ಬಾಗಲಕೋಟೆ(ನವೆಂಬರ್ 25): ರಾಜ್ಯದಲ್ಲಿ ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಸಿಗಬೇಕೆಂದು ಹೋರಾಟ ನಡೆಯುತ್ತಿದೆ. ಈಗಾಗಲೇ ಸಚಿವ ಕೆ ಎಸ್ ಈಶ್ವರಪ್ಪ ಸ್ವಾಮೀಜಿಗಳೊಂದಿಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಬಂದಿದ್ದಾರೆ. ಇನ್ನೊಂದೆಡೆ ಸಚಿವ ಕೆ ಎಸ್ ಈಶ್ವರಪ್ಪ ಹೋರಾಟದ ನೇತೃತ್ವ ವಹಿಸಿಕೊಂಡಿರುವದಕ್ಕೆ ಅಪಸ್ವರ ಕಂಡು ಬಂದಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಸಚಿವ ಕೆ ಎಸ್ ಈಶ್ವರಪ್ಪ ಮಧ್ಯೆ ಮತ್ತೆ ಭಿನ್ನಾಭಿಪ್ರಾಯ ಬಂದಿದ್ದು, ರಾಜ್ಯದಲ್ಲಿ ಎಸ್ ಟಿ ಮೀಸಲಾತಿ ಹೋರಾಟವೆಂದು ಸಚಿವ ಕೆ ಎಸ್ ಈಶ್ವರಪ್ಪ ಎರಡನೇ ರಾಯಣ್ಣ ಬ್ರಿಗೇಡ್ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಎಸ್ ಟಿ ಮೀಸಲಾತಿ ಬಗ್ಗೆ ಅಧಿವೇಶನದಲ್ಲಿ ಮಾತನಾಡಲಿ ಅದನ್ನು ಬಿಟ್ಟು ಸಮಾವೇಶದಿಂದ ಕುರುಬರನ್ನು ದಾರಿ ತಪ್ಪಿಸಲು ಹೊರಟಿದ್ದಾರೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಜನಸಾಮಾನ್ಯರ ಪಕ್ಷದ ರಾಜ್ಯಾಧ್ಯಕ್ಷ ಯಲ್ಲಪ್ಪ ಹೆಗ್ಡೆ ವಾಗ್ದಾಳಿ ನಡೆಸಿದರು.
ಬಾಗಲಕೋಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 29ರಂದು ಬೆಳಗಾವಿ ವಿಭಾಗ ಮಟ್ಟದ ಎಸ್ ಟಿ ಮೀಸಲಾತಿಗಾಗಿ ಮೊದಲ ಕುರುಬ ಬೃಹತ್ ಸಮಾವೇಶ ನಡೆಯಲಿದೆ. ಇದರಿಂದ ಎಸ್ ಟಿ ಮೀಸಲಾತಿ ಸಿಗುತ್ತಾ, ನೇತೃತ್ವ ಸಚಿವ ಕೆ ಎಸ್ ಈಶ್ವರಪ್ಪ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರಾ. ಈ ಬಗ್ಗೆ ಸಚಿವ ಈಶ್ವರಪ್ಪ ನವರು ಮುಖ್ಯಮಂತ್ರಿ ಭೇಟಿಯಾಗಿಲ್ಲ. ಈಗಾಗಲೇ ಈ ಬಗ್ಗೆ ಕುಲಶಾಸ್ತ್ರ ಅಧ್ಯಾಯನ ವರದಿ ವಿಳಂಬದ ಬಗ್ಗೆ ಈಶ್ವರಪ್ಪ ಚರ್ಚಿಸಿಲ್ಲ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಮ್ಮ ಮಗ ವಿಜಯೇಂದ್ರರನ್ನು ರಾಜಕೀಯವಾಗಿ ಬೆಳೆಸುತ್ತಿದ್ದು, ಅದರಂತೆ ಕೆ ಎಸ್ ಈಶ್ವರಪ್ಪ ತಮ್ಮ ಪುತ್ರ ಕಾಂತೇಶ್ ರನ್ನು ಕುರುಬರ ಎಸ್ ಟಿ ಮೀಸಲಾತಿ ಹೋರಾಟದ ಮೂಲಕ ಕುರುಬ ಸಮಾಜ ದಾರಿ ತಪ್ಪಿಸಿ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ.ಇದನ್ನು ಕುರುಬರು ಅರಿತುಕೊಳ್ಳಬೇಕು ಎಂದರು.
ಇನ್ನು ರಾಜ್ಯದಲ್ಲಿ ವಾಲ್ಮೀಕಿ ಸಮುದಾಯದ ಮೀಸಲಾತಿ ಶೇ. 7.5ಗೆ ಹೆಚ್ಚಿಸುವ ಹೋರಾಟದ ನೇತೃತ್ವ ಸಚಿವ ಶ್ರೀರಾಮುಲು, ಕುರುಬ ಸಮಾಜ ಎಸ್ ಟಿ ಮೀಸಲಾತಿಗೆ ಸೇರ್ಪಡಿಗೊಳಿಸುವ ಹೋರಾಟ ನೇತೃತ್ವ ಸಚಿವ ಈಶ್ವರಪ್ಪ, ಪಂಚಮಸಾಲಿ ಲಿಂಗಾಯತ ಸಮಾಜ 2 ಎಗೆ ಸೇರ್ಪಡೆ ಹೋರಾಟದ ನೇತೃತ್ವ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ವಹಿಸಿಕೊಂಡಿದ್ದಾರೆ. ನೇತೃತ್ವವಹಿಸಿಕೊಂಡವರು ಬಿಜೆಪಿ ಶಾಸಕರು, ಸಚಿವರು, ಈ ಹೋರಾಟಗಳ ನಿರ್ಮಾಪಕರು, ನಿರ್ದೇಶಕರು, ವಿತರಕರು ಬಿಜೆಪಿ ಪಕ್ಷವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಬಿಎಸ್ವೈ ಸರ್ಕಾರದಲ್ಲಿ ಬೆಳಗಾವಿ ನಾಯಕರದ್ದೇ ಪಾರುಪತ್ಯ; ಜಿಲ್ಲೆಯ ಬಹುತೇಕ ನಾಯಕರಿಗೆ ಅಧಿಕಾರ ಗದ್ದುಗೆ
ರಾಜ್ಯ ಕೇಂದ್ರ ಸರ್ಕಾರ ಬಿಜೆಪಿಯದು ಇದೆ. ಹೋರಾಟ, ಸಮಾವೇಶ ಮಾಡುವ ಬದಲಿಗೆ ತಮ್ಮ ಸಮಾಜದ ಬೇಡಿಕೆಗಾಗಿ ಮೊದಲು ವಿಧಾನಸೌಧದಲ್ಲಿ ಚರ್ಚೆ ಮಾಡಲಿ, ಚರ್ಚೆ ಮಾಡಲಿಕ್ಕೆ ಆಗದಿದ್ದರೆ ರಾಜಿನಾಮೆ ಕೊಟ್ಟು ಹೋರಾಟ ಮಾಡಲಿ. ಹೀಗಾಗಿ ಈ ಎಲ್ಲಾ ಹೋರಾಟಗಳ ಹಿಂದೆ ಬಿಜೆಪಿ ಐಡಿಯಾಲಜಿ ಇವೆ. ಜಾತಿ ಜಾತಿಗಳ ಮಧ್ಯೆ ಬಿಜೆಪಿ ಸಂಘರ್ಷ ಉಂಟು ಮಾಡುತ್ತಿದೆ.ಮುಂಬರುವ ವಿಧಾನ ಸಭೆ ಚುನಾವಣೆಗೆ ರಾಜಕೀಯವಾಗಿ ಬೆಳೆಯಲು ಸಚಿವ ಕೆ ಎಸ್ ಈಶ್ವರಪ್ಪ ಬೆಂಬಲಿತ ಎಸ್ ಟಿ ಹೋರಾಟ ವೇದಿಕೆ ಮಾಡಿಕೊಳ್ಳಲು ಹೊರಟಿದ್ದಾರೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ