ಚಿಕ್ಕಬಳ್ಳಾಪುರ(ಜು.08): ಜಾನುವಾರಗಳಿಗೆ ಅಗತ್ಯ ಮೇವು ಪೂರೈಕೆ ಮಾಡುವುದರ ಜೊತೆಗೆ ಅಧಿಕಾರಿಗಳು ಖುದ್ದಾಗಿ ಹಳ್ಳಿಗಳಿಗೆ ಭೇಟಿ ನೀಡಿ ಸರ್ಕಾರದ ಯೋಜನೆಗಳನ್ನು ಸಮರ್ಪಕ ಅನುಷ್ಟಾನಕ್ಕೆ ಕ್ರಮಕೈಗೊಳ್ಳಬೇಕು ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಬಿ. ಚವ್ಹಾಣ್ ಸೂಚನೆ ನೀಡಿದರು.
ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿ. ಮೆಗಾ ಡೈರಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದ ನಂತರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಜಿಲ್ಲಾ ಮಟ್ಟದ ಅಧಿಕಾರಿಗಳು ಖುದ್ದಾಗಿ ತಾಲ್ಲೂಕುಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಬೇಕು. ಮುಂದಿನ ದಿನಗಳಲ್ಲಿ ರೈತರಿಂದ ಯಾವುದೇ ದೂರುಗಳು ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಕಿವಿ ಮಾತು ಹೇಳಿದರು.
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪಶು ಇಲಾಖೆ ವೈದ್ಯರು ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಅಗತ್ಯ ಚಿಕಿತ್ಸೆ ಪೂರೈಸಬೇಕು. ಸರ್ಕಾರದಿಂದ ಪಶುಸಂಗೋಪನೆ ಇಲಾಖೆಗೆ ಬರುವ ಮೆಡಿಸನ್ನನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಇದಾದ ಬಳಿಕ ಜಿಲ್ಲಾ ಪಶುಪಾಲನಾ ಇಲಾಖೆ ಉಪನಿರ್ದೇಶಕರಾದ ನಾಗರಾಜ್ ಮಾತನಾಡಿ, ಚಿಕ್ಕಬಳ್ಳಾಪುರದಲ್ಲಿ 59 ಪಶು ಚಿಕಿತ್ಸಾಲಯಗಳಿವೆ. 15 ಪ್ರಾಥಮಿಕ ಪಶು ಚಿಕಿತ್ಸಾಲಯಗಳು, 75 ಪಶುವೈದ್ಯಾಧಿಕಾರಿಗಳು, 06 ಸಂಚಾರಿ ಪಶು ಚಿಕಿತ್ಸಾಲಯಗಳಿವೆ. ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ಇಲ್ಲಿನ ಅರಣ್ಯ ಪ್ರದೇಶದಲ್ಲಿ ಮೇವು ಬೆಳೆಯುತ್ತಿದ್ದು, ಆರು ತಾಲ್ಲೂಕುಗಳಲ್ಲಿ ರೈತರಿಗೆ ಪಶುಪಾಲನಾ ಇಲಾಖೆ ವತಿಯಿಂದ ಮೇವಿನ ಬೀಜದ ಪೊಟ್ಟಣಗಳು ರೈತರಿಗೆ ವಿತರಿಸಲಾಗಿದೆ. ಅದರಿಂದಲೂ ಮೇವು ಬೆಳೆಯುತ್ತಿರುವುದರಿಂದ ಜಿಲ್ಲೆಯಲ್ಲಿ ಮೇವಿನ ಉತ್ಪಾದನೆಯಾಗುತ್ತಿದೆ ಎಂದು ಮಾಹಿತಿ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ