ಧಾರವಾಡ: ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕಾತರಕಿ ಗ್ರಾಮದಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣದ ವೇಳೆ ಮತ್ತೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದರು. ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಭಾರೀ ಸದ್ದು ಮಾಡುತ್ತಿರುವ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರೋಕ್ಷವಾಗಿ ಮತ್ತೆ ಸಿಎಂ ಆಗುವ ಬಯಕೆ ವ್ಯಕ್ತಪಡಿಸಿದ್ದರು. ಇದರ ಬೆನ್ನಿಗೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ತಾರೆ, ಚುನಾವಣೆ ಯಾವಾಗ ಬಂದರೂ ಸಿದ್ದರಾಮಯ್ಯ ಸಿಎಂ ಆಗುವದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಪರ ಜಮೀರ್ ಅಹಮ್ಮದ್ ಖಾನ್ ಸಹ ಹೇಳಿಕೆ ನೀಡಿ ಗಮನ ಸೆಳೆದಿದ್ದರು. ಆದರೆ, ಈ ಬೆಳವಣಿಗೆಗೆ ಸಂಬಂಧಿಸಿದಂತೆ ಖಾರವಾಗಿ ಪ್ರತಿಕ್ರಿಯಿಸಿರುವ ಸಚಿವ ಸಿ.ಟಿ. ರವಿ,"ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂಬುದು ತಿರುಕನ ಕನಸು" ಎಂದು ವ್ಯಂಗ್ಯವಾಡಿದ್ದಾರೆ.
ಧಾರವಾಡದಲ್ಲಿ ಪದವೀಧರ ಚುನಾವಣಾ ಪ್ರಚಾರವಾಗಿ ಬಿಜೆಪಿಯ ಅಭ್ಯರ್ಥಿ ಪ್ರೋ.ಎಸ್.ವಿ.ಸಂಕನೂರ ಪರ ಮತಯಾಚಣೆ ಕಾರ್ಯದಲ್ಲಿ ಭಾಗಿಯಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈಗ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗುವ ಮಾತು ಹೇಳುತ್ತಿದ್ದಾರೆ. ಕೆಲವು ಸಂಗತಿಗಳನ್ನು ಕಾಲ ನಿರ್ಣಯಿಸುತ್ತದೆ. ಈಗ ದೇಶದಲ್ಲಿ ಬಿಜೆಪಿ ಕಾಲ ನಡೆಯುತ್ತಿದೆ. ತವರಿನಲ್ಲೇ ಅವರವರ ಪಕ್ಷವನ್ನು ಗೆಲ್ಲಿಸಲು ಅವರಿಗೆ ಸಾಧ್ಯವಾಗಿಲ್ಲ. ಜಮೀರ್ ಅಹ್ಮದ್ ಬೆಂಗಳೂರಿನಲ್ಲೇ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ ಇನ್ನೂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುವುದು ದೂರದ ಮಾತು" ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಮತ್ತೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಸಿದ್ದರಾಮಯ್ಯ; ಬೆಂಬಲ ನೀಡಿದ ಜಮೀರ್ ಅಹ್ಮದ್
"ಮೈಸೂರು, ಬಾಗಲಕೋಟೆಯಲ್ಲಿ ತಮ್ಮ ಪಕ್ಷ ಗೆಲ್ಲಿಸಲು ಸಿದ್ದರಾಮಯ್ಯಗೆ ಅವರಿಗೆ ಆಗಿಲ್ಲ, ಇನ್ನೂ ಜನ ಯಾತಕ್ಕಾಗಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರಬೇಕು. ಸಮಾಜ ಒಡೆಯುವುದಕ್ಕಾ?" ಎಂದು ಪ್ರಶ್ನಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ