾಹೇಬ್ ಜೊಲ್ಲೆ ಓರ್ವ ದೊಡ್ಡ ರಾಜಕಾರಣಿಯಾಗಿ, ಓರ್ವ ಪರಿಪೂರ್ಣ ನಾಯಕನಾಗಿ ಬೆಳೆದು ನಿಲ್ಲುತ್ತಾರೆ. ಇಂದು ಅಣ್ಣಾಸಾಹೇಬ್ ಜೊಲ್ಲೆಯವರ ಸಾಮ್ರಾಜ್ಯ ನಿರ್ಮಾಣ ಕಾರ್ಯದಲ್ಲಿ ಸಚಿವೆ ಶಶಿಕಲಾ ಜೊಲ್ಲೆಯವರ ಪಾತ್ರ ತುಂಬಾನೆ ಹಿರಿದಿದೆ.

ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ

ಸಚಿವೆ ಶಶಿಕಲಾ ಜೊಲ್ಲೆಯವರಲ್ಲಿನ ಸ್ಪೂರ್ತಿ, ಅದಮ್ಯ ವಿಶ್ವಾಸ, ನಾಯಕತ್ವ ಗುಣ, ಧೈರ್ಯ, ಮಾತೃ ಹೃದಯ, ನಾಡಿನ ಜನರ ಬಗೆಗಿನ ಒಲವು, ಹಾಗೂ ಸೇವಾ ಮನೋಭಾವವನ್ನ ಸೂಕ್ಷ್ಮವಾಗಿ ಗಮನಿಸಿದ ಸಂಸದ ಅಣ್ಣಾ ಸಾಹೇಬರು ಪತ್ನಿಯನ್ನೂ ರಾಜಕೀಯ ಕ್ಷೇತ್ರಕ್ಕೆ ಕರೆ ತರುತ್ತಾರೆ. ಪತಿ ಇಟ್ಟ ನಂಬಿಕೆ, ಜನರ ಪ್ರೀತಿ ವಿಶ್ವಾಸವನ್ನ ಉಳಿಸಿ ಮತ್ತು ಗಳಿಸಿಕೊಂಡು ಹೋಗುವಲ್ಲಿ ಸಚಿವೆ ಶಶಿಕಲಾ ಜೊಲ್ಲೆಯವರು ಯಶಸ್ವಿಯಾಗಿದ್ದಾರೆ. ಜಗತ್ತನ್ನೆ ತಲ್ಲಣಗೊಳಿಸಿದ ಮಹಾಮಾರಿ ಕೊರೋನಾ ಸಂಕಷ್ಟದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಅವರ ಸ್ಪಂದನೆಯ ಸಿಹಿ, ಜನರ ಮನದಲ್ಲಿ ಇನ್ನೂ ಅಚ್ಚಳಿಯದೇ ಉಳಿದಿದ್ದು, ಸ್ಮರಣೀಯವಾಗಿದೆ. ರಾಜಕಾರಣ ಹಾಗೂ ರಾಜಕಾರಣಿಗಳು ಇಂದು ಸಂಪೂರ್ಣ ಕಲುಷಿತಗೊಂಡು, ವೈಯಕ್ತಿಕ ಸ್ವಾರ್ಥ ಸಾಧನೆಗಳಲ್ಲಿಯೇ ಮುಳುಗಿಕೊಂಡಿದ್ದಾರೆ ಎನ್ನುವ ಗಂಭೀರ ಆರೋಪಗಳ ಮಧ್ಯೆ, ಅಪರೂಪದ ಮಹಿಳಾ ರಾಜಕಾರಣಿ ಶಶಿಕಲಾ ಜೊಲ್ಲೆ ಅವರು ತಮ್ಮ ಮಾತೃ ಹೃದಯದೊಂದಿಗೆ, ಮಾನವೀಯ ಮೌಲ್ಯಗಳನ್ನಿಟ್ಟುಕೊಂಡು ಅಪ್ಪಟ ಜನಸೇವೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ, ಶಶಿಕಲಾ ಜೊಲ್ಲೆ ಏಕೈಕ ಮಹಿಳಾ ಸಚಿವೆಯಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿಯಾಗಿ, ತಮಗೆ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಿದ್ದಾರೆ.ಕೊರೋನಾ ಕಹಿಯಲ್ಲೂ ಸ್ಪಂದನೆಯ ಸಿಹಿ

ಗಡಿ ಭಾಗದ ನಿಪ್ಪಾಣಿಯಲ್ಲಿನ ತಮ್ಮ ಶಿವಶಂಕರ ಜೊಲ್ಲೆ ಸಿಬಿಎಸ್‌ಸಿ ಪಬ್ಲಿಕ್ ಸ್ಕೂಲ್ ಅನ್ನು ಕೋವಿಡ್ ಕೇರ್ ಸೆಂಟರನ್ನಾಗಿ ಮಾರ್ಪಡಿಸಿ, ಸಾವಿರಾರು ಜನರ ಜೀವ ಕಾಪಾಡಿದ್ದಾರೆ. ಅಂದಿನ ಕೋವಿಡ್ ವಿಷಮ ಘಳಿಗೆಯಲ್ಲಿ ಸಾರ್ವಜನಿಕರು ಚಿಕಿತ್ಸೆ ಪಡೆಯುವುದು ತುಂಬಾ ದುಸ್ತರವಾಗಿತ್ತು. ಅಂದು ಕೋವಿಡ್ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಕೊಲ್ಹಾಪುರ ಹಾಗೂ ಬೆಳಗಾವಿಗೆ ಹೋಗುವ ಪರಿಸ್ಥಿತಿ ಇದ್ದಾಗ, ಬಡ ಜನರು ಹಣವಿಲ್ಲದೆ ಕೋವಿಡ್ ಚಿಕಿತ್ಸೆ ಪಡೆಯಲು ಹೆಣಗುವಂತಾಗಿತ್ತು. ಇಂತಹ ಕಠಿಣ ಸ್ಥಿತಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಅವರು, ತಮ್ಮ ಜೊಲ್ಲೆ ಸಮೂಹ ಸಂಸ್ಥೆಯ ಎಲ್ಲ ಶಾಲಾ ಕಟ್ಟಡಗಳಲ್ಲಿ ಕೋವಿಡ್ ಆಸ್ಪತ್ರೆ ಸ್ಥಾಪಿಸಿ, ಗಡಿ ಭಾಗದ ಜನರ ಸೇವೆಗೆ ಮುಂದಾಗಿ, ಎಂತಹದೇ ಸಂಕಷ್ಟದ ಸಮಯದಲ್ಲಿ ತಾವು ಯಾವತ್ತೂ ಜನರೊಂದಿಗೆ ಇರುತ್ತೇನೆ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ. ಇದೇ ವೇಳೆ ಕೋವಿಡ್ ರೋಗಿಗಳ ಚಿಕಿತ್ಸಾ ದಾವಂತದಲ್ಲಿರುವ ಸ್ವತಃ ಸಚಿವೆ ಶಶಿಕಲಾ ಜೊಲ್ಲೆ ಸೇರಿದಂತೆ ಕುಟುಂಬ ಸದಸ್ಯರು ಕೂಡ ಕೋವಿಡ್ ಸೋಂಕಿಗೆ ತಗುಲಿದಾಗ, ಆತ್ಮಸ್ಥೈರ್ಯ, ಧೈರ್ಯದಿಂದ ಚಿಕಿತ್ಸೆ ಪಡೆದು ಗುಣಮುಖರಾದರು.

ಚಿಕಿತ್ಸಾ ವೆಚ್ಚದಲ್ಲಿನ ಹಣ ಮರು ಪಾವತಿ

ಇಲ್ಲಿನ ಕೋವಿಡ್ ಸೆಂಟರ್‌ನಲ್ಲಿ ಅಂದು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದರ ಜೊತೆಗೆ, ಬೆಡ್ ಸೇರಿದಂತೆ ಊಟೋಪಚಾರದ ವ್ಯವಸ್ಥೆ ಕೂಡ ಕಲ್ಪಿಸಲಾಗಿತ್ತು. ಕೊರೋನಾ ಕರಿ ನೆರಳಲ್ಲಿ, ಸಿಕ್ಕಿದ್ದೇ ಸೀರುಂಡೆ ಎನ್ನುವಂತೆ ಖಾಸಗಿ ಆಸ್ಪತ್ರೆಗಳು 3- 4 ಲಕ್ಷ ಎನ್ನುವಂತೆ ಕೈಗೆ ಬಂದಷ್ಟು ರೋಗಿಗಳ ಕುಟುಂಬಗಳಿಂದ ಪೀಕಿರುವ ಸಂದರ್ಭ, ಕೇವಲ 4,000, 5,000 ಸಾವಿರ ರೂ.ಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಅಲ್ಲದೆ ರೋಗಿಯ ಚಿಕಿತ್ಸಾ ವೆಚ್ಚದಲ್ಲಿ ಉಳಿದ ಹಣವನ್ನು ಮರು ಪಾವತಿಸಿ, ರೋಗಿಯ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿರುವುದು ಜೊಲ್ಲೆ ಕುಟುಂಬದ ಪುಣ್ಯದ ಕಾರ್ಯವಾಗಿದೆ.

ಸಾಮಾನ್ಯರಂತೆ ಚಿಕಿತ್ಸೆ ಪಡೆದ ಸಚಿವೆ ಜೊಲ್ಲೆ

ಕೋವಿಡ್ ವಿಷಮ ಘಳಿಗೆಯಲ್ಲಿ ಸ್ವತಃ ಸಚಿವೆ ಶಶಿಕಲಾ ಜೊಲ್ಲೆ ಅವರು ಕೋವಿಡ್‌ನಿಂದ ಬಾಧಿತಗೊಂಡಾಗ, ಅವರು ಕೂಡ ತಮ್ಮ ಕೋವಿಡ್ ಕೇರ್ ಸೆಂಟರ್‌ನಲ್ಲಿ ಅತಿ ಸಾಮಾನ್ಯರಂತೆ ಚಿಕಿತ್ಸೆ ಪಡೆದಿದ್ದಾರೆ. ಸಾಮಾನ್ಯ ಜನರಿಗೆ ನೀಡಲಾಗುತ್ತಿದ್ದ ಊಟೋಪಚಾರವನ್ನೇ ತಾವು ಪಡೆದುಕೊಂಡು, ಇಲ್ಲಿನ ಕೇರ್ ಸೆಂಟರ್ ಹಮ್ಮಿಕೊಂಡಿದ್ದ ಧ್ಯಾನ, ಯೋಗ, ಕ್ರೀಡಾ ಚಟುವಟಿಕೆಗಳಲ್ಲಿ ಸಚಿವರೂ ಪಾಲ್ಗೊಂಡು, ಕೋವಿಡ್ ಸೋಂಕನ್ನು ಗೆದ್ದು ಬಂದಿದ್ದಾರೆ.

ಮಾತೃ ಹೃದಯಿ ಮಮತಾಮಯಿ ಸಚಿವೆ ಶಶಿಕಲಾ ಜೊಲ್ಲೆ

ಕೇವಲ ನಾಡಿನ ಜನರ ಸೇವೆ ಮಾತ್ರವಲ್ಲದೇ ಸಚಿವೆ ಶಶಿಕಲಾ ಜೊಲ್ಲೆಯವರು ಕುಟುಂಬಕ್ಕೂ ಅಷ್ಟೇ ಸಮಯ ಮತ್ತು ಪ್ರೀತಿಯನ್ನ ಧಾರೆ ಎರೆಯುತ್ತಿದ್ದರು. ದಶಕಗಳ ಹಿಂದೆ ತಂದೆ ಕ್ಯಾನ್ಸರ್ ನಿಂದ ಸಾವಿಗೀಡಾದಾಗ ಸಚಿವರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಅಂದಿನಿಂದ ಸಹೋದರಿ ಮನೆಯಲ್ಲಿದ್ದ ತಾಯಿ ಸೇವಂತಾ ಹರದಾರೆಯವರನ್ನ ಮಗುವಿನಂತೆ ಅಕ್ಕರೆಯಿಂದ ನೋಡಿಕೊಂಡಿದ್ದಾರೆ. ಕಳೆದ 15 ದಿನಗಳ ಹಿಂದೆ 84 ವರ್ಷದ ಮಹಾತಾಯಿ ಸೇವಂತಾ ಹರದಾರೆ ವಯೋಸಹಜ ಕಾಯಿಲೆ ಇಂದ ಕೊಲ್ಲಾಪುರದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಗ ಸ್ವತ: ಇವರೇ ಹೋಗಿ ತಾಯಿಯನ್ನ ಆಸ್ಪತ್ರೆಗೆ ಅಡ್ಮಿಟ್ ಮಾಡಿ ಬಂದಿದ್ದಾರೆ. ಸರ್ಕಾರದಲ್ಲಿ ಓರ್ವ ಸಚಿವೆಯಾಗಿ ಬಿಡುವಿಲ್ಲದ ಕೆಲಸ, ಒಂದು ಕಡೆ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಮಹಿಳಾ ವಿಭಾಗದ ಉಸ್ತುವಾರಿ ಇವರ ಹೆಗಲ ಮೇಲಿದೆ. ಪ್ರಚಾರದ ಹೊಣೆಯ ಜೊತೆಗೆ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಹೀಗೆ ರಾಜ್ಯದ ಮೂಲೆ ಮೂಲೆಗಳಲ್ಲಿ ನಡೆಯುವ ಇಲಾಖೆಯ ಕಾರ್ಯಕ್ರಮಗಳಿಗೆ ಹಾಜರಾಗಿದ್ದಾರೆ. ಇದರ ಜೊತೆಗೆ ಅನಾರೋಗ್ಯ ಪೀಡಿತ ತಾಯಿಯ ಆರೈಕೆಯನ್ನೂ ಸದ್ದಿಲ್ಲದೆ ಮಾಡಿದ್ದಾರೆ. ಎಲ್ಲಾ ಕಾರ್ಯಕ್ರಮಗಳನ್ನು ಮುಗಿಸಿ ಕೊಲ್ಲಾಪುರಕ್ಕೆ ಹೋಗಿ ತಾಯಿಯ ಆರೈಕೆ ಮಾಡಿ ಮರಳಿ ಮತ್ತೆ ತಮ್ಮ ಕಾರ್ಯದಲ್ಲಿ ತಾವು ಮಗ್ನರಾಗಿರುತ್ತಿದ್ದರು. ಆದರೆ ಎಲ್ಲೂ ತಮ್ಮ ತಾಯಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯುತ್ತ ಬೆಡ್ ಮೇಲೆ ಮಲಗಿದ್ದಾರೆ ಎಂಬುದನ್ನ ತೋರ್ಪಡಿಸಿಲ್ಲ. ರಾಜ್ಯದ ಓರ್ವ ಸಚಿವೆ ಹೀಗೆ ಬಿಡುವಿಲ್ಲದ ಸಮಯದಲ್ಲಿ ತಾಯಿಯ ಸೇವೆ ಮಾಡಿದ ರೀತಿ ಎಂಥ ಕಲ್ಲು ಹೃದಯದವರನ್ನೂ ಕರಗಿಸುವಂತಿತ್ತು.

ಇದಲ್ಲವೇ ಓರ್ವ ಮಹಿಳೆಗಿರಬೇಕಾದ ಧೈರ್ಯ. ಸಂಘಟನಾ ಚಾತುರ್ಯವೆಂದರೆ. ಇಂದು ತುಂಬಾನೇ ಅಗಾಧವಾಗಿ ಪ್ರೀತಿಸುತ್ತಿದ್ದ ತಾಯಿಯನ್ನು ಕಳೆದುಕೊಂಡು ಅವರಿಗಾಗಿರುವ ನೋವು, ಸಂಕಟ ಅಷ್ಟಿಷ್ಟಲ್ಲ. ಅದು ಅವರ ಬರವಣಿಗೆಯಲ್ಲಿಯೇ ಗೋಚರಿಸುತ್ತಿದೆ ಜನ್ಮ ನೀಡಿದ ತಾಯಿಯನ್ನ ತಮ್ಮ ಮಗಳಂತೆ ನೋಡಿಕೊಂಡ ಮಾತೃ ಹೃದಯಿ ಶ್ರೀಮತಿ ಶಶಿಕಲಾ ಜೊಲ್ಲೆಯವರು. ಎಲ್ಲಕ್ಕಿಂತ ಮುಖ್ಯವಾಗಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆಯವರು ಅತ್ತೆಯವರನ್ನ ತಾಯಿಯಂತೆ ಕಂಡಿದ್ದರು. ಇವತ್ತು ಸಚಿವೆ ಶಶಿಕಲಾ ಜೊಲ್ಲೆಯವರು ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ, ತಮ್ಮ ಕುಟುಂಬವನ್ನ ಇಷ್ಟೊಂದು ಪ್ರೀತಿಯಿಂದ, ಅಕ್ಕರೆಯಿಂದ ನೋಡಿಕೊಳ್ಳಲು ಪತಿ ಅಣ್ಣಾ ಸಾಹೇಬರ ಸಹಕಾರವೂ ಬಹಳಷ್ಟಿದೆ. ನಾಡಿನ ಆಶಾಕಿರಣವಾಗಿರುವ ಈ ಕುಟುಂಬ ಇಂದು ಶೋಕ ಸಾಗರದಲ್ಲಿ ಮುಳುಗಿದೆ. ಆ ಎಲ್ಲ ದುಖ:ವನ್ನು ಭರಿಸುವ ಶಕ್ತಿ ಆ ಭಗವಂತ ಅವರಿಗೆ ದಯಪಾಲಿಸಲಿ.
Published by: HR Ramesh
First published: April 14, 2021, 7:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories