ಕಳೆದ ಚುನಾವಣೆಯಲ್ಲಿ ಶಾಸಕರು ಕೊಟ್ಟಿರುವ ಕುಕ್ಕರ್ ಚೆನ್ನಾಗಿ ಇದೇಯಾ ; ಸಚಿವ ರಮೇಶ್ ಜಾರಕಿಹೊಳಿ ಪ್ರಶ್ನೆ..!

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಸ್ಥಿತ್ವಕ್ಕಾಗಿ ಸಚಿವ ರಮೇಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಪೈಪೋಟಿ ಆರಂಭವಾಗಿದೆ.

ಸಚಿವ ರಮೇಶ್​ ಜಾರಕಿಹೊಳಿ

ಸಚಿವ ರಮೇಶ್​ ಜಾರಕಿಹೊಳಿ

  • Share this:
ಬೆಳಗಾವಿ(ಜುಲೈ.07): ರಾಜ್ಯದಲ್ಲಿ ಕೊರೋನಾ ವೈರಸ್ ಮಾಹಾಮಾರಿಯ ಅಬ್ಬರ ಮಿತಿ ಮೀರುತ್ತಿದೆ. ಜತೆಗೆ ಅನೇಕ ಶಾಸಕರು ಹಾಗೂ ಸಂಸದರಿಗು ಸಹ ಕೊರೋನಾ ವೈರಸ್ ಸೋಂಕು ತಗುಲಿದ್ದು, ಜನರ ತಲೆನೋವಿಗೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಮಾತ್ರ ಚುನಾವಣೆಯ ಚರ್ಚೆ ನಡೆಯುತ್ತಿದ್ದು, ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕಾಗಿ ಸಚಿವ ರಮೇಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಫೈಟ್ ನಡೆದಿದೆ.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ 3 ವರ್ಷ ಬಾಕಿ ಇದೆ. ಈಗಲೇ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಸ್ಥಿತ್ವಕ್ಕಾಗಿ ಸಚಿವ ರಮೇಶ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಪೈಪೋಟಿ ಆರಂಭವಾಗಿದೆ. ಸಚಿವ ರಮೇಶ್ ಜಾರಕಿಹೊಳಿ ಕ್ಷೇತ್ರದ ಮೇಲೆ ಪ್ರಭುತ್ವ ಸಾಧಿಸಲು ಎಲ್ಲಾ ರೀತಿಯ ಪ್ರಯತ್ನ ಆರಂಭಿಸಿದ್ದಾರೆ.

ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ಬಿಜೆಪಿ ಕಾರ್ಯಾಲಯ ಇಂದು ಹಿಂಡಲಗಾ ಗ್ರಾಮದಲ್ಲಿ ಉದ್ಘಾಟನೆ ಮಾಡಲಾಯಿತು. ಸಮಾರಂಭದಲ್ಲಿ ಸಚಿವ ರಮೇಶ್ ಜಾರಕಿಹೊಳಿ, ಕೇಂದ್ರ ಸಚಿವ ಸುರೇಶ್ ಅಂಗಡಿ ಸೇರಿ ಅನೇಕ ಮುಖಂಡರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕೊಟ್ಟ ಕುಕ್ಕರ್ ಚೆನ್ನಾಗಿದೆಯಾ ಎಂದು ಬಿಜೆಪಿ ಕಾರ್ಯಕರ್ತರಿಗೆ ರಮೇಶ್ ಜಾರಕಿಹೊಳಿ ಪ್ರಶ್ನೆ ಮಾಡಿದರು. ಕಳೆದ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲ್ಲು ನಾನು ಪ್ರಯತ್ನ ಮಾಡಿದ್ದೇನೆ. ಗ್ರಾಮೀಣ ಕ್ಷೇತ್ರದ ಶಾಸಕರಿಗೆ ಹಣದ ಅಹಂಕಾರ ಇದೆ. ಕಳೆದ ಚುನಾವಣೆಯಲ್ಲಿ ಕೊಟ್ಟ ಕುಕ್ಕರ್ ಇನ್ನೂ ಚೆನ್ನಾಗಿದೆ ಎಂದು ಸಚಿವರು ಪ್ರಶ್ನೆ ಮಾಡಿದರು. ಕುಕ್ಕರ್ ಕೊಟ್ಟಿದ್ದು ನನ್ನ ದುಡ್ಡಿನಿಂದ, ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಆಗಿದೆ.

2023 ರಲ್ಲಿ ಗ್ರಾಮೀಣದಲ್ಲಿ ಬಿಜೆಪಿ ಧ್ವಜ ಹಾರಿಸಲೇಬೇಕು. ವಿರೋಧಿಗಳು ಎಷ್ಟು ಹಣ ಖರ್ಚು ಮಾಡುತ್ತಾರೆ ಅದಕ್ಕಿಂತ ಹೆಚ್ಚು ಖರ್ಚು ಮಾಡಲು ಸಿದ್ದ. ನಮ್ಮದು ಬೆವುರು ಸುರಿಸಿ ದುಡಿದ ದುಡ್ಡು, ಇದು ಅಹಂಕಾರದ ಮಾತಲ್ಲ. ಸಾಲ ಮಾಡಿಯಾದ್ರು ಕೊಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರ ಬಗ್ಗೆ ಈಗಾಗಲೇ ಸಚಿವ ರಮೇಶ್ ಜಾರಕಿಹೊಳಿ ತೀವ್ರ ಆಸಕ್ತಿ ವಹಿಸಿದ್ದಾರೆ. ಬಿಜೆಪಿ ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗಿದೆ. ಕ್ಷೇತ್ರದಲ್ಲಿ ಟಿಕೆಟ್ ಪಡೆಯಲು ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ಧನಂಜಯ ಜಾಧವ್, ಮಾಜಿ ಶಾಸಕ ಸಂಜಯ ಪಾಟೀಲ್ ನಡುವೆ ಪೈಪೋಟಿ ಆರಂಭವಾಗಿದೆ.

 ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಚಿಂತನೆ : ಹೆಬ್ಬಾಳ್ಕರ್

ಸಚಿವ ರಮೇಶ್ ಜಾರಕಿಹೊಳಿ ಮಂಗಳವಾರ ಬೆಳಗ್ಗೆ ಗ್ರಾಮೀಣ ಬಿಜೆಪಿ ಕಚೇರಿ ಉದ್ಘಾಟನೆ ವೇಳೆ ಮಾತನಾಡುತ್ತ, ಗ್ರಾಮೀಣ ಕ್ಷೇತ್ರದಲ್ಲಿ ಕುಕ್ಕರ್ ಹಂಚಿದ್ದು ನನ್ನ ದುಡ್ಡಿನಿಂದ ಎಂದು ಹೇಳಿಕೆ ನೀಡಿದ್ದರು. ಜೊತೆಗೆ, ಬರಲಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ದುಡ್ಡು ಹಂಚುವುದಾಗಿ ಹೇಳಿಕೆ ನೀಡಿದ್ದರು.

ಇದನ್ನೂ ಓದಿ : ಕೊರೋನಾ ಸೋಂಕಿತನ ಶವ ಸಂಸ್ಕಾರದಲ್ಲಿ ಎಡವಟ್ಟು ; ರಾಷ್ಟ್ರೀಯ ‌ಹೆದ್ದಾರಿ ಪಕ್ಕದ ಕೂಗಳತೆ ದೂರದಲ್ಲಿ ಶವ ಸಂಸ್ಕಾರ

ಇದಕ್ಕೆ ಪ್ರತಿಕ್ರಿಯಿಸಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ನಾವು ನಮ್ಮ ಹರ್ಷ ಶುಗರ್ಸ್ ಆರಂಭೋತ್ಸವದ ಸಂದರ್ಭದಲ್ಲಿ ಪ್ರಚಾರಕ್ಕಾಗಿ ಅಧಿಕೃತವಾಗಿಯೇ ಕುಕ್ಕರ್ ವಿತರಿಸಿದ್ದೇವೆ. ಇದಕ್ಕೆ ಎಲ್ಲ ಲೆಕ್ಕ ಹಾಗೂ ದಾಖಲೆ ಇದೆ. ಜಿಎಸ್ ಟಿಯನ್ನು ಕೂಡ ತುಂಬಿದ್ದೇವೆ. ರಮೇಶ್ ಜಾರಕಿಹೊಳಿ ತಮ್ಮ ದುಡ್ಡಿನಿಂದ ಕುಕ್ಕರ್ ವಿತರಿಸಿದ್ದರೆ ಅದಕ್ಕೆ ಸೂಕ್ತ ದಾಖಲೆ ಮತ್ತು ಲೆಕ್ಕ ಕೊಡಲಿ. ಈ ವಿಷಯ ನ್ಯಾಯಾಲಯದಲ್ಲಿದೆ. ಆ ಕುರಿತು ಮಾತನಾಡುವುದು ನ್ಯಾಯಾಂಗ ನಿಂದನೆಯಾಗಲಿದೆ.

ನಾನು ಈಗಾಗಲೆ ಈ ಬಗ್ಗೆ ನಮ್ಮ ವಕಿಲರೊಂದಿಗೆ ಮಾತನಾಡಿದ್ದೇನೆ. ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಯ ವೀಡಿಯೋ ಪೂರ್ಣ ಪರಿಶೀಲಿಸಿ, 2-3 ದಿನದಲ್ಲಿ ಬೆಂಗಳೂರಿಗೆ ತೆರಳಿ ಕಾನೂನು ಕ್ರಮದ ಕುರಿತು ವಕೀಲರೊಂದಿಗೆ ಚರ್ಚಿಸುತ್ತೇನೆ ಎಂದು ತಿಳಿಸಿದ್ದಾರೆ.
Published by:G Hareeshkumar
First published: