ಹುಬ್ಬಳ್ಳಿ; ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ಇಂದು ಹುಬ್ಬಳ್ಳಿಯಲ್ಲಿ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡರು. ಹುಬ್ಬಳ್ಳಿಯ ಮನೋವಿಕಲ ಬಾಲಕಿಯರ ಬಾಲಮಂದಿರದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರು. ಮಕ್ಕಳ ಜೊತೆ ಕೇಕ್ ಕತ್ತರಿಸಿ, ಆಕಾಶ ಬುಟ್ಟಿ ಹಾರಿಸಿದರು. ಮನೋವಿಕಲ ಮಕ್ಕಳಿಗೆ ಕೈ ತುತ್ತು ತಿನ್ನಿಸಿ ಪ್ರೀತಿ ತೋರಿಸಿದರು. ಮಕ್ಕಳು ನಿರ್ಮಿಸಿದ ಕುಶಲ ಕಲಾ ವಸ್ತುಗಳ ವೀಕ್ಷಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉಣಕಲ್ನ ಮನೋವಿಕಲ ಬಾಲಕಿಯರ ಸರ್ಕಾರಿ ಬಾಲಮಂದಿರದಲ್ಲಿನ 47 ಮಕ್ಕಳಿಗೆ ಶಶಿಕಲಾ ಜೊಲ್ಲೆಯವರು ಹೊಸ ಬಟ್ಟೆ ಮತ್ತು ಸಿಹಿ ತಿನಿಸು ನೀಡಿದ್ದರು. ಸಚಿವರಲ್ಲಿ ಮಾತೃ ಮಮತೆ ಕಂಡು ಬಾಲಕಿಯರು ಭಾವುಕರಾದರು. ನಂತರ ಸಚಿವೆ ಶಶಿಕಲಾ ಜೊಲ್ಲೆಯವರು ಬಾಲಮಂದಿರದಲ್ಲಿ ವಾಸ್ತವ್ಯ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಶಿಕಲಾ ಜೊಲ್ಲೆಯವರು, ಇಂದು ನನ್ನ ಜೀವನದ ಚಿರಸ್ಮರಣೀಯ ಕ್ಷಣ. ಸಾಮಾನ್ಯ ಆರೋಗ್ಯವಂತ ಮಗು ಜನಿಸಿದಾಗ ಮನೆಯಲ್ಲಿ ನಿರ್ಮಾಣವಾಗುವ ಸಂತಸದ ವಾತಾವರಣವೇ ಬೇರೆ. ಆದರೆ ಮನೋವಿಕಲ ಅಥವಾ ವಿಕಲಚೇತನ ಮಕ್ಕಳು ಜನಿಸಿದಾಗ ಎದುರಾಗುವ ಸನ್ನಿವೇಶವೇ ಬೇರೆ. ತಮಗೆ ಸ್ವತಃ ಅದರ ಅನುಭವವಿದೆ. ಸಮಾಜದ ಪ್ರತಿಯೊಬ್ಬರು ವಿಶೇಷ ಚೇತನ ಮಕ್ಕಳಿಗೆ ಪ್ರೀತಿ ತೋರಬೇಕು ಎಂದರು.
ಇದನ್ನು ಓದಿ: ಸಕಲೇಶಪುರ-ಮಂಗಳೂರು ರಸ್ತೆಯಲ್ಲಿ ಸಂಚರಿಸಿದರೆ ಉಳುಕಿರುವ ಸೊಂಟ ಸರಿಯಾಗುತ್ತದೆ; ಜಿಪಂ ಸಭೆಯಲ್ಲಿ ಎಚ್.ಡಿ.ರೇವಣ್ಣ ಆಕ್ರೋಶ
ಮನೋವಿಕಲ ಹಾಗೂ ವಿಶೇಷ ಚೇತನ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಲವು ಹೊಸ ಕಾರ್ಯಕ್ರಮಗಳನ್ನು ರೂಪಿಸಿ, ಜಾರಿಗೊಳಿಸುತ್ತಿದೆ. ಉಣಕಲ್ಲಿನ ಮನೋವಿಕಲ ಬಾಲಕಿಯರ ಸರ್ಕಾರಿ ಬಾಲಮಂದಿರ ನಾಡಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಇಲಾಖೆಯಲ್ಲಿ ಸಾಕಷ್ಟು ಪರಿವರ್ತನೆ, ಸುಧಾರಣೆಗಳಾಗಿವೆ. ಕೋವಿಡ್ ಹಿನ್ನೆಲೆಯಲ್ಲಿ ಇದರ ಬಗ್ಗೆ ವ್ಯಾಪಕ ಮಾಹಿತಿ ನೀಡಲು ಸಾಧ್ಯವಾಗಿಲ್ಲ. ಇನ್ನು ಮುಂದೆ ಈ ನಿಟ್ಟಿನಲ್ಲಿ ಇಲಾಖೆ ಕಾರ್ಯೋನ್ಮುಖವಾಗಲಿದೆ ಎಂದರು.
ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ , ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಭಾರತಿ ಶೆಟ್ಟರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಿ.ಹೆಚ್. ಲಲಿತಾ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಡಿ.ಎನ್. ಮೂಲಿಮನಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ