news18-kannada Updated:July 21, 2020, 9:24 PM IST
ತರಕಾರಿ ಮಾರಾಟ ವಾಹನಗಳಿಗೆ ಸಚಿವ ಜಗದೀಶ್ ಶೆಟ್ಟರ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಹುಬ್ಬಳ್ಳಿ; ಲಾಕ್ಡೌನ್ ಜಾರಿ ಇದ್ದರೂ ಜನರು ಮಾತ್ರ ತರಕಾರಿ, ಹಣ್ಣು ಖರೀದಿ ಹೆಸರಲ್ಲಿ ನಿತ್ಯ ಮಾರುಕಟ್ಟೆ ಪ್ರದೇಶದಲ್ಲಿ ಜಮಾವಣೆ ಆಗುತ್ತಿರುತ್ತಾರೆ. ಇದನ್ನು ತಪ್ಪಿಸಲು ಹುಬ್ಬಳ್ಳಿಯ ವಿ ಬಾಸ್ಕೆಟ್ ಸಂಸ್ಥೆ ವಿಶೇಷ ಪ್ಲ್ಯಾನ್ ಮಾಡಿದೆ.
ಹುಬ್ಬಳ್ಳಿ ನಗರದ ಪ್ರತಿಯೊಂದು ಬಡಾವಣೆಗೆ ತೆರಳುವ ವಿ ಬಾಸ್ಕೆಟ್ ವಾಹನಗಳು ಜನರು ಇದ್ದಲಿಗೆ ಅಗತ್ಯ ತರಕಾರಿ ಹಣ್ಣು, ಸೋಪ್ಪುಗಳನ್ನು ರಿಯಾಯಿತಿ ದರದಲ್ಲಿ ಪೂರೈಸಲಿವೆ. ವಿ ಬಾಸ್ಕೆಟ್ ಸಂಸ್ಥೆಯಿಂದ ನೇರವಾಗಿ ರೈತರಿಂದ ಹಣ್ಣು ಹಾಗೂ ತರಕಾರಿಗಳನ್ನು ಖರೀದಿ ಮಾಡಲಿದೆ. ಖರೀದಿಸಿದ ಹಣ್ಣು ಮತ್ತು ತರಕಾರಿಗಳ ಗುಣಮಟ್ಟ ಪರಿಶೀಲಿಸಿ, ಅವುಗಳನ್ನು ಸ್ವಚ್ಛಗೊಳಿಸಿ ಬೇಡಿಕೆಗೆ ಅನುಸಾರವಾಗಿ ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಇದರಿಂದ ರೈತರು ಹಾಗೂ ಗ್ರಾಹಕರಿಗೆ ಶೋಷಣೆಯಾಗದಂತೆ ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುತ್ತಿದೆ. ಜನರಿಗೆ ತರಕಾರಿ, ಹಣ್ಣುಗಳನ್ನು ಪೂರೈಸುವ ವಿ ಬಾಸ್ಕೆಟ್ ವಾಹನಗಳಿಗೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು.
ಹುಬ್ಬಳ್ಳಿಯ ಮಧುರ ಕಾಲೋನಿಯಲ್ಲಿರುವ ತಮ್ಮ ನಿವಾಸದ ಬಳಿ ವಿ ಬಾಸ್ಕೆಟ್ ವಾಹನಗಳಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್ ಅವರು, ವಿ ಬಾಸ್ಕೆಟ್ ಸಂಸ್ಥೆಯ ವತಿಯಿಂದ ರೈತರು ಹಾಗೂ ಗ್ರಾಹಕರಿಗೆ ಶೋಷಣೆಯಾಗದಂತೆ ಹಣ್ಣು ಹಾಗೂ ತರಕಾರಿಗಳನ್ನು ಮಾರಾಟ ಮಾಡಬೇಕೆಂದು ಸೂಚನೆ ನೀಡಲಾಗಿದೆ. ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ರೈತರು ನೇರವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗುವಂತೆ ರೈತ ಸಂತೆಗಳನ್ನು ಆಯೋಜಿಸಲಾಗುತ್ತಿದೆ. ಬೇರೆ ರಾಜ್ಯಗಳಲ್ಲಿ ರೈತರ ಸಂತೆ ಯಶಸ್ವಿಯಾಗಿದೆ. ಅಲ್ಲಿನ ಮಾದರಿಗಳನ್ನು ಅಭ್ಯಸಿಸಿ ರಾಜ್ಯದಲ್ಲಿ ಅಳವಡಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಇದನ್ನು ಓದಿ: 60 ದಿನಗಳ ನಿಷೇಧ ಕಾಲ ಮುಗಿದರೂ ಕರಾವಳಿಯಲ್ಲಿ ಮೀನುಗಾರಿಕೆ ಆರಂಭವಾಗುವುದು ಅನುಮಾನ!
ಈ ಸಂದರ್ಭದಲ್ಲಿ ಮಾತನಾಡಿದ ವಿ ಬಾಸ್ಕೆಟ್ ಆನಂದ ಜಾಧವ್, ಮುಂದಿನ ಸೋಮವಾರದಿಂದ ರೈತರಿಂದ ತರಕಾರಿ, ಹಣ್ಣು ಹಾಗೂ ಕಾಯಿಪಲ್ಯಗಳನ್ನು ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡಲು ಆರಂಭಿಸಲಾಗುವುದು. ಪ್ರಸ್ತುತ 7 ವಾಹನಗಳಿಗೆ ಚಾಲನೆ ನೀಡಲಾಗಿದೆ. ಇನ್ನೂ 8 ವಾಹನಗಳು ಸೇರ್ಪಡೆಯಾಗಲಿವೆ. ಮಧ್ಯವರ್ತಿಗಳ ಹಾವಳಿ ಇಲ್ಲದೇ ರೈತರಿಂದ ನೇರವಾಗಿ ತರಕಾರಿ ಹಣ್ಣುಗಳನ್ನು ಖರೀದಿಸಲಾಗುವುದು. ಇವುಗಳನ್ನು ಸಂಸ್ಕರಿಸಿ ಉತ್ತಮ ಗುಣಮಟ್ಟದೊಂದಿಗೆ ಗ್ರಾಹಕರಿಗೆ ಮಾರುಕಟ್ಟೆಗಿಂತ ಶೇ. 30 ರಿಂದ 40 ರಷ್ಟು ಕಡಿಮೆ ದರದಲ್ಲಿ ಮಾರಾಟ ಮಾಡಲಾಗುವುದು. ಕೋವಿಡ್-19 ಹಿನ್ನೆಲೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ಕಂಪನಿಯ ಸಿಬ್ಬಂದಿ ಮಾಸ್ಕ್, ಗ್ಲೌಸ್ ಹಾಗೂ ಫೇಸ್ ಶೀಲ್ಡ್ ಗಳನ್ನು ಧರಿಸಿರುತ್ತಾರೆ. ಖರೀದಿಸಲು ಬರುವ ಪ್ರತಿ ಗ್ರಾಹಕರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು. ಇದರೊಂದಿಗೆ ಸಾರ್ವಜನಿಕರಿಗೆ ಕೋವಿಡ್-19 ಕುರಿತು ಜಾಗೃತಿ ಮೂಡಿಸಲಾಗುವುದು. ಗ್ರಾಹಕರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ದಿನಗಳಲ್ಲಿ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದರು.
Published by:
HR Ramesh
First published:
July 21, 2020, 9:21 PM IST