ವಿಜಯಪುರ (ಫೆ:24): ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರಣ ಸಬಲೀಕರಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರ ಉಪಸ್ಥಿತಿಯಲ್ಲಿ ಇದೇ ಪ್ರಥಮ ಬಾರಿಗೆ ಜಿಲ್ಲೆಯ ಸಿಂದಗಿಯಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಕುಂದುಕೊರತೆ ಸಭೆಗೆ ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಮತ್ತು ಸ್ಪಂದನೆ ದೊರೆತಿದೆ.
ಸಿಂದಗಿ ಸಾತವಿರೇಶ್ವರ ಸಭಾಂಗಣದಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ದೀಪ ಬೆಳಗಿಸಿ ಮಾತನಾಡಿ, ಕೊರೋನಾ ಹಿನ್ನೆಲೆಯಲ್ಲಿ ಸ್ವಲ್ಪ ವಿಳಂಬವಾಗಿದ್ದರೂ ಕೂಡ ಜಿಲ್ಲೆಯ ತಾಲೂಕುವಾರು ಸಾರ್ವಜನಿಕ ಕುಂದುಕೊರತೆ ಸಭೆಗಳನ್ನು ಹಮ್ಮಿಕೊಳ್ಳುವ ದಿಸೆಯಲ್ಲಿ ಇದೇ ಪ್ರಥಮ ಬಾರಿಗೆ ಸಿಂದಗಿಯಲ್ಲಿ ಕುಂದುಕೊರತೆ ಸಭೆಯನ್ನು ಏರ್ಪಡಿಸಲಾಗಿದೆ. ಮಹಿಳೆಯರು, ಹಿರಿಯ ನಾಗರೀಕರು, ವಿಶೇಷ ಚೇತನರು, ರೈತರು ಸೇರಿದಂತೆ ಎಲ್ಲಾ ವರ್ಗದ ಜನರಿಂದ ಕುಂದುಕೊರತೆ ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ ಸುಮಾರು 76 ಅರ್ಜಿಗಳಿಗೆ ತಕ್ಷಣ ಪರಿಹಾರ ಕಲ್ಪಿಸಿದ್ದು, ಇನ್ನುಳಿದ ಅರ್ಜಿಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಸರ್ಕಾರವನ್ನೇ ಜನರ ಹತ್ತಿರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ರೂಪಿಸಿ ಬಡವರ, ರೈತರ, ವಿಕಲಚೇತನರ ಹಾಗೂ ಹಿರಿಯ ನಾಗರೀಕರು, ಮಹಿಳೆಯರು ಮತ್ತು ಮಕ್ಕಳ ಜೀವನವನ್ನು ಸುಧಾರಿಸುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಅಧಿಕಾರಿಗಳು ಸಹಕಾರ ನೀಡುತ್ತಿದ್ದು, ಪ್ರತಿ ತಿಂಗಳು ಜಿಲ್ಲಾಧಿಕಾರಿಗಳು ಈ ಅರ್ಜಿಗಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸಲಿದ್ದಾರೆ ಎಂದು ಹೇಳಿದರು.
ಅತೀವೃಷಿ ಭೀಮಾ ಮತ್ತು ಡೋಣಿ ನದಿಗೆ ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರ ಸಮಸ್ಯೆಗಳನ್ನು ಪರಿಹರಿಸಲು ವಿಶೇಷ ಗಮನ ನೀಡಲಾಯಿತು. ಕೋವಿಡ್ ಹಿನ್ನೆಲೆ ಸ್ವಲ್ಪ ವಿಳಂಬವಾಗಿದ್ದರೂ ಸಾರ್ವಜನಿಕ ಕುಂದುಕೊರತೆಗಳಿಗೆ ಸ್ಪಂದಿಸಲು ಈ ಸಭೆ ಆಯೋಜಿಸಿದ್ದು ನಿರೀಕ್ಷೆಗೂ ಮೀರಿ ಸಾರ್ವಜನಿಕರು ಆಗಮಿಸಿ ತಮ್ಮ ಆಹವಾಲುಗಳನ್ನು ಸಲ್ಲಿಸಿದ್ದಾರೆ. ಸಮಸ್ಯೆಗಳ ಪರಿಹಾರಕ್ಕಾಗಿ ಇಲ್ಲಿಗೆ ಆಗಮಿಸಿದ್ದು ಅಲ್ಲಮಪ್ರಭು ವಚನ ಬೆಟ್ಟದ ನೆಲ್ಲಿಕಾಯಿ ಹಾಗೂ ಸಮುದ್ರದೊಳಗಿನ ಉಪ್ಪಿಗೂ ಎತ್ತಣದೆತ್ತಣ ಸಂಬಂಧವಯ್ಯಾ ಎಂದು ಹೇಳಿ ದೀನದಲಿತರ ಸಂಕಷ್ಟದಲ್ಲಿರುವ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಲು ತಾವು, ಅಧಿಕಾರಿಗಳು ಬಂದಿರುವುದಾಗಿ ಸಚಿವರು ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್, ರಸ್ತೆ, ಮನೆ ಸೇರಿದಂತೆ ಇನ್ನೀತರ ಸೌಕರ್ಯ ಕಲ್ಪಿಸುವ ದಿಸೆಯಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಬಡಜನರ ಸಮಸ್ಯೆಗಳಿಗೆ ಸ್ಪಂದಿಸಲು ತಾವು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಚಿವರು ಹೇಳಿದರು. ಇದೇ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್, ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ಕಾರ್ಡ್ ವಿತರಿಸಿದರು. ಇಂದು ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಕುಡಿಯುವ ನೀರು, ವಿದ್ಯುತ್, ಪುನರ್ ವಸತಿ, ರಸ್ತೆಗಳ ದುರಸ್ತಿ, ಸಿಂದಗಿ ಪಟ್ಟಣದ ಒಳಚರಂಡಿ ಸಮಸ್ಯೆ ನಿವಾರಣೆ, ಬೀದಿ ದನಗಳನ್ನು ನೋಂದಾಯಿತ ಗೋಶಾಲೆಗಳಿಗೆ ಕಳುಹಿಸುವ ಒಂದು ವಾರದ ಮುಂಚೆ ನೋಟಿಸ್ ಜಾರಿಗೊಳಿಸಿ ಮಾಲೀಕರಿಗೆ ಸೂಕ್ತ ತಿಳಿವಳಿಕೆ ನೀಡಿ ರವಾನಿಸಬೇಕು. ಪಟ್ಟಣದಲ್ಲಿ ವಿದ್ಯುತ್ ದೀಪ, ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಅರ್ಜಿಗಳು ಸಲ್ಲಿಕೆಯಾಗಿದ್ದು, 80 ಅರ್ಜಿಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗಿದೆ ಎಂದು ಹೇಳಿದರು.
ಇದನ್ನು ಓದಿ: ಸ್ಫೋಟಕಗಳನ್ನು ಸಮೀಪದಲ್ಲಿ ಕಾಡಿನಲ್ಲಿ ವಿಲೇವಾರಿ ಮಾಡಿದ್ದೆ ಹಿರೇನಾಗವಲ್ಲಿ ಸ್ಫೋಟಕ್ಕೆ ಕಾರಣ; ಸಚಿವ ಸುಧಾಕರ್
ತಾಲೂಕಿನ ಸ್ಮಶಾನ ಭೂಮಿ, ಅಂಗನವಾಡಿಗಳ ಸ್ಥಳಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಮಳೆಗೆ ಬಿದ್ದ ಮನೆಗಳ ಪರಿಹಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಿಂದಗಿ ಪಟ್ಟಣದಲ್ಲಿ ರಸ್ತೆ, ಚರಂಡಿ ವ್ಯವಸ್ಥೆ, ವಿದ್ಯುತ್ ದೀಪಗಳ ಸುಧಾರಣೆ ಬಗ್ಗೆ ಪರಿಶೀಲನೆ ಮತ್ತು ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ತಾಲೂಕಿನ ಕೆರೆ, ಹಳ್ಳ, ಸೇತುವೆಗಳ ಹತ್ತಿರದ ರಸ್ತೆ ಸಮಸ್ಯೆಗಳನ್ನು ನಿಗದಿತ ಸಮಯದೊಳಗೆ ಪರಿಹರಿಸಿ, ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ