ಹುಬ್ಬಳ್ಳಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಸಖತ್ ಡ್ಯಾನ್ಸ್ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಇಲ್ಲಿಯ ಬಾಲಕಿಯರ ಬಾಲ ಮಂದಿರದ ಮಕ್ಕಳೊಂದಿಗೆ ಅವರು ನಿನ್ನೆ ಮಸ್ತ್ ಮಸ್ತ್ ಹೆಜ್ಜೆ ಹಾಕಿದರು. ಘಂಟಿಕೇರಿಯಲ್ಲಿನ ಬಾಲಕಿಯರ ಬಾಲಮಂದಿರದಲ್ಲಿ ಬೆಳ್ಳಂಬೆಳಗ್ಗೆ ಮಕ್ಕಳ ಯೋಗಾಭ್ಯಾಸ ಮತ್ತು ಏರೋಬಿಕ್ಸ್ ವೀಕ್ಷಿಸಿದರು. ಈ ವೇಳೆ ಮಕ್ಕಳು ‘ಪಟಾಪಟಾ ಹಾರೋ ಗಾಳಿಪಟ’ ಹಾಡಿಗೆ ನೃತ್ಯ ಪ್ರದರ್ಶಿಸಿದ್ರು. ಮಕ್ಕಳಿಗೆ ಜೊತೆ ನೀಡಿದ ಶಶಿಕಲಾ ಜೊಲ್ಲೆ ಕೂಡ ಕುಣಿದು ಸಂಭ್ರಮಿಸಿದರು. ಬಳಿಕ, ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಿದ್ರು. ಮಕ್ಕಳೊಂದಿಗೆ ಬೆರೆತು ಸಂತಸಪಟ್ಟರು. ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಮರಾಠಾ ಅಭಿವೃದ್ದಿ ನಿಗಮ ಸ್ಥಾಪನೆಗೆ ಕರವೇ ವಿರೋಧ: ಮರಾಠಾ ಅಭಿವೃದ್ದಿ ನಿಗಮ ಸ್ಥಾಪನೆ ವಿರೋಧಿಸಿ ಹುಬ್ಬಳ್ಳಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ಬಾಭಿಮಾನಿ ಬಣದ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಮರಾಠಾ ಮತದಾರರ ಓಲೈಕೆಗೆ ನಿಗಮ ಸ್ಥಾಪಿಸಲಾಗಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕರವೇ ಸ್ವಾಭಿಮಾನಿ ಬಣದ ಕಾರ್ಯಕರ್ತರು ಸಿಎಮ್ ಯಡಿಯೂರಪ್ಪನವರ ರಾಜೀನಾಮೆಗೆ ಒತ್ತಾಯಿಸಿದರು. ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ನಿರ್ಧಾರ ಕೈಬಿಡುವಂತೆ ಒತ್ತಾಯಿಸಿ ತಹಶೀಲ್ದಾರ್ ಮುಖಾಂತರ ಸಿಎಮ್‌ಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಮದುವೆ ದಿಬ್ಬಣದ ಮೇಲೆ ಜವರಾಯನ ಅಟ್ಟಹಾಸ; 6 ಮಕ್ಕಳು ಸೇರಿ 14 ಮಂದಿ ಘೋರ ಸಾವು
ಕ್ಷತ್ರಿಯ ಮರಾಠಾ ಸಮಾಜದಿಂದ ಸಿಎಮ್ ಯಡಿಯೂರಪ್ಪನವರಿಗೆ ಅಭಿನಂದನೆ:
ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿರುವುದು ಸ್ವಾಗತಾರ್ಹ. ಮರಾಠಾ ಸಮಾಜದ ಪರವಾಗಿ ಸಿಎಮ್ ಯಡಿಯೂರಪ್ಪನವರಿಗೆ ಅಭಿನಂದನೆಗಳು ಎಂದು ಕ್ಷತ್ರಿಯ ಮರಾಠಾ ಸಮಾಜದ ಅಧ್ಯಕ್ಷ ಕೇಶವ ಯಾದವ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮರಾಠಾ ಸಮುದಾಯವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಕ್ಷೇತ್ರಗಳಲ್ಲಿ ಅತಿ ಹಿಂದುಳಿದಿದೆ. ಮರಾಠಾ ಸಮಾಜವನ್ನು 3Bಯಿಂದ 2Aಗೆ ಸೇರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಿಎಮ್ ಈಗಾಗಲೇ ಭರವಸೆ ನೀಡಿದಂತೆ ಮರಾಠಾ ಸಮಾಜವನ್ನು 2Aಗೆ ಸೇರ್ಪಡೆ ಮಾಡಬೇಕು. ರಾಜ್ಯದ ಬಹುತೇಕ ಮರಾಠರು ಕನ್ನಡಿಗರು. ಎಮ್‌ಇಎಸ್ ಮರಾಠಿ ಭಾಷಿಕರ ಗಲಾಟೆಯನ್ನು ಮರಾಠಾ ಸಮಾಜದೊಂದಿಗೆ ತಳಕು ಹಾಕಬಾರದು. ಕನ್ನಡ ನಾಡುನುಡಿ ರಕ್ಷಣೆಯಲ್ಲಿ ಮರಾಠಾ ಸಮಾಜ ಸದಾ ಮುಂಚೂಣಿಯಲ್ಲಿದೆ ಎಂದವರು ಹೇಳಿದ್ದಾರೆ.
ವರದಿ: ಪರಶುರಾಮ ತಹಶೀಲ್ದಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ