• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಿದರೆ ನಿರ್ದಾಕ್ಷಿಣ್ಯ ಕ್ರಮ: ಖಾಸಗಿ ಆಸ್ಪತ್ರೆಗಳಿಗೆ ಸಚಿವ ಬಿ.ಎ. ಬಸವರಾಜ ಎಚ್ಚರಿಕೆ

ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಿದರೆ ನಿರ್ದಾಕ್ಷಿಣ್ಯ ಕ್ರಮ: ಖಾಸಗಿ ಆಸ್ಪತ್ರೆಗಳಿಗೆ ಸಚಿವ ಬಿ.ಎ. ಬಸವರಾಜ ಎಚ್ಚರಿಕೆ

ದಾವಣಗೆರೆ ಜಿಲ್ಲಾ ಭವನದಲ್ಲಿ ನಡೆದ ಕಾರ್ಯಕ್ರಮ

ದಾವಣಗೆರೆ ಜಿಲ್ಲಾ ಭವನದಲ್ಲಿ ನಡೆದ ಕಾರ್ಯಕ್ರಮ

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ 5 ಸಮಿತಿ ತಂಡ ರಚನೆ ಮಾಡಲಾಗುವುದು. ಈ ತಂಡಗಳು ಮೂರು ಸರದಿಯಲ್ಲಿ ಕೆಲಸ ಮಾಡುವುದರ ಜೊತೆಗೆ ಪ್ರತಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳು ವಾಪಾಸ್ಸು ಹೋಗದಂತೆ ಕಾರ್ಯ ನಿರ್ವಹಿಸುವರು ಎಂದು ಭೈರತಿ ಬಸವರಾಜ ತಿಳಿಸಿದ್ದಾರೆ.

ಮುಂದೆ ಓದಿ ...
  • Share this:

ದಾವಣಗೆರೆ: ಯಾವುದೇ ರೋಗಿಗಳು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಹೋದಾಗ ನಿರಾಕರಣೆ ಮಾಡಿದರೆ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ ಹೇಳಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆ ಕುರಿತು ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ “ಜನಸ್ನೇಹಿ ಆಡಳಿತ ಒಂದು ವರ್ಷ; ಸವಾಲುಗಳ ವರ್ಷ; ಪರಿಹಾರದ ಸ್ಪರ್ಶ” ನೇರ ಪ್ರಸಾರದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸರ್ಕಾರದ ಸಾಧನೆಯ ಕಿರುಹೊತ್ತಿಗೆ ಬಿಡುಗಡೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.


ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ 5 ಸಮಿತಿ ತಂಡ ರಚನೆ ಮಾಡಲಾಗುವುದು. ಈ ತಂಡಗಳು ಮೂರು ಸರದಿಯಲ್ಲಿ ಕೆಲಸ ಮಾಡುವುದರ ಜೊತೆಗೆ ಪ್ರತಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳು ವಾಪಾಸ್ಸು ಹೋಗದಂತೆ ಕಾರ್ಯ ನಿರ್ವಹಿಸುವರು ಎಂದು ತಿಳಿಸಿದರು.


ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಕೋವಿಡ್ ರೋಗಿಗಳು ಆರೋಗ್ಯವಾಗಿದ್ದಾರೆ. ಯಾವುದೇ ಸಮಸ್ಯೆ ಇಲ್ಲ. ಅವರಿಗೆ ಅಗತ್ಯ ವೈದ್ಯಕೀಯ ಸೌಲಭ್ಯ, ಚಿಕಿತ್ಸೆ ಒದಗಿಸುವ ಮೂಲಕ ಗುಣಮುಖರನ್ನಾಗಿಸಲಾಗುವುದು. ಕೊರೋನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇನ್ನಷ್ಟು ಸಮರ್ಪಕ ಕೆಲಸ ನಿರ್ವಹಿಸಬೇಕಿದೆ ಎಂದು ಬೈರತಿ ಬಸವರಾಜು ಎಚ್ಚರಿಸಿದರು.


ಇದನ್ನೂ ಓದಿ: ಲಾಕ್​ಡೌನ್ ವೇಳೆ ಜನರಿಗೆ ಆಹಾರ ಕಿಟ್ ಹಂಚಿದ್ದ ವಿಜಯಪುರದ ಶಾಸಕನಿಗೆ ಒಲಿಯಿತು ಆಹಾರ ಮತ್ತು ಸರಬರಾಜು ನಿಗಮ ಸ್ಥಾನ


ಜಿಲ್ಲೆಯಲ್ಲಿ ಬೆಡ್‍ಗೆ ತೊಂದರೆ ಇಲ್ಲ:


ರೋಗಿಗಳಿಗೆ ಬೆಡ್ ಇಲ್ಲ ಎಂಬುದರ ಬಗ್ಗೆ ವರದಿ ಬಂದಿವೆ. ಬೆಡ್ ಇಲ್ಲ ಎನ್ನುವ ಪ್ರಶ್ನೆಯೇ ಇಲ್ಲ. ಇದು ಯಾರೋ ಹುಟ್ಟ ಹಾಕಿರುವ ಸುಳ್ಳು ಮಾಹಿತಿ. ಸಾಕಷ್ಟು ವ್ಯವಸ್ಥಿತವಾಗಿ ಸನ್ನದ್ದರಾಗಿದ್ದೇವೆ. ಯಾವುದೇ ತೊಂದರೆ ಇಲ್ಲ ಎಂದ ಅವರು, ಬೇರೆ ಆಸ್ಪತ್ರೆಗಳಿಗೆ ರೆಫರ್ ಮಾಡಿದ ಪ್ರಕರಣಗಳಲ್ಲಿ ಕೂಡ ಕೊರೋನಾ ರೋಗಿಗಳಿಗೆ ಸರ್ಕಾರವೇ ಹಣ ಭರಿಸುತ್ತದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಎಬಿಆರ್‍ಕೆ ಆರೋಗ್ಯ ಯೋಜನೆಯಡಿ ಹಣ ಸಂದಾಯ ಮಾಡಲಾಗುತ್ತದೆ. ಯಾವುದೇ ಶುಲ್ಕ ನೀಡುವ ಅವಶ್ಯಕತೆ ಇಲ್ಲ ಎಂದು ಮಾಹಿತಿ ನೀಡಿದರು.


ಜಿಲ್ಲೆಯಲ್ಲಿ ಉಸ್ತುವಾರಿ ಸಚಿವನಾಗಿ ಬಂದಂತಹ ಸಂದರ್ಭದಲ್ಲಿ ಅನೇಕ ಮನವಿಗಳನ್ನು ರೈತರು ಹಾಗೂ ಕಾರ್ಮಿಕರು ನೀಡಿದ್ದರು. ಆ ವೇಳೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆ. ದಾವಣಗೆರೆ ವಿಶೇಷವಾಗಿ ಮೆಕ್ಕೆಜೋಳ ಬೆಳೆಯುವಂತಹ ಜಿಲ್ಲೆಯಾಗಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ರೂ. 5 ಸಾವಿರದಂತೆ ಸುಮಾರು ರೂ. 500 ಕೋಟಿ ಹಣ ಪ್ರೋತ್ಸಾಹ ಧನವನ್ನು ರೈತರಿಗೆ ನೀಡಲಾಗಿದೆ. ಕೊರೋನಾ ಸಂದರ್ಭದಲ್ಲಿ ಲಾಕ್‍ಡೌನ್ ಹಿನ್ನೆಲೆಯಿಂದಾಗಿ ಹೂ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ಆ ವೇಳೆ ಒಂದು ಹೆಕ್ಟೇರ್‍ಗೆ ರೂ. 25 ಸಾವಿರ ಘೋಷಣೆ ಮಾಡಲಾಗಿದೆ. ಜೊತೆಗೆ ಆಟೋ ಟ್ಯಾಕ್ಸಿ ಚಾಲಕರು, ಕಾರ್ಮಿಕರು, ನೇಕಾರರು, ಸವಿತಾ ಸಮಾಜ, ನೇಕಾರರು ಸೇರಿದಂತೆ ಎಲ್ಲ ಸಮುದಾಯಗಳಿಗೆ ಆರ್ಥಿಕವಾಗಿ ಸಹಾಯ ಮಾಡುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿರೂ ಆದ ಅವರು ಸ್ಮರಿಸಿದರು.


ಇಡೀ ದೇಶದಲ್ಲಿ ನಮ್ಮ ರಾಜ್ಯ ರೂ. 2 ಸಾವಿರ ಕೋಟಿ ಹಣವನ್ನು ಬಡವರಿಗೆ ಪ್ರೋತ್ಸಾಹಧನವಾಗಿ ಕೊಟ್ಟು, ಅವರೊಂದಿಗೆ ನಾವಿದ್ದೇವೆ ಎಂಬ ಸಂದೇಶವನ್ನು ನೀಡಲಾಗಿದೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ರೂ. 22 ಕೋಟಿ ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ನಗರದಲ್ಲಿ 3 ಕೋವಿಡ್ ಟೆಸ್ಟಿಂಗ್ ಲ್ಯಾಬ್ ಮಾಡಲಾಗಿದೆ. ಚಿಗಟೇರಿ ಆಸ್ಪತ್ರೆಯನ್ನು ಉನ್ನತ ದರ್ಜೆಗೇರಿಸಲು ಮನವಿ ಮಾಡಿದ್ದೇನೆ. ತಾಲ್ಲೂಕು ಹಂತದಲ್ಲೂ ಪ್ರವಾಸ ಮಾಡಿ ಅವರ ಮನವಿಗೆ ಸ್ಪಂದಿಸಿದ್ದೇನೆ. ಅದೇ ರೀತಿ ಮುಂದೆಯೂ ಸಹ ಕಾರ್ಯ ನಿರ್ವಹಿಸುವೆ ಎಂದು ಭರವಸೆ ನೀಡಿದರು.


ಇದನ್ನೂ ಓದಿ: ಎಸ್.ಟಿ ಸೋಮಶೇಖರ್ ಆಪ್ತ ಸಿಬ್ಬಂದಿಗೆ ಕೊರೋನಾ ಪಾಸಿಟಿವ್; ಸಚಿವರಿಗೆ ಹೋಮ್‌ ಕ್ವಾರಂಟೈನ್, ಕಚೇರಿ ಸೀಲ್‌ಡೌನ್


ಪ್ರಗತಿಪರ ನಾಯಕರಾದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸರ್ಕಾರ ಒಂದು ವರ್ಷ ಪೂರೈಸಿದೆ. ಕೊರೋನಾ ಹಿನ್ನೆಲೆಯ ಈ ಸಂದರ್ಭದಲ್ಲಿ ಸರ್ಕಾರದ ಆದೇಶ ಹಾಗೂ ಕೇಂದ್ರ ಸರ್ಕಾರದ ನಿಯಮದಂತೆ ಕಾರ್ಯಕ್ರಮ ನೆರವೇರಿಸಲಾಗಿದೆ ಎಂದರು.


ರಾಜ್ಯದ ಜನತೆಯನ್ನು ಉದ್ದೇಶಿಸಿ ಮುಖ್ಯಮಂತ್ರಿಗಳು ಅನೇಕ ತೀರ್ಮಾನ ಹಾಗೂ ದೃಢ ಸಂಕಲ್ಪಗಳನ್ನು ತಿಳಿಸಿದ್ದಾರೆ. ಕಳೆದ ಒಂದು ವರ್ಷದಿಂದ ಆದಂತಹ ಪರಿಸ್ಥಿತಿಗಳನ್ನು ಅವಲೋಕನ ಮಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಅನೇಕ ಸಂಕಷ್ಟಗಳು ಎದುರಾದವು. ಭೀಕರ ಬರಗಾಲ, ಅದಾದ ಮರು ಕ್ಷಣವೇ ಮಳೆಯ ರುದ್ರನರ್ತನದಿಂದ ಅನೇಕ ಮನೆ, ಬೆಳೆ ನಷ್ಟ ಜೊತೆಗೆ ಸಾವು ನೋವು ಎಲ್ಲವೂ ಕೂಡ ಸಂಭವಿಸಿತು. ಆಗ ಸಚಿವ ಸಂಪುಟ ಇಲ್ಲದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಒಬ್ಬರೇ ಬಹಳ ಸಮರ್ಥವಾಗಿ ನಿಭಾಯಿಸಿದ್ದಾರೆ. ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಡುವ ಹಾಗೂ ಬೆಳೆ ಹಾನಿ ಆದವರಿಗೆ ಬೆಳೆ ಪರಿಹಾರ ಒದಗಿಸುವ ಕೆಲಸ ಮಾಡಿದ್ದಾರೆ. ಇದಾದ ಬಳಿಕ ಕೊರೋನಾ ಹೆಮ್ಮಾರಿ ಕಾಯಿಲೆ ಅವರಿಸಿತು. ಈ ವೇಳೆಯೂ ಕೂಡ ಧೃತಿಗೆಡದೆ ಕೊರೋನಾ ಮುಕ್ತಿಗೆ ಅನೇಕ ಕಾರ್ಯಕ್ರಮ ಹಮ್ಮಿಕೊಂಡು, ಸಾಕಷ್ಟು ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.


ಇದನ್ನೂ ಓದಿ: ನೆಲಮಂಗಲ ಬಳಿ 10 ಸಾವಿರ ಬದಲು 5,000 ಬೆಡ್​ಗಳ ಕೋವಿಡ್ ಕೇರ್ ಸೆಂಟರ್​ನ ಸೇವೆ ಪ್ರಾರಂಭ


ರಾಜ್ಯದ ಅಭಿವೃದ್ಧಿ ಬಗ್ಗೆ ಅನೇಕ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆಯ ನಿರೀಕ್ಷೆಗಳನ್ನು ಹುಸಿ ಮಾಡುವುದಿಲ್ಲ. ಅವರ ಋಣ ತೀರಿಸುವ ಕೆಲಸ ನನ್ನ ಮೇಲಿದೆ. ಖಂಡಿತವಾಗಿ ಇನ್ನು ಮೂರು ವರ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಜಿ.ಎಸ್. ಬಸವರಾಜು ತಿಳಿಸಿದರು.


ಕೊರೋನಾ ಬಾರದಿದ್ದರೆ ರಾಜ್ಯ ಅಭಿವೃದ್ಧಿ ಪಥದತ್ತ ಸಾಗುತಿತ್ತು. ಕೊರೊನಾ ಬಂದು ಆರ್ಥಿಕ ಸಮಸ್ಯೆ ಎದುರಿಸುವ ಕೆಲಸವಾಗಿದೆ. ರಾಜ್ಯದಲ್ಲಿ ಇನ್ನೂ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಬೇಕಾಗಿದೆ. ರೈತರಿಗೆ ಬೇಕಾದಂತಹ ಅನೇಕ ಕಾರ್ಯಕ್ರಮ, ಯಾವೊಬ್ಬ ಬಡವರು ಇನ್ನು ಮೂರು ವರ್ಷದಲ್ಲಿ ರಾಜ್ಯದಲ್ಲಿ ಮನೆ ಇಲ್ಲದೆ ಇರಬಾರದು ಎಂಬ ದೃಢ ಸಂಕಲ್ಪವನ್ನು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ಇದು ನಿಜವಾಗಲೂ ಹೆಮ್ಮೆ ತರುವಂತಹ ವಿಷಯವಾಗಿದೆ. ಅನೇಕ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿಗಳು ಒಂದು ವರ್ಷದಲ್ಲಿ ಮಾಡಿದ್ದಾರೆ. ಇನ್ನೂ ಮೂರು ವರ್ಷ ಅವಧಿಯಿದೆ. ಅಷ್ಟರಲ್ಲಿ ಉಳಿದ ಕಾರ್ಯಕ್ರಮ ಹಾಗೂ ಅಭಿವೃದ್ಧಿ ಏನಾಗಬೇಕು ಅದರ ಬಗ್ಗೆ ಗಮನ ಹರಿಸಲಾಗುವುದು ಎಂದರು.


ಈ ಸಂದರ್ಭದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕರಾದ ರವೀಂದ್ರನಾಥ್, ಎಸ್.ವಿ. ರಾಮಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀಪಾ ಜಗದೀಶ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿ.ಪಂ. ಸಿಇಓ ಪದ್ಮಾ ಬಸವಂತಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮತ್ತಿತರ ಅಧಿಕಾರಿಗಳು ಇದ್ದರು.


ವರದಿ: ಹೆಚ್ ಎಂ ಪಿ ಕುಮಾರ್

Published by:Vijayasarthy SN
First published: